AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಂಸ ತಿನ್ನಲು ತೋಟದ ಮನೆಗೆ ನುಗ್ಗಿದ ಚಿರತೆಯನ್ನು ಬಂಧಿಸಿದ ರೈತರು; ಬಳಿಕ ಅರಣ್ಯ ಇಲಾಖೆ ವಶಕ್ಕೆ

ಕತ್ತಲಾಗುತ್ತಿದ್ದಂತೆಯೇ ಬೇಟೆಯನ್ನು ಅರಸಿ ಬಂದ ಚಿರತೆ ಮಾಂಸದ ವಾಸನೆಯ ಜಾಡು ಹಿಡಿದು ತೋಟದ ಮನೆಯನ್ನು ಹೊಕ್ಕಿದೆ. ಅದು ಮಾಂಸವನ್ನು ತಿನ್ನಲಾರಂಭಿಸುತ್ತಿದ್ದಂತೆಯೇ ಗಂಟೆ ಸದ್ದಾಗಿದ್ದು, ತಕ್ಷಣ ಎಚ್ಚೆತ್ತ ರೈತರು ಹೊರಗಿನಿಂದ ಬಾಗಿಲು ಹಾಕಿ ಚಿರತೆಯನ್ನು ಬಂಧಿಸಿದ್ದಾರೆ.

ಮಾಂಸ ತಿನ್ನಲು ತೋಟದ ಮನೆಗೆ ನುಗ್ಗಿದ ಚಿರತೆಯನ್ನು ಬಂಧಿಸಿದ ರೈತರು; ಬಳಿಕ ಅರಣ್ಯ ಇಲಾಖೆ ವಶಕ್ಕೆ
ಬೋನಿನಲ್ಲಿ ಬಂಧಿಸಲ್ಪಟ್ಟ ಚಿರತೆ
TV9 Web
| Updated By: Skanda|

Updated on: Aug 03, 2021 | 8:47 AM

Share

ವಿಜಯನಗರ: ತೋಟದ ಮನೆಗೆ ನುಗ್ಗಿದ್ದ ಚಿರತೆಯನ್ನು ರೈತರೇ ಉಪಾಯದಿಂದ ಬಂಧಿಸಿ ಅರಣ್ಯ ಇಲಾಖೆ ವಶಕ್ಕೆ ನೀಡಿದ ಘಟನೆ ವಿಜಯನಗರದಲ್ಲಿ ನಡೆದಿದೆ. ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಚಿಕ್ಕಮಜ್ಜಿಗೆರೆ ಗ್ರಾಮದಲ್ಲಿ ಚಿರತೆಯೊಂದು ಕೆಲ ದಿನಗಳಿಂದ ಭಾರೀ ಉಪಟಳ ನೀಡಿದ್ದು, ನಿತ್ಯವೂ ಜಾನುವಾರುಗಳನ್ನು ಭಕ್ಷಿಸುತ್ತಿತ್ತು. ಇದರಿಂದ ಬೇಸತ್ತಿದ್ದ ರೈತರು (Farmers) ಹೇಗಾದರೂ ಮಾಡಿ ಚಿರತೆಯನ್ನು ಹಿಡಿಯಲೇ ಬೇಕೆಂದು ಯೋಜನೆ ರೂಪಿಸಿ ಅದರಲ್ಲಿ ಯಶಸ್ವಿಯಾಗಿದ್ದಾರೆ. ಒಂದೆರೆಡು ದಿನಗಳ ಹಿಂದೆ ಹಸುವನ್ನು ಕೊಂದಿದ್ದ ಚಿರತೆ (Cheetah) ಅದನ್ನು ಅರ್ಧಂಬರ್ಧ ತಿಂದು ಬಿಟ್ಟುಹೋಗಿತ್ತು. ಅದರಲ್ಲಿ ಉಳಿದ ಮಾಂಸವನ್ನು ತೋಟದ ಮನೆಗೆ ತಂದಿಟ್ಟ ರೈತರು ಚಿರತೆಯನ್ನು ಕೊನೆಗೂ ಬಂಧಿಸಿದ್ದಾರೆ.

