ಉತ್ತರಾಧಿಕಾರಿ ನೇಮಕ ಗೊಂದಲ; ವಿಚಾರ ತಿಳಿಯುತ್ತಿದ್ದಂತೆ ರಾತ್ರೋರಾತ್ರಿ ಮಠಕ್ಕೆ ಬಂದ ಕಾಶಿ ಜಗದ್ಗುರು, ಹಾಲಸ್ವಾಮಿ ವಂಶಸ್ಥರೇ ಮಠದ ಉತ್ತರಾಧಿಕಾರಿ ಘೋಷಣೆ
ಈ ಹಿಂದೆ ಕೆಲವರು ಇದೇ ವಿಚಾರವಾಗಿ ಕಾಶಿ ಸ್ವಾಮೀಜಿಗಳನ್ನ ಭೇಟಿ ಮಾಡಿದ್ದರು. ಲಿಂಗೈಕ್ಯ ವಿಶ್ವೇಶ್ವರ ಶಿವಾಚಾರ್ಯ ಸಂಬಂಧಿಕರಲ್ಲಿಯೇ ಎರಡು ಗುಂಪು ಹುಟ್ಟಿಕೊಂಡಿದ್ದವು. ಜೊತೆಗೆ ಸದ್ಯ ಮಠದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಶಿವಕುಮಾರ ಸ್ವಾಮೀಜಿಗಳ ಬಗ್ಗೆ ಸಹ ಕೆಲ ಭಕ್ತರು ತಕರಾರು ತೆಗೆದಿದ್ದರು.
ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲೂಕಿನ ರಾಂಪುರ ಸೇರಿದಂತೆ ವಿವಿಧ ಕಡೆ ಮಠಗಳನ್ನ ಹೊಂದಿದೆ ರಾಂಪುರ ಹಾಲಸ್ವಾಮೀ ಬೃಹನ್ಮಠ. ಈ ಮಠಕ್ಕೆ ಬಹು ದಿನಗಳಿಂದ ವಿಶ್ವೇಶ್ವರ ಶಿವಾಚಾರ್ಯ ಹಾಲ ಸ್ವಾಮೀಜಿಗಳು ಪಟ್ಟಾಧಿಪತಿ ಆಗಿದ್ದರು. ಆದ್ರೆ 2020ರ ಜುಲೈ 15 ರಂದು ಈ ಸ್ವಾಮೀಜಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿನಿಂದ ಲಿಂಗಕ್ಯರಾದರು. ಇವರು ಲಿಂಗೈಕ್ಯರಾದ ಬಳಿಕ ಮಠಕ್ಕೆ ಉತ್ತರಾಧಿಕಾರರ ನೇಮಕ ಆಗಿಲ್ಲ. ಲಿಂಗೈಕ್ಯ ಸ್ವಾಮೀಜಿಗಳ ಪೂರ್ವಾಶ್ರಮದ ಸಹೋದರ ಶಿವಕುಮಾರ ಸ್ವಾಮೀಜಿಗಳು ಸದ್ಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಹಾಲ ಸ್ವಾಮೀ ಮಠದ ವೀರಶೈವ ಪರಂಪರೆಯ ಪಂಚಪೀಠಗಳಲ್ಲಿ ಕಾಶಿ ಗುರುಪೀಠದ ಶಾಖಾಮಠ ಆಗಿದೆ. ಹೀಗಾಗಿ ಈ ಮಠದ ಉತ್ತರಾಧಿಕಾರಿ ನೇಮಕ ಮಾಡುವ ಜವಾಬ್ದಾರಿಯು ಕಾಶಿ ಪೀಠದ ಚಂದ್ರಶೇಖರ ಶಿವಾಚಾರ್ಯ ಅವರ ಮೇಲಿದೆ.
ಈ ಹಿಂದೆ ಕೆಲವರು ಇದೇ ವಿಚಾರವಾಗಿ ಕಾಶಿ ಸ್ವಾಮೀಜಿಗಳನ್ನ ಭೇಟಿ ಮಾಡಿದ್ದರು. ಲಿಂಗೈಕ್ಯ ವಿಶ್ವೇಶ್ವರ ಶಿವಾಚಾರ್ಯ ಸಂಬಂಧಿಕರಲ್ಲಿಯೇ ಎರಡು ಗುಂಪು ಹುಟ್ಟಿಕೊಂಡಿದ್ದವು. ಜೊತೆಗೆ ಸದ್ಯ ಮಠದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಶಿವಕುಮಾರ ಸ್ವಾಮೀಜಿಗಳ ಬಗ್ಗೆ ಸಹ ಕೆಲ ಭಕ್ತರು ತಕರಾರು ತೆಗೆದಿದ್ದರು. ಹೀಗೆ ಪರಿಸ್ಥಿತಿ ಜಟಿಲ ಆಗಿದೆ ಎಂದು ಅರಿತು ಕೊಂಡ ಕಾಶಿ ಸ್ವಾಮೀಜಿಗಳು ರಾತ್ರೋರಾತ್ರಿ ಮಠಕ್ಕೆ ಬಂದು ಭಕ್ತರಿಗೆ ಅಚ್ಚರಿ ಮೂಡಿಸಿದ್ದಾರೆ. ಎರಡು ಗುಂಪಿನ ಭಕ್ತರನ್ನ ಕರೆಸಿ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ. ಇಲ್ಲಿಯೇ ಒಂದು ನಿರ್ಧಾರ ತೆಗೆದುಕೊಂಡ ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಮಠದ ಉತ್ತರಾಧಿಕಾರಿ ಯಾರು ಆಗಬೇಕು ಇದರ ಬಗ್ಗೆ ಸ್ಪಷ್ಟ ಪಡಿಸಲು ಉತ್ಸವ ಮೂರ್ತಿಗಳ ಮೊರೆ ಹೋದ್ರು.
