ಮಂಗಳೂರು MRPL ಸ್ಫೋಟಕ್ಕೆ ಕಾರಣವಾಯ್ತಾ ದೈವಾಕ್ರೋಶ?: ‘ನನ್ನ ದೈವಸ್ಥಾನ ಕೆಡವಿದರೆ ಬೆಂಕಿ ಸುರಿಸುತ್ತೇನೆ ಎಂದು ಎಚ್ಚರಿಸಿದ್ದ ಕಾಂತೇರಿ ಜುಮಾದಿ ದೈವ
ಮಂಗಳೂರು MRPL ಸ್ಫೋಟದ ಘಟನೆಗೆ ನೆಲ್ಲಿದಡಿ ಗುತ್ತಿನ 'ಕಾಂತೇರಿ ಜುಮಾದಿ' ದೈವದ ಆಕ್ರೋಶವೇ ಕಾರಣವೆಂಬ ಚರ್ಚೆ ಕರಾವಳಿಯಲ್ಲಿ ಮುನ್ನೆಲೆಗೆ ಬಂದಿದೆ. MSEZ ಭೂ ಸ್ವಾಧೀನದ ವೇಳೆ ದೈವದ ಸ್ಥಾನಕ್ಕೆ ಅಡ್ಡಿಪಡಿಸಿದಾಗ, "ಬೆಂಕಿ ಸುರಿಸುತ್ತೇನೆ" ಎಂದು ದೈವ ಎಚ್ಚರಿಸಿತ್ತು. 800 ವರ್ಷಗಳ ಇತಿಹಾಸವಿರುವ ದೈವಸ್ಥಾನದ ಭೂ ವಿವಾದ ಮತ್ತು ಹಿಂದಿನ ಅಗ್ನಿ ಅವಘಡಗಳನ್ನು ಸ್ಥಳೀಯರು ದೈವದ ಶಾಪವೆಂದು ನಂಬಿದ್ದಾರೆ. ಸರ್ಕಾರ ಮತ್ತು ಕಂಪನಿ ದೈವದ ಜಾಗವನ್ನು ಹಿಂದಿರುಗಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.

ಮಂಗಳೂರು, ಅ.1: ನೆಲ್ಲಿದಡಿ ಗುತ್ತು, ಇದು ದೈವಗಳ ಕಾರ್ಣಿಕ ಕ್ಷೇತ್ರ, ಧರ್ಮ, ನಿಷ್ಠೆಗೆ ಹಾಗೂ ಕಾರ್ಣಿಕಕ್ಕೆ ಹೆಸರುವಾಸಿ, ನೀಡಿದ ನುಡಿಯಂತೆ ನಡೆದುಕೊಳ್ಳುವುದು ಇಲ್ಲಿನ ದೈವಗಳು, ನೆನ್ನೆ ಮಂಗಳೂರಿ MRPL ಸ್ಫೋಟದ ಘಟನೆಗೂ ಈ ಕ್ಷೇತ್ರದ ದೈವ ನೀಡಿದ ನುಡಿಗೂ ಸಂಬಂಧವಿದೆ ಎಂದು ಇಲ್ಲಿನ ಸ್ಥಳೀಯರು ಹೇಳುತ್ತಿದ್ದಾರೆ. ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಆವರಣದಲ್ಲಿ ಸಂಭವಿಸಿದ ಭಾರಿ ಸ್ಫೋಟ ಹಾಗೂ ಅಗ್ನಿ ಅವಘಡದ ಬೆನ್ನಲ್ಲೇ ತುಳುನಾಡಿನಲ್ಲಿ ಹೊಸದೊಂದು ಚರ್ಚೆ ಮುನ್ನೆಲೆಗೆ ಬಂದಿದೆ. ಮಂಗಳೂರು ವಿಶೇಷ ಆರ್ಥಿಕ ವಲಯದ (MSEZ) ವ್ಯಾಪ್ತಿಯಲ್ಲಿರುವ 800 ವರ್ಷಗಳ ಸುದೀರ್ಘ ಇತಿಹಾಸ ಹೊಂದಿದ ಬಜಪೆ ಗ್ರಾಮದ ನೆಲ್ಲಿದಡಿ ಗುತ್ತುವಿನ ‘ಕಾಂತೇರಿ ಜುಮಾದಿ’ ದೈವದ ಆಕ್ರೋಶವೇ ಈ ಅಗ್ನಿ ಅವಘಡಕ್ಕೆ ಕಾರಣವಾಯಿತೇ ಎಂಬ ಪ್ರಶ್ನೆ ಕರಾವಳಿ ಭಾಗದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿದೆ.