ಚಿಕ್ಕಮಜ್ಜಿಗೆರೆ ಗ್ರಾಮದ ಪೂಜಾರ ಮನೆತನದ ಬಸಪ್ಪ, ಕೊಟ್ರೇಶ್, ಮಂಜಪ್ಪ, ಹಾಲೇಶ್, ವಿರೂಪಾಕ್ಷ ಎಂಬ ಐದು ಜನ ರೈತರು ಚಿರತೆಯನ್ನು ಸೆರೆ ಹಿಡಿದಿದ್ದು, ಚಿರತೆ ತಿಂದು ಉಳಿಸಿದ್ದ ಹಸುವಿನ ಮಾಂಸವನ್ನು ತೋಟದ ಮನೆಗೆ ತಂದಿಟ್ಟು ಅದಕ್ಕೊಂದು ಗಂಟೆ ಕಟ್ಟಿದ್ದಾರೆ. ಕತ್ತಲಾಗುತ್ತಿದ್ದಂತೆಯೇ ಬೇಟೆಯನ್ನು ಅರಸಿ ಬಂದ ಚಿರತೆ ಮಾಂಸದ ವಾಸನೆಯ ಜಾಡು ಹಿಡಿದು ತೋಟದ ಮನೆಯನ್ನು ಹೊಕ್ಕಿದೆ. ಅದು ಮಾಂಸವನ್ನು ತಿನ್ನಲಾರಂಭಿಸುತ್ತಿದ್ದಂತೆಯೇ ಗಂಟೆ ಸದ್ದಾಗಿದ್ದು, ತಕ್ಷಣ ಎಚ್ಚೆತ್ತ ರೈತರು ಹೊರಗಿನಿಂದ ಬಾಗಿಲು ಹಾಕಿ ಚಿರತೆಯನ್ನು ಬಂಧಿಸಿದ್ದಾರೆ.

CHEETAH

ಬಂಧಿಸಿದ ಚಿರತೆಯೊಂದಿಗೆ ಅರಣ್ಯಾಧಿಕಾರಿಗಳು, ಗ್ರಾಮಸ್ಥರು

ಚಿರತೆಯನ್ನು ಬಂಧಿಸಿದ ಬಳಿಕ ತಡಮಾಡದೇ ಅರಣ್ಯ ಇಲಾಖೆಗೆ ಮಾಹಿತಿ ರವಾನಿಸಿದ್ದು, ಚಿರತೆಯನ್ನು ತೋಟದ ಮನೆಯಲ್ಲಿ ಬಂಧಿಸಿರುವುದಾಗಿ ತಿಳಿಸಿದ್ದಾರೆ. ರೈತರ ಮಾಹಿತಿ ಮೇರೆಗೆ ಕಾರ್ಯ ಪ್ರವೃತ್ತರಾದ ಅರಣ್ಯ ಇಲಾಖೆ ಸಿಬ್ಬಂದಿ ತೋಟದ ಮನೆಯಲ್ಲಿ ಕೂಡಿ ಹಾಕಿದ್ದ ಚಿರತೆಗೆ ಅರವಳಿಕೆ ನೀಡಿ ಬೋನಿನಲ್ಲಿ ಹಾಕಿ ತೆಗೆದುಕೊಂಡು ಹೋಗಿದ್ದಾರೆ.

ಅನೇಕ ದಿನಗಳಿಂದ ಉಪಟಳ ನೀಡುತ್ತಿದ್ದ ಚಿರತೆಯನ್ನು ರೈತರು ಕೊನೆಗೂ ಬಂಧಿಸಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಉಪಾಯ ಮಾಡಿ ಚಿರತೆಯನ್ನು ಸೆರೆಹಿಡಿದ ಐವರು ರೈತರ ಸಾಹಸಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅರಣ್ಯ ಇಲಾಖೆಗೆ ಸೂಕ್ತ ಸಮಯಕ್ಕೆ ಮಾಹಿತಿ ನೀಡಿ ಚಿರತೆಯನ್ನು ಬಂಧಿಸಲು ಸಹಕರಿಸಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ದಕ್ಷಿಣ ಕನ್ನಡ: ಚಿರತೆಯ ಹಿಡಿತಕ್ಕೆ ಸಿಕ್ಕಿಬಿದ್ದ ನಾಯಿಮರಿ; ಅದೃಷ್ಟವಷಾತ್ ಸಾವಿನ ದವಡೆಯಿಂದ ಪಾರು! 

Shocking: ರೈತನ ಹೊಟ್ಟೆ ಬಗೆದು ಸಾಯಿಸಿದ ಕಾಡುಪ್ರಾಣಿ; ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ದುರ್ಘಟನೆ

(Farmers caught Cheetah in Vijayanagara)