ಗ್ಯಾರಂಟಿ ಯೋಜನೆಗೆ ಖಜಾನೆ ತುಂಬಿಸಲು ರೈತರ ಕುಮ್ಕಿ ಭೂಮಿ ಮೇಲೆ ಕಣ್ಣಿಟ್ಟ ರಾಜ್ಯ ಸರ್ಕಾರ
ಖಜಾನೆ ತುಂಬಿಸುವುದಕ್ಕಾಗಿ ರಾಜ್ಯ ಸರ್ಕಾರ ಇದೀಗ ರೈತರ ಕುಮ್ಕಿ ಭೂಮಿ ಮೇಲೆ ಕಣ್ಣಿಟ್ಟಿರುವುದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಜನಾಕ್ರೋಶಕ್ಕೆ ಕಾರಣವಾಗಿದೆ. ಪ್ರತಿಪಕ್ಷ ಬಿಜೆಪಿ ಕೂಡ ಈ ವಿಚಾರವಾಗಿ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ಕುಮ್ಕಿ ಭೂಮಿ ಇದ್ದು, ಸರ್ಕಾರದ ಹೊಸ ಸುತ್ತೋಲೆಯಿಂದ ರೈತರಿಗೆ ಸಂಕಷ್ಟ ಎದುರಾಗಿದೆ.
ಮಂಗಳೂರು, ಜುಲೈ 16: ಗ್ಯಾರಂಟಿ ಯೋಜನೆಗಳಿಗಾಗಿ ಖಜಾನೆ ತುಂಬಿಸಿಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರ ರೈತರ ಕುಮ್ಕಿ ಭೂಮಿ ಮೇಲೆ ಕಣ್ಣಿಟ್ಟಿದೆ ಎಂಬ ಆರೋಪ ವ್ಯಕ್ತವಾಗಿದೆ. ಈಗಾಗಲೇ ಪೆಟ್ರೋಲ್, ಡೀಸೆಲ್, ಹಾಲು, ಮದ್ಯ, ಆಸ್ತಿ ನೋಂದಣಿ ದರ ಏರಿಸಿರುವ ರಾಜ್ಯ ಸರ್ಕಾರ ಇದೀಗ ರೈತರ ಕುಮ್ಕಿ ಭೂಮಿ ಹಕ್ಕಿನ ಮೇಲೆ ಕಣ್ಣಿಟ್ಟಿದ್ದು, ಕುಮ್ಕಿ ಭೂಮಿಯನ್ನೂ ಲೀಸ್ಗೆ ನೀಡಲು ಮುಂದಾಗಿದೆ. ಈ ಬಗ್ಗೆ ಸುತ್ತೋಲೆಯನ್ನೂ ಹೊರಡಿಸಿದೆ.
ಸರ್ಕಾರ ಈ ನಡೆಗೆ ರೈತರು ಹಾಗೂ ಪ್ರತಿಪಕ್ಷ ಬಿಜೆಪಿಯಿಂದ ಆಕ್ರೋಶ ವ್ಯಕ್ತವಾಗಿದೆ.
ಕುಮ್ಕಿ ಭೂಮಿ ಗುತ್ತಿಗೆ ನೀಡಲು ನಿರ್ಧಾರ
ಕದೀಂ ವರ್ಗ ಜಮೀನಿನಲ್ಲಿ ಕೃಷಿ ಮಾಡುವ ರೈತರಿಗೆ ನೀಡಿರುವ 100 ಮೀ.ವರೆಗಿನ ಕುಮ್ಕಿ ಭೂಮಿಯಲ್ಲಿ ಕೃಷಿಗೆ ಪೂರಕವಾದ ಮೇವು, ಸೊಪ್ಪುಗಳ ಬಳಕೆಗೆ ಅನುಮತಿಸಲಾಗಿದೆ. ಇದೀಗ ಇದೇ ಭೂಮಿಯನ್ನು ಗುತ್ತಿಗೆ ನೀಡಲು ಸರ್ಕಾರ ನಿರ್ಧರಿಸಿದೆ.
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸುಮಾರು 4.30 ಲಕ್ಷ ಎಕರೆ ಕುಮ್ಕಿ ಸವಲತ್ತಿನ ಜಮೀನು ಇದೆ. ಉಡುಪಿ ಜಿಲ್ಲೆಯಲ್ಲಿ ಸುಮಾರು 2.25 ಲಕ್ಷ ಎಕರೆ ಕುಮ್ಕಿ ಸವಲತ್ತಿನ ಜಮೀನು ಇದೆ. ಒಂದು ಎಕರೆಗೆ 1 ಸಾವಿರ ರೂಪಾಯಿಯಿಂದ 25 ಎಕರೆಗೆ 3,500 ರೂ. ವರೆಗೆ ರೈತರಿಗೆ ಗುತ್ತಿಗೆ ನೀಡಲು ಸರ್ಕಾರ ಉದ್ದೇಶಿಸಿದೆ.
