AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸಜೀವನಕ್ಕೆ ಕಾಲಿಟ್ಟ ಮೂವರು ಅನಾಥ ಹೆಣ್ಮಕ್ಕಳು: ತಂದೆ-ತಾಯಿ ಸ್ಥಾನದಲ್ಲಿ ನಿಂತು ಮದ್ವೆ ಮಾಡಿದ ಸರ್ಕಾರಿ ಅಧಿಕಾರಿಗಳು

ದಾವಣಗೆರೆ ಜಿಲ್ಲಾಡಳಿತ ಮತ್ತು ಸರ್ಕಾರಿ ಅಧಿಕಾರಿಗಳು ಅನಾಥೆಯರ ಬಾಳಿಗೆ ಬೆಳಕಾಗಿದ್ದಾರೆ. ಇದುವರೆಗೆ 46 ಅನಾಥ ಮಹಿಳೆಯರಿಗೆ ಮದುವೆ ಮಾಡಿಸುವ ಮೂಲಕ ನವಜೀವನ ನೀಡಿದ್ದಾರೆ. ಮಹಿಳಾ ನಿಲಯದಲ್ಲಿ ವಾಸವಿದ್ದ ಮೂರು ಜೋಡಿಗಳಿಗೂ ಇದೀಗ ಮದುವೆ ಮಾಡಲಾಗಿದೆ. ಸದ್ಯ ಅಧಿಕಾರಿಗಳ ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಹೊಸಜೀವನಕ್ಕೆ ಕಾಲಿಟ್ಟ ಮೂವರು ಅನಾಥ ಹೆಣ್ಮಕ್ಕಳು: ತಂದೆ-ತಾಯಿ ಸ್ಥಾನದಲ್ಲಿ ನಿಂತು ಮದ್ವೆ ಮಾಡಿದ ಸರ್ಕಾರಿ ಅಧಿಕಾರಿಗಳು
ಹೊಸಜೀವನಕ್ಕೆ ಕಾಲಿಟ್ಟ ಜೋಡಿಗಳು
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ಗಂಗಾಧರ​ ಬ. ಸಾಬೋಜಿ|

Updated on:Oct 31, 2025 | 4:12 PM

Share

ದಾವಣಗೆರೆ, ಅಕ್ಟೋಬರ್​ 31: ಸರ್ಕಾರಿ ಇಲಾಖೆಗಳು ಅಂದರೆ ಜನರ ಮನಸ್ಸಿನಲ್ಲಿ ಭ್ರಷ್ಟಾಚಾರ ನೆನಪಾಗುತ್ತದೆ. ಆದರೆ ಇಂತಹ ಇಲಾಖೆಗಳಲ್ಲಿ ಅದ್ಭುತ ಕಾರ್ಯಗಳು ನಡೆಯುತ್ತಿವೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಸರ್ಕಾರಿ ಅಧಿಕಾರಿಗಳೇ (government officials) ಮುಂದೆ ನಿಂತು ಇಂದು ಮೂರು ಜೋಡಿಗಳಿಗೆ ಮದುವೆ (marriage) ಮಾಡಿಸಿದ್ದಾರೆ. ಎಡಿಸಿ ಮತ್ತು ಎಸ್ಪಿ ತಂದೆ-ತಾಯಿ ಸ್ಥಾನದಲ್ಲಿ ನಿಂತು ಮದುವೆ ಮಾಡಿಸಿದ್ದು, ಸದ್ಯ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಇವರೆಗೆ 46 ಅನಾಥೆಯರಿಗೆ ಸರ್ಕಾರಿ ಅಧಿಕಾರಿಗಳು ಮದುವೆ ಮಾಡಿಸುವ ಮೂಲಕ ಅವರ ಬಾಳಿಗೆ ಬೆಳಕಾಗಿದ್ದಾರೆ.

ನವಜೀವನಕ್ಕೆ ಕಾಲಟ್ಟ ಮೂರು ಜೋಡಿಗಳು

ದಾವಣಗೆರೆಯ ರಾಮನಗರದಲ್ಲಿ ಇರುವ ‌ರಾಜ್ಯ ಮಹಿಳಾ ನಿಲಯ ಈ ವಿಶೇಷ ಮದುವೆಗೆ ಸಾಕ್ಷಿಯಾಗಿದೆ. ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಇಂದು ಸಂಪ್ರದಾಯ ಪ್ರಕಾರ ಮದುವೆ ಮಾಡಲಾಗಿದೆ. ಶಾಲಿನಿ ಮತ್ತು ನಾಗರಾಜ್, ರಕ್ಷಿತಾ-ಬಸವರಾಜ್ ಹಾಗೂ ರುಚಿತಾ-ಪ್ರವೀಣ್​ ನವಜೀವನಕ್ಕೆ ಕಾಲಟ್ಟ ಮೂರು ಜೋಡಿಗಳು.

