ಬೆಂಗಳೂರು, ಜುಲೈ.16: ತುಳುನಾಡಿನಾದ್ಯಂತ ಹೆಚ್ಚು ಪೂಜಿಸುವ ದೈವವೆಂದರೆ ಕೊರಗಜ್ಜ (Koragajja). ಕಳೆದು ಹೋದ ಯಾವುದನ್ನಾದರೂ ಮರಳಿ ಪಡೆಯಲು, ಮಾಡಬೇಕಾದ ಯಾವುದೇ ಕೆಲಸ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳಲು ಅಥವಾ ಯಾವುದೇ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಮೊದಲು ಮತ್ತು ಅಗ್ರಗಣ್ಯವಾಗಿ ಜನರು ಈ ದೈವವನ್ನು ನೆನಪಿಸಿಕೊಳ್ಳುತ್ತಾರೆ. ಕೊರಗ ತನಿಯು ಐತಿಹಾಸಿಕ ವ್ಯಕ್ತಿಯೇ ಹೊರತು ಪೌರಾಣಿಕ ಸೃಷ್ಟಿಯಲ್ಲ. ಭಾರತೀಯ ದ್ರಾವಿಡರು ತಮ್ಮ ಪೂರ್ವಜರನ್ನು ಆರಾಧಿಸುತ್ತಾರೆ, ಅವರು ತಮ್ಮ ಸಮುದಾಯಕ್ಕೆ ಹೆಚ್ಚಿನ ಒಳಿತಿಗಾಗಿ ಅಸಾಮಾನ್ಯ ಕೆಲಸಗಳನ್ನು ಮಾಡಿದ್ದಾರೆ. ಈ ಕಾರಣದಿಂದಾಗಿ ಅವರನ್ನು ಅವರ ನಂತರದ ವಂಶಸ್ಥರು ಗುರುತಿಸಿ ಪೂಜಿಸುತ್ತಿದ್ದರು.
ಕೊರಗ ತನಿಯನನ್ನು ಕೊರಗಜ್ಜ ಎಂದು ಜನಪ್ರಿಯವಾಗಿ ಕರೆಯಲ್ಪಡುತ್ತಾರೆ. ಇಲ್ಲಿ “ಕೊರಗ” ಎಂಬುದು ಸಮುದಾಯದ ಹೆಸರು. ಮತ್ತು “ಅಜ್ಜ” ಎಂಬುದು ತುಳು ಭಾಷೆಯಲ್ಲಿ ಸಾಮಾನ್ಯವಾಗಿ ಹಳೆಯ ಪುರುಷ ನಾಗರಿಕರಿಗೆ ಬಳಸುವ ಪದವಾಗಿದೆ. ಇವರು ತನ್ನ ಮಧ್ಯವಯಸ್ಸಿನಲ್ಲಿ ದೈವತ್ವವನ್ನು ಪಡೆದುಕೊಂಡಿದ್ದರೂ. ಕೊರಗಜ್ಜನ ಮೇಲಿನ ಪ್ರೀತಿ ಮತ್ತು ವಾತ್ಸಲ್ಯದಿಂದಾಗಿ ಜನರು ಅವರನ್ನು “ಅಜ್ಜ” ಎಂದು ಕರೆಯಲು ಪ್ರಾರಂಭಿಸಿದರು. ಕೊರಗಜ್ಜ ಬೆಳೆದಿದ್ದು ಕಳ್ಳು ವ್ಯಾಪಾರ ಮಾಡುವ ಮೈರಕ್ಕನ ಕುಟುಂಬದಲ್ಲಿ. ಕಳ್ಳನ್ನು ಸೇವಿಸುವುದು ಆ ಕುಟುಂಬದ ಕಾರ್ಯಕ್ರಮದ ಭಾಗವಾಗಿತ್ತು. ಮತ್ತು ಮೈರಕ್ಕ ಕಳ್ಳನ್ನು ತಯಾರಿಸುವಾಗ ಕೊರಗ ತನಿಯನಿಗೆ ಒಂದಿಷ್ಟು ಕುಡಿಯಲು ನೀಡುತ್ತಿದ್ದಳು. ಈ ಕಾರಣದಿಂದ ತನಿಯನಿಗೆ ಮದ್ಯವನ್ನು ಅರ್ಪಿಸಲಾಗುತ್ತದೆ. ಹಿಂದಿನ ಕಾಲದಲ್ಲಿ ಕೊರಗ ತನಿಯನಿಗೆ ಸಾಂಪ್ರದಾಯಿಕ ಮದ್ಯವನ್ನು ನೈವೇದ್ಯವಾಗಿ ಅರ್ಪಿಸಲಾಗುತ್ತಿತ್ತು. ಆದರೆ, ಆಧುನಿಕ ಕಾಲದಲ್ಲಿ ಸಾಂಪ್ರದಾಯಿಕ ಮದ್ಯದ ಅನಾನುಕೂಲತೆಯಿಂದ ಪ್ಯಾಕ್ ಮಾಡಿದ ಮದ್ಯವನ್ನು, ಚಕ್ಕುಲಿಯನ್ನು, ಎಲೆ – ಅಡಿಕೆಯನ್ನು ಮತ್ತು ಬೀಡಿ ಪ್ಯಾಕೆಟ್‌ನ್ನು ಅರ್ಪಿಸಲಾಗುತ್ತದೆ.
