ದಾವಣಗೆರೆ: ಕೆಪಿಸಿಸಿಗೆ ತುಂಬಬೇಕಿದ್ದ ಹಣ ಬಡ ಕುಟುಂಬಕ್ಕೆ ನೀಡಿ ಟಿಕೆಟ್​ಗೆ ಅರ್ಜಿ ಸಲ್ಲಿಸಲು ಮುಂದಾದ ಮಾಜಿ ಸಿಎಂ ಸಹೋದರನ ಪುತ್ರ

ಕಾಂಗ್ರೆಸ್ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಬೇಕಾದರೆ ಅರ್ಜಿ ಜೊತೆಗೆ 2 ಲಕ್ಷ ರೂ. ಡಿಡಿ ನೀಡಬೇಕು. ಆದರೆ ಇಲ್ಲೊಬ್ಬ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ, ಪಕ್ಷಕ್ಕೆ ಹಣವನ್ನು ನೀಡಿದೆ ಸಮಾಜ ಕಾರ್ಯಕ್ಕೆ ವಿನಿಯೋಗಿಸಿ ಟಿಕೆಟ್​ಗಾಗಿ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.

ದಾವಣಗೆರೆ: ಕೆಪಿಸಿಸಿಗೆ ತುಂಬಬೇಕಿದ್ದ ಹಣ ಬಡ ಕುಟುಂಬಕ್ಕೆ ನೀಡಿ ಟಿಕೆಟ್​ಗೆ ಅರ್ಜಿ ಸಲ್ಲಿಸಲು ಮುಂದಾದ ಮಾಜಿ ಸಿಎಂ ಸಹೋದರನ ಪುತ್ರ
ಕೆಪಿಸಿಸಿಗೆ ತುಂಬಬೇಕಿದ್ದ ಹಣ ಬಡ ಕುಟುಂಬಕ್ಕೆ ನೀಡಿ ಟಿಕೆಟ್​ಗೆ ಅರ್ಜಿ ಸಲ್ಲಿಸಲು ಮುಂದಾದ ಮಾಜಿ ಸಿಎಂ ಜೆ.ಎಚ್.ಪಟೇಲ್ ಸಹೋದರನ ಪುತ್ರ ತೇಜಸ್ವಿ ಪಟೇಲ್
Follow us
TV9 Web
| Updated By: Rakesh Nayak Manchi

Updated on: Nov 15, 2022 | 12:42 PM

ದಾವಣಗೆರೆ: ರಾಜ್ಯ ವಿಧಾನಸಭೆ ಚುನಾವಣೆಗೆ ಎಲ್ಲಾ ಪಕ್ಷಗಳು ತಯಾರಿ ನಡೆಸುತ್ತಿರುವ ನಡುವೆ ಜಿಲ್ಲೆಯಲ್ಲೊಬ್ಬ ಯುವ ಮುಖಂಡ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಚುನಾವಣೆಗಗೆ ಸ್ಪರ್ಧಿಸಬೇಕು ಅಂದರೆ ಆಯಾ ಪಕ್ಷದ ಟಿಕೆಟ್ ಬೇಕು. ಹೀಗೆ ಟಿಕೆಟ್ ಬೇಕಾದರೆ ಅದಕ್ಕೆ ಇಂತಿಷ್ಟು ದುಡ್ಡು ತುಂಬಿ ಅರ್ಜಿಸಲ್ಲಿಸಬೇಕು ಎಂದು ಪಕ್ಷಗಳು ನಿರ್ಧಾರ ಮಾಡಿವೆ. ಹೀಗೆ ಟಿಕೆಟ್​ಗಾಗಿ ಪಕ್ಷಕ್ಕೆ ಕಟ್ಟಬೇಕಾದ ದುಡ್ಡು ಅಂಗವಿಕಲ ಹಾಗೂ ಪರಿಶಿಷ್ಟ ಯುವತಿಯ ಮದುವೆಗೆ ನೀಡಿ ಟಿಕೆಟ್​ಗೆ ಅರ್ಜಿ ಸಲ್ಲಿಸುವ ವಿಭಿನ್ನ ಯೋಜನೆಯನ್ನು ಕಾಂಗ್ರೆಸ್ (Congress)​ನಿಂದ ಕಣಕ್ಕಿಳಿಯಲು ಉತ್ಸುಕರಾಗಿರುವ ಅಭ್ಯರ್ಥಿಯೊಬ್ಬರು ಹಾಕಿಕೊಂಡಿದ್ದಾರೆ.

