
ದಾವಣಗೆರೆ, ಸೆಪ್ಟೆಂಬರ್ 14: ಸಚಿವ ಎಸ್‌ಎಸ್ ಮಲ್ಲಿಕಾರ್ಜುಸ್ (SS Mallikarjuna) ನನಗೆ ಡಾಬರಮನ್ ನಾಯಿ ಅಂದಿದ್ದಾರೆ. ನಾನು ಭ್ರಷ್ಟರ ಪಾಲಿಗೆ ಡಾಬರಮನ್ ನಾಯಿಯೇ. ಸಚಿವರಿಗೆ ಸ್ವಲ್ಪ ಹುಷಾರ್ ಆಗಿ ಇರಲು ಹೇಳಿ. ಡಾಬರಮನ್ ನಾಯಿ ಬಾಯಿ ಹಾಕಿದರೆ ಎಲ್ಲಿ ಹಾಕುತ್ತದೆ ಅವರಿಗೆ ಗೊತ್ತಿದೆ. ನಾನು ಅಷ್ಟು ಸುಲಭಕ್ಕೆ ಬಿಡುವ ಮನುಷ್ಯ ಅಲ್ಲ ಎಂದು ಸಚಿವ ಎಸ್‌ಎಸ್ ಮಲ್ಲಿಕಾರ್ಜುಸ್ ವಿರುದ್ಧ ಬಿಜೆಪಿ ಶಾಸಕ ಬಿಪಿ ಹರೀಶ್ (bp harish) ವಾಗ್ದಾಳಿ ಮಾಡಿದ್ದಾರೆ.
ನಗರದಲ್ಲಿ ಟಿವಿ9 ಜೊತೆ ಮಾತನಾಡಿದ ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ್, ಅಧಿಕಾರಿಗಳನ್ನು ಬಳಸಿಕೊಂಡು ಸಚಿವ ಮಲ್ಲಿಕಾರ್ಜುನ್ ಎಫ್ಐಆರ್ ಮಾಡಿಸಿದ್ದಾರೆ. ನಾನು ನೀಡಿದ ಹೇಳಿಕೆಗೆ ಈಗಲೂ ಬದ್ಧ. ಎಸ್ಪಿಗೆ ನಾನು ಪೊಮೆರೇನಿಯನ್ ನಾಯಿ ಎಂದು ಹೇಳಿಲ್ಲ. ಪೊಮೆರೇನಿಯನ್ ನಾಯಿ ಮರಿಗಳಂತೆ ಅಧಿಕಾರಿಗಳು ಉಸ್ತುವಾರಿ ಸಚಿವರ ಹಿಂದೆ ಸುತ್ತುತ್ತಿದ್ದಾರೆ ಎಂದು ಹೇಳಿದ್ದೇನೆ. ಎಸ್ಪಿ ಉಮಾ ಪ್ರಶಾಂಶ್ಗೆ ಬೇಸರ ಆಗಿದ್ದರೆ ನಾನೇನು ಮಾಡಲು ಆಗುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಎಸ್ಪಿ ಉಮಾ ಪ್ರಶಾಂತ್ರನ್ನ ನಾಯಿಗೆ ಹೋಲಿಸಿದ ಬಿಜೆಪಿ ಶಾಸಕ ಬಿಪಿ ಹರೀಶ್ ವಿರುದ್ಧ ಎಫ್ಐಆರ್
ವಿಜಯಕುಮಾರ್ ಕೊಂಡಜ್ಜಿ ಎಂಬಾತ ಹೃದಯಾಘಾತದಿಂದ ಮೃತಪಟ್ಟಿದ್ದರು. ಆಗಲೂ ಬಿ.ಪಿ.ಹರೀಶ್ ಹೊಡೆದು ಸಾಯಿಸಿದ್ದಾರೆ ಎಂದು ಎಫ್ಐಆರ್ ಮಾಡಿಸಿದ್ದರು. ಹಿಂದೂಗಳು ಮೆರವಣಿಗೆ ಪ್ರತಿಭಟನೆ ಮಾಡಿದರೆ ಒದ್ದು ಒಳಗೆ ಹಾಕ್ತೇನೆ ಅಂತಾರೆ. ಸಚಿವ ಎಸ್.ಎಸ್.ಮಲ್ಲಿಕಾರ್ಜುನ ವಿರುದ್ಧ ಯಾಕೆ ಕೇಸ್ ದಾಖಲಿಸಿಲ್ಲ. ಶಾಮನೂರು ಕುಟುಂಬದ ವಿರುದ್ಧ ನಿರಂತರ ಹೋರಾಟ ಮಾಡಿ ಗೆದ್ದಿದ್ದೇನೆ. ನನ್ನ ಹೋರಾಟ ನಿರಂತರ. ಈ ಹಿಂದೆ ಜಿಂಕೆ ಕೇಸ್ನಲ್ಲಿ ಬಸವರಾಜ್ ಬೊಮ್ಮಾಯಿ ಸಿಎಂ ಆಗಿದ್ದಾಗ ಒಳ ಒಪ್ಪಂದ ಮಾಡಿ ಉಳಿದುಕೊಂಡರು. ಎಲ್ಲದಕ್ಕೂ ಕಾಲವೇ ಉತ್ತರಿಸಲಿದೆ ಎಂದು ಕಿಡಿಕಾರಿದ್ದಾರೆ.