ಇದನ್ನೂ ಓದಿ: ಕೊರಗಜ್ಜ ಸನ್ನಿಧಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ರಕ್ಷಿತ್ ಶೆಟ್ಟಿ
ಸ್ವಾಮಿ ಕೊರಗಜ್ಜಗೆ ತುಳುವರು ಮಾತ್ರ ನಡೆದುಕೊಳ್ಳುತ್ತಿದ್ದರು. ನಂತರ ತುಳುನಾಡಿಗೆ ಉದ್ಯೋಗನಿಮಿತ್ತ ಬಂದವರು, ಇಲ್ಲಿ ಬಂದು ನೆಲೆಸಿದವರು ನಡೆದುಕೊಳ್ಳುತ್ತಿದ್ದರು. ಆದ್ರೆ ಈಗ ಹೊರಗಿನಿಂದ ಕೂಡ ಬಂದು ಇಲ್ಲಿಗೆ ನಡೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಸಿನಿಮಾ ತಾರೆಯರು, ಕ್ರಿಕೆಟ್ ಪ್ಲೇಯರ್ಸ್ ಗಳು, ರಾಜ್ಯ-ಹೊರರಾಜ್ಯದ ಜನರು, ಉದ್ಯಮಿಗಳು ಆಗಮಿಸಿ ಕೊರಗಜ್ಜನ ಆಶೀರ್ವಾದ ಪಡೆಯುತ್ತಿದ್ದಾರೆ. ಇತ್ತೀಚೆಗೆ ನಟ ದರ್ಶನ ಕೂಡ ಆಗಮಿಸಿದ್ರು. ಇದೇ ವರ್ಷದ ಮಾರ್ಚ್ 10 ರಂದು ಬಂದು ಪ್ರಾರ್ಥನೆ ಸಲ್ಲಿಸಿ ಹೋಗಿದ್ರು. ಇನ್ನು ನಟಿಯರಾದ ಮಾಲಾಶ್ರೀ, ರಕ್ಷಿತಾ, ರಚಿತಾರಾಮ್, ಭವ್ಯ, ಶ್ರುತಿ ಸೇರಿದಂತೆ ಹಲವರು ಸ್ವಾಮಿ ಕೊರಗಜ್ಜನ ಸನ್ನಿಧಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಇನ್ನು ಬಾಲಿವುಡ್ನ ಶಿಲ್ಪಾಶೆಟ್ಟಿ ಕೂಡ ಭೇಟಿ ನೀಡಿದ್ದಾರೆ. ಕುತ್ತಾರು ಕೊರಗಜ್ಜ ಸನ್ನಿಧಿಗೆ ಸದ್ಯ ಕತ್ರೀನಾ ಕೈಫ್ ಬಂದು ಹರಕೆ ಸಲ್ಲಿಸಿರೋದು ಭಾರೀ ಸಂಚಲನ ಉಂಟು ಮಾಡಿದೆ.
