
ದಾವಣಗೆರೆ, ನವೆಂಬರ್ 19: ಚಿತ್ರದುರ್ಗ ಜಿಲ್ಲೆಯ ಹಲವು ಭಾಗಗಳಿಗೆ ಭದ್ರಾ ಮೇಲ್ದಂಡೆ ಯೋಜನೆಯ ನೀರು ತಲುಪುತ್ತಿದ್ದು, ಭದ್ರಾ ಡ್ಯಾಂನಿಂದ ನಾಲ್ಕು ಟಿಎಂಸಿ ನೀರು ಹರಿಸಲಾಗಿದೆ. ಆದರೆ, ಇದೇ ಯೋಜನೆಯ ವ್ಯಾಪ್ತಿಗೆ ಸೇರುವ ದಾವಣಗೆರೆ ಜಿಲ್ಲೆಯ ಏಕೈಕ ತಾಲೂಕು ಜಗಳೂರಿಗೆ ಮಾತ್ರ ಇನ್ನೂ ಭದ್ರಾ ನೀರು ತಲುಪಿಲ್ಲ. ಕಾಮಗಾರಿಯೇ ಪೂರ್ಣಗೊಳ್ಳದಿದ್ದರೂ ಹನಿ ನೀರಾವರಿ ಯೋಜನೆಯ ಸಾಮಗ್ರಿಗಳನ್ನು ಅಳವಡಿಸಿರುವುದು ಇದೀಗ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಒಂದು ರೀತಿಯಲ್ಲಿ ಕೂಸು ಹುಟ್ಟುವ ಮೊದಲೇ ಕುಲಾಯಿ ಹೊಲಿಸಿದಂತಾಗಿದೆ ಜಗಳೂರಿನ ಪರಿಸ್ಥಿತಿ.
ಭದ್ರಾ ಮೇಲ್ದಂಡೆ ಯೋಜನೆಗೆ ಸೇರಿದ ದಾವಣಗೆರೆ ಜಿಲ್ಲೆಯ ಏಕೈಕ ತಾಲೂಕು ಜಗಳೂರು. ಇದು ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿಗೆ ಹನಿ ನೀರಾವರಿ ಒದಗಿಸುವ ಯೋಜನೆ. ಜಗಳೂರು ತಾಲ್ಲೂಕಿನ ಬಿದರಕೆರೆ, ನಿಬ್ಬಗೂರು, ಸಂಗೇನಹಳ್ಳಿ ಸೇರಿದಂತೆ ಹಲವು ಕೆರೆಗಳಿಗೆ ಭದ್ರ ನೀರು ಹರಿಸಬೇಕಿತ್ತು. ಆದರೆ ಹಲವು ವರ್ಷಗಳೇ ಕಳೆದರೂ ಕಾಮಗಾರಿ ಪೂರ್ಣವಾಗಿಲ್ಲ. ಮುಖ್ಯ ಪೈಪ್ ಲೈನ್ಗೂ ಮೊದಲೇ ಡ್ರಿಪ್ ಪೈಪ್ ಹಾಕಿ ಅವೈಜ್ಞಾನಿಕ ಕಾಮಗಾರಿ ಮಾಡಿದ್ದಾರೆ ಗುತ್ತಿಗೆದಾರರು. ಕೇವಲ ಬಿಲ್ ಪಡೆಯಲು ನೀರು ಬಾರದೇ ಇದ್ದರೂ ಡ್ರಿಪ್ ವೈರ್ ಹಾಕಿದ್ದಾರೆ ಎಂಬುದು ರೈತರ ಆರೋಪ. ಪಕ್ಕದ ಚಿತ್ರದುರ್ಗಕ್ಕೆ ಭದ್ರಾ ಮೇಲ್ದಂಡೆ ನೀರು ಹರಿಸಲಾಗಿದೆ. ಆದರೆ ಜಗಳೂರಿಗೆ ಭದ್ರಾ ನೀರಿಲ್ಲ, ಭದ್ರಾ ಮೇಲ್ಡಂಡೆ ಹನಿ ನೀರಾವರಿ ಯೋಜನೆ ಅವೈಜ್ಞಾನಿಕವಾಗಿದೆ. ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ.
