ದಾವಣಗೆರೆ: ಶಿಕ್ಷಕ ಪ್ರಕಾಶ್ ಕಾಲಿಗೆ ಬಿದ್ದು ಕ್ಷಮೆ ಕೇಳಿದ ವಿದ್ಯಾರ್ಥಿಗಳು
ವಿದ್ಯಾರ್ಥಿಗಳ ವಿರುದ್ಧ ಪೊಲೀಸರಿಗೆ ದೂರು ನಿಡಲು ಶಿಕ್ಷಕ ಪ್ರಕಾಶ್ ಒಪ್ಪಿರಲಿಲ್ಲ. ತಮ್ಮನ್ನು ಅವಮಾನಿಸಿದ ವಿದ್ಯಾರ್ಥಿಗಳನ್ನು ಕ್ಷಮಿಸಿ, ಪ್ರತಿದಿನ ತರಗತಿಗೆ ಹಾಜರಾಗುವಂತೆ ಸೂಚಿಸಿದ್ದರು
ದಾವಣಗೆರೆ: ಗುರುಗಳನ್ನು ನಿಂದಿಸಿ, ಕೆಟ್ಟ ನಡವಳಿಕೆಯಿಂದ ಅವಮಾನಿಸಿದ್ದ ವಿದ್ಯಾರ್ಥಿಗಳು ಅದೇ ಗುರುಗಳ ಕರುಣೆಯ ಮಮತೆಯನ್ನು ಅನುಭವಿಸಿ ಶಾಲೆಗೆ ಹಿಂದಿರುಗಿದ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ನಲ್ಲೂರು ಗ್ರಾಮದಲ್ಲಿ ನಡೆದಿದೆ. ತಾವು ನಿಂದಿಸಿ ಅವಮಾನಿಸಿದ್ದ ಶಿಕ್ಷಕ ಪ್ರಕಾಶ್ ಅವರ ಕಾಲಿಗೆ ಬಿದ್ದು ವಿದ್ಯಾರ್ಥಿಗಳು ಕ್ಷಮೆ ಕೇಳಿದ್ದಾರೆ. ನಲ್ಲೂರು ಸರ್ಕಾರಿ ಫ್ರೌಡಶಾಲೆಯಲ್ಲಿ ಡಿ.3ರಂದು ಈ ಪ್ರಕರಣ ನಡೆದಿತ್ತು. ತರಗತಿಯಲ್ಲಿ ಗುಟ್ಕಾ ಜಗಿಯಬೇಡಿ ಎಂದು ಬುದ್ಧಿ ಹೇಳಿದ್ದ ಶಿಕ್ಷಕ ಪ್ರಕಾಶ್ ಅವರ ತಲೆಯ ಮೇಲೆ ಕಸದ