ಇನ್ನು ಎಸ್ಪಿ ಉಮಾ ಪ್ರಶಾಂತ್ ವಿರುದ್ಧ ಕೀಳುಮಟ್ಟದ ಹೇಳಿಕೆ ವಿಚಾರವಾಗಿ ಶಾಸಕ ಬಿ.ಪಿ.ಹರೀಶ್ಗೆ ಶಿಕಾರಿಪುರ ಡಿವೈಎಸ್ಪಿಯಿಂದ ನೋಟಿಸ್ ನೀಡಲಾಗಿದ್ದು, ಸೆ.17ರಂದು ಬೆಳಗ್ಗೆ 10 ಗಂಟೆಗೆ ಶಿಕಾರಿಪುರ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದಾರೆ.
ಕೆಟಿಜೆ ನಗರ ಪೊಲೀಸ್ ಠಾಣೆಗೆ ಎಸ್ಪಿ ಉಮಾ ಪ್ರಶಾಂತ್ ದೂರು ನೀಡಿದ್ದರು. ಎಸ್ಪಿ ಅಧೀನದಲ್ಲಿ ಕೆಟಿಜೆ ನಗರ ಠಾಣೆ ಬರುವುದರಿಂದ ಪ್ರಕರಣದ ತನಿಖೆಯನ್ನು ಶಿಕಾರಿಪುರ ಡಿವೈಎಸ್ಪಿ ಕೇಶವ್ಗೆ ಕೇಸ್ ವರ್ಗಾವಣೆ ಮಾಡಲಾಗಿದೆ. ಈ ಹಿನ್ನಲೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಕಾಲಂ 35(3) ಅಡಿ ನೋಟಿಸ್ ನೀಡಲಾಗಿದೆ.
ಈ ಪ್ರಕರಣ ವಿಚಾರವಾಗಿ ತಮ್ಮ ವಿರುದ್ಧ ದಾಖಲಾದ ಕ್ರಿಮಿನಲ್ ಅರ್ಜಿ ರದ್ದು ಪಡಿಸಬೇಕೆಂದು ಕೋರಿ ಶಾಸಕ ಬಿಪಿ ಹರೀಶ್ ಹೈಕೋರ್ಟ ಮೊರೆ ಹೋಗಿದ್ದರು. ಕಳೆದ ಒಂದು ವಾರದಿಂದ ಜಾಮೀನು ಪಡೆಯಲು ಬೆಂಗಳೂರಿಲ್ಲಿ ಠಿಕಾಣಿ ಹೂಡಿದ್ದರು.
ಇದನ್ನೂ ಓದಿ: ದಾವಣಗೆರೆ: ಗಣೇಶೋತ್ಸವದಲ್ಲಿ ಶಿವಾಜಿ ಬ್ಯಾನರ್ ತೆರವು ಮಾಡಲು ಮುಂದಾದ ಪೊಲೀಸರು, ಪರಿಸ್ಥಿತಿ ಉದ್ವಿಗ್ನ
ವಿಚಾರಣೆ ನಡೆಸಿ ಶಾಸಕ ಬಿಪಿ ಹರೀಶ್ ವಿರುದ್ದ ಅವಸರದ ಕ್ರಮ ಬೇಡ ಎಂದು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಲು ನ್ಯಾಯಮೂರ್ತಿ ಎಂ.ಐ. ಅರುಣ್ ಆದೇಶಿಸಿದ್ದಾರೆ. ಎಸ್ಪಿ ಘನತೆಗೆ ಧಕ್ಕೆ ಬರುವವಂತೆ ಶಾಸಕ ಬಿಪಿ ಹರೀಶ್ ಹೇಳಿಕೆ ನೀಡಿಲ್ಲ. ಬದಲಿಗೆ ಸ್ಥಳೀಯ ಸಚಿವರು ಅಧಿಕಾರಿಗಳನ್ನ ಗೌರವದಿಂದ ನಡೆಸಿಕೊಳ್ಳುತ್ತಿಲ್ಲವೆಂದು ಹೇಳಿರುವುದಾಗಿ ಶಾಸಕ ಹರೀಶ್ ಪರ ನ್ಯಾಯವಾದಿ ವೆಂಕಟೇಶ ಪಿ. ದಳವಾಯಿ. ವಾದಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.