
ಮಂಗಳೂರು, ಸೆ,21: ಕರಾವಳಿ ನಗರಿ ಮಂಗಳೂರಿನ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಸಂಚಲನ ಮೂಡಿಸಲಿರುವ ಬಹುನಿರೀಕ್ಷಿತ ‘ಮಂಗಳೂರು ವಾಟರ್ ಮೆಟ್ರೋ’ (Mangaluru Water Metro) ಯೋಜನೆಗೆ ಭಾರಿ ವೇಗ ಸಿಕ್ಕಿದೆ. ಯೋಜನೆಯ ಭಾಗವಾಗಿ ಪ್ರಸ್ತಾವಿತ 19 ಜಲ ಸಾರಿಗೆ ನಿಲ್ದಾಣಗಳ ಪೈಕಿ 11 ಪ್ರಮುಖ ಸ್ಟೇಷನ್‌ಗಳನ್ನು ಮಂಗಳೂರು ಬಂದರು ಮತ್ತು ಮೀನುಗಾರಿಕೆ ಉಪ-ವಿಭಾಗವು ಅಂತಿಮಗೊಳಿಸಿದೆ. ಹಲವು ಹಂತದ ತಾಂತ್ರಿಕ ಪರಿಶೀಲನೆಗಳ ನಂತರ ಈ 11 ನಿಲ್ದಾಣಗಳನ್ನು ಆಖೈರುಗೊಳಿಸಲಾಗಿದ್ದು, ಈ ಯೋಜನೆಗೆ ಸಂಬಂಧಿಸಿದಂತೆ ತಾಂತ್ರಿಕ ಮತ್ತು ಆರ್ಥಿಕ ಸೌಲಭ್ಯಗಳ ಅಧ್ಯಯನ ನಡೆಸುವಂತೆ ಈ ಹಿಂದೆ ಸಚಿವ ಸಂಪುಟವು ನಿರ್ದೇಶನ ನೀಡಿತ್ತು.
ಈ ಜಲ ಮೆಟ್ರೋ ಯೋಜನೆ ಕೇವಲ ನಗರದ ಸಾರ್ವಜನಿಕ ಸಾರಿಗೆಗೆ ಮಾತ್ರ ಸೀಮಿತವಾಗಿರದೆ, ಬಂದರು ಹಾಗೂ ಕರಾವಳಿ ತೀರದ ಪ್ರದೇಶಗಳಿಗೆ ಉತ್ತಮ ಸಂಪರ್ಕವನ್ನು ಕಲ್ಪಿಸಲಿದೆ. ಹಳೆಯ ಮಂಗಳೂರು ಬಂದರು, ಪೋರ್ಟ್ ಫೆರ್ರಿ, ಸ್ಯಾಂಡ್‌ಬಾರ್, ತೋಟ ಬೆಂಗ್ರೆಯ ಹತ್ತಿರದ ಪ್ರದೇಶಗಳು, ಹೊಯ್ಗೆ ಬಜಾರ್, ಜಪ್ಪು ಹಾಗೂ ಉಳ್ಳಾಲ ಪ್ರದೇಶಗಳನ್ನು ಜಲ ಜಾಲದ ವ್ಯಾಪ್ತಿಗೆ ತರಲಾಗುತ್ತದೆ. ಜಲಮಾರ್ಗಗಳ ವ್ಯಾಪ್ತಿಯಲ್ಲಿ ಹೊಸ ಉದ್ಯೋಗ, ವ್ಯಾಪಾರ, ಪ್ರವಾಸೋದ್ಯಮ ಹಾಗೂ ಸ್ಥಳೀಯ ಚಟುವಟಿಕೆಗಳಿಗೆ ಈ ಯೋಜನೆ ಹೊಸ ಬಾಗಿಲು ತೆರೆಯಲಿದೆ.