ಜಗಳೂರು ಈ ಹಿಂದೆ ಚಿತ್ರದುರ್ಗ ಜಿಲ್ಲೆಯ ಭಾಗವಾಗಿತ್ತು. ಭೌಗೋಳಿಕವಾಗಿಯೂ ಚಿತ್ರದುರ್ಗ ಜಿಲ್ಲೆಯ ವಾತಾವರಣ. ಇಲ್ಲಿ ನೀರಿನ ಮೂಲವಿಲ್ಲ. ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ಇತ್ತು. ಈಗ ತುಂಗಾಭದ್ರಾ ನದಿಯಿಂದ ಜಗಳೂರು ತಾಲೂಕಿನ 57 ಕೆರೆಗಳಿಗೆ ನೀರು ಬಂದು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಇದರಿಂದ ಅಂತರ್ಜಲ ಹೆಚ್ಚಾಗಬಹುದು. ಆದರೆ ನೀರಾವರಿ ಕಷ್ಟ. ಇದೇ ಕಾರಣಕ್ಕೆ ಭದ್ರಾ ಮೇಲ್ಡಂಡೆ ಯೋಜನೆಗೆ ಸರ್ಕಾರ ಜಗಳೂರು ತಾಲೂಕು ಸೇರ್ಪಡೆ ಮಾಡಿದೆ. ಇಲ್ಲಿ ಹನಿ ನೀರಾವರಿ ಯೋಜನೆಯನ್ನು ವೈಜ್ಞಾನಿಕವಾಗಿ ಪೂರ್ಣಗೊಳಿಸಬೇಕು ಎಂಬುದು ರೈತರ ಆಗ್ರಹ. ಸೂಕ್ತ ಪೈಪ್ ಲೈನ್ ಇಲ್ಲದೆ ಹನಿ ನೀರಾವರಿ ಯೋಜನೆ ಕಾಮಗಾರಿ ಮಾಡಿದ್ದು, ಆ ಪೈಪ್ ಲೈನ್ ಆಗುವಷ್ಟರಲ್ಲಿ ಹನಿ ನೀರಿನ ಸಾಮಗ್ರಿಗಳು ಹಾಳಾಗಿ ಹೋಗುತ್ತವೆ.
ಇದನ್ನೂ ಓದಿ: ಯಲ್ಲಮ್ಮಗೆ ಸರ್ಪ ದೋಷ ವದಂತಿ ಪೂಜೆಯಿಂದ ಮಲಿನಗೊಂಡಿದ್ದ ಭೀಮಾನದಿ ಕ್ಲೀನ್
ಚಿತ್ರದುರ್ಗದಿಂದ ಜಗಳೂರು ತಾಲೂಕಿಗೆ ಮೊದಲು ಮುಖ್ಯ ಪೈಪ್ ಲೈನ್ ಆಗಬೇಕು. ಆ ನೀರು ಕೆರೆಗಳಿಗೆ ಬರಬೇಕು. ಹೀಗೆ ಕೆರೆಗಳಿಗೆ ನೀರು ಬಂದ ಬಳಿಕ ಹನಿ ನೀರಾವರಿ ಮೂಲಕ ರೈತರ ಜಮೀನಿಗೆ ನೀರು ಹೋಗಬೇಕು. ಆದರೆ ಇಲ್ಲಿ ಮಾತ್ರ ಯಾವುದೇ ಕಾಮಗಾರಿ ಮುಕ್ತಾಯ ಆಗಿಲ್ಲ. ತಮ್ಮ ಪಾಡಿಗೆ ತಾವು ಹನಿ ನೀರಾವರಿ ಸಮಗ್ರಿ ಜೋಡಣೆ ಮಾಡಿ ಸುಮ್ಮನಿದ್ದಾರೆ ಗುತ್ತಿಗೆದಾರರು. ಈ ವಿಚಾರವಾಗಿ ರೈತರು ಹೋರಾಟಕ್ಕೆ ಮುಂದಾಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:40 pm, Thu, 19 November 26