TV ಯಲ್ಲಿ ಬರಬೇಕೆಂದು ರಾಜೀನಾಮೆ ಕೊಟ್ಟಿದ್ದಾರೆ:
ಯುವ ಮೋರ್ಚಾ ಕಾರ್ಯಕರ್ತರು ಯಾರೂ ಪಕ್ಷಕ್ಕೆ ರಾಜೀನಾಮೆ ನೀಡಿಲ್ಲ. ರಾಜೀನಾಮೆ ಕೊಡುವ ಮುನ್ನ ನಮ್ಮ ಜಿಲ್ಲಾಧ್ಯಕ್ಷರು, ಶಾಸಕರು ನಮ್ಮ ಬಳಿ ಮಾತನಾಡಬೇಕು. ಅವರು ಪಕ್ಷಕ್ಕೆ ಇದುವರೆಗೂ ರಾಜೀನಾಮೆ ಸಲ್ಲಿಸಿಲ್ಲ. ಅವರು ಕೊಟ್ಟಿದ್ದರೂ ಅದು ಒಪ್ಪಿಗೆಯಾಗೋಲ್ಲ. ಟಿವಿಯಲ್ಲಿ ಬರಬೇಕೆಂದು ರಾಜೀನಾಮೆ ಕೊಟ್ಟಿದ್ದೇವೆಂದು ಹೇಳಿರಬೇಕು ಎಂದು ಜಿ ಎಂ ಸಿದ್ದೇಶ್ವರ್ ಬಣ್ಣಿಸಿದ್ದಾರೆ.
ಯುವ ಮೋರ್ಚಾ ಕಾರ್ಯಕರ್ತರೆಲ್ಲರನ್ನೂ ಮಾತನಾಡಿಸಿ ಸಮಾಧಾನಪಡಿಸುತ್ತೇವೆ. ಈ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ 32 ಹತ್ಯೆಗಳಾಗಿದ್ದವು. ನಮ್ಮ ಸರ್ಕಾರ ಇದ್ದಾಗ ಎರಡು ಹತ್ಯೆ ಆಗಿವೆ, ಕಾನೂನುಬದ್ಧವಾಗಿ, ಸಂವಿಧಾನಾತ್ಮಕವಾಗಿ ನಮ್ಮ ಮುಖ್ಯಮಂತ್ರಿ ಕ್ರಮ ತೆಗೆದುಕೊಳ್ಳುತ್ತಾರೆ. ಯಾರೋ ಹೇಳಿದ್ದಾರೆಂದು ಎನ್ಕೌಂಟರ್ ಮಾಡಿದ್ರೆ ನೀವೇ ಗುಂಡಿಕ್ಕಿ ಕೊಂದಿದ್ದೀರಿ ಎಂದು ಸುದ್ದಿ ಮಾಡಿ ಸರ್ಕಾರ ಬೀಳಿಸುತ್ತೀರಾ? ಕಾನೂನುಬದ್ದವಾಗಿ ನಮ್ಮ ಮುಖ್ಯಮಂತ್ರಿ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಸಂಸದ ಜಿ ಎಂ ಸಿದ್ದೇಶ್ವರ್ ಸಮಾಧಾನಪಡಿಸುವ ನಿಟ್ಟಿನಲ್ಲಿ ಮಾತನಾಡಿದರು.
ಸಿದ್ದೇಶ್ವರ್ ಹೇಳಿಕೆಗೆ ಭಾರೀ ವಿರೋಧದ ಅಲೆಗಳು
ದಾವಣಗೆರೆ: ಬಿಜೆಪಿ 11 ಕೋಟಿ ಕಾರ್ಯಕರ್ತರ ಪಕ್ಷ, ಯುವ ಕಾರ್ಯಕರ್ತರು ರಾಜೀನಾಮೆ ಕೊಟ್ಟ ತಕ್ಷಣ ಪಕ್ಷವೇನೂ ಮುಳುಗಿ ಹೋಗಲ್ಲ ಎಂದು ಸಂಸದ ಜಿ.ಎಂ ಸಿದ್ದೇಶ್ವರ್ ನೀಡಿರುವ ಹೇಳಿಕೆಗೆ ಭಾರೀ ವಿರೋಧದ ಅಲೆಗಳು ತೇಲಿಬಂದಿವೆ.
ದಾವಣಗೆರೆಯಲ್ಲಿಯೇ ಬಿಜೆಪಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. ಈ ಕ್ಷಣವೇ ಸಂಸದರು ಕಾರ್ಯಕರ್ತರ ಬಳಿ ಕ್ಷಮೆ ಕೇಳಲೇ ಬೇಕು. ಬಿಜೆಪಿ ಕಾರ್ಯಕರ್ತರು ಇರುವುದರಿಂದಲೇ ಅವರು ಸಂಸದರಾಗಿದ್ದಾರೆ. ಕಾರ್ಯಕರ್ತರನ್ನ ಕೇವಲವಾಗಿ ಕಾಣ ಬಾರದು. ಪ್ರವೀಣ್ ಹತ್ಯೆ ಯುವ ಮೋರ್ಚ ಕಾರ್ಯಕರ್ತರಲ್ಲಿ ಬೇಸರ ತಂದಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಈ ರೀತಿ ಹೇಳಿಕೆ ನೀಡಬಾರದು ಎಂದು ದಾವಣಗೆರೆಯಲ್ಲಿ ಬಿಜೆಪಿ ಕಾರ್ಯಕರ್ತ ಸಿದ್ದರಾಮಪ್ಪ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.