ದೈವಾರಾಧನೆಗೆ ಅಧಿಕಾರಿಗಳು ತಡೆ ಒಡ್ಡಿದ ಸಂದರ್ಭದಲ್ಲಿ, “ನನ್ನ ಸ್ಥಾನ ಕೆಡವಿದರೆ ಬೆಂಕಿ ಸುರಿಸುತ್ತೇನೆ, ನನ್ನ ಮಣ್ಣು ಉಳಿಸಿಕೊಳ್ಳಲು ನನಗೆ ಗೊತ್ತಿದೆ. ಒಂದು ವರ್ಷದೊಳಗೆ ತೀರ್ಮಾನ ಕೊಡುತ್ತೇನೆ” ಎಂದು ದೈವ ನುಡಿದಿದ್ದ ಕಾರಣ, ಈ ಸ್ಫೋಟಕ್ಕೂ ದೈವದ ಎಚ್ಚರಿಕೆಗೂ ನಿಕಟ ಸಂಬಂಧವಿದೆ ಎಂದು ಸ್ಥಳೀಯರು ಹಾಗೂ ದೈವಾರಾಧಕರು ಭಾವಿಸುತ್ತಿದ್ದಾರೆ.
800 ವರ್ಷಗಳ ಇತಿಹಾಸವಿರುವ ನೆಲ್ಲಿದಡಿ ಗುತ್ತು ಹಾಗೂ MSEZ ವಿವಾದ:
2006ರಲ್ಲಿ ಮಂಗಳೂರು ವಿಶೇಷ ಆರ್ಥಿಕ ವಲಯ (MSEZ) ಕೈಗಾರಿಕಾ ಪ್ರದೇಶ ಅಭಿವೃದ್ಧಿಗಾಗಿ ಸರ್ಕಾರವು ಬಜ್ಪೆ, ಬಾಳ, ಕುತ್ತೆತ್ತೂರು, ಪೆರ್ಮುದೆ ಹಾಗೂ ಕಳವಾರು ಗ್ರಾಮಗಳ ಸಾವಿರಾರು ಎಕರೆ ಭೂಮಿಯನ್ನು ವಶಪಡಿಸಿಕೊಂಡಿತ್ತು. ಈ ವೇಳೆ ಸಮೃದ್ಧ ಗದ್ದೆಗಳು, ಶಾಲೆ, ಚರ್ಚ್, ಮಸೀದಿಗಳು, ಸಾವಿರಾರು ಮನೆಗಳು, ನಾಗಬನ ಹಾಗೂ ದೈವಸ್ಥಾನಗಳು ನೆಲಸಮಗೊಂಡವು.
ಆದರೆ 800 ವರ್ಷಗಳ ಇತಿಹಾಸವಿದ್ದ ನೆಲ್ಲಿದಡಿ ಗುತ್ತುವಿನ ಕಾಂತೇರಿ ಜುಮಾದಿ ದೈವಸ್ಥಾನವನ್ನು ಕಂಪನಿಯಿಂದ ಮುಟ್ಟಲು ಸಾಧ್ಯವಾಗಲಿಲ್ಲ. ಜಾಗವನ್ನು ಬಲಾತ್ಕಾರವಾಗಿ ಕಂಪನಿ ತನ್ನ ಹೆಸರಿಗೆ ಬರೆಸಿಕೊಂಡಿದ್ದರೂ, “ಯಾವ ಕಾರಣಕ್ಕೂ ಈ ಮಣ್ಣನ್ನು ಬಿಡುವುದಿಲ್ಲ” ಎಂದು ದೈವ ನುಡಿದಿತ್ತು. 2016ರಲ್ಲಿ ಈ ಜಾಗವನ್ನು ನೆಲಸಮ ಮಾಡಲು ಮತ್ತೊಮ್ಮೆ ಯತ್ನಿಸಿದಾಗಲೂ ಅದು ಸಾಧ್ಯವಾಗಲಿಲ್ಲ. ಕೊನೆಗೆ ಅಂದಿನ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ದೈವಸ್ಥಾನವನ್ನು ಸ್ಮಾರಕದಂತೆ ಉಳಿಸಿಕೊಂಡು, ನಿತ್ಯ ಪೂಜೆಗೆ ಅವಕಾಶ ನೀಡಿದ್ದರು.
