ಮೂಡಬಿದ್ರೆ ಇನ್ಸ್‌ಪೆಕ್ಟರ್ ಸಂದೇಶ್ ಕಾಮಕಾಂಡ: ಸಂತ್ರಸ್ತ ಮಹಿಳೆಯ ಅಪ್ರಾಪ್ತ ಮಗಳ ಮೇಲೂ ಕಣ್ಣು! ಆಡಿಯೋ ವೈರಲ್

ಮೂಡಬಿದ್ರೆ ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ ಪಿಜಿ ಕಾಮಕಾಂಡ ಬಯಲಾಗಿದೆ! ದೂರು ನೀಡಲು ಬಂದ ಮಹಿಳೆಯನ್ನೇ ಲೈಂಗಿಕವಾಗಿ ಬಳಸಿಕೊಳ್ಳಲು ಬಲವಂತ ಮಾಡಿದ್ದಲ್ಲದೆ, ಮತ್ತೊಂದು ಪ್ರಕರಣದ ಸಂತ್ರಸ್ತೆಯ ಅಪ್ರಾಪ್ತ ಮಗಳಿಗೂ ಇನ್ಸ್‌ಪೆಕ್ಟರ್ ಬೆದರಿಕೆ ಹಾಕಿದ್ದಾನೆ ಎನ್ನಲಾದ ಆಡಿಯೋ ಈಗ ವೈರಲ್ ಆಗಿದೆ. ಈ ಗಂಭೀರ ಆರೋಪದ ಬೆನ್ನಲ್ಲೇ ಪೊಲೀಸ್ ಇಲಾಖೆ ತನಿಖೆಗೆ ಆದೇಶಿಸಿದ್ದು, ಸಂತ್ರಸ್ತೆಯರು ದೂರು ನೀಡಲು ಕಮಿಷನರ್ ಕರೆ ನೀಡಿದ್ದಾರೆ. ಪೂರ್ತಿ ವಿವರ ಇಲ್ಲಿದೆ.

ಮೂಡಬಿದ್ರೆ ಇನ್ಸ್‌ಪೆಕ್ಟರ್ ಸಂದೇಶ್ ಕಾಮಕಾಂಡ: ಸಂತ್ರಸ್ತ ಮಹಿಳೆಯ ಅಪ್ರಾಪ್ತ ಮಗಳ ಮೇಲೂ ಕಣ್ಣು! ಆಡಿಯೋ ವೈರಲ್
ಆರೋಪಿತ ಮೂಡಬಿದ್ರೆ ಇನ್ಸ್‌ಪೆಕ್ಟರ್ ಸಂದೇಶ್ ಪಿಜಿ (ಎಡ ಚಿತ್ರ) ಹಾಗೂ ಮತ್ತೊಂದು ಪ್ರಕರಣದ ಸಂತ್ರಸ್ತೆಯ ಜತೆ ಆರೋಪಿ
Image Credit source: tv9
Edited By:

Updated on: Mar 17, 2026 | 8:32 AM

ಮಂಗಳೂರು, ಮಾರ್ಚ್ 17: ಕಾನೂನು ರಕ್ಷಕನೇ ಭಕ್ಷಕನಾದರೆ ಸಾಮಾನ್ಯ ಜನರ ಗತಿ ಏನು? ದೂರು ನೀಡಲು ಬಂದವರನ್ನೇ ಲೈಂಗಿಕವಾಗಿ ಬಳಸಿಕೊಳ್ಳುವ ಕಾಮುಕ ಪೊಲೀಸ್ ಅಧಿಕಾರಿಯೊಬ್ಬನ ಕರ್ಮಕಾಂಡ ಈಗ ಬಯಲಾಗಿದೆ. ಮಂಗಳೂರು (Mangalore) ಕಮಿಷನರೇಟ್ ವ್ಯಾಪ್ತಿಯ ಮೂಡಬಿದ್ರೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ (Moodabidri Inspector) ಸಂದೇಶ್ ಪಿಜಿ ವಿರುದ್ಧ ಕೇಳಿಬಂದಿರುವ ಗಂಭೀರ ಆರೋಪಗಳು ಇಡೀ ಪೊಲೀಸ್ ಇಲಾಖೆಯನ್ನೇ ತಲೆತಗ್ಗಿಸುವಂತೆ ಮಾಡಿದೆ.

ಏನಿದು ಮೂಡಬಿದ್ರೆ ಇನ್ಸ್‌ಪೆಕ್ಟರ್ ಕಾಮಕಾಂಡ ಪ್ರಕರಣ?

