Pramod Muthalik: ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ಗೆ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶ ನಿಷೇಧ
ಮುತಾಲಿಕ್ ಅವರ ದಕ್ಷಿಣ ಕನ್ನಡ ಜಿಲ್ಲೆ ಭೇಟಿಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದಾರೆ.

ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವ ಅಪಾಯ ಇರುವ ಹಿನ್ನೆಲೆಯಲ್ಲಿ ಪ್ರಮೋದ್ ಮುತಾಲಿಕ್ (Pramod Muthalik) ಅವರ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ. ಮುತಾಲಿಕ್ ಅವರ ದಕ್ಷಿಣ ಕನ್ನಡ ಜಿಲ್ಲೆ ಭೇಟಿಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಕಡಬ ಮತ್ತು ಸುಳ್ಯ ತಾಲೂಕುಗಳಿಗೆ ಪ್ರಮೋದ್ ಮುತಾಲಿಕ್ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಜಿಲ್ಲಾಡಳಿತ ಹೇಳಿದೆ.
ಪ್ರಮೋದ್ ಮುತಾಲಿಕ್ ಅವರು ಈ ಹಿಂದೆ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿದ್ದವರು. ಜಿಲ್ಲೆಯಲ್ಲಿ ಪ್ರಸ್ತುತ ನಡೆಯುತ್ತಿರುವ ವಿದ್ಯಮಾನಗಳಿಂದ ಕೋಮು ಸೌಹಾರ್ದತೆಗೆ ಧಕ್ಕೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಮುತಾಲಿಕ್ ಜಿಲ್ಲಾ ಪ್ರವೇಶ ನಿಷೇಧಿಸಬೇಕು ಎಂದು ಪೊಲೀಸ್ ಅಧೀಕ್ಷಕರು ಮಾಡಿದ್ದ ಮನವಿಯನ್ನು ಜಿಲ್ಲಾಧಿಕಾರಿ ಪುರಸ್ಕರಿಸಿದ್ದಾರೆ.
ಹಿಂದೂ ಕಾರ್ಯಕರ್ತರ ಪ್ರಾಣಕ್ಕೆ ಬೆಲೆಕೊಡುತ್ತಿಲ್ಲ: ಮುತಾಲಿಕ್
ಬೆಳ್ಳಾರೆಯ ಬಿಜೆಪಿ ನಾಯಕ ಪ್ರವೀಣ್ ಬೆಳ್ಳಾರೆ ಕೊಲೆ ಕುರಿತು ಉಡುಪಿಯಲ್ಲಿ ಪ್ರತಿಕ್ರಿಯಿಸಿರುವ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಹಿಂದೂ ಯುವಕರ ಹತ್ಯೆ ನಡೆಯುತ್ತಿರುವುದು ಸರ್ಕಾರದ ವೈಫಲ್ಯದಿಂದ. ಬಿಜೆಪಿ ನಾಯಕರು ಅವರ ಮಕ್ಕಳನ್ನು ಬೆಳೆಸುವ ಕೆಲಸ ಮಾಡುತ್ತಿದ್ದಾರೆ. ಹಿಂದೂ ಕಾರ್ಯಕರ್ತರ ಪ್ರಾಣಕ್ಕೆ ಬೆಲೆಕೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಪ್ರವೀಣ್ ಸಾವಿನ ನಂತರ ಕಾರ್ಯಕರ್ತರ ಆಕ್ರೋಶ ಹೇಗಿರುತ್ತದೆ ಎನ್ನುವುದು ಸರ್ಕಾರಕ್ಕೆ ಅರಿವಾಗಿದೆ. ಹಿಂದೂ ಕಾರ್ಯಕತರನ್ನು ಕಡೆಗೆ ಗಮನ ಹರಿಸದ ಸರ್ಕಾರಕ್ಕೆ ಧಿಕ್ಕಾರ. ಸಾವಿರಾರು ಯುವಕರು ಪಕ್ಷಕ್ಕೆ ರಾಜೀನಾಮೆ ಕೊಟ್ಟು ಆಕ್ರೋಶ ಹೊರಹಾಕಿರುವುದು ಸ್ವಾಗತಾರ್ಹ ಎಂದು ಹೇಳಿದರು.
Published On - 11:40 am, Fri, 29 July 22