ಇಲ್ಲಿದೆ ನೋಡಿ ವಿಡಿಯೋ:
ದೈವಾರಾಧನೆಗೆ ನಿರ್ಬಂಧ ಮತ್ತು ದೈವ ನೀಡಿದ್ದ ಎಚ್ಚರಿಕೆ:
ಕಳೆದ 2025ರಲ್ಲಿ MSEZ ಹಾಗೂ MRPL ವ್ಯಾಪ್ತಿಯ ಅಧಿಕಾರಿಗಳು ಮತ್ತೆ ತಗಾದೆ ತೆಗೆದು, ನೆಲ್ಲಿದಡಿ ಗುತ್ತಿನ ದೈವಕ್ಕೆ ಹೂವು-ನೀರು ಇಡಲು ಹಾಗೂ ಸಂಕ್ರಮಣದ ನಿತ್ಯ ಪೂಜೆಗೆ ಗೇಟ್‌ನಲ್ಲೇ ತಡೆ ಒಡ್ಡಿದ್ದರು. ತುಳುನಾಡಿನ ಅತ್ಯಂತ ಪ್ರಸಿದ್ಧ ದೈವಸ್ಥಾನಕ್ಕೆ ಪ್ರವೇಶ ನಿರ್ಬಂಧಿಸಿದ್ದು ಸಾರ್ವಜನಿಕವಾಗಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ‘ನೆಲ್ಲಿದಡಿ ಗುತ್ತು ಉಳಿಸಿ’ ಅಭಿಯಾನದ ಬಳಿಕ ಪಾಸ್ ನೀಡಿ ದೈವಾರಾಧನೆಗೆ ಸೀಮಿತ ಅವಕಾಶ ನೀಡಲಾಗಿತ್ತು. ಆ ಸಂದರ್ಭದಲ್ಲಿ ದರ್ಶನ ಸೇವೆಯ ವೇಳೆ ಜುಮಾದಿ ದೈವವು ನೆಲ್ಲಿದಡಿ ಗುತ್ತುವಿನ ಮುಖ್ಯಸ್ಥ ಚೌಟರಿಗೆ ಅಭಯ ನೀಡುತ್ತಾ, ಅಧಿಕಾರಿಗಳ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. “ನನ್ನ ಸ್ಥಾನ ಕೆಡವಲು ಬಂದವರಿಗೆ ಒಂದು ವರ್ಷದೊಳಗೆ ತೀರ್ಮಾನ ಕೊಡುತ್ತೇನೆ. ಜಾಗವನ್ನು ದೈವಸ್ಥಾನದ ಹೆಸರಿಗೆ ಬರೆದುಕೊಡದಿದ್ದರೆ ಬೆಂಕಿ ಸುರಿಸುತ್ತೇನೆ!” ಎಂದು ನಾಲ್ಕು ತಿಂಗಳ ಹಿಂದೆಯಷ್ಟೇ ದೈವ ಎಚ್ಚರಿಕೆ ನೀಡಿತ್ತು ಎನ್ನಲಾಗಿದೆ.
ಇದನ್ನೂ ಓದಿ: ಮಂಗಳೂರಿನ MRPLನಲ್ಲಿ ಸ್ಫೋಟ: ಓರ್ವ ಸಾವು, 9 ಕಾರ್ಮಿಕರಿಗೆ ಗಾಯ; ಸ್ಫೋಟದ ಶಬ್ಧಕ್ಕೆ ಬೆಚ್ಚಿಬಿದ್ದ ಜನ
ಭೂಮಿ ಕಸಿದುಕೊಂಡಿದ್ದ ಫ್ಯಾಕ್ಟರಿಯಲ್ಲಿ ಈ ಹಿಂದೆಯೂ ನಡೆದಿತ್ತು ಭಾರಿ ಅಗ್ನಿ ದುರಂತ:
2021ರಲ್ಲೂ ಎಂಎಸ್‌ಇಝಡ್ ಆವರಣದೊಳಗಿದ್ದ ಮುಂಬೈ ಮೂಲದ ‘ಕ್ಯಾಟಸಿಂಥ್’ ಫ್ಯಾಕ್ಟರಿಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿ ಇಡೀ ಕಾರ್ಖಾನೆ ಹೊತ್ತಿ ಉರಿದಿತ್ತು. ಇದೀಗ ಸಾಲು ಸಾಲು ಅಗ್ನಿ ದುರಂತಗಳು ಸಂಭವಿಸುತ್ತಿರುವುದು ದೈವದ ಕೋಪಕ್ಕೆ ಸಾಕ್ಷಿ ಎಂಬ ಮಾತುಗಳು ಕರಾವಳಿಯುದ್ದಕ್ಕೂ ಕೇಳಿಬರುತ್ತಿವೆ. ಸರ್ಕಾರ ಹಾಗೂ ಕಂಪನಿ ಆಡಳಿತ ಮಂಡಳಿಯು ದೈವದ ಜಾಗವನ್ನು ದೈವಸ್ಥಾನಕ್ಕೇ ಹಸ್ತಾಂತರಿಸಬೇಕು ಎಂದು ದೈವಾರಾಧಕರು ಹಾಗೂ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:15 am, Thu, 1 October 26




