75 ವರ್ಷಗಳ ಬಳಿಕ ಭರ್ತಿಯಾದ ಆಲೂರು ಹಿರೇಬಾವಿ: ಗ್ರಾಮದಲ್ಲಿ ಸಂಭ್ರಮ, ಬಾಗಿನ ಅರ್ಪಣೆ
75 ವರ್ಷಗಳ ಬಳಿಕ ಭರ್ತಿಯಾದ ಆಲೂರು ಹಿರೇಬಾವಿ. ಗ್ರಾಮದ ಪ್ರತಿಯೊಂದ ಮನೆಯಿಂದ ಒಬ್ಬರಂತೆ ಬಂದು ಬಾವಿಗೆ ಬಾಗಿನ ಅರ್ಪಿಸಿ ಗ್ರಾಮಸ್ಥರ ಸಂತಸ.
ದಾವಣಗೆರೆ: ಜಿಲ್ಲಾ ಕೇಂದ್ರದಿಂದ 16 ಕಿಲೋಮೀಟರ್ ದೂರದ ಆಲೂರು ಗ್ರಾಮ ಒಂದು ರೀತಿಯಲ್ಲಿ ಐತಿಹಾಸಿಕ ಗ್ರಾಮ. ಸುಮಾರು ನಾಲ್ಕು ಸಾವಿರ ಜನಸಂಖ್ಯೆ. ಶೇಖಡಾ 67 ರಷ್ಟು ಸಾಕ್ಷರತೆ ಇದೆ. ವಾಣಿಜ್ಯ ಬೆಳೆಗೆ ಪ್ರಸಿದ್ಧಿ ಪಡೆದ ಗ್ರಾಮ ಇದು. ಇಲ್ಲಿ ಚೌಡಮ್ಮನ ಕೋಟೆ, ಆಂಜನೇಯನ ಪುಣ್ಯಕ್ಷೇತ್ರ ಅಂದ್ರೆ ಬಲು ಪ್ರಸಿದ್ಧ. ಈ ಪುಣ್ಯ ಕ್ಷೇತ್ರಗಳಿಗೆ ಬೇರೆ ಬೇರೆ ಕಡೆಯಿಂದ ಭಕ್ತರು ದರ್ಶನ ಪಡೆಯುತ್ತಾರೆ. ಹೀಗೆ ಆಂಜನೇಯ ಸ್ವಾಮೀಗೆ ಬರುವ ಭಕ್ತರು ಇಲ್ಲಿನ ಐತಿಹಾಸಿಕ ಪುರಾತನ ಬಾವಿಯ ಪುಣ್ಯ ಜಲದ ಸ್ಪರ್ಶ ಮಾಡಿ ಪಾವನರಾಗುತ್ತಾರೆ. ಈ ಬಾವಿಗೆ ಹಿರೇಬಾವಿ ಅಂತಾ ಹೆಸರು.
ಈ ಹಿಂದೆ ಈ ಹಿರೇಬಾವಿಯೂ ಕುಡಿಯುವ ನೀರಿಗೆ ಆಸರೆ ಆಗಿತ್ತು. ಮತ್ತು ಕುಡಿಯಲು ಎಳೆನೀರು ಕುಡಿದಷ್ಟು ಸಿಹಿ ಕೊಡುತ್ತದೆ. ಕಾಲ ಕಳೆದಂತೆ ಆಧುನಿಕತೆ ಬೆಳೆದು ನೀರಾವರಿ ಸೌಲಭ್ಯಗಳು ಆಗಿ ನಂತರ ಈ ಬಾವಿ ಬಗ್ಗೆ ಅಷ್ಟಾಗಿ ಯಾರು ಗಮನ ಹರಿಸಿರಲಿಲ್ಲ. ಆದ್ರೆ ದೇವಸ್ಥಾನಕ್ಕೆ ಬರುವ ಭಕ್ತರು ಮಾತ್ರ ಬಾವಿಯ ಪವಿತ್ರ ಜಲದ ಸ್ಪರ್ಶ ಮಾಡಿಯೇ ಹೋಗುತ್ತಿದ್ದರು. ಇಂತಹ ಐತಿಹಾಸಿಕ ಬಾವಿ ಈಗ ಭರ್ತಿಯಾಗಿದೆ. ನಿರಂತರ ಮಳೆಗೆ ನೂರಾರು ಕೆರೆಗಳು ಭರ್ತಿಯಾಗಿವೆ. ಅದೇ ರೀತಿ ಹಿರೇಬಾವಿಯೂ ಭರ್ತಿಯಾಗಿದೆ. ಹೀಗೆ ಪುಣ್ಯಕ್ಷೇತ್ರ ಪಕ್ಕದ ಐತಿಹಾಸಿಕ ಬಾವಿ ಭರ್ತಿ ಆಗಿದ್ದು ನೋಡಿ ಇಡೀ ಗ್ರಾಮದ ಜನರು ಸಂತಸ ಗೊಂಡಿದ್ದಾರೆ. ಇದನ್ನೂ ಓದಿ: ಯಾರಿಗೆ ತಾನೇ ಬಾಯಲ್ಲಿ ನೀರೂರುವುದಿಲ್ಲ ಇದೆಲ್ಲ ನೋಡಿದರೆ; ಫುಡ್ ಆರ್ಟ್
ಆಂಜನೇಯ ದೇವಸ್ಥಾನದ ಧರ್ಮದರ್ಶಿ ಸಮಿತಿ ಪ್ರಮುಖ ಗುರುಲಿಂಗಪ್ಪ ಅವರು ಹೇಳುವಂತೆ ಈ ಬಾವಿ 75 ವರ್ಷದ ಬಳಿಕ. ಅಂದರೆ ಈ ಹಿಂದೆ ಭರ್ತಿ ಆದ ಬಗ್ಗೆ ಗ್ರಾಮದ ಹಿರಿಯರು ಹೇಳುತ್ತಿದ್ದರು. ಆ ಲೆಕ್ಕದ ಪ್ರಕಾರ ಬಾವಿಗೆ ನೀರು ಇಷ್ಟೊಂದು ಪ್ರಮಾಣದಲ್ಲಿ ಬಂದಿದ್ದು ಮಾತ್ರ ವಿಶೇಷ. ಇದೇ ಕಾರಣಕ್ಕೆ ಗ್ರಾಮದ ಪ್ರತಿಯೊಂದ ಮನೆಯಿಂದ ಒಬ್ಬರಂತೆ ಬಂದು ಬಾವಿಗೆ ಬಾಗಿನ ಅರ್ಪಿಸಲಾಗಿದೆ. ನಮ್ಮ ಜೀವನಲ್ಲಿ ಐತಿಹಾಸಿಕ ಬಾವಿ ಭರ್ತಿ ಆಗಿದ್ದು ನೋಡುವುದು ಒಂದು ರೀತಿಯ ಸೌಭಾಗ್ಯ ತಂದಿದೆ ಎಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.