Updated on:Jan 22, 2023 | 6:07 PM
ಬಿಗ್ ಬ್ಯಾಷ್ ಲೀಗ್ನ 52ನೇ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದೆ. ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಪರ್ತ್ ಸ್ಕಾಚರ್ಸ್ ಹಾಗೂ ಮೆಲ್ಬೋರ್ನ್ ರೆನೆಗೇಡ್ಸ್ ನಡುವಣ ಮೂಖಾಮುಖಿಯಲ್ಲಿ ಮೂಡಿಬಂದಿರುವುದು ಬರೋಬ್ಬರಿ 414 ರನ್ಗಳು.
ಈ ಪಂದ್ಯದಲ್ಲಿ ಟಾಸ್ ಗೆದ್ದ ಮೆಲ್ಬೋರ್ನ್ ರೆನೆಗೇಡ್ಸ್ ತಂಡದ ನಾಯಕ ಆರೋನ್ ಫಿಂಚ್ ಬೌಲಿಂಗ್ ಆಯ್ದುಕೊಂಡಿದ್ದರು. ಆದರೆ ನಾಯಕ ನಿರ್ಧಾರ ತಪ್ಪು ಎಂಬುದನ್ನು ಪವರ್ಪ್ಲೇನಲ್ಲೇ ಸ್ಕಾಚರ್ಸ್ ಆರಂಭಿಕರು ನಿರೂಪಿಸಿದ್ದರು. ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಸ್ಟೀವಿ ಎಸ್ಕಿನಾಜಿ (54) ಹಾಗೂ ಬ್ಯಾಂಕ್ರಾಫ್ಟ್ ಮೊದಲ ವಿಕೆಟ್ಗೆ 87 ರನ್ಗಳ ಜೊತೆಯಾಟವಾಡಿದ್ದರು.
ಅದರಲ್ಲೂ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ್ದ ಕ್ಯಾಮರೋನ್ ಬ್ಯಾಂಕ್ರಾಫ್ಟ್ ರೆನೆಗೇಡ್ಸ್ ಬೌಲರ್ಗಳ ಬೆಂಡೆತ್ತಿ ಸಿಕ್ಸ್-ಫೋರ್ಗಳ ಸುರಿಮಳೆಗೈದರು. ಪರಿಣಾಮ 6 ಭರ್ಜರಿ ಸಿಕ್ಸ್ ಹಾಗೂ 5 ಫೋರ್ನೊಂದಿಗೆ 50 ಎಸೆತಗಳಲ್ಲಿ ಅಜೇಯ 95 ರನ್ ಬಾರಿಸಿದರು. ಈ ಮೂಲಕ ನಿಗದಿತ 20 ಓವರ್ಗಳಲ್ಲಿ ತಂಡದ ಮೊತ್ತವನ್ನು 5 ವಿಕೆಟ್ ನಷ್ಟಕ್ಕೆ 212 ಕ್ಕೆ ತಂದು ನಿಲ್ಲಿಸಿದರು.
213 ರನ್ಗಳ ಬಿಗ್ ಟಾರ್ಗೆಟ್ ಪಡೆದ ಮೆಲ್ಬೋರ್ನ್ ರೆನೆಗೇಡ್ಸ್ ತಂಡಕ್ಕೆ ಶಾನ್ ಮಾರ್ಷ್ ಉತ್ತಮ ಆರಂಭ ಒದಗಿಸಿದರು. ಆರಂಭದಿಂದಲೇ ತೂಫಾನ್ ಬ್ಯಾಟಿಂಗ್ ಮೂಲಕ ಗಮನ ಸೆಳೆದ ಮಾರ್ಷ್ 34 ಎಸೆತಗಳಲ್ಲಿ 54 ರನ್ಗಳಿಸಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ.
ಇದಾಗ್ಯೂ ನಾಲ್ಕನೇ ಕ್ರಮಾಂಕದಲ್ಲಿ ಆಡಿದ್ದ ನಾಯಕ ಆರೋನ್ ಫಿಂಚ್ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದರು. ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದ ಫಿಂಚ್ ತಂಡಕ್ಕೆ ಗೆಲುವು ತಂದುಕೊಡುವ ವಿಶ್ವಾಸ ಮೂಡಿಸಿದರು. ಕೊನೆಯ ಓವರ್ನಲ್ಲಿ ರೆನೆಗೇಡ್ಸ್ ತಂಡಕ್ಕೆ 28 ರನ್ಗಳ ಅವಶ್ಯಕತೆಯಿತ್ತು.
ಡೇವಿಡ್ ಪೇನ್ ಎಸೆದ ಕೊನೆಯ ಓವರ್ನಲ್ಲಿ ಫಿಂಚ್ 1 ಸಿಕ್ಸ್ ಹಾಗೂ ಫೋರ್ ಸಿಡಿಸಿದರು. ಮತ್ತೊಂದೆಡೆ ಪ್ರೆಸ್‌ವಿಡ್ಜ್ ಕೂಡ 1 ಸಿಕ್ಸ್ ಬಾರಿಸಿದರು. ಆದರೆ ಉಳಿದ ಮೂರು ಎಸೆತಗಳಲ್ಲಿ ಪೇನ್ ನೀಡಿದ್ದು ಕೇವಲ 2 ರನ್ ಮಾತ್ರ. ಅಂದರೆ ಮೆಲ್ಬೋರ್ನ್ ರೆನೆಗೇಡ್ಸ್ ತಂಡವು 20 ಓವರ್ಗಳಲ್ಲಿ 202 ರನ್ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಪರ್ತ್ ಸ್ಕಾಚರ್ಸ್ ತಂಡವು 10 ರನ್ಗಳ ರೋಚಕ ಜಯ ಸಾಧಿಸಿತು.
ಉಭಯ ತಂಡಗಳಿಂದ ಒಟ್ಟು 414 ರನ್ ಮೂಡಿಬಂದ ಈ ಪಂದ್ಯದಲ್ಲಿ ಕೇವಲ 35 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 7 ಫೋರ್ನೊಂದಿಗೆ ಅಜೇಯ 76 ರನ್ ಬಾರಿಸಿದ ರೆನೆಗೇಡ್ಸ್ ತಂಡದ ನಾಯಕ ಆರೋನ್ ಫಿಂಚ್ ವಿರೋಚಿತವಾಗಿ ಸೋಲೋಪ್ಪಿಕೊಂಡರು.
Published On - 6:07 pm, Sun, 22 January 23