ಆಸ್ತಿಗಾಗಿ ಒಡಹುಟ್ಟಿದವನನ್ನೇ ಕೊಂದ ಪಾಪಿ: ಒಂದೂವರೆ ಎಕರೆ ಜಮೀನಿಗಾಗಿ ಹರಿದ ನೆತ್ತರು

ಆತ ತಂದೆ ಇದ್ದಾಗ ಒಮ್ಮೆಯೂ ಬಂದು ನೋಡಲ್ಲ. ಒಂದು ತುತ್ತು ಅನ್ನ ಹಾಕಲಿಲ್ಲ. ತಂದೆ ಸತ್ತ ವೇಳೆ ಕನಿಷ್ಠ ಅಂತ್ಯಸಂಸ್ಕಾರಕ್ಕೂ ಬರಲಿಲ್ಲ. ಹೀಗಿದ್ದರೂ ಈ ದುಷ್ಟನಿಗೆ ಅಪ್ಪನ ಆಸ್ತಿಯ ಮೇಲೆ ಕಣ್ಣು. ಸಹೋದರನ ಮಗನ ಪಾಲಿಗೆ ಆಸ್ತಿ ಹೋಯ್ತೆಂದು ಈತ ಮಾಡಿದ್ದು ಮಾಡಬಾರದ ಕೆಲಸ. ಅಷ್ಟಕ್ಕೂ ಆಗಿದ್ದೇನು? ಘಟನೆ ನಡೆದಿದ್ದೆಲ್ಲಿ ಎಂಬ ಮಾಹಿತಿ ಇಲ್ಲಿದೆ.

ಆಸ್ತಿಗಾಗಿ ಒಡಹುಟ್ಟಿದವನನ್ನೇ ಕೊಂದ ಪಾಪಿ: ಒಂದೂವರೆ ಎಕರೆ ಜಮೀನಿಗಾಗಿ ಹರಿದ ನೆತ್ತರು
ಆರೋಪಿ ಚಂದ್ರಪ್ಪ ಮತ್ತು ಮೃತ ನೀಲಪ್ಪ
Image Credit source: Tv9 Kannada
Edited By:

Updated on: Feb 03, 2026 | 6:43 PM

ದಾವಣಗೆರೆ, ಫೆಬ್ರವರಿ 03: ತಂದೆಯ ಆಸ್ತಿಗಾಗಿ ಒಡಹುಟ್ಟಿದವನನ್ನೇ ಪಾಪಿ ಸಹೋದರನೋರ್ವ ಕೊಲೆ ಮಾಡಿರುವ ಆಘಾತಕಾರಿ ಘಟನೆ ದಾವಣಗೆರೆಯ ಮಾಯಕೊಂಡದಲ್ಲಿ ನಡೆದಿದೆ. ನೀಲಪ್ಪ ಮೃತ ವ್ಯಕ್ತಿಯಾಗಿದ್ದು, ಆತನ ಸಹೋದರ ಚಂದ್ರಪ್ಪನೇ ಆರೋಪಿ. ಕೇವಲ ಒಂದೂವರೆ ಎಕರೆ ಜಮೀನಿಗಾಗಿ ನಡೆದ ಕೌಟುಂಬಿಕ ಕಲಹ ಓರ್ವನ ಸಾವಲ್ಲಿ ಅಂತ್ಯ ಕಂಡಿದೆ.

ಚಂದ್ರಪ್ಪ ಮತ್ತು ನೀಲಪ್ಪಗೆ ಅವರ ತಂದೆ ಇರುವಾಗಲೇ ಅಂದ್ರೆ 1983ರಲ್ಲಿ ಆಸ್ತಿ ಪಾಲು ಮಾಡಲಾಗಿತ್ತು. ಈ ವೇಳೆ ತಂದೆ ಜೀವನೋಪಾಯಕ್ಕಾಗಿ ಒಂದೂವರೆ ಎಕರೆ ಜಮೀನನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದರು. ಅವರು ನೀಲಪ್ಪ ಜೊತೆಗೇ ನೆಲೆಸಿದ್ದು, ಈ ವೇಳೆ ಒಮ್ಮೆಯೂ ಅಪ್ಪನ ಯೋಗಕ್ಷೇಮ ವಿಚಾರಿಸಲು ಚಂದ್ರಪ್ಪ ಬಂದಿರಲಿಲ್ಲ. ಕನಿಷ್ಠ ತಂದೆಯ ಅಂತ್ಯ ಸಂಸ್ಕಾರಕ್ಕೂ ಬಂದಿಲ್ಲ. ಇನ್ನು ತನ್ನನ್ನು ಕೊನೇಗಾಲದಲ್ಲಿ ನೀಲಪ್ಪ ನೋಡಿಕೊಂಡ ಕಾರಣ ಆತನ ಪುತ್ರ  ರಾಕೇಶ್​​ ಹೆಸರಿಗೆ ಬದುಕಿದ್ದಾಗಲೇ ಇವರ ತಂದೆ ಜಮೀನಿನ ಕಾಗದಪತ್ರ ಮಾಡಿಸಿದ್ದರು. ಇದೇ ಕಾರಣಕ್ಕೆ ಜಗಳ ತೆಗೆಯುತ್ತಿದ್ದ ಚಂದ್ರಪ್ಪ, ತನಗೂ ಆ ಜಮೀನಲ್ಲಿ ಪಾಲುಕೊಡುವಂತೆ ಪೀಡಿಸಿ ಸಹೋದರನನ್ನು ಬಡಿದು ಕೊಲೆ ಮಾಡಿದ್ದಾನೆ.

