AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಫ್ರಿಕಾದ ಜೀವನಶೈಲಿಗೆ ವೇದಿಕೆಯಾದ ದಸರಾ ಬೊಂಬೆಗಳು; ದಂಪತಿ ವಿಶೇಷ ಆಸಕ್ತಿಗೆ ಸಾಕ್ಷಿಯಾದ ದಸರಾ

21 ವರ್ಷಗಳ ಕಾಲ ಆಫ್ರಿಕಾದ ನೈಜೀರಿಯಾದಲ್ಲಿ ಕಳೆದ ದಂಪತಿ, ಅಲ್ಲಿನ ವಿಶೇಷತೆಗಳನ್ನು ತಮ್ಮ ಮನೆಯ ದಸರಾ ಬೊಂಬೆ ಪ್ರದರ್ಶನದಲ್ಲಿ ಪ್ರತಿಬಿಂಬಿಸಿದ್ದಾರೆ. ಅಲ್ಲಿನ‌ ನಿಗ್ರೋ ಕಪ್ಪು ವರ್ಣಿಯರ ಕರಕುಶಲ ಕಲೆಗಳನ್ನು ತಂದು ತಮ್ಮ ಮನೆಯಲ್ಲಿ ಅಲಂಕರಿಸಿದ್ದಾರೆ.

ಆಫ್ರಿಕಾದ ಜೀವನಶೈಲಿಗೆ ವೇದಿಕೆಯಾದ ದಸರಾ ಬೊಂಬೆಗಳು; ದಂಪತಿ ವಿಶೇಷ ಆಸಕ್ತಿಗೆ ಸಾಕ್ಷಿಯಾದ ದಸರಾ
ದಸರಾ ಬೊಂಬೆ
TV9 Web
| Updated By: preethi shettigar|

Updated on: Oct 11, 2021 | 1:22 PM

Share

ದಾವಣಗೆರೆ: ದಸರಾದಲ್ಲಿ ನಮ್ಮ ಸಂಸ್ಕೃತಿ, ಪರಂಪರೆ ಬಿಂಬಿಸುವ ಬೊಂಬೆಗಳನ್ನು ಕೂರಿಸಿ ಸಂಭ್ರಮಿಸುವುದು ಈ‌ ನೆಲದ‌ ಸಂಪ್ರದಾಯ. ಆದರೆ ಇದೇ ನೆಲದಲ್ಲಿ ವಿದೇಶಿ ಆಫ್ರಿಕಾದ ಬೊಂಬೆಗಳನ್ನು ಕೂರಿಸಿ ದಸರಾ ಆಚರಿಸುವ ಕುಟುಂಬವೊಂದು ದಾವಣಗೆರೆಯಲ್ಲಿದೆ‌. ಆಫ್ರಿಕಾ ಖಂಡದ ಹಲವು ವಿಶೇಷತೆಗಳನ್ನು ಒಳಗೊಂಡ ಗೊಂಬೆಗಳನ್ನು ತಂದು ಕಳೆದ‌ 10 ವರ್ಷಗಳಿಂದ ದಸರಾ ಹಬ್ಬ ಆಚರಿಸುತ್ತಿದ್ದಾರೆ. ಈ ವಿದೇಶಿ ಬೊಂಬೆ ಕುರಿತ ವಿಶೇಷ ವರದಿಯನ್ನು ಒಮ್ಮೆ ಓದಿ.