ಇದನ್ನೂ ಓದಿ: ಮನೆಗೆ ನುಗ್ಗಿದ ದರೋಡೆಕೋರರ ಜೊತೆ ಹೋರಾಡಿದ ಚನ್ನಗಿರಿ ಮಹಿಳೆ

ಇದೊಂದು ವಿಶೇಷ ಮದುವೆ ಎಂದು ಹೇಳಬಹುದು. ಅದರಲ್ಲೂ ಶಾಲಿನಿ ಮತ್ತು ನಾಗರಾಜ್​​ ಜೋಡಿ ಇನ್ನು ವಿಶೇಷ. ಚಿಕ್ಕಮಂಗಳೂರು ಜಿಲ್ಲೆಯ ಚಿಟ್ನಿಕೆರೆ ನಿವಾಸಿ ಶಾಲಿನಿ ಅವರಿಗೆ ಕಿವಿ ಕೇಳಲ್ಲ, ಮಾತುಬರಲ್ಲ. ತಾಯಿ ನಿಧನರಾಗಿದ್ದು, ಅನಾಥೆಯಾಗಿದ್ದರು. ರಾಮನಗರದಲ್ಲಿರುವ ಮಹಿಳಾ ಮತ್ತು ಮಕ್ಕಳ ಇಲಾಖೆಯ ಮಹಿಳಾ ನಿಲಯದಲ್ಲಿ ವಾಸವಾಗಿದ್ದರು. ಇವರನ್ನ ಕೈ ಹಿಡಿದಿದ್ದು ಅದೇ ರೀತಿ ಮಾತು ಬಾರದ, ಕಿವಿ ಕೇಳದ ದಾವಣಗೆರೆ ತಾಲೂಕಿನ ಅಣಜಿ ಗ್ರಾಮದ ನಾಗರಾಜ್.

ಕುವೆಂಪು ಅವರ ಆಶಯ ನುಡಿ ಮಂತ್ರ ಮಾಂಗಲ್ಯ ಧಾರಣೆ

ಇನ್ನೇರಡು ಜೋಡಿಗಳು ಚಿತ್ರದುರ್ಗದ ಭರಮಸಾಗರ ಗೊಲ್ಲರಹಟ್ಟಿನಿವಾಸಿ ರಕ್ಷಿತಾ ಅವರು ಹರಿಹರ ತಾಲೂಕಿನ ಷಿಂಷಿಪುರದ ಕೃಷಿಕ ದಬಸವರಾಜ್​​ ಅವರ ಕೈಹಿಡಿದರು. ಚಿತ್ರದುರ್ಗದ ಭೀಮ ಸಮುದ್ರದ ರುಚಿತಾ ಅವರು ದಾವಣಗೆರೆ ಮೂಲದ ಪ್ರವೀಣ ಅವರ ಕೈ ಹಿಡಿದರು. ಮದುವೆ ವಯಸ್ಸಿಗೆ ಬಂದ ಹಿನ್ನಲೆ ಮದುವೆ ಮಾಡಬೇಕಾಗಿ ಬಂದಿತ್ತು. ಈ ಮೂರು ಕುಟುಂಬಗಳ ಸಂಬಂಧಿಕರೊಂದಿಗೆ ಮಾತನಾಡಿ ಒಪ್ಪಿಗೆ ಮೇರೆಗೆ ಇಂದು ಮಹಿಳಾ ನಿಲಯದಲ್ಲಿ ಕುವೆಂಪು ಅವರ ಆಶಯ ನುಡಿ ಮಂತ್ರ ಮಾಂಗಲ್ಯದ ಪರಿಕಲ್ಪನೆಯಲ್ಲಿ ಮದುವೆ ಮಾಡಿಕೊಡಲಾಯಿತು.

ಧಾರೆ ಎರೆದ ಅಧಿಕಾರಿಗಳು 

ಇನ್ನು ಅಪರ ಜಿಲ್ಲಾಧಿಕಾರಿ ಎಸ್ ಶಿವಕುಮಾರ, ಎಸ್​​ಪಿ ಉಮಾ ಪ್ರಶಾಂತ್, ಜಿಪಂ ಸಿಇಓ ಗಿತ್ತೆ ಮಾಧವ್ ವಿಠ್ಠಲ್ ರಾವ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಧಾರೆ ಎರೆದುಕೊಟ್ಟಿದ್ದು ಮತ್ತೊಂದು ವಿಶೇಷ.

