ನನ್ನ ಪತಿ ಹತ್ಯೆಯಲ್ಲಿ ಮುಸ್ತಫಾ ಪೈಚಾರ್ ಪ್ರಮುಖ ಆರೋಪಿ: ಪ್ರವೀಣ್ ನೆಟ್ಟಾರು ಪತ್ನಿ ನೂತನಾ
2022ರ ಜುಲೈ 26 ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮುಂಖಡ ಪ್ರವೀಣ್ ನೆಟ್ಟಾರು ಎಂಬಾತನನ್ನು ಕೊಲೆ ಮಾಡಲಾಗಿತ್ತು. ಇದು ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತ್ತು. ಪ್ರವೀಣ ನೆಟ್ಟಾರು ಕೊಲೆ ಪ್ರಕರಣದ ನಾಲ್ಕನೇ ಆರೋಪಿಯನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ.
ಮಂಗಳೂರು, ಮೇ 10: ನನ್ನ ಪತಿಯ ಹತ್ಯೆ ಪ್ರಕರಣ ಮುಸ್ತಫಾ ಪೈಚಾರ್ನೇ (Mustafa Paychar) ಪ್ರಮುಖ ಆರೋಪಿಯಾಗಿದ್ದಾನೆ. ಅವನನ್ನು ಬಂಧಿಸಿದ್ದಕ್ಕೆ ನಮಗೆ ತುಂಬಾ ಖುಷಿಯಾಗಿದೆ. ಈ ಪ್ರಕರಣದ ಎಲ್ಲ ಆರೋಪಿಗಳಿಗೂ ಮರಣ ದಂಡನೆಯಾಗಬೇಕು. ಮುಂದೆ ಸಮಾಜದಲ್ಲಿ ಇಂತಹ ಪ್ರಕರಣ ಮರುಕಳಿಸಬಾರದು ಎಂದು ಪ್ರವೀಣ ನೆಟ್ಟಾರು (Praveen Nettaru) ಪತ್ನಿ ನೂತನಾ ಹೇಳಿದರು.
ಇಡೀ ದೇಶದಲ್ಲಿ ಇಂತಹ ಪ್ರಕರಣಗಳು ಮತ್ತೆ ನಡೆಯಬಾರದು. ಆರೋಪಿ ಮುಸ್ತಫಾ ಪೈಚಾರ್ ಬಂಧನ ಸುದ್ದಿ ಕೇಳಿ ನಮ್ಮ ಕುಟುಂಬದವರಿಗೆ ತುಂಬಾ ಸಂತಸವಾಗಿದೆ. ನಮ್ಮ ಕುಟುಂಬದ ಪರವಾಗಿ ಎನ್ಐಎ ಅಧಿಕಾರಿಗಳಿಗೆ ಧನ್ಯವಾದ ಹೇಳುತ್ತೇನೆ. ಬಂಧನ ಆಗಿರುವುದು ನಮಗೆಲ್ಲ ತುಂಬಾ ಖುಷಿಯಾಗಿದೆ. ಪ್ರಕರಣ ನಡೆದು ಎರಡು ವರ್ಷವಾದರೂ ಆರೋಪಿಗಳನ್ನ ಬಂಧಿಸಲು ಎನ್ಐಎ ಅಧಿಕಾರಿಗಳು ತುಂಬಾ ಪ್ರಯತ್ನ ಪಡುತ್ತಿದ್ದಾರೆ. ಎನ್ಐಎ ಸಂಸ್ಥೆಯ ಮೇಲೆ ನಂಬಿಕೆ ಇದೆ. ಎಲ್ಲ ಆರೋಪಿಗಳ ಬಂಧನವಾಗುತ್ತೆ. ಈ ಪ್ರಕರಣದ ಆರೋಪಿಗಳಿಗೆ ನೀಡುವ ಶಿಕ್ಷೆ ಒಂದು ಪಾಠವಾಗಬೇಕು. ಎಸ್ಡಿಪಿಐ, ಪಿಎಫ್ಐ ಕಾರ್ಯಕರ್ತರು ಮುಂದೆ ಯಾವತ್ತೂ ಇಂತಹ ಪ್ರಕರಣಕ್ಕೆ ಕೈ ಹಾಕಬಾರದು ಎಂದು ಆಗ್ರಹಿಸಿದರು.
ಇದನ್ನೂ ಓದಿ: ಪ್ರವೀಣ ನೆಟ್ಟಾರು ಕೊಲೆ ಪ್ರಕರಣದ ನಾಲ್ಕನೇ ಆರೋಪಿ ಬಂಧನ
ಆರೋಪಿಯ ವಿಚಾರಣೆ
ಹಾಸನ ಸಕಲೇಶಪುರ ನಗರ ಠಾಣೆಯಲ್ಲಿ ಮುಖ್ಯ ಆರೋಪಿ ಮುಸ್ತಾಫಾ ಪೈಚಾರ್ ಹಾಗೂ ಇಲಿಯಾಸ್ನನ್ನು ಎನ್ಐಎ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಸಕಲೇಶಪುರ ಆನೇಮಹಲ್ ಸಿರಾಜ್ ಎಂಬುವರು ಮುಸ್ತಫಾ ಪೈಚಾರ್ಗೆ ಆಶ್ರಯ ನೀಡಿದ್ದರು. ಇದೀಗ ಸಿರಾಜ್ ಅವರನ್ನೂ ಎನ್ಐಎ ಅಧಿಕಾರಿಗಳು ವಿಚಾರಣೆ ಮಾಡಿದ್ದಾರೆ. ಆನೆಮಹಲ್‌ನ ಸಿರಾಜ್ ಬಳಿ ಶುಂಠಿ ಬೆಳೆ ಬೆಳೆಯಲು ಮುಸ್ತಾಫಾ ಪೈಚಾರ್ ಹಾಗೂ ಇಲಿಯಾಸ್ ಜೊತೆಯಾಗಿದ್ದರು. ಸದ್ಯ ಇಬ್ಬರೂ ಆರೋಪಿಗಳನ್ನು ಎನ್ಐಎ ಅಧಿಕಾರಿಗಳು ಬೆಂಗಳೂರಿಗೆ ಕರೆ ತಂದಿದ್ದಾರೆ.
ಪ್ರವೀಣ ನೆಟ್ಟಾರು ಕೊಲೆ
2022ರ ಜುಲೈ 26 ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮುಂಖಡ ಪ್ರವೀಣ್ ನೆಟ್ಟಾರು ಎಂಬಾತನನ್ನು, ಆತನ ಕೋಳಿ ಅಂಗಡಿ ಬಳಿಯೇ ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ಪ್ರವೀಣ್ ನೆಟ್ಟಾರ್ನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಇದಾದ ಬಳಿಕ ದುಷ್ಕರ್ಮಿಗಳು ವಿವಿಧ ಕಡೆಗಳಿಗೆ ಪರಾರಿಯಾಗಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