ಪುರಾಣ ಪುಣ್ಯ ಕಥೆಗಳ ಮೌಲ್ಯ ಸಾರುವ ದಸರಾ ಬೊಂಬೆ ಪ್ರದರ್ಶನ ದಾವಣಗೆರೆಯಲ್ಲಿ ಈ ಬಾರಿ ತುಂಬಾ ವಿಶೇಷವಾಗಿದೆ. ಅದರಲ್ಲೂ ದಾವಣಗೆರೆ  ಎಸ್ಎ​ಸ್ ಬಡಾವಣೆಯ ಬಿ ಬ್ಲಾಕ್​ನ ಮುರುಗೇಂದ್ರಪ್ಪ ಹಾಗೂ ಸುಮಂಗಲ ಅವರ ಮನೆಯಲ್ಲಿ ಈ  ದಸರಾ ಬೊಂಬೆ ಪ್ರದರ್ಶನ ವಿಶೇಷವಾಗಿ ಗಮನ ಸೆಳೆಯುತ್ತಿದೆ. ಇವರ ಮನೆಯಲ್ಲಿ ಚನ್ನಪಟ್ಟಣ ಮೈಸೂರು ಬೊಂಬೆ ಜೊತೆಗೆ ಆಫ್ರಿಕಾ ಖಂಡದ ವಿದೇಶಿ ಬೊಂಬೆಗಳು ಕಣ್ಮನ ಸೆಳೆಯುತ್ತಿವೆ.

21 ವರ್ಷಗಳ ಕಾಲ ಆಫ್ರಿಕಾದ ನೈಜೀರಿಯಾದಲ್ಲಿ ಕಳೆದ ದಂಪತಿ, ಅಲ್ಲಿನ ವಿಶೇಷತೆಗಳನ್ನು ತಮ್ಮ ಮನೆಯ ದಸರಾ ಬೊಂಬೆ ಪ್ರದರ್ಶನದಲ್ಲಿ ಪ್ರತಿಬಿಂಬಿಸಿದ್ದಾರೆ. ಅಲ್ಲಿನ‌ ನಿಗ್ರೋ ಕಪ್ಪು ವರ್ಣಿಯರ ಕರಕುಶಲ ಕಲೆಗಳನ್ನು ತಂದು ತಮ್ಮ ಮನೆಯಲ್ಲಿ ಅಲಂಕರಿಸಿದ್ದಾರೆ. ದಸರಾ ಬೊಂಬೆ ಜೊತೆಗೆ ಆಫ್ರಿಕಾದ ಮರದ‌ ಬೊಂಬೆಗಳು ಅಲ್ಲಿನ ಸಂಸ್ಕೃತಿ, ಆಚಾರ-ವಿಚಾರಗಳ ಕುರಿತು ವಿವರಿಸುವ ಪ್ರಯತ್ನ ಮಾಡಿದ್ದಾರೆ.

ಮುರುಗೇಂದ್ರಪ್ಪ ಹಾಗೂ ಸುಮಂಗಲ ದಂಪತಿಗಳು 21 ವರ್ಷಗಳನ್ನು ನೈಜೀರಿಯಾದಲ್ಲಿ ಕಳೆದಿದ್ದಾರೆ. ಟೆಕ್ಸಟೈಲ್ ಇಂಜಿನಿಯರ್ ಆಗಿದ್ದ ಮುರುಗೇಂದ್ರಪ್ಪ ನೈಜೀರಿಯಾ ಕಿನ್ಯಾ ಉಗಾಂಡಾ, ಕಿಂಬರ್ಲಿ, ಘಾನಾ, ಕ್ಯೂಬಾ ಹೀಗೆ ಹತ್ತಾರು ಆಫ್ರಿಕನ್ ದೇಶಗಳನ್ನು ಸುತ್ತಿ ತಮ್ಮ ಪ್ರವಾಸ ಹಾಗೂ ವೃತ್ತಿ ಜೀವನದಲ್ಲಿ ಸಿಕ್ಕ ಕಲಾಕೃತಿಗಳನ್ನು ಸಂಗ್ರಹಿಸಿ ತಂದು ತಮ್ಮ ಮನೆಯನ್ನೇ ಮ್ಯೂಸಿಯಂ ಮಾಡಿದ್ದಾರೆ.