ಜಪ್ಪಿನಮೊಗರು ಎನ್‌ಎಚ್
ನಾರ್ದರ್ನ್ ಸ್ಯಾಂಡ್ ಬಾರ್
ಹಳೆಯ ಬಂದರು
ಪೋರ್ಟ್ ಫೆರ್ರಿ
ಸ್ಯಾಂಡ್‌ಪಿಟ್ ಬೆಂಗ್ರೇ
ಬಂಗ್ರ ಕೂಳೂರು
ಕೂಳೂರು ಸೇತುವೆ (Kulur Bridge – ಇಲ್ಲಿ ರೋ-ರೋ ಹಾಗೂ ಫ್ಲೋಟಿಂಗ್ ಮಾದರಿಯ 2 ಪ್ರತ್ಯೇಕ ನಿಲ್ದಾಣಗಳ ಪ್ರಸ್ತಾಪವಿದೆ)
ಕಸಬಾ ಬೆಂಗ್ರೇ
ಸುಲ್ತಾನ್ ಬ್ಯಾಟರಿ
ಜಪ್ಪಿನಮೊಗರು ಓಲ್ಡ್ ಫೆರ್ರಿ
ತಣ್ಣೀರುಬಾವಿ ಚರ್ಚ್
ಇದನ್ನೂ ಓದಿ: ರೈಲ್ವೆ ಸ್ಟೇಷನ್‌ಗಳ ಹೆಸರಿನ ಹಿಂದಿದೆ ಕುತೂಹಲಕಾರಿ ರಹಸ್ಯ: ಜಂಕ್ಷನ್, ಸೆಂಟ್ರಲ್, ಟರ್ಮಿನಸ್ ಹಾಗೂ ಹಾಲ್ಟ್ ಎಂದರೇನು?
ಮಂಗಳೂರಿನ ಭೌಗೋಳಿಕ ರಚನೆಯೇ ಈ ವಾಟರ್ ಮೆಟ್ರೋ ಯೋಜನೆಗೆ ಮುಖ್ಯ ಆಧಾರವಾಗಿದೆ. ನಗರವನ್ನು ಸುತ್ತುವರೆದಿರುವ ಜಲಮಾರ್ಗಗಳನ್ನು ಸಾರ್ವಜನಿಕ ಸಾರಿಗೆಗೆ ಬಳಸಿಕೊಳ್ಳುವುದರಿಂದ ರಸ್ತೆಗಳ ಮೇಲಿನ ಸಂಚಾರ ದಟ್ಟಣೆ (Traffic) ಗಣನೀಯವಾಗಿ ಕಡಿಮೆಯಾಗಲಿದೆ. ಪ್ರಯಾಣಿಕರು ಟ್ರಾಫಿಕ್ ಕಿರಿಕಿರಿ ಇಲ್ಲದೆ ಜಲಮಾರ್ಗದ ಮೂಲಕ ಸುಲಭವಾಗಿ ನಗರದ ವಿವಿಧ ಭಾಗಗಳಿಗೆ ತಲುಪಬಹುದಾಗಿದೆ.
ಯೋಜನೆಗೆ ಅಗತ್ಯವಿರುವ ಜಮೀನಿನ ಹಾಲಾಹಲ ಮಾಹಿತಿಯನ್ನು ಮೂಲಸೌಕರ್ಯ ಅಭಿವೃದ್ಧಿ ಇಲಾಖೆಗೆ ಈಗಾಗಲೇ ಸಲ್ಲಿಸಲಾಗಿದೆ. ಬಂದರು ಮತ್ತು ಮೀನುಗಾರಿಕೆ ಉಪವಿಭಾಗದ ಎಇಇ ಶಶಿಧರ್ ಮಾತನಾಡಿ, “ವಾಟರ್ ಮೆಟ್ರೋ ಯೋಜನೆಯ ಆರಂಭಿಕ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಒಟ್ಟು 19 ನಿಲ್ದಾಣಗಳನ್ನು ಗುರುತಿಸಲಾಗಿದ್ದು, ಸದ್ಯ 11 ನಿಲ್ದಾಣಗಳನ್ನು ಅಂತಿಮಗೊಳಿಸಲಾಗಿದೆ” ಎಂದಿದ್ದಾರೆ. ಮುಂದಿನ ಹಂತದಲ್ಲಿ ವಿಸ್ತೃತ ಯೋಜನಾ ವರದಿ (DPR) ಸಿದ್ಧವಾಗಲಿದ್ದು, ಪ್ರತಿಯೊಂದು ನಿಲ್ದಾಣದ ವಿನ್ಯಾಸ, ನಿಖರ ಮಾರ್ಗ, ಟಿಕೆಟ್ ದರ, ಬೋಟ್‌ಗಳ ಸಂಖ್ಯೆ, ಪ್ರಯಾಣದ ಸಮಯ ಹಾಗೂ ಅಂತಿಮ ಜಾಗದ ವಿವರಗಳನ್ನು ನಿಗದಿಪಡಿಸಲಾಗುವುದು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