30 ವರ್ಷಗಳ ಗುತ್ತಿಗೆ ಮೊತ್ತ ಒಂದೇ ಬಾರಿ ಪಾವತಿಸಬೇಕು
ಕುಮ್ಕಿ ಭೂಮಿಯನ್ನು 30 ವರ್ಷಕ್ಕೆ ಲೀಸ್ ನೀಡುವ ಬಗ್ಗೆ ಸುತ್ತೋಲೆ ಹೊರಡಿಸಲಾಗಿದೆ. 30 ವರ್ಷಗಳ ಗುತ್ತಿಗೆ ಮೊತ್ತವನ್ನು ಒಂದೇ ಬಾರಿ ಪಾವತಿಸಲು ಸೂಚನೆ ನೀಡಲಾಗಿದೆ. ಈಗಾಗಲೇ ಕುಮ್ಕಿ ಭೂಮಿಯಲ್ಲಿ ಪ್ಲಾಂಟೇಶನ್ ಬೆಳೆಗಳನ್ನು ಬೆಳೆದಿರುವ ರೈತರು ಇದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕಾನೂನು ಬಾಹಿರ ಸುತ್ತೋಲೆ: ಬಿಜೆಪಿ ಶಾಸಕ ಹರೀಶ್ ಪೂಂಜಾ ಕಿಡಿ
ಕುಮ್ಕಿ ಭೂಮಿಯನ್ನು ಲೀಸ್ಗೆ ನೀಡುವ ಬಗ್ಗೆ ಸರ್ಕಾರ ಸುತ್ತೋಲೆ ಹೊರಡಿಸಿರುವ ವಿಚಾರವಾಗಿ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಕಿಡಿ ಕಾರಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ರೈತರಿಗೆ ಅನ್ಯಾಯ ಮಾಡುವ ಸುತ್ತೋಲೆಯನ್ನು ರಾಜ್ಯ ಸರ್ಕಾರ ಹೊರಡಿಸಿದೆ. ರೈತರ ಹಿತ ಕಾಯುವ ಕೆಲಸವನ್ನು ಬಿಜೆಪಿ ಮಾಡಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿಕರ ಪಟ್ಟಾ ಜಾಗದ ಸುತ್ತ ನಾಲ್ಕೂವರೆ ಸಂಕೋಲೆ ಕುಮ್ಕಿ ಹಕ್ಕನ್ನು ನೀಡಲಾಗಿದೆ. ಆದರೆ ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ಗೆ ತಿದ್ದುಪಡಿ ಮಾಡಲಾಗಿದೆ. ಕಲಂ 94(ಇ) ಸೇರ್ಪಡೆಗೊಳಿಸಲಾಗಿದೆ. ಈ ಸೆಕ್ಷನ್ ಪ್ರಕಾರ ಪ್ಲಾಂಟೇಶನ್ ಭೂಮಿಯನ್ನು ಗುತ್ತಿಗೆ ನೀಡಲಾಗುತ್ತದೆ. 2005 ಕ್ಕಿಂತ ಮೊದಲು ಪ್ಲಾಂಟೇಶನ್ ಬೆಳೆಗಳು ಆ ಜಮೀನಲ್ಲಿ ಇರಬೇಕೆಂಬ ಷರತ್ತು ವಿಧಿಸಲಾಗಿದೆ. ಒಂದು ಕುಟುಂಬಕ್ಕೆ ಗರಿಷ್ಟ 25 ಎಕರೆ ಗುತ್ತಿಗೆ ನೀಡಲಾಗುತ್ತದೆ ಎಂದು ಹೇಳಲಾಗಿದೆ. ಇದರಿಂದ ಕುಮ್ಕಿ ಭೂಮಿ ಹೊಂದಿರುವ ರೈತರು ಜಮೀನು ಕಳೆದುಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಸರ್ಕಾರಿ ನೌಕರರ ಸಂಬಳ ಶೇ 27ರಷ್ಟು ಹೆಚ್ಚಳ, ಏನಿದು 7ನೇ ವೇತನ ಆಯೋಗ? ಇಲ್ಲಿದೆ ಮಾಹಿತಿ
ಕುಮ್ಕಿ ಭೂಮಿಯ ಗುತ್ತಿಗೆಗೆ ಇಂತಿಷ್ಟು ಹಣವೆಂದು ನಿಗದಿ ಮಾಡಲಾಗಿದೆ. ಇದರ ಮೂಲ ಉದ್ದೇಶ ಕಂದಾಯ ಹೆಚ್ಚು ಮಾಡಿಕೊಳ್ಳುವುದಾಗಿದೆ. 25 ಎಕರೆ ಹೊಂದಿರುವ ಕೃಷಿಕ ಅದನ್ನು ಲೀಸ್ ಗೆ ಪಡೆಯಬೇಕಾದರೆ ಸುಮಾರು 24 ಲಕ್ಷ ರೂಪಾಯಿಯನ್ನು ಕಟ್ಟಿ ಅರ್ಜಿ ಹಾಕಬೇಕಾಗಿದೆ. ಕುಮ್ಕಿ ಜಮೀನಲ್ಲಿ ಕೃಷಿಕರು ಕೃಷಿ ಮಾಡಿಕೊಂಡು ಜೀವನ ಮಾಡಿಕೊಂಡು ಬಂದಿದ್ದಾರೆ. 1974 ರ ಕಾಯ್ದೆ ಪ್ರಕಾರ ಲೀಸ್ಗೆ ಕೊಡಬಾರದು ಎಂದು ಇದೆ. ಇದು ಕಾನೂನು ಬಾಹಿರ ಸುತ್ತೋಲೆ. ರೈತರ ಜೀವನದ ಮೇಲೆ ಸರ್ಕಾರ ಚೆಲ್ಲಾಟ ಆಡುತ್ತಿದೆ. ಲೀಸ್ ಎನ್ನುವ ಸುತ್ತೋಲೆಯನ್ನು ಸರ್ಕಾರ ವಾಪಾಸು ಪಡೆಯಬೇಕು. ಖಜಾನೆಗೆ ಬೊಕ್ಕಸ ತುಂಬಿಸುವ ಷಡ್ಯಂತ್ರದ ಸುತ್ತೋಲೆ ವಾಪಾಸು ಪಡೆಯಬೇಕು. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಶೇ 98 ಕೃಷಿಕರ ಬಳಿ ಕುಮ್ಕಿ ಜಮೀನು ಇದೆ ಎಂದು ಅವರು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