dasara bombe

ಆಫ್ರಿಕಾ ಖಂಡದ ಹಲವು ವಿಶೇಷಗಳನ್ನು ತಂದು ಕಳೆದ‌ 10 ವರ್ಷಗಳಿಂದ ದಸರಾ ಹಬ್ಬ ಆಚರಣೆ

ಆಫ್ರಿಕಾದಿಂದ ತಂದಿರುವ ಒಂದೊಂದು ವಸ್ತುವು ಒಂದೊಂದು ಕಥೆ ಹೇಳುತ್ತಿವೆ. ಆಫ್ರಿಕಾದ ಜನರ ಸೃಜನಶೀಲತೆ, ಕರಕುಶಲ ಕಲೆ ಬಗ್ಗೆ ಆಫ್ರಿಕನ್ನರಿಗೆ ಇರುವ ಪ್ರೀತಿ ಈ ಬೊಂಬೆಗಳಲ್ಲಿ ಕಾಣಬಹುದು. ಆಫ್ರಿಕನ್ನರು ತಮ್ಮ ಜೀವನೋಪಾಯಕ್ಕಾಗಿ ಕಲಾಕೃತಿಗಳನ್ನು ಕಡಿಮೆ ವೆಚ್ಚಕ್ಕೆ ಅಲ್ಲಿ ಮಾರುತ್ತಾರೆ. ಪುಡಿಗಾಸಿನ ಕಲಾಕೃತಿಗಳು ಭಾರತದಂತಹ ದೇಶದಲ್ಲಿ ತುಂಬಾ ಅಮೂಲ್ಯವಾಗಿವೆ. ದಸರಾ ಸಂದರ್ಭದಲ್ಲಿ ಅವುಗಳನ್ನು ಸ್ಥಳೀಯರಿಗೆ ಪರಿಚಯಿಸಿದರೆ ಅಲ್ಲಿನ ಸಂಸ್ಕೃತಿ ಪರಿಚಯವಾಗುತ್ತದೆ ಎಂದು ಇಂಜಿನಿಯರ್ ಮುರುಗೇಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.

ಆಫ್ರಿಕಾ ಖಂಡ ನೈಸರ್ಗಿಕ ವಾಗಿ ಸಂಪದ್ಭರಿತವಾಗಿವೆ. ಅಲ್ಲಿನ ಮೂಲನಿವಾಸಿಗಳಿಗೆ ಅರಣ್ಯ, ವನ್ಯಸಂಪತ್ತು ವರವಾಗಿದೆ. ಟೂರಿಸಂ‌ನಿಂದಲೇ ಆಪಾರ ಹಣ ಗಳಿಸುವ ನೈಜೀರಿಯಾದಲ್ಲಿ ಕರಕುಶಲ ಕಲೆ ಅವರ ಜೀವನದಲ್ಲೇ ಹಾಸುಹೊಕ್ಕಾಗಿದೆ. ದಸರಾ ಬೊಂಬೆ ಪ್ರದರ್ಶನದಲ್ಲಿ ಅಫ್ರಿಕನ್ ಬೊಂಬೆಗಳು ಪ್ರದರ್ಶನವಾಗುತ್ತಿರುವುದು ತುಂಬ ಅಪರೂಪದ ಸಂಗತಿ ಎಂದು ಈ ದಂಪತಿ ಹೇಳಿದ್ದಾರೆ.

ಸದ್ಯ ಇವರ ವಿದೇಶಿ ಬೊಂಬೆ ಪ್ರದರ್ಶನ ದಾವಣಗೆರೆಯಲ್ಲಿ ಮನೆ ಮಾತಾಗಿದ್ದು, ದಸರಾ ಹಬ್ಬದ ಖುಷಿ ಇಮ್ಮಡಿಗೊಳ್ಳುವಂತೆ ಮಾಡಿದೆ.

ವರದಿ: ಬಸವರಾಜ್ ದೊಡ್ಮನಿ

ಇದನ್ನೂ ಓದಿ: Mysuru Dasara: ಗತಕಾಲದ ಕಥೆ ಹೇಳುತ್ತಿವೆ ಮೈಸೂರು ಗೊಂಬೆಗಳು, ರಂಗೇರಿದ ಗೊಂಬೆ ಪ್ರದರ್ಶನ

ದಸರಾ ಕಳೆ ಹೆಚ್ಚಿಸಿದ ಹಂಸಲೇಖ ಸಂಗೀತ: ಗಾನದ ಮೋಡಿಯಲ್ಲಿ ತೇಲಿದ ಜನರು