ಸಮುದ್ರದ ಮೇಲೆ ಏಕಾಂಗಿಯಾಗಿ ಹಾರಬೇಕು! ದುಬೈ ಮಂಗಳೂರು ವಿಮಾನದಲ್ಲಿ ವ್ಯಕ್ತಿಯ ಕಿರಿಕಿರಿ, ಏನು ಮಾಡಿದ್ರು ವಿಮಾನ ಸಿಬ್ಬಂದಿ?
Dubai-Mangaluru flight; ದುಬೈಯಿಂದ ಮಂಗಳೂರಿಗೆ ಬರುವ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಪ್ರಯಾಣಿಕನೊಬ್ಬ ವಿಚಿತ್ರ ವರ್ತನೆ ತೋರಿದ್ದಾರೆ. ಅರಬ್ಬೀ ಸಮುದ್ರದ ಮೇಲೆ ಬರುತ್ತಿದ್ದಾಗ ತಾನೊಬ್ಬನೇ ಸಮುದ್ರದ ಮೇಲೆ ಹಾರಾಟ ಮಾಡಬೇಕು ಎಂದು ರಂಪಾಟ ಮಾಡಿದ್ದಾನೆ. ಇಷ್ಟೇ ಅಲ್ಲದೆ, ಇನ್ನೂ ಹಲವು ಅವಾಂತರ ಸೃಷ್ಟಿಸಿದ್ದಾನೆ. ಕೊನೆಗೆ ವಿಮಾನ ಸಿಬ್ಬಂದಿ ಆತನನ್ನು ಏನು ಮಾಡಿದರು? ಆಮೇಲೇನಾಯ್ತು ಎಂಬ ವಿವರ ಇಲ್ಲಿದೆ.
ಮಂಗಳೂರು, ಮೇ 11: ದುಬೈ ಮಂಗಳೂರು ನಡುವಿನ ವಿಮಾನ ಪ್ರಯಾಣದ (Dubai-Mangaluru flight) ವೇಳೆ ಅಶಿಸ್ತಿನ ವರ್ತನೆ ತೋರಿದ ಪ್ರಯಾಣಿಕರೊಬ್ಬರ ವಿರುದ್ಧ ಏರ್ ಇಂಡಿಯಾ ಎಕ್ಸ್‌ಪ್ರೆಸ್ (Air India Express) ಸಿಬ್ಬಂದಿಯ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಮಂಗಳೂರಿನ (Mangaluru) ಬಜ್ಪೆ ಪೊಲೀಸರು ಶನಿವಾರ ತಿಳಿಸಿದ್ದಾರೆ. ವಿಮಾನದ ಭದ್ರತಾ ಸಂಯೋಜಕ ಸಿದ್ಧಾರ್ಥದಾಸ್ ಎಂಬವರು ಪ್ರಯಾಣಿಕ ಮೊಹಮ್ಮದ್ ಬಿ.ಸಿ. ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಮೇ 9 ರಂದು ಮುಂಜಾನೆ ಈ ಘಟನೆ ನಡೆದಿದ್ದು, ಅದೇ ಸಂಜೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಮೊಹಮ್ಮದ್ ಮೇ 8 ರಂದು ರಾತ್ರಿ ದುಬೈನಿಂದ ಮಂಗಳೂರಿಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಪ್ರಯಾಣಿಸಿ ಮರುದಿನ ಬೆಳಿಗ್ಗೆ 7.30 ಕ್ಕೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು.
ವಿಮಾನವು ದುಬೈನಿಂದ ಟೇಕಾಫ್ ಆದ ನಂತರ ತುಸು ಹೊತ್ತಿನಲ್ಲಿ ಮೊಹಮ್ಮದ್ ಶೌಚಾಲಯಕ್ಕೆ ಬಂದಿದ್ದರು. ನಂತರ ಆ ವಿಮಾನದ ಪ್ರಯಾಣಿಕರ ಪಟ್ಟಿಯಲ್ಲಿ ಹೆಸರೇ ಇಲ್ಲದ ಕೃಷ್ಣ ಎಂಬ ವ್ಯಕ್ತಿಯ ಬಗ್ಗೆ ಸಿಬ್ಬಂದಿಯನ್ನು ಪ್ರಶ್ನಿಸಿದ್ದರು. ಆ ಹೆಸರಿನ ವ್ಯಕ್ತಿ ನಮ್ಮ ವಿಮಾನದಲ್ಲಿ ಪ್ರಯಾಣಿಸುತ್ತಿಲ್ಲ ಎಂದು ಸಿಬ್ಬಂದಿಯು ಮೊಹಮ್ಮದ್ಗೆ ತಿಳಿಸಿದ್ದರು.
ನಂತರ ಹಲವು ಬಾರಿ ಅಸಂಬದ್ಧ ಪ್ರಶ್ನೆಗಳನ್ನು ಕೇಳುವ ಮೂಲಕ ವಿಮಾನ ಸಿಬ್ಬಂದಿಯನ್ನು ಮೊಹಮ್ಮದ್ ಕೆರಳಿಸಿದ್ದರು. ಇಷ್ಟೇ ಅಲ್ಲದೆ, ಅನಗತ್ಯವಾಗಿ ಹಲವು ಬಾರಿ ಸೇವಾ ಬಟನ್ ಒತ್ತುವ ಮೂಲಕ ಸಿಬ್ಬಂದಿಗೆ ತೊಂದರೆ ನೀಡಿದ್ದರು.
ನಂತರ ವಿಮಾನದಲ್ಲಿದ್ದ ಲೈಫ್ ಜಾಕೆಟ್ ಕಳಚಿ ಸಿಬ್ಬಂದಿಗೆ ನೀಡಿ, ವಿಮಾನದಿಂದ ಇಳಿದು ಹೋಗುವಾಗ ಅದನ್ನು ಬಳಸುವುದಾಗಿ ಹೇಳಿದ್ದರು.
ಇದನ್ನೂ ಓದಿ: ಅರಬ್ಬೀ ಸಮುದ್ರದಲ್ಲಿ ಭಾರೀ ಮತ್ಸ್ಯ ಕ್ಷಾಮ: ಮೀನುಗಾರಿಕೆ ನಿಷೇಧದ ಅವಧಿಗೂ ಮೊದಲೇ ಬಂದರಿನಲ್ಲಿ ಲಂಗರು ಹಾಕಿದ ಬೋಟ್‌ಗಳು
ವಿಮಾನವು ಅರಬ್ಬೀ ಸಮುದ್ರದ ಮೇಲಿರುವಾಗ, ವಿಮಾನದ ಸಿಬ್ಬಂದಿಯನ್ನು ಕರೆದು ಸಮುದ್ರದ ಮೇಲೆ ಏಕಾಂಗಿಯಾಗಿ ಹಾರಲು ಬಯಸುವುದಾಗಿ ಹೇಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:23 pm, Sat, 11 May 24