ವಿಧಾನಸಭೆ ಚುನಾವಣೆಗೆ ಪ್ರತಿಯೊಂದು ಪಕ್ಷಗಳು ತಾಲೀಮು ನಡೆಸುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಸ್ಪರ್ಧಾ ಆಕಾಂಕ್ಷಿಗಳು ಸಹ ಕ್ಷೇತ್ರದಲ್ಲಿ ಭರ್ಜರಿ ಓಡಾಟ ಆರಂಭಿಸಿದ್ದಾರೆ. ಕೆಪಿಸಿಸಿ ಆಗಾಗಲೇ ಟಿಕೆಟಾಗಿ ಅಭ್ಯರ್ಥಿಗಳಿಗೆ ಅರ್ಜಿ ಕೇಳಿದೆ. ಜೊತೆಗೆ ಎರಡು ಲಕ್ಷ ರೂಪಾಯಿ ಡಿಡಿ ಕೇಳಿದೆ. ಹೀಗಿದ್ದಾಗ ದಾವಣಗೆರೆ ಜಿಲ್ಲೆಯ ಚನ್ನಗಿರರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ತೇಜಸ್ವಿ ಪಟೇಲ್ ಅವರು ನಾಳೆ ಅಥವಾ ನಾಡಿದ್ದು ಬೆಂಗಳೂರಿನ ಕೆಪಿಸಿಸಿ ಕಚೇರಿಗೆ ತೆರಳಿ ಟಿಕೆಟ್​ಗಾಗಿ ಅರ್ಜಿಸಲ್ಲಿಸಲಿದ್ದಾರೆ.

ಅರ್ಜಿ ಸಲ್ಲಿಸಲು ಹೋಗುವ ಮುನ್ನ ದಾವಣಗೆರೆ ಅಂಬೇಡ್ಕರ ಸರ್ಕಲ್ ಬಳಿ ಓರ್ವ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಅಂಗವಿಕಲ ಯುವತಿಗೆ ಬರೋಬರಿ ಎರಡು ಲಕ್ಷ ರೂಪಾಯಿ ಡಿಡಿ ನೀಡಿದರು. ಬಡವರಾಗಿರುವ ಕೆಂಚಮ್ಮನಿಗೆ ಮಾತು ಬರಲ್ಲ. ಇಷ್ಟರಲ್ಲಿ ಮದುವೆಯೂ ಇದೆ. ಇದರ ಖರ್ಚಿಗೆ ಹಣವಿಲ್ಲ. ಹೀಗಾಗಿ ಕೆಪಿಸಿಸಿ ಟಿಕೆಟ್​ಗೆ ಅರ್ಜಿಸಲ್ಲಿಸಲು ನೀಡಬೇಕಾದ ಎರಡು ಲಕ್ಷ ರೂಪಾಯಯನ್ನ ಸಂಕಷ್ಟದಲ್ಲಿದ್ದ ಈ ಯುವತಿಗೆ ನೀಡಿ ಈ ಹಣವನ್ನ ಕೆಪಿಸಿಸಿಯಿಂದಲೇ ಕೊಡಲಾಗಿದೆ ಎಂದು ಪರಿಗಣಿಸಿ ಟಿಕೆಟ್​ಗಾಗಿ ತಮ್ಮ ಅರ್ಜಿ ಸ್ವೀಕಾರ ಮಾಡಬೇಕು ಎಂಬುದು ತೇಜಸ್ವಿ ಪಟೇಲ್ ವಿಭಿನ್ನ ಪ್ರಯತ್ನವಾಗಿದೆ.

ಯಾರಿವರು ತೇಜಸ್ವಿ ಪಟೇಲ್?

ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಎಚ್.ಪಟೇಲ್ ಅವರ ತಮ್ಮನ ಮಗನಾಗಿರುವ ತೇಜಸ್ವಿ ಪಟೇಲ್, ದೊಡ್ಡಪ್ಪ ಇಡಿ ಜೀವನ ಕಾಂಗ್ರೆಸ್ ವಿರುದ್ಧ ರಾಜಕೀಯ ಮಾಡಿದರೆ, ಅವರ ತಮ್ಮನ ಪುತ್ರ ತೇಜಸ್ವಿ ಕಾಂಗ್ರೆಸ್​ನಿಂದ ರಾಜಕೀಯ ಜೀವನ ಆರಂಭಿಸಲು ನಿರ್ಧರಿಸಿದ್ದಾರೆ. ಸದ್ಯ ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷರಾಗಿ ಮತ್ತು ಅವರ ಪತ್ನಿ ಈ ಹಿಂದೆ ಜಿಲ್ಲಾ ಪಂಚಾಯಿತ್ ಸದಸ್ಯರಾಗಿ ಅಧಿಕಾರ ಅನುಭಿಸಿದ್ದಾರೆ. ಈಗ ಜೆ.ಎಚ್.ಪಟೇಲರು ಪ್ರತಿನಿಧಿಸುತ್ತಿದ್ದ ದಾವಣಗೆರೆ ಜಿಲ್ಲೆಯ ಚನ್ನಗಿರಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿ ಅವರ ತಮ್ಮನ ಮಗನಾಗಿದ್ದಾರೆ.

ಈ ಹಿಂದೆ ಸಹ ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್​ನಿಂದ ಇವರ ಹೆಸರು ಕೇಳಿ ಬಂದಿತ್ತು. ಈಗ ವಿಧಾನ ಸಭೆಗೆ ಪಟೇಲ್ ಕುಟುಂಬದ ಕುಡಿ ಅದೃಷ್ಠ ಪರೀಕ್ಷೆಗೆ ಮುಂದಾಗಿದೆ. ಹಣ ಹೆಂಡದ ರಾಜಕೀಯವೇ ಬೇಡ ಎಂದು ಪಟೇಲ್ ಪುತ್ರ ಮಹಿಮಾ ಪಟೇಲ್ ಸೂಳೆಕೆರೆಯಲ್ಲಿ ಸತ್ಯಾಗ್ರಹ ಕುಳಿತು ವಿಭಿನ್ನ ರೀತಿಯಲ್ಲಿ ಚುನಾವಣೆ ಎದುರಿಸಿದ್ದರು. ಆದರೂ ಜಯ ಸಿಗಲಿಲ್ಲ. ಹೀಗೆ ಹಣ ಕೊಟ್ಟಿದ್ದಕ್ಕೆ ಅಂಗವಿಕಲ ಯುವತಿ ಕುಟುಂಬದ ಸದಸ್ಯರು ಸಂತಸ ಪಟ್ಟರು.

ಹೀಗೆ ಎರಡು ಲಕ್ಷ ರೂಪಾಯಿ ಅಂದರೆ ಅದು ಕೆಪಿಸಿಸಿಗೆ ದೊಡ್ಡ ಮೊತ್ತವೇನು ಅಲ್ಲ. ಪ್ರತಿಯೊಬ್ಬ ಟಿಕೆಟ್ ಆಕಾಂಕ್ಷಿಗಳು ಹಣ ತುಂಬಿ ಟಿಕೆಟ್​ಗೆ ಅರ್ಜಿ ಸಲ್ಲಿಸುತ್ತಾರೆ. ಕೆಪಿಸಿಸಿಯಲ್ಲಿ ಡೆಪೊಸಿಟ್ ಮಾಡುವ ಬದಲು ಓರ್ವ ಮಾತುಬಾರದ ಇಷ್ಟರಲ್ಲಿಯೇ ವೈವಾಹಿಕ ಜೀವನಕ್ಕೆ ಕಾಲಿಡಲಿರುವ ಪರಿಶಿಷ್ಟ ಸಮುದಾಯದ ಯುವತಿ ಜೀವನ ಸುಧಾರಣೆಗೆ ನೀಡುವುದು ಸೂಕ್ತ ಎಂದು ಪಟೇಲ್ ವಾದವಾಗಿದೆ. ಇದನ್ನ ಕೆಪಿಸಿಸಿ ಹೇಗೆ ಸ್ವೀಕರಿಸಲಿದೆ ಎಂಬುದನ್ನು ನೋಡಬೇಕಿದೆ.

ವರದಿ: ಬಸವರಾಜ್ ದೊಡ್ಮನಿ, ಟಿವಿ9 ದಾವಣಗೆರೆ

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