ದಾವಣಗೆರೆ; ಇಡೀ ಮನೆಯನ್ನೇ ಸುಟ್ಟ ದೇವರ ಮುಂದೆ ಹಚ್ಚಿಟ್ಟಿದ್ದ ದೀಪ, ಮನೆ ಮಂದಿ ಬೀದಿ ಪಾಲು
ಬಡಪ್ಪ ಎಂಬುವವರು ಮನೆ ಬಾಗಿಲು ಹಾಕಿಕೊಂಡು ತಮ್ಮ ಕುಟುಂಬಸ್ಥರೊಂದಿಗೆ ಕಾರ್ಯಕ್ರಮಕ್ಕೆ ಹೋಗಿದ್ದರು. ಈ ವೇಳೆ ದೇವರ ಮುಂದೆ ಹಚ್ಚಿಟ್ಟ ದೀಪದಿಂದ ಇಡೀ ಮನೆ ಬೆಂಕಿಗಾಹುತಿಯಾಗಿದೆ. ಮನೆಯಲ್ಲಿದ್ದ ಹಣ, ಒಡವೆ, ಬಟ್ಟೆ ಎಲ್ಲವೂ ಸುಟ್ಟು ಹೋಗಿದೆ. ಇದರಿಂದ ಕುಟುಂಬ ಬೀದಿ ಪಾಲಾಗಿದೆ.
ದಾವಣಗೆರೆ, ಫೆ.01: ದೇವರ ಮುಂದೆ ಹಚ್ಚಿಟ್ಟಿದ್ದ ದೀಪ (Lamp) ಇಡೀ ಮನೆಯನ್ನೇ ಸುಟ್ಟು ಹಾಕಿದೆ. ದಾವಣಗೆರೆ (Davangere) ಜಿಲ್ಲೆಯ ಜಗಳೂರು ತಾಲೂಕಿನ ತೋರಣಗಟ್ಟೆ ಗ್ರಾಮದ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ನಿನ್ನೆ ರಾತ್ರಿ ಒಂಬತ್ತು ಗಂಟೆ ಸುಮಾರಿಗೆ ದೇವರ ಮುಂದೆ ಹಚ್ಚಿಟ್ಟಿದ್ದ ದೀಪದಿಂದ ಬೆಂಕಿ ತಗುಲಿ ಮನೆಯಲ್ಲಿದ್ದ ವಸ್ತು, ಧಾನ್ಯ, ಹಣ ಭಸ್ಮವಾಗಿದೆ.
ಬಡಪ್ಪ ಎಂಬುವವರು ಮನೆ ಬಾಗಿಲು ಹಾಕಿಕೊಂಡು ತಮ್ಮ ಕುಟುಂಬಸ್ಥರೊಂದಿಗೆ ಕಾರ್ಯಕ್ರಮಕ್ಕೆ ಹೋಗಿದ್ದರು. ಈ ವೇಳೆ ಮನೆಯಲ್ಲಿದ್ದ ದೀಪದಿಂದ ಆಕಸ್ಮಿಕವಾಗಿ ಬೆಂಕಿ ಹಚ್ಚಿಕೊಂಡಿದೆ. ಉರಿಯುತ್ತಿದ್ದ ದೀಪದ ಜ್ವಾಲೆ ಬಟ್ಟೆಗೆ ಹತ್ತಿಕೊಂಡು ಇಡೀ ಮನೆ ಹೊತ್ತಿ ಉರಿದಿದೆ. ಬೆಂಕಿ ಅವಘಡದಲ್ಲಿ ಮನೆಯಲ್ಲಿದ್ದ ಹಣ, ಚಿನ್ನಾಭರಣ, ಬಟ್ಟೆ, ದಾಖಲೆಗಳು ಬೆಂಕಿಗೆ ಅಹುತಿಯಾಗಿದೆ. ಘಟನಾ ಸ್ಥಳಕ್ಕೆ ಜಗಳೂರು ತಾಲೂಕು ದಂಡಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿ ಅವಘಡದಿಂದ ಆದ ನಷ್ಟಕ್ಕೆ ಪರಿಹಾರ ನೀಡಲು ಬಡಪ್ಪ ಅವರು ಮನವಿ ಮಾಡಿದ್ದಾರೆ. ಸದ್ಯ ತಾಲೂಕು ದಂಡಧಿಕಾರಿಗಳು ಪರಿಸರ ವಿಕೋಪ ನಿಧಿಯಿಂದ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.
ಬೇಕರಿಯಲ್ಲಿ ಅಗ್ನಿ ಅವಘಡ
ದೊಡ್ಡಬಳ್ಳಾಪುರದ ರೈಲ್ವೆ ಸ್ಟೇಷನ್ ವೃತ್ತದಲ್ಲಿ ಇರುವ L.G.ಅಯ್ಯಂಗಾರ ಬೇಕರಿಯಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಆಕಸ್ಮಿಕ ಬೆಂಕಿಯಿಂದ L.G.ಅಯ್ಯಂಗಾರ ಬೇಕರಿ ಹೊತ್ತಿ ಉರಿದಿದೆ. ಸುರೇಶ್ ಎಂಬುವರ ಅಯ್ಯಂಗಾರ ಬೇಕರಿ ಬೆಂಕಿಗಾಹುತಿಯಾಗಿದೆ. ಅಗ್ನಿ ಅವಘಡದಲ್ಲಿ ಲಕ್ಷಾಂತ ರೂ. ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿದೆ.
ಬೆಳಗ್ಗೆ ಎಂದಿನಂತೆ ಬೇಕರಿ ಓನ್ ಮಾಡಿ ಸಿಬ್ಬಂದಿ ಕೆಲಸ ಮಾಡ್ತಿದ್ದರು. ಈ ವೇಳೆ ಏಕಾಏಕಿ ಬೇಕರಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನೋಡ ನೋಡ್ತಿದ್ದಂತೆ ಸಂಪೂರ್ಣ ಬೇಕರಿ ಬೆಂಕಿಗೆ ಆಹುತಿಯಾಗಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ. ದೊಡ್ಡಬಳ್ಳಾಪುರ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹೊತ್ತಿ ಉರಿದ ಕಾರು, ದಂಪತಿ ಪಾರು
ಚಲಿಸುತ್ತಿದ್ದ ಏಕಾಏಕಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ರಸ್ತೆಯಲ್ಲೇ ಹೊತ್ತಿ ಉರಿದಿದೆ. ಹುಬ್ಬಳ್ಳಿಯ ಉಣಕಲ್ ಕೆರೆ ಬಳಿ ಘಟನೆ ನಡೆದಿದ್ದು, ಹುಬ್ಬಳ್ಳಿಯಿಂದ ಧಾರವಾಡ ಕಡೆ ಹೊರಟಿದ್ದ ದೆಹಲಿ ಮೂಲದ ಫೋರ್ಡ್ ಕಂಪನಿಯ ಕಾರು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಬೆಂಕಿ ಕಾಣಿಸಿಕೊಳ್ಳುತ್ತಲೇ ಕಾರಿನಲ್ಲಿದ್ದ ದಂಪತಿ ಪಾರಾಗಿದ್ದಾರೆ. ಸದ್ಯ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