ಇದನ್ನೂ ಓದಿ: ಕೌಟುಂಬಿಕ ಕಲಹಕ್ಕೆ ಹರಿದ ನೆತ್ತರು; ಗಲಾಟೆ ವೇಳೆ ಹೋಯ್ತು ಇಬ್ಬರ ಪ್ರಾಣ!

ಇನ್ನು ಈ ಹಿಂದೆಯೂ ತೋಟದಲ್ಲಿನ ಅಡಿಕೆ ಮರಗಳನ್ನು ಚಂದ್ರಪ್ಪ ಕಡಿದುಹಾಕಿದ್ದ. ಪೊಲೀಸ್​​ ಠಾಣೆ ಮೆಟ್ಟಿಲು ಹತ್ತಿ ಜೈಲಿಗೂ ಹೋಗಿಬಂದಿದ್ದ ಎನ್ನಲಾಗಿದೆ. ನೀಲಪ್ಪ ಕೊಲೆಗೆ ಈತ ಮಾತ್ರ ಕಾರಣನಲ್ಲ. ಬದಲಾಗಿ ಆತನ ಪುತ್ರರು ಮತ್ತು ಪತ್ನಿ ಕೂಡ ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಲಾಗಿದೆ. ನೀಲಪ್ಪನ ಕೊಂದು ಆತನ ಪುತ್ರ ರಾಕೇಶ್​​ಗೂ ಆರೋಪಿ ಜೀವ ಬೆದರಿಕೆ ಹಾಕಿದ್ದ ಎನ್ನಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಒಟ್ಟಾರೆಯಾಗಿ ತನ್ನ ವೃದ್ಧಾಪ್ಯದಲ್ಲಿ ಸಲಹಿ- ಸೇವೆ ಮಾಡಿದ್ದ ಮಗನ ಕುಟುಂಬಕ್ಕೆ ಚಂದ್ರಪ್ಪ ತಂದೆ ಜಮೀನು ನೀಡಿದ್ದೇ ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣವಾಗಿಹೋಗಿದೆ. ತಂದೆ ಬದುಕಿದ್ದಾಗ ತುತ್ತು ಅನ್ನ ಹಾಕದ ಈ ಪಾಪಿ ಈಗ ಜಮೀನಿನ ಆಸೆಗೆ ಮಾಡಬಾರದ ಕೆಲಸ ಮಾಡಿದ್ದಾನೆ. ಆತನಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದು, ಪ್ರತಿಭಟನೆಯ ಎಚ್ಚರಿಕೆಯನ್ನೂ ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಬಸವರಾಜ್​ ದೊಡ್ಡಮನಿ, ದಾವಣಗೆರೆ

ಬಸವರಾಜ್ ದೊಡಮನಿ. 2007ರಿಂದ ಟಿವಿ9 ಕನ್ನಡದ ದಾವಣಗೆರೆ ಜಿಲ್ಲಾ ವರದಿಗಾರರಾಗಿದ್ದಾರೆ. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳದಲ್ಲಿ. ತಂದೆ ಗಂಗಪ್ಪ ದೊಡಮನಿ ಕೃಷಿಕ. ತಾಯಿ ಲಕ್ಕಮ್ಮ ದೊಡಮನಿ. ಇವರದ್ದು ನಾಟಿ ವೈದ್ಯರ ಕುಟುಂಬ. ಜನ ಜಾನುವಾರುಗಳು ರೋಗಕ್ಕೆ ಔಷಧಿ ನೀಡುವುದು ಇವರ ಕುಟುಂಬದ ಕಾಯಕ. 2000 ನಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ‌ ಮತ್ತು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದಾರೆ. ವೃತ್ತಿ ಜೀವನ ಆರಂಭವಾಗಿದ್ದು ಕನ್ನಡ ಪ್ರಭ ಪತ್ರಿಕೆಯಿಂದ. ಧಾರವಾಡ ಜಿಲ್ಲಾ ವರದಿಗಾರನಾಗಿ ಸೇವೆ. ಹತ್ತಕ್ಕೂ ಹೆಚ್ಚು ಲೋಕಸಭೆ ಹಾಗೂ ವಿಧಾನ ಸಭೆ ಸದನದ ವರದಿ ಮಾಡಿದ ಅನುಭವ. ಪುಸ್ತಕ ಓದುವುದು, ಜಾನಪದ ಕಲೆ ಉಳಿವಿಗೆ ದಾಖಲೆ ಸಂಗ್ರಹಿಸಿವುದು ಇವರ ಹವ್ಯಾಸ.

Read More
Loading...
Unable to load recommendations.
Follow Us