ಸಚಿವ ಭೈರತಿ ಬಸವರಾಜ್ ಕುರಿತು ಪಾಲಿಕೆ ಆಯಕ್ತರ ಹೇಳಿಕೆ ವೈರಲ್: ದಾವಣಗೆರೆ ಪಾಲಿಕೆ ಆವರಣದಲ್ಲಿ ಕಾಂಗ್ರೆಸ್ ಪ್ರತಿಭಟನೆ
ದಾವಣಗೆರೆ ಜಿಲ್ಲಾ ಉಸ್ತುವಾರಿ ಹಾಗೂ ನಗರಾಭಿವೃದ್ಧಿ ಇಲಾಖೆ ಸಚಿವರಾಗಿರುವ ಸಚಿವ ಭೈರತಿ ಬಸವರಾಜ್ ಅವರು ದಾವಣಗೆರೆಗೆ ಬಂದ್ರೆ ಸಾಕು 10ರಿಂದ 15 ಲಕ್ಷ ರೂಪಾಯಿ ವಸೂಲಿ ಮಾಡುತ್ತಾರೆ ಎಂದು ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಗುತ್ತಿಗೆದಾರರೊಬ್ಬರ ಜೊತೆ ಮಾತಾಡಿದ್ದ ಆಡಿಯೋ ವೈರಲ್ ಆಗಿದೆ.
ದಾವಣಗೆರೆ: ರಾಜ್ಯದಲ್ಲಿ ಶೇಕಡಾ 40% ಕಮಿಷನ್ ಸರ್ಕಾರ(40% Commission Government) ಇದೆ ಎಂಬ ಮಾತು ಕೇವಲ ಹುಡುಗಾಟಿಕೆ ಮಾತಲ್ಲ ಎಂಬ ಮಾತು ಸತ್ಯವಾಗುತ್ತಿದೆ. ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್(Byrathi Basavaraj) ಜಿಲ್ಲೆಗೆ ಬರುವುದೇ ವಸೂಲಿಗಾಗಿ ಎಂಬ ಈ ವಿಚಾರವನ್ನ ಸ್ವತಹ ಪಾಲಿಕೆಯ ಆಯುಕ್ತರೇ ಹೇಳಿದ ಆಡಿಯೋ ಈಗ ವೈರಲ್ ಆಗಿದೆ. ಈ ಹಿನ್ನೆಲೆ ಇಂದು ಕಾಂಗ್ರೆಸ್ ಪ್ರತಿಭಟನೆ ನಡೆಸಲು ಮುಂದಾಗಿದೆ. ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಸದಸ್ಯರು ದಾವಣಗೆರೆ ಮಹಾನಗರ ಪಾಲಿಕೆಯ ಆವರಣದಲ್ಲಿ ಪ್ರತಿಭಟನೆ ಮಾಡಲಿದ್ದಾರೆ.
ಭೈರತಿ ಬಸವರಾಜ್ ಮೊದಲು ಹೇಗಿದ್ದರೋ ಗೊತ್ತಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ವಿಧಾನ ಸಭೆಯಲ್ಲಿ ಓಡಿ ಬರುತ್ತಿರುವ ದೃಶ್ಯಗಳು ಪ್ರತಿಯೊಬ್ಬರಿಗೆ ಗೊತ್ತು. ಹೀಗೆ ಓಡವರಲ್ಲಿ ಮೊದಲಿಗರೆ ಭೈರತಿ ಬಸವರಾಜ್. ದಾವಣಗೆರೆ ಮಹಾನಗರ ಪಾಲಿಕೆ ಕಚೇರಿಯ ವ್ಯವಸ್ಥಾಪಕ ವೆಂಕಟೇಶ್, ಇಡೀ ಪಾಲಿಕೆಯ ಆಡಳಿತದ ಸೂತ್ರದಾರ. ಇವರು ಮೊನ್ನೆ ನಡೆದ ಲೋಕಾಯುಕ್ತ ದಾಳಿಯಲ್ಲಿ ಬಲೆಗೆ ಬಿದ್ದಿದ್ದರು. ಜಕಾತಿ ಟೆಂಡರ್ ನೀಡಲು ಕೃಷ್ಣಪ್ಪ ಎಂಬುವರಿಂದ ಎಳು ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪ ಇವರ ಮೇಲಿದೆ. ಅಲ್ಲದೆ ವೆಂಕಟೇಶ್ ಈಗಾಗಲೇ ಎರಡು ಲಕ್ಷ ರೂಪಾಯಿ ಅಡ್ವಾನ್ಸ್ ಪಡೆದಿದ್ದಾರೆ. ಮೂರು ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಎಸ್ಪಿ ಎಂ.ಎಸ್ ಕೌಲಾಪುರೆ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಇದು ಇಡೀ ಮಹಾನಗರ ಪಾಲಿಕೆಯ ಕರ್ಮ ಕಾಂಡವನ್ನ ಬೆಳಕಿಗೆ ತಂದಿದೆ.
ಇದನ್ನೂ ಓದಿ: ಶೃಂಗೇರಿ: ಮಸೀದಿ ಎದುರು ಬಾವುಟ ತೆರವು ವಿಚಾರಕ್ಕೆ ಘರ್ಷಣೆ, ಶ್ರೀರಾಮಸೇನೆ ಮುಖಂಡ, ಪಪಂ ಸದಸ್ಯ ಆಸ್ಪತ್ರೆಗೆ ದಾಖಲು
ಇನ್ನೊಂದು ಭಯಾನಕ ಅಂದ್ರೆ ಇಲ್ಲಿ ಪ್ರತಿಯೊಂದಕ್ಕೂ ದುಡ್ಡು ಕೊಡಬೇಕು. ಯಾರದ್ದೆ ಕೆಲ್ಸಾ ಆಗಬೇಕಿದ್ರೆ ಹಣ ಕೊಡಲೇ ಬೇಕು. ಇಂತಹ ಕರ್ಮಕಾಂಡವನ್ನ ಲೋಕಾಯುಕ್ತರು ಬೆಳಕಿಗೆ ತಂದಿದ್ದಾರೆ. ಇದರಿಂದ ಇನ್ನೊಂದು ವಿಚಾರ ಗೊತ್ತಾಗಿದ್ದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಜಿಲ್ಲೆಗೆ ಭೇಟಿ ನೀಡುವುದೇ ವಸೂಲಿಗೆ. ಹೀಗೆ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಮಾತಾಡಿದ ಆಡಿಯೋ ವೈರಲ್ ಆಗಿದೆ. ಇದು ಬರೋಬರಿ 15 ಲಕ್ಷ ರೂಪಾಯಿ ವಸೂಲಿ. ಇದನ್ನ ಖಂಡಿಸಿ ಕಾಂಗ್ರೆಸ್ ಹೋರಾಟಕ್ಕೆ ಮುಂದಾಗಿದೆ. ಹೀಗೆ ಲೋಕಾಯುಕ್ತರ ಬಲೆಗೆ ಬಿದ್ದ ವೆಂಕಟೇಶ್ ಅವರು ಪಡೆಯುತ್ತಿರುವ ಲಂಚದಲ್ಲಿ ಪಾಲಿಕೆಯ ಆಯುಕ್ತ ವಿಶ್ವನಾಥ ಮುದಜ್ಜಿ ಅವರಿಗೆ ಪಾಲು ಇದೆಯಂತೆ. ಲೋಕಾಯುಕ್ತರ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.
ಇನ್ನೊಂದು ವಿಶೇಷ ಅಂದ್ರೆ ವೈರಲ್ ಆಗಿರುವ ಆಡಿಯೋದಲ್ಲಿ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ನಗರಾಭಿವೃದ್ಧಿ ಇಲಾಖೆ ಸಚಿವ ಭೈರತಿ ಬಸವರಾಜ್ ಬಗ್ಗೆ ಪ್ರಸ್ತಾಪಿಸಲಾಗಿದೆ. ಈ ಭ್ರಷ್ಟಾಚಾರದ ಮೂಲ ಬೇರು ಸಚಿವ ಭೈರತಿ ಬಸವರಾಜ್ ಆಗಿದ್ದು ಬಿಜೆಪಿ ಈ ಮಾತನ್ನ ವಿರೋಧಿಸುತ್ತಿದೆ. ಈಶ್ವರಪ್ಪ ಹಾಗೂ ರಮೇಶ್ ಜಾರಕಿಹೊಳಿ ಇವರನ್ನ ರಾಜಕೀಯವಾಗಿ ಮುಗಿಸಲು ಮಾಡಿದ ತಂತ್ರವೇ ಭೈರತಿ ವಿರುದ್ಧ ಮಾಡಲಾಗುತ್ತಿದೆ. ಹಿಂದುಳಿದ ನಾಯಕರನ್ನ ಕಾಂಗ್ರೆಸ್ ಮುಗಿಸುತ್ತಿದೆ ಎಂದು ಬಿಜೆಪಿ ನಾಯಕರು ವಿಚಿತ್ರ ಆರೋಪ ಮಾಡಿದ್ದಾರೆ.
ಹೀಗೆ ದಾವಣಗೆರೆ ಮಹಾನಗರ ಪಾಲಿಕೆ ಅಂದ್ರೆ ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರು ಎನ್ನುವಂತಾಗಿದೆ. ಮೇಲಾಗಿ ವಿಶ್ವನಾಥ ಮುದಜ್ಜಿ ಅವರ ವಿರುದ್ಧ ಹತ್ತಾರು ಆರೋಪಗಳು ಕೇಳಿ ಬರುತ್ತಿವೆ. ಈ ಬಗ್ಗೆ ಇನ್ನಷ್ಟು ತನಿಖೆ ಆಗಬೇಕಾಗಿದೆ. ಜೊತೆಗೆ ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕುವ ಕೆಲ್ಸಾ ನಡೆಯಬೇಕಾಗಿದೆ. ಇಲ್ಲವಾದ್ರೆ ಜನರೆ ರೊಚ್ಚಿಗೆದ್ದು ಹೋರಾಟ ನಡೆಸುವ ಕಾಲ ದೂರವಿಲ್ಲ.
ವರದಿ: ಬಸವರಾಜ್ ದೊಡ್ಮನಿ, ಟಿವಿ9 ದಾವಣಗೆರೆ
Published On - 8:41 am, Wed, 9 November 22