ಕುತ್ತಾರು ಕೊರಗಜ್ಜನ ಕಟ್ಟೆಯಲ್ಲಿ ಭಾನುವಾರ ನಡೆದ ಹರಕೆಯ ಕೋಲದಲ್ಲಿ ಬಾಲಿವುಡ್ ಖ್ಯಾತ ನಟಿ ಕತ್ರಿನಾ ಕೈಫ್ ಸೇರಿದಂತೆ ಖ್ಯಾತ ಕ್ರಿಕೆಟಿಗ ಕೆ.ಎಲ್ ರಾಹುಲ್, ನಟ ಸುನಿಲ್ ಶೆಟ್ಟಿ ಕುಟುಂಬ ಭಾಗಿಯಾಗಿತ್ತು. ನಟಿ ಕತ್ರಿನಾ ಕೈಫ್, ನಟ ಸುನಿಲ್ ಶೆಟ್ಟಿ ಪುತ್ರ ಅಹಾನ್ ಶೆಟ್ಟಿ, ಪುತ್ರಿ ಆಧ್ಯಾ ಶೆಟ್ಟಿ, ಕ್ರಿಕೆಟಿಗ ಕೆ.ಎಲ್ .ರಾಹುಲ್, ಮ್ಯಾಟ್ರಿಕ್ಸ್ ಎಂಟರ್ ಟೈನ್ಮೆಂಟ್ ನ ರೇಷ್ಮಾ ಶೆಟ್ಟಿ, ಕತ್ರಿನಾ ಪತಿ ವಿಕಿ ಕೌಶಲ್ ಹಾಗೂ ವಿ.ಎಮ್ ಕಾಮತ್ ಸೇರಿದಂತೆ ಒಟ್ಟು ಅವರ ಪರಿಚಿತರೇ ಆಗಿರುವ 9 ಮಂದಿ ಕೋಲ ಕಟ್ಟೆಯಲ್ಲಿ ಹರಕೆಯ ರೂಪದಲ್ಲಿ ಎರಡು ತಿಂಗಳ ಹಿಂದೆ ಬರೆಸಲಾಗಿತ್ತು. ವಿಕಿ ಕೌಶಲ್ ಹೊರತುಪಡಿಸಿ ಉಳಿದೆಲ್ಲರೂ ಕೋಲದಲ್ಲಿ ಭಾಗಿಯಾಗಿದ್ದರು. ಕತ್ರಿನಾ, ರೇಷ್ಮಾ ಶೆಟ್ಟಿ, ಆಧ್ಯಾ ಶೆಟ್ಟಿ ಪರಂಪರೆಯಂತೆ ಕೋಲದಿಂದ ಹೊರಗುಳಿದು ಕಟ್ಟೆಯ ಕಚೇರಿಯಲ್ಲಿ ಉಳಿದರೆ, ರಾಹುಲ್ ಮತ್ತು ಅಹಾನ್ ಕೋಲದಲ್ಲಿ ಭಾಗಿಯಾಗಿದ್ದರು.
ಸಂಜೆ 6 ಗಂಟೆ ವೇಳೆಗೆ ಕುತ್ತಾರಿಗೆ ಆಗಮಿಸಿದ್ದ ಬಾಲಿವುಡ್ ಕುಟುಂಬ ಮಾಧ್ಯಮಗಳಿಗೆ ಮಾಹಿತಿ ನೀಡದಂತೆ ಕಟ್ಟೆಯ ಕಚೇರಿ ಅಧಿಕೃತರಲ್ಲಿ ಮನವಿ ಮಾಡಿದ್ದರು. ಅಲ್ಲದೇ ಸ್ಥಳದಲ್ಲಿ ಫೋಟೋ ತೆಗೆಯಲು ಬಿಡದೆ, ತೆಗೆದವರನ್ನು ಅಳಿಸುವಂತೆ ವಿನಂತಿಸಿದ್ದಾರೆ. ಕಟ್ಟೆಯೊಳಗೆ ಬೆಳಕಿಲ್ಲದೆ ನಡೆಯುತ್ತಿದ್ದ ಕೋಲವನ್ನು ಹೊರಗೆ ನಿಂತ ಕತ್ರಿನಾ ಸೇರಿದಂತೆ ಉಳಿದವರು ಗಾಢವಾಗಿ ಕಣ್ಣುಮುಚ್ಚಿ ಪ್ರಾರ್ಥನೆಯಲ್ಲಿ ಭಾಗಿಯಾದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