ನವಜೋಡಿಗಳು

Maduve

ತಂದೆ-ತಾಯಿ ಮರಣದ ಹಿನ್ನೆಲೆ ರಾಜ್ಯ ಮಹಿಳಾ ನಿಲಯದಲ್ಲಿ ಆಶ್ರಯ ಪಡೆದಿದ್ದ ಯುವತಿ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪೋಷಕರ ಸ್ಥಾನದಲ್ಲಿ ನಿಂತು ಜಿಲ್ಲಾಡಳಿತ ಈ ಕಲ್ಯಾಣ ಕಾರ್ಯ ನೆರವೇರಿಸಿದೆ. ಪಾಯಸ, ಪೂರಿ, ಪನ್ನಿರ್ ಮಸಾಲ, ಅನ್ನಸಾಂಬರ್ ಬೊಂಬಾಟ ಭೋಜನ ಸಿದ್ದಪಡಿಸಿಲಾಗಿತ್ತು.

46 ಜನ ಅನಾಥೆಯರಿಗೆ ವಿವಾಹ

ರಾಜ್ಯ ಮಹಿಳಾ ನಿಲಯದಲ್ಲಿ ಈ ಮೂರು ವಿವಾಹ ಸೇರಿದರೆ ಇಲ್ಲಿಯವರೆಗೆ 46 ಜನ ಅನಾಥೆಯರಿಗೆ ವಿವಾಹ ಮಾಡಲಾಗಿದೆ. ಇದರ ಜೊತೆಗೆ ಆರು ಜನ ಅನಾಥ ಮಕ್ಕಳ ನಾಮಕರಣ ಕಾರ್ಯಕ್ರಮಗಳು ನಡೆದಿವೆ. ಇಂದು ನಡೆದ ಮೂರು ಜೋಡಿಯ ಮದುವೆ ಉಪನೊಂದಣಿ ಕಚೇರಿಯಲ್ಲಿ ನೋಂದಣಿ ಆಗಿದೆ. ಈ ಅನಾಥರ ಕಲ್ಯಾಣ ಕಾರ್ಯಗಳಿಂದ ಮಹಿಳಾ ಮತ್ತು ಮಕ್ಕಳ ನಿಲಯ ಮೆಚ್ಚುಗೆಗೆ ಪಾತ್ರವಾಗಿದೆ. ಮದುಮಗಳ ಹೆಸರಿನಲ್ಲಿ 50 ಸಾವಿರ ರೂ. ಬಾಂಡ್ ನೀಡಿದ್ದು, ಇಲಾಖೆ ಮೂರು ವರ್ಷಗಳ ನಂತರ ಬಡ್ಡಿ ಸಮೇತ ವಾಪಸ್ ನೀಡಲಿದೆ.

ಇದನ್ನೂ ಓದಿ: ಅಡಿಕೆ ತೋಟದಲ್ಲಿನ ತ್ಯಾಜ್ಯಕ್ಕೂ ಬಂಗಾರದ ಬೆಲೆ ಇದೆ ಎಂದು ತೋರಿಸಿಕೊಟ್ಟ ಶಿರಸಿಯ ರೈತ ದಂಪತಿ

ಒಟ್ಟಾರೆ ತಂದೆ-ತಾಯಿ ಇಲ್ಲದ ಅನಾಥೆಯರ ಬಾಳು ಬೆಳಕಾಗಿದೆ. ಉತ್ತಮ ಕೌಟುಂಬಿಕ ಹಿನ್ನೆಲೆ ಹೊಂದಿರುವ ಯುವಕರನ್ನ ಹುಡುಕಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮದುವೆ ಮಾಡಿದ್ದಾರೆ. ಸಂಸಾರದ ಸಾಗರಕ್ಕೆ ಕಾಲಿಟ್ಟಿ ಎಲ್ಲಾ ಜೋಡಿಗಳು ತಮ್ಮ ತಮ್ಮ ಮನೆಗಳಿಗೆ ಪಯಣ ಬೆಳೆಸಿದ್ದು ನಿಜಕ್ಕೂ ಸಂತಸದ ವಿಚಾರ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:07 pm, Fri, 31 October 25