ಧರ್ಮಸ್ಥಳದಲ್ಲಿ ತಿರುಪತಿ ಮಾದರಿ ಕ್ಯೂ ಕಾಂಪ್ಲೆಕ್ಸ್: ಏನಿದರ ವಿಶೇಷ? ಇಲ್ಲಿದೆ ವಿವರ
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ನಿತ್ಯ ಅಪಾರ ಸಂಖ್ಯೆಯಲ್ಲಿ ಭಕ್ತರು ತೆರಳುತ್ತಾರೆ. ಮಂಜುನಾಥ ಸ್ವಾಮಿ ದರ್ಶನಕ್ಕೆ ಸರತಿ ಸಾಲಿನಲ್ಲಿ ಗಂಟೆಗಟ್ಟಲೇ ಕಾಯುತ್ತಾರೆ. ಸರತಿ ಸಾಲಿನಲ್ಲಿ ಗಂಟೆಗಟ್ಟಲೇ ನಿಲ್ಲುವುದನ್ನು ತಪ್ಪಿಸಲು ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ತಿರುಪತಿ ಮಾದರಿಯಲ್ಲಿ "ಶ್ರೀ ಸಾನಿಧ್ಯ" ಹೊಸ ಸಂಕೀರ್ಣವನ್ನು ನಿರ್ಮಿಸಲಾಗಿದೆ. ಈ ಸಂಕೀರ್ಣದ ವಿಶೇಷತೆ ಏನು? ಇಲ್ಲಿದೆ ಮಾಹಿತಿ
ಮಂಗಳೂರು, ಜನವರಿ 07: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬೆಳ್ತಂಗಡಿ (Belatangadi) ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ (Dharmasthala Manjunatha Swamy) ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಶ್ರೀ ಮಂಜುನಾಥ ದರ್ಶನಕ್ಕೆ ಬರುವ ಭಕ್ತರಿಗಾಗಿ ತಿರುಪತಿ ಮಾದರಿಯಲ್ಲಿ ಸುಸಜ್ಜಿತ ಸೌಕರ್ಯಗಳನ್ನೊಳಗೊಂಡ ಆರಾಮದಾಯಕ ಸರತಿ ಸಾಲಿನ ವ್ಯವಸ್ಥೆಯ ನೂತನ ಸಂಕೀರ್ಣ “ಶ್ರೀ ಸಾನಿಧ್ಯ” ವನ್ನು ನಿರ್ಮಿಸಲಾಗಿದೆ.
ಶ್ರೀ ಸಾನಿಧ್ಯ ಸಂಕೀರ್ಣ ವಿಶೇಷತೆ ಏನು? ಏನೆಲ್ಲ ವ್ಯವಸ್ಥೆ ಒಳಗೊಂಡಿದೆ?
- ಶ್ರೀ ಸಾನಿಧ್ಯ ಸಂಕೀರ್ಣ 2,75,177 ಚದರ ಅಡಿಯಲ್ಲಿ ನಿರ್ಮಾಣಗೊಂಡಿದೆ.
- ಶ್ರೀ ಸಾನಿಧ್ಯ ಸಂಕೀರ್ಣದಲ್ಲಿ ಆಧುನಿಕ ತಂತ್ರಜ್ಞಾನ ಬಳಕೆಯೊಂದಿಗೆ ಭಕ್ತರಿಗೆ ಎಲ್ಲ ಸೌಲಭ್ಯ ನೀಡಲಾಗಿದೆ.
- 2 ಅಂತಸ್ಥಿನ ಶ್ರೀ ಸಾನಿಧ್ಯ ಸಂಕೀರ್ಣದಲ್ಲಿ ಒಟ್ಟು 16 ವಿಶಾಲ ಭವನಗಳಿವೆ.
- ಪ್ರತಿ ಭವನದಲ್ಲಿ ಏಕಕಾಲದಲ್ಲಿ 600 ಜನ ಭಕ್ತರು ವಿಶ್ರಾಂತಿ ಪಡೆಯಬಹುದಾಗಿದೆ. ಸಕಲ ಸೌಕರ್ಯಗಳನ್ನು ನೀಡಲಾಗಿದೆ.
- ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗಿದ್ದು, ಸ್ಟೇನ್ಲೆಸ್ ಸ್ಟೀಲ್ ಕುರ್ಚಿಗಳಿವೆ. ಹವಾನಿಯಂತ್ರಿತ ಸೌಕರ್ಯ ಇದೆ.
- ಭಕ್ತರ ಸಂಖ್ಯೆಯನ್ನು ನಿರ್ಧರಿಸಿ ಭವನದೊಳಗೆ ಕಳುಹಿಸಲು ಎಐ ತಂತ್ರಜ್ಞಾನ ಆಧಾರಿತ ಕ್ಯಾಮೆರಾ ಅಳವಡಿಸಲಾಗಿದೆ.
- ಭಕ್ತಾಧಿಗಳಿಗೆ ಮಾರ್ಗದರ್ಶನ ನೀಡಲು ಎಲ್ಲೆಡೆ ಡಿಜಿಟಲ್ ಸೂಚನಾ ಫಲಕಗಳ ವ್ಯವಸ್ಥೆ ಮಾಡಲಾಗಿದ್ದು, ಭವನ ಸಂಖ್ಯೆ, ದರ್ಶನದ ಅವಧಿ, ದೇವಸ್ಥಾನದ ಇತಿಹಾಸ ಪ್ರಸಾರವಾಗುತ್ತಿರುತ್ತದೆ.
- ಶ್ರೀ ಸಾನಿಧ್ಯ ಸಂಕೀರ್ಣದ ಭವನಗಳ ದ್ವಾರದಲ್ಲಿ ಸೇವಾ ರಶೀದಿಯ ಕೌಂಟರ್ ಇದೆ.
- ಪ್ರತಿ ಭವನದಲ್ಲಿಯೂ ಕ್ಯಾಂಟೀನ್, ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಮಕ್ಕಳ ಆರೈಕೆ ಕೊಠಡಿ ಇದೆ.
- ವಿಶಾಲವಾದ ಭವನದಲ್ಲಿ ಕುರ್ಚಿ ಮೇಲೆ ಕುಳಿತು ನಿಗದಿತ ಸಮಯದಲ್ಲಿ ದೇವರ ದರ್ಶನಕ್ಕೆ ತೆರಳಬಹುದು. ಇದರಿಂದ 6-7 ಗಂಟೆ ಸರತಿ ಸಾಲಿನಲ್ಲಿ ನಿಲ್ಲುವುದು ತಪ್ಪುತ್ತದೆ. ಒಂದೂವರೆ ಗಂಟೆಯೊಳಗೆ ದರ್ಶನ ಪಡೆಯಬಹುದು.
ಇದನ್ನೂ ಓದಿ: ಹೊಸ ವರ್ಷಾಚರಣೆ: ದೇವಸ್ಥಾನಗಳಿಗೆ ಹರಿದು ಬಂದ ಭಕ್ತರ ದಂಡು, ಧರ್ಮಸ್ಥಳದಲ್ಲಿ ಭಕ್ತ ಸಾಗರ
ಸುಸಜ್ಜಿತ ಸೌಕರ್ಯಗಳನ್ನೊಳಗೊಂಡ ನೂತನ ಶ್ರೀ ಸಾನಿಧ್ಯ ಸಂಕೀರ್ಣ ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಉದ್ಘಾಟಿಸಲಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:58 am, Tue, 7 January 25