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ಇನ್ಸ್‌ಪೆಕ್ಟರ್ ಸಂದೇಶ್ ಪಿಜಿ ವಿರುದ್ಧ ಲೈಂಗಿಕ ಕಿರುಕುಳ ಹಾಗೂ ಭ್ರಷ್ಟಾಚಾರದ ಗಂಭೀರ ಆರೋಪಗಳು ಕೇಳಿಬಂದಿವೆ. ಕೌಟುಂಬಿಕ ವ್ಯಾಜ್ಯ ಅಥವಾ ದೂರು ನೀಡಲು ಬರುವ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಈತ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ಸಂತ್ರಸ್ತೆಯೊಬ್ಬಳ ಗಂಡನನ್ನು ಕೇಸ್‌ನಲ್ಲಿ ಸಿಲುಕಿಸಿ, ಆತನನ್ನು ಬಿಡುಗಡೆ ಮಾಡಲು ‘ನನ್ನ ಜೊತೆ ಮಲಗಬೇಕು ಅಥವಾ 25 ಲಕ್ಷ ರೂಪಾಯಿ ನೀಡಬೇಕು’ ಎಂದು ಇನ್ಸ್‌ಪೆಕ್ಟರ್ ಧಮಕಿ ಹಾಕಿರುವ ವಿಷಯ ಈಗ ಬೆಳಕಿಗೆ ಬಂದಿದೆ. ‘ನಾನು ಪೋಸ್ಟಿಂಗ್‌ಗಾಗಿ ಗೃಹಸಚಿವರಿಗೆ 50 ಲಕ್ಷ ನೀಡಿ ಬಂದಿದ್ದೇನೆ’ ಎಂದು ಈತ ಅಹಂಕಾರದಿಂದ ಹೇಳಿಕೊಂಡಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.

ಮತ್ತೊಂದು ಪ್ರಕರಣದ ಸಂತ್ರಸ್ತೆ ಮಗಳ ಮೇಲೂ ಕಣ್ಣು: ಆಡಿಯೋ ವೈರಲ್

ಈ ಪ್ರಕರಣದಲ್ಲಿ ಇನ್ನೊಂದು ಕರಾಳವಾದ ಅಂಶವೆಂದರೆ, ಈ ಇನ್ಸ್‌ಪೆಕ್ಟರ್‌ ತಾನು ಲೈಂಗಿಕವಾಗಿ ಬಳಸಿಕೊಂಡ ಮಹಿಳೆಯೊಬ್ಬರ ಅಪ್ರಾಪ್ತ ಮಗಳ ಮೇಲೂ ಕೆಟ್ಟದೃಷ್ಟಿ ಬೀರಿದ್ದಾರೆ. ತನ್ನ ತೀಟೆ ತೀರಿಸಿಕೊಳ್ಳಲು ಬಳಸಿಕೊಂಡಿದ್ದ ಮಹಿಳೆಯ ಅಪ್ರಾಪ್ತ ಮಗಳ ಮೇಲೆ ಕಣ್ಣುಹಾಕಿದ್ದಲ್ಲದೆ, ಆಕೆ ಓದುತ್ತಿರುವ ಕಾಲೇಜಿಗೆ ಹೋಗುತ್ತೇನೆ ಎಂದು ಫೋನ್‌ನಲ್ಲಿ ಸಂತ್ರಸ್ತೆಗೆ ಬೆದರಿಕೆ ಹಾಕಿದ್ದಾನೆ. ಈ ಆರೋಪಕ್ಕೆ ಸಂಬಂಧಿಸಿದ ಆಡಿಯೋವೊಂದು ಈಗ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕೊನೆಗೂ ಎಚ್ಚೆತ್ತ ಪೊಲೀಸ್ ಇಲಾಖೆ

ಕಳೆದ ಕೆಲವು ತಿಂಗಳುಗಳಿಂದ ಈತನ ವಿರುದ್ಧ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂಬ ಆರೋಪವಿತ್ತು. ಹಿರಿಯ ಅಧಿಕಾರಿಗಳೇ ಈತನನ್ನು ರಕ್ಷಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿತ್ತು. ಇದೀಗ ಪ್ರಕರಣದ ತೀವ್ರತೆ ಅರಿತ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತನಿಖೆಗೆ ಆದೇಶಿಸಿದ್ದಾರೆ. ಉತ್ತರ ವಿಭಾಗದ ಎಸಿಪಿ ಶ್ರೀಕಾಂತ್ ಅವರಿಗೆ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ: ಪತಿಯನ್ನು ಬಿಡುವಂತೆ ಠಾಣೆಗೆ ಬಂದಿದ್ದ ಮಹಿಳೆಯನ್ನು ಮಂಚಕ್ಕೆ ಕರೆದ ಇನ್ಸ್​ಪೆಕ್ಟರ್!

ಈವರೆಗೂ ಯಾವೊಬ್ಬ ಮಹಿಳೆಯೂ ಅಧಿಕೃತವಾಗಿ ಲೈಂಗಿಕ ಕಿರುಕುಳದ ಬಗ್ಗೆ ದೂರು ನೀಡಿಲ್ಲ. ಯಾರಾದರೂ ಸಂತ್ರಸ್ತೆಯರಿದ್ದರೆ ಧೈರ್ಯವಾಗಿ ಬಂದು ದೂರು ನೀಡಿ, ನಾವು ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಕಮಿಷನರ್ ಮನವಿ ಮಾಡಿದ್ದಾರೆ. ಆದರೆ ಮತ್ತೊಂದೆಡೆ, ಈಗಾಗಲೇ ಸಿಎಂ, ಗೃಹ ಸಚಿವರು ಮತ್ತು ಮಹಿಳಾ ಆಯೋಗಕ್ಕೂ ದೂರು ನೀಡಿದ್ದೇನೆ ಎಂದು ಸಂತ್ರಸ್ತ ಮಹಿಳೆ ಹೇಳಿದ್ದು, ನ್ಯಾಯ ಒದಗಿಸಿಕೊಡುವಂತೆ ಮನವಿ ಮಾಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:12 am, Tue, 17 March 26

Follow Us