ಒಂದು ಕಡೆ ಲಿಂಗೈಕ್ಯ ಸ್ವಾಮೀಜಿ ವಂಶಸ್ಥರೇ ಉತ್ತರಾಧಿಕಾರಿಗಳು ಆಗಬೇಕು ಎಂಬುದಾದರೆ. ಇನ್ನೊಂದು ಕಡೆ ಬೇರೆಯವರು ಉತ್ತರಾಧಿಕಾರಿ ಆಗಬೇಕು ಎಂಬುದಿದೆ. ಈ ಎರಡು ಗುಂಪಿನ ಆಶಯದಂತೆ ಎರಡು ಚೀಟಿ ಬರೆದು ಉತ್ಸವ ಮೂರ್ತಿ ಯಾರಿಗೆ ಒಲಿಯುತ್ತದೆ ಆ ವಂಶದವರು ಉತ್ತರಾಧಿಕಾರಿಗಳ ಆಗುತ್ತಾರೆ ಎಂದು ಸ್ವಾಮೀಜಿ ಹೇಳಿದ್ದರು. ಆಗ ಲಿಂಗೈಕ್ಯ ಸ್ವಾಮೀಜಿ ವಂಶಸ್ಥರೇ ಉತ್ತರಾಧಿಕಾರಿಗಳು ಆಗಲಿ ಎಂಬ ಸಂದೇಶ ಉತ್ಸವ ಮೂರ್ತಿಗಳಿಂದ ಬಂದಿದೆ. ಹೀಗಾಗಿ ಸ್ವಾಮೀಜಿ ಅವರ ವಂಶಸ್ಥರಿಗೆ ಉತ್ತರಾಧಿಕಾರಿ ಮಾಡಲು ನಿರ್ಧರಿಸಲಾಗಿದೆ.
ಆದ್ರೆ ಅಂತಿಮವಾಗಿ ಯಾರು ಉತ್ತರಾಧಿಕಾರಿ ಎಂಬ ನಿರ್ಧಾರವನ್ನ ಸ್ವಾಮೀಜಿಗಳು ಪ್ರಕಟಿಸಿಲ್ಲ. ಮೇಲಾಗಿ ಲಿಂಗೈಕ್ಯ ಸ್ವಾಮೀಜಿ ವಂಶಸ್ಥರದಲ್ಲಿ ಅಂತಹ ಉತ್ತರಾಧಿಕಾರಿ ಕಿರಿಯ ವಯಸ್ಸಿನವರು ಇದ್ದರೇ ಅವರು ಪ್ರಾಯಕ್ಕೆ ಬರುವ ತನಕ ಒಬ್ಬರು ಮಠದ ಉಸ್ತುವಾರಿ ನೋಡಿಕೊಳ್ಳಬೇಕು ಎಂದು ನಿರ್ಧರಿಸಲಾಗಿದೆ. ಇನ್ನೇನು ಮಠದಲ್ಲಿ ಭಕ್ತರ ಎರಡು ಗುಂಪುಗಳಾಗಿ ಘರ್ಷಣೆ ಆಗುವ ಲಕ್ಷಣಗಳು ಕಂಡು ಬಂದಿದ್ದವು. ಇದನ್ನ ಅರಿತ ಕಾಶಿ ಜಗದ್ಗುರುಗಳು ರಾತ್ರೋರಾತ್ರಿ ಮಠಕ್ಕೆ ಬಂದು ಠಿಕಾಣಿ ಹಾಕಿ ಗಂಭೀರ ಸಮಸ್ಯೆಗೆ ಪರಿಹಾರ ಕಂಡು ಕೊಂಡಿದ್ದಾರೆ. ಇನ್ನು ಉತ್ತರಾಧಿಕಾರಿಯ ನೇಮಕ ಮಾತ್ರ ಬಾಕಿ ಇದೆ.
ವರದಿ: ಬಸವರಾಜ್ ದೊಡ್ಮನಿ, ಟಿವಿ9 ದಾವಣಗೆರೆ
ಇದನ್ನೂ ಓದಿ: ಇಟಲಿಯಿಂದ ಅಮೃತ್ಸರ್ಕ್ಕೆ ಬಂದ ಏರ್ಇಂಡಿಯಾ ವಿಮಾನದಲ್ಲಿದ್ದ 125 ಪ್ರಯಾಣಿಕರಿಗೆ ಕೊರೊನಾ ಸೋಂಕು; ಏರ್ಪೋರ್ಟ್ನಿಂದ ಮಾಹಿತಿ