
ಮಂಗಳೂರು, ಮೇ 02: ಹಿಂದೂ ಕಾರ್ಯಕರ್ತ (Hindu Activist) ಸುಹಾಸ್ ಶೆಟ್ಟಿ (Suhas Shetty) ಕೊಲೆ ಬಳಿಕ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಮುಂಜಾಗ್ರತಾ ಕ್ರಮವಾಗಿ ಮಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಬೆನ್ನಲ್ಲೇ ಮಂಗಳೂರಿನ ಸುತ್ತಮುತ್ತ ಕಣ್ಣೂರು, ಕೊಂಚಾಡಿ ಮತ್ತು ಉಳ್ಳಾಲದಲ್ಲಿ ಚಾಕು ಇರಿತ ಪ್ರಕರಣಗಳು ವರದಿಯಾಗಿವೆ.
ಉಳ್ಳಾಲದ ಫೈಝಲ್, ಕೊಂಚಾಡಿಯ ಮೊಹ್ಮದ್ ಲುಕ್ಮಾನ್, ಕಣ್ಣೂರಿನ ಇರ್ಶಾದ್ಗೆ ಎಂಬುವರಿಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಹಲ್ಲೆಗೊಳಗಾದ ಮೂವರಿಗೂ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಮಂಗಳೂರು ವ್ಯಾಪ್ತಿಯಲ್ಲಿ ತಡರಾತ್ರಿ ಮತ್ತು ಮುಂಜಾನೆ ಈ ಪ್ರಕರಣಗಳು ನಡೆದಿವೆ.
ಉಡುಪಿ ತಾಲೂಕಿನ ಆತ್ರಾಡಿಯಲ್ಲಿ ಗುರುವಾರ ರಾತ್ರಿ ಓರ್ವ ಮುಸ್ಲಿಂ ಯುವಕನನ್ನು ಕೊಲೆ ಮಾಡಲು ಯತ್ನಿಸಲಾಗಿದೆ. ಚಾಲಕ ಅಬೂಬಕ್ಕರ್ ಆಟೋ ಅಡ್ಡಗಟ್ಟಿದ ದುಷ್ಕರ್ಮಿಗಳು ತಲ್ವಾರ್ ಮತ್ತು ಬಾಟಲ್ನಿಂದ ಹಲ್ಲೆ ಮಾಡಲು ಮುಂದಾಗಿದ್ದಾರೆ. ಅಬೂಬಕ್ಕರ್ ತಪ್ಪಿಸಿಕೊಂಡು ಹೋಗಿ ಹಿರಿಯಡಕ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ತಕ್ಷಣ ಕಾರ್ಯ ಪ್ರವೃತ್ತರಾದ ಹಿರಿಯಡಕ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಆರೋಪಿಗಳಾದ ಸುಶಾಂತ್, ಸಂದೇಶ್ ಪೂಜಾರಿ ಬಂಧಿತರು.
ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ, ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರವಾಗಿ ಕೊಲೆ ಯತ್ನ ಎಂದು ಆರೋಪಿಗಳು ಹೇಳಿದ್ದಾರೆ. ಈ ಸಂಬಂಧ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕುಮಾರ್ ಹೇಳಿದ್ದಾರೆ.
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ಎನ್‌ಐಎಗೆ ವಹಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮನವಿ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ವಿಚಾರವಾಗಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಶನಿವಾರ ಮಂಗಳೂರಿನಲ್ಲಿ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ, ಪಶ್ಚಿಮ ವಲಯದ ಐಜಿಪಿ, ದಕ್ಷಿಣ ಕನ್ನಡ ಡಿಸಿ, ಎಸ್ಪಿ, ಮಂಗಳೂರು ನಗರ ಪೊಲೀಸ್ ಆಯುಕ್ತ, ಡಿಸಿಪಿ, ಎಸಿಪಿ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಾಗುವಂತೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ನೆಟ್ಟಾರು ಕೊಲೆ ಪ್ರತಿಕಾರಕ್ಕೆ ಫಾಜಿಲ್ ಹತ್ಯೆ: ಇದೇ ಸೇಡಿಗೆ ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಮಂಗಳೂರು ನಗರದ ಬಜ್ಪೆ ಕಿನ್ನಿಪದವು ಬಳಿ ಗುರುವಾರ ರಾತ್ರಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. 2022ರಲ್ಲಿ ಹಿಂದೂ ಕಾರ್ಯಕರ್ತ ಪ್ರವೀಣ ನೆಟ್ಟಾರು ಕೊಲೆಯಾಗಿತ್ತು. ಈ ಕೊಲೆಯ ಪ್ರತಿಕಾರವಾಗಿ 2022ರ ಜೂನ್ 28 ರಂದು ಫಾಜಲ್ ಎಂಬ ವ್ಯಕ್ತಿಯ ಹತ್ಯೆಯಾಗಿತ್ತು. ಇದೇ ಸೇಡಿಗೆ ಸುಹಾಸ್ ಶೆಟ್ಟಿಯ ಕೊಲೆಯಾಗಿದೆ ಎನ್ನಲಾಗುತ್ತಿದೆ.