ರಾಜ್ಯಪಾಲರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ಎಂಎಲ್ಸಿ ಐವನ್ ಡಿಸೋಜಾ ಮನೆ ಮೇಲೆ ಕಲ್ಲು ತೂರಾಟ
ಮಂಗಳೂರಿನ ವೆಲೆನ್ಸಿಯಾದಲ್ಲಿರುವ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಅವರ ಮನೆಯ ಮೇಲೆ ಕಲ್ಲು ತೂರಾಟ ನಡೆದಿದೆ. ರಾತ್ರಿ ಸುಮಾರು 11 ಗಂಟೆಗೆ ಹೆಲ್ಮೆಟ್ ಹಾಕಿಕೊಂಡು ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮನೆ ಮೇಲೆ ಕಲ್ಲು ತೂರಾಟ ನಡೆಸಿ ಪರಾರಿಯಾಗಿದ್ದಾರೆ. ಬಳಿಕ ಕೊಂಚ ಸಮಯ ಬಿಟ್ಟು ಮತ್ತೆ ಕಲ್ಲು ತೂರಾಟ ನಡೆಸಿದ್ದಾರೆ.
ಮಂಗಳೂರು, ಆಗಸ್ಟ್ 22: ರಾಜ್ಯಪಾಲರ (Thawar Chand Gehlot) ವಿರುದ್ದ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ (Ivan D’Souza) ಅವರ ಮಂಗಳೂರಿನ ವೆಲೆನ್ಸಿಯಾದ ಮನೆಯ ಮೇಲೆ ರಾತ್ರಿ ಕಲ್ಲು ತೂರಾಟ ನಡೆದಿದೆ. ಬುಧವಾರ ರಾತ್ರಿ ಸುಮಾರು 11 ಗಂಟೆಗೆ ಹೆಲ್ಮೆಟ್ ಹಾಕಿಕೊಂಡು ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮನೆ ಮೇಲೆ ಕಲ್ಲು ತೂರಾಟ ನಡೆಸಿ ಪರಾರಿಯಾಗಿದ್ದಾರೆ. ಇದಾದ ನಂತರ 2 ನಿಮಿಷ ಬಿಟ್ಟು ಮತ್ತೆ ಬೈಕ್ ನಲ್ಲಿ ಬಂದು ಕಲ್ಲು ತೂರಾಟ ಮಾಡಿದ್ದಾರೆ. ಇದರಿಂದ ಐವನ್ ಡಿಸೋಜಾ ಅವರ ಮನೆಯ ಕಿಟಕಿ ಗಾಜುಗಳು ಹಾನಿಯಾಗಿವೆ.
ಹೊರಗೆ ಹೋಗಿದ್ದ ಐವನ್ ಡಿಸೋಜಾ ಅವರ ಪತ್ನಿ ಕವಿತಾ ಡಿಸೋಜಾ ಅವರು ಮನೆ ಬಳಿ ಕಾರು ಪಾರ್ಕ್ ಮಾಡಿ ಒಳಗೆ ಹೋದ ಐದು ನಿಮಿಷದಲ್ಲೇ ಕಲ್ಲು ತೂರಾಟ ನಡೆದಿದೆ. ಬೈಕ್‌ನಲ್ಲಿ ಇಬ್ಬರು, ನಡೆದುಕೊಂಡು ಇಬ್ಬರು ಬಂದು ಕಲ್ಲು ತೂರಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ರಾಜ್ಯಪಾಲರ ವಿರುದ್ಧ ವಿವಾದಾತ್ಮಕ ಹೇಳಿಕೆ ಹಿನ್ನಲೆ ಕಲ್ಲು ತೂರಾಟ ನಡೆದಿದೆ ಎನ್ನಲಾಗಿದೆ. ಸ್ಥಳಕ್ಕೆ ಪಾಂಡೇಶ್ವರ ಠಾಣಾ ಪೊಲೀಸರು ಭೇಟಿ ನೀಡಿ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ರಾಜ್ಯಪಾಲರ ವಿರುದ್ಧ ವಿವಾದಾತ್ಮಕ ಹೇಳಿಕೆ ವಿರುದ್ಧ ಸಿಡಿದೆದ್ದ ಬಿಜೆಪಿ: ಸಂಕಷ್ಟಕ್ಕೆ ಸಿಲುಕಿದ ಐವನ್ ಡಿಸೋಜಾ, ಪೊಲೀಸರು
ಬೆಂಗಳೂರಿಗೆ ಹೋಗಿದ್ದ ಐವನ್ ಡಿಸೋಜಾ
ಇನ್ನು ಈ ಘಟನೆ ನಡೆಯುವಾಗ ಐವನ್ ಡಿಸೋಜಾ ಅವರು ಮನೆಯಲ್ಲಿರಲಿಲ್ಲ ಎಂದು ತಿಳಿದುಬಂದಿದೆ. ಐವನ್ ಡಿಸೋಜಾ ಅವರು ಬೆಂಗಳೂರಿನಲ್ಲಿ ಪಕ್ಷದ ಮೀಟಿಂಗ್‌ಗೆ ಹೋಗಿದ್ದರು. ಪತ್ನಿ ಡಾ.ಕವಿತಾ ಐವನ್ ಡಿಸೋಜ ಅವರು ಆಗಷ್ಟೇ ಮನೆಗೆ ಬಂದಿದ್ದರು. ಮನೆಯಲ್ಲಿ ಇಬ್ಬರು ಪುತ್ರಿಯರು, ಕವಿತಾ ಅವರ ಸಹೋದರ ಮಾತ್ರ ಇದ್ದರು. ಎರಡನೇ ಬಾರಿ ಕಲ್ಲು ತೂರಾಟ ನಡೆಸುವಾಗ ಐವನ್ ಡಿಸೋಜಾ ಅವರ ಪುತ್ರಿ ಮಹಡಿ ಮೇಲಿಂದ ನೋಡಿದ್ದಾರೆ. ಎರಡು ಬಾರಿ ಕಲ್ಲು ತೂರಾಟ ನಡೆಸಲಾಗಿದ್ದು, ಎರಡು ಬಾರಿಯೂ ಒಂದೇ ತಂಡವೇ ಕಲ್ಲು ತೂರಾಟ ಮಾಡಿದೆಯಾ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸದ್ಯ ಐವನ್ ಡಿಸೋಜಾ ಅವರ ಮನೆಗೆ ಪೊಲೀಸ್ ಭದ್ರತೆ ನೀಡಲಾಗಿದೆ. ಸಿಸಿ ಕ್ಯಾಮೆರಾದಲ್ಲಿ ಆರೋಪಿಗಳ ಚಹರೆ ಪತ್ತೆಯಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