ಅ.16ರಿಂದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆ ಮತ್ತೆ ಆರಂಭ: ನ್ಯಾಮತಿಯಲ್ಲಿ ಮುಖ್ಯಮಂತ್ರಿ ಚಾಲನೆ

ದಾವಣಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕು ಸುರಹೊನ್ನೆ ಮತ್ತು ಕುಂದೂರು ಗ್ರಾಮದಲ್ಲಿ ಗ್ರಾಮ ವಾಸ್ತವ್ಯಕ್ಕೆ ಮುಖ್ಯಮಂತ್ರಿ ಚಾಲನೆ ನೀಡಲಿದ್ದಾರೆ.

ಅ.16ರಿಂದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆ ಮತ್ತೆ ಆರಂಭ: ನ್ಯಾಮತಿಯಲ್ಲಿ ಮುಖ್ಯಮಂತ್ರಿ ಚಾಲನೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)

ಬೆಂಗಳೂರು: ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆ ಅಕ್ಟೋಬರ್ 16ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ದಾವಣಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕು ಸುರಹೊನ್ನೆ ಮತ್ತು ಕುಂದೂರು ಗ್ರಾಮದಲ್ಲಿ ಗ್ರಾಮ ವಾಸ್ತವ್ಯಕ್ಕೆ ಮುಖ್ಯಮಂತ್ರಿ ಚಾಲನೆ ನೀಡಲಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ನ್ಯಾಮತಿ ತಾಲ್ಲೂಕಿನಲ್ಲಿ ₹ 10 ಕೋಟಿ ವೆಚ್ಚದ ಮಿನಿ ವಿಧಾನಸೌಧ ನಿರ್ಮಾಣಕ್ಕೂ ಮುಖ್ಯಮಂತ್ರಿ ಇದೇ ವೇಳೆ ಚಾಲನೆ ನೀಡಲಿದ್ದಾರೆ. ಕಂದಾಯ ಸಚಿವ ಆರ್.ಅಶೋಕ್ ಅ.16ರಂದು ಹೊನ್ನಾಳಿಯಲ್ಲಿ ಗ್ರಾಮ ವಾಸ್ತವ್ಯ ಆರಂಭಿಸಲಿದ್ದಾರೆ ಎಂದರು.

ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಅಭಿಯಾನವನ್ನು ಮತ್ತೆ ಆರಂಭಿಸಲು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು. ಕೊಡಗು ಜಿಲ್ಲೆಯಲ್ಲಿ ಅ.30ರಂದು ಅಭಿಯಾನ ನಡೆಯಲಿದೆ. ತುಲಾ ಸಂಕ್ರಮಣ ಹಿನ್ನೆಲೆ ಕೊಡಗು ಜಿಲ್ಲೆಯಲ್ಲಿ ವಿಳಂಬವಾಗಲಿದೆ. ಪಾಸಿಟಿವಿಟಿ ದರ ಶೇ 15ಕ್ಕಿಂತ ಹೆಚ್ಚಿರುವ ತಾಲೂಕುಗಳಲ್ಲಿ ಈ ಅಭಿಯಾನ ನಡೆಯುವುದಿಲ್ಲ. ಈ ಸಂಬಂಧ ಕಂದಾಯ ಇಲಾಖೆಯಿಂದ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ಕಳುಹಿಸಲಾಗಿದೆ. ಕೊವಿಡ್​ನಿಂದ ಸ್ಥಗಿತಗೊಂಡಿದ್ದ ಗ್ರಾಮವಾಸ್ತವ್ಯ ಅಭಿಯಾನ ಮತ್ತೆ ಆರಂಭವಾಗಲಿದೆ ಎಂದು ಹೇಳಿದರು.

ಈದ್ ಮಿಲಾದ್ ಮೆರವಣಿಗೆಗೆ ಡಿಸಿ ನಿರ್ಬಂಧ
ಜಿಲ್ಲೆಯಲ್ಲಿ ಕೋವಿಡ್ ಭೀತಿ ಇನ್ನೂ ಜೀವಂತವಿದೆ. ಹೀಗಾಗಿ ದಸರಾ ಹಾಗೂ ಈದ್ ಮಿಲಾದ್ ಹಬ್ಬಗಳ ಸಾರ್ವಜನಿಕ ಮೆರವಣಿಗೆಗೆ ಅವಕಾಶವಿಲ್ಲ. ನಿಯಮಮೀರಿ ಯಾರಾದರೂ ಮೆರವಣಿಗೆ ಮಾಡಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಾಕೀತು ಮಾಡಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರವು ದಸರಾ ಹಾಗೂ ಈದ್ ಮಿಲಾದ್ ಹಬ್ಬಗಳ ಕುರಿತು ಪ್ರತ್ಯೇಕ ಮಾರ್ಗಸೂಚಿ ಹೊರಡಿಸಿದೆ. ದಸರಾ ಪ್ರಯುಕ್ತ ಮೈಸೂರಿನಲ್ಲಿ ‌ಮಾತ್ರ ಕೋವಿಡ್ ನಿಯಮ ಪಾಲನೆ ಜೊತೆಗೆ ಮೆರವಣಿಗೆ ಅವಕಾಶ ನೀಡಲಾಗಿದೆ. ಉಳಿದಂತೆ ಯಾವುದೇ ಜಿಲ್ಲೆಯಲ್ಲಿ ಮರವಣಿಗೆ ಇಲ್ಲ. ಈಗಾಗಲೇ ಓರ್ವ ವ್ಯಕ್ತಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮೆರವಣಿಗೆ ಮಾಡುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಆಡಿಯೊ ತೇಲಿ ಬಿಟ್ಟಿದ್ದಾನೆ. ಆತನ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಮಾಹಿತಿ ನೀಡಿದರು.

 

Read Full Article

Click on your DTH Provider to Add TV9 Kannada