
ಮಂಗಳೂರು, ಜೂನ್ 19: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ (Suhas Shetty) ಕೊಲೆಗೆ ಪರೋಕ್ಷವಾಗಿ ನೆರವಾಗಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪ ಮಾಡಿದ್ದ ಬಜ್ಪೆ ಠಾಣೆ ಹೆಡ್ ಕಾನ್ಸ್‌ಟೇಬಲ್ ರಶೀದ್ (Head Constable Rashid) ಸೇರಿದಂತೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ 56 ಪೊಲೀಸ್ ಸಿಬ್ಬಂದಿಯನ್ನು (Police Staff) ವರ್ಗಾವಣೆ ಮಾಡಲಾಗಿದೆ. ಕರಾವಳಿಯಲ್ಲಿ ಕೋಮು ಸೌಹಾರ್ಧತೆಗೆ ಧಕ್ಕೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಗೃಹ ಇಲಾಖೆ ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದೆ. ಕೋಮು ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ವಿಶೇಷ ಟಾಸ್ಕ್ಫೋರ್ಸ್ ಕೂಡ ರಚನೆ ಮಾಡಲಾಗಿದೆ. ಇದೀಗ ಪೊಲೀಸ್ ಇಲಾಖೆಯ ತಳಮಟ್ಟದಲ್ಲೂ ಭಾರೀ ಸರ್ಜರಿ ನಡೆಯುತ್ತಿದೆ. 56 ಪೊಲೀಸ್ ಸಿಬ್ಬಂದಿಯ ವರ್ಗಾವಣೆ ಮಾಡಿ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಆದೇಶ ಹೊರಡಿಸಿದ್ದು, ಇನ್ನೂ ನೂರಾರು ಸಂಖ್ಯೆಯಲ್ಲಿ ಸಿಬ್ಬಂದಿ ವರ್ಗಾವಣೆ ಸಾಧ್ಯತೆ ಇದೆ ಎನ್ನಲಾಗಿದೆ.
ಹಲವು ವರ್ಷಗಳಿಂದ ಒಂದೇ ಕಡೆ ಇದ್ದ ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ. ಬಜ್ಪೆ ಠಾಣೆ ಹೆಡ್ ಕಾನ್ಸ್‌ಟೇಬಲ್ ರಶೀದ್ರನ್ನು ಮಂಗಳೂರು ಮಹಿಳಾ ಠಾಣೆಗೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ. ಹೆಡ್ ಕಾನ್ಸ್‌ಟೇಬಲ್ ರಶೀದ್ ಸುಹಾಸ್ ಹಂತಕರ ಜತೆ ಕೈಜೋಡಿಸಿದ್ದರು ಎಂದು ಬಿಜೆಪಿ ನಾಯಕರು ಆರೋಪ ಮಾಡಿದ್ದರು.
ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ನಂತರ ಕಾಂಗ್ರೆಸ್ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಕೋಮಹಿಂಸಾಚಾರ ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ. ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮತ್ತು ಗೃಹ ಸಚಿವ ಡಾ. ಜಿ ಪರಮೇಶ್ವರ ಅವರನ್ನು ಬದಲಾವಣೆ ಮಾಡಬೇಕು ಎಂಬ ಅಗ್ರಹ ವ್ಯಕ್ತವಾಗಿತ್ತು.
ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಮಂಗಳೂರಿಗೆ ಭೇಟಿ ನೀಡಿದ್ದ ಗೃಹ ಸಚಿವರು ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದ್ದರು. ಅದಾದ ನಂತರ ಕರಾವಳಿಯಲ್ಲಿ ಕೋಮು ಹಿಂಸಾಚಾರ ತಡೆಯುವುದಕ್ಕಾಗಿ ವಿಶೇಷ ಕಾರ್ಯಪಡೆ ರಚಿಸುವ ಘೋಷಣೆ ಮಾಡಿದ್ದರು.
ಇದನ್ನೂ ಓದಿ: ಕೋಮು ಕ್ರಿಮಿಗಳ ಹುಟ್ಟಡಗಿಸಲು ಬಂದ ಸ್ಪೆಷಲ್ ಆ್ಯಕ್ಷನ್ ಫೋರ್ಸ್: ಏನಿದರ ಕೆಲಸ? ಇದರಲ್ಲಿ ಯಾರ್ಯಾರು ಇರ್ತಾರೆ?
ಅದರಂತೆ ಇದೀಗ ಸ್ಪೆಷಲ್ ಆ್ಯಕ್ಷನ್ ಫೋರ್ಸ್ ಜಾರಿಗೆ ಬಂದಿದೆ. ಜೂನ್ 13 ರಂದು ಮಂಗಳೂರಿನಲ್ಲಿ ಗೃಹ ಸಚಿವ ಪರಮೇಶ್ವರ್ ಸ್ಪೆಷಲ್ ಆ್ಯಕ್ಷನ್ ಫೋರ್ಸ್ಗೆ ಚಾಲನೆ ನೀಡಿದ್ದಾರೆ. ಸದ್ಯ, ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಈ ವಿಶೇಷ ಕಾರ್ಯಪಡೆಯ ಹೆಚ್ಚುವರಿ ಹೊಣೆ ಹೊತ್ತಿದ್ದಾರೆ. ಆ ನಂತರ ಇದೀಗ ಪೊಲೀಸ್ ಇಲಾಖೆಯ ತಳಮಟ್ಟದ ಸಿಬ್ಬಂದಿ ವರ್ಗಾವಣೆ ಕ್ರಮ ಕೈಗೊಳ್ಳಲಾಗಿದೆ.