ಕಲ್ಲಡ್ಕ ಪ್ರಭಾಕರ್ ಭಟ್ ಆರೋಗ್ಯದಲ್ಲಿ ಏರುಪೇರು; ಎದೆ ನೋವು ಹಿನ್ನೆಲೆ ಆಸ್ಪತ್ರೆಗೆ ದಾಖಲು
ತಮ್ಮ ವಿದ್ಯಾಸಂಸ್ಥೆಯಲ್ಲಿದ್ದಾಗ ಪ್ರಭಾಕರ್ ಭಟ್ಗೆ ಎದೆ ನೋವು ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆ, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೀಗ ಪ್ರಭಾಕರ್ ಭಟ್ ಚೇತರಿಸಿಕೊಳ್ಳುತ್ತಿರುವುದಾಗಿ ವೈದ್ಯರು ಮಾಹಿತಿ ನೀಡಿದ್ದಾರೆ.
ಮಂಗಳೂರು: ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ (Kalladka Prabhakar Bhat) ಆರೋಗ್ಯದಲ್ಲಿ ಏರುಪೇರು ಆಗಿರುವ ಬಗ್ಗೆ ಮಾಹಿತಿ ಲಭಿಸಿದೆ. ಭಟ್, ಎದೆ ನೋವು ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಮ್ಮ ವಿದ್ಯಾಸಂಸ್ಥೆಯಲ್ಲಿದ್ದಾಗ ಪ್ರಭಾಕರ್ ಭಟ್ಗೆ ಎದೆ ನೋವು ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆ, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೀಗ ಪ್ರಭಾಕರ್ ಭಟ್ ಚೇತರಿಸಿಕೊಳ್ಳುತ್ತಿರುವುದಾಗಿ ವೈದ್ಯರು ಮಾಹಿತಿ ನೀಡಿದ್ದಾರೆ. ಆರ್ಎಸ್ಎಸ್ ಮುಖಂಡರು ಹಾಗೂ ಹಿಂದೂಪರ ಹೋರಾಟಗಾರರೂ ಆಗಿರುವ ಪ್ರಭಾಕರ್ ಭಟ್ ಇತ್ತೀಚೆಗೆ ಭಾರಿ ಸುದ್ದಿಯಲ್ಲಿ ಇದ್ದರು. ಹಿಂದೂ ಮುಸ್ಲಿಂ ಸಂಬಂಧ ಹುಟ್ಟಿಕೊಂಡಿದ್ದ ಹಲವು ವಿವಾದಗಳ ಬಗ್ಗೆ ಅವರು ಹೇಳಿಕೆಗಳನ್ನು ನೀಡಿದ್ದರು. ಕೆಲವು ಹೇಳಿಕೆಗಳು ವಿವಾದಕ್ಕೂ ಕಾರಣವಾಗಿತ್ತು.
ಪ್ರಭಾಕರ್ ಭಟ್ ಇತ್ತೀಚೆಗೆ ಮಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಪರಿಷತ್ ಉದ್ಘಾಟನೆಗೆ ಅತಿಥಿಯಾಗಿ ತೆರಳಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ಸಿಎಫ್ಐ ಸಂಘಟನೆ ಪ್ರತಿಭಟನೆಯನ್ನು ನಡೆಸಿತ್ತು. ಪ್ರಭಾಕರ್ ಭಟ್, ಸಲಾಂ ಪೂಜೆ ನಿಷೇಧ, ಶಾಲೆಯಲ್ಲಿ ಹಿಜಾಬ್ ನಿಷೇಧ, ಕೇಸರಿ ಧ್ವಜ ರಾಷ್ಟ್ರಧ್ವಜ ವಿಚಾರ ಸಹಿತ ಹಲವು ವಿಷಯಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು.
ಇಂದು ಪ್ರಭಾಕರ್ ಭಟ್ ಅವರಿಗೆ ಕಡಿಮೆ ರಕ್ತದೊತ್ತಡ ಕಾರಣದಿಂದ ಆರೋಗ್ಯದಲ್ಲಿ ಏರುಪೇರಾಗಿತ್ತು. ಅಲ್ಲದೆ ಸಣ್ಣ ಪ್ರಮಾಣದಲ್ಲಿ ಎದೆನೋವಿನ ಲಕ್ಷಣ ಕೂಡ ಕಾಣಿಸಿಕೊಂಡಿದೆ. ಈ ಹಿನ್ನೆಲೆ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದೀಗ ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಭಾಕರ್ ಭಟ್ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ಲಭಿಸಿದೆ. ಇತರ ಮಾಹಿತಿಗಳು ಇನ್ನಷ್ಟೇ ಲಭಿಸಬೇಕಿದೆ.
ಸಲಾಂ ಮಂಗಳಾರತಿ, ಮುಸ್ಲಿಂರ ವ್ಯಾಪಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಭಟ್
ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್, ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದಲ್ಲಿ ಸಲಾಂ ಮಂಗಳಾರತಿ ಮಾಡುವ ಪದ್ಧತಿ ಕೂಡಲೇ ನಿಲ್ಲಬೇಕೆಂದು ಈ ಮೊದಲು ಉಡುಪಿಯಲ್ಲಿ ಅಗ್ರಹಿಸಿದ್ದರು. ಹಿಂದೂ ಸಮಾಜವನ್ನು ಒಡೆಯಲು ಮತ್ತು ಸರ್ವನಾಶ ಮಾಡಲು ಪ್ರಯತ್ನಿಸಿದ ಒಬ್ಬ ವ್ಯಕ್ತಿಯ ಹೆಸರಲ್ಲಿ ಸಲಾಂ ಮಂಗಳಾರತಿ ಮಾಡುವುದು ಹಿಂದೂ ದೇವತೆಗಳಿಗೆ ಅವಮಾನ ಮಾಡಿದಂತೆ ಮತ್ತು ಹಾಗೆ ಮಾಡುವುದರಿಂದ ಹಿಂದೂ ದೇವ ದೇವತೆಗಳ ಶಕ್ತಿ ಕಮ್ಮಿಯಾಗುತ್ತದೆ ಎಂದು ಅವರು ಹೇಳಿದ್ದರು. ನಮ್ಮ ಅರಿವಿಗೆ ಬಾರದೆ ಇದುವರೆಗೆ ಅದು ನಡೆದುಹೋಗಿದೆ, ಇನ್ನುಮುಂದೆ ಅದಾಗಬಾರದು ಎಂದು ಹೇಳಿದ ಅವರು ಹಿಂದೂ ದೇವಸ್ಥಾನಗಳಲ್ಲಿ ಬೇರೆ ಪೂಜೆ ಬೇಕಿದ್ದರೆ ಆರಂಭಿಸಲಿ ಎಂದು ತಿಳಿಸಿದ್ದರು.
ಅವರು ತಮ್ಮ ಮಸೀದಿಗಳಲ್ಲಿ ಏನಾದರೂ ಮಾಡಿಕೊಳ್ಳಲಿ ಆದರೆ ನಮ್ಮ ದೇವಸ್ಥಾನಗಳಲ್ಲಿ ನಮ್ಮತನ ಇರಬೇಕು, ನಮ್ಮ ಆಚಾರ-ವಿಚಾರಗಳು, ಪದ್ಧತಿ ಮತ್ತು ಸಂಪ್ರದಾಯಗಳು ಜಾರಿಯಲ್ಲಿರಬೇಕು. ಇಷ್ಟು ದಿನ ನಾವು ಉದಾರಿಗಳಾಗಿದ್ದೆವು ಆದರೆ ನಮ್ಮ ಉದಾರ ಮನೋಭಾವನೆಯನ್ನು ಅವರು ಅರ್ಥಮಾಡಿಕೊಳ್ಳಲಿಲ್ಲ ಎಂದು ಕಲ್ಲಡ್ಕ ಪ್ರಭಾಕರ ಹೇಳಿದ್ದರು.
ಹಿಂದೂ ದೇವಸ್ಥಾನಗಳ ಸುತ್ತಮುತ್ತ 100 ಮೀಟರ್ ದೂರದವರೆಗೆ ಮುಸಲ್ಮಾನರ ಅಂಗಡಿಗಳು ಇರಬಾರದೆಂದು ಕಾನೂನು ಮಾಡಿದ್ದು 2002ರಲ್ಲಿ ಎಸ್ ಎಮ್ ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರ. ಹಾಗಾಗಿ, ಯಾರೂ ಬಿಜೆಪಿ ಸರ್ಕಾರವನ್ನು ದೂಷಿಸುವಂತಿಲ್ಲ. ಮುಸ್ಲಿಂ ವ್ಯಾಪಾರಿಗಳಿಂದ ಅನ್ಯಾಯವಾಗುವುದನ್ನು ಕೃಷ್ಣ ಅವರು ಅರ್ಥಮಾಡಿಕೊಂಡಿದ್ದರು. ಅದರೆ, ಸಿದ್ದರಾಮಯ್ಯ ಮತ್ತು ಡಿಕೆ ಶಿವಕಮಾರ್ ಅವರು ಅರ್ಥಮಾಡಿಕೊಳ್ಳಲಿಲ್ಲ ಎಂದು ಅವರು ಹೇಳಿದ್ದರು.
ಇದನ್ನೂ ಓದಿ: ಮಂಗಳೂರು ವಿವಿ ಕಾರ್ಯಕ್ರಮಕ್ಕೆ ಕಲ್ಲಡ್ಕ ಪ್ರಭಾಕರ್ ಭಟ್ ಅತಿಥಿ: CFI ಪ್ರತಿಭಟನೆ, ಇಬ್ಬರು ಪೊಲೀಸರ ವಶಕ್ಕೆ
ಇದನ್ನೂ ಓದಿ: ನಾಡಿನ ಕಾನೂನು ಅವರಿಗೆ ಒಪ್ಪಿಗೆ ಇಲ್ಲ ಅಂತಾದ್ರೆ ಅವರ ವಾದವನ್ನು ಒಪ್ಪಿಕೊಳ್ಳುವಂಥ ದೇಶಕ್ಕೆ ಹೋಗಲಿ: ಕಲ್ಲಡ್ಕ ಪ್ರಭಾಕರ್ ಭಟ್
Published On - 10:31 pm, Tue, 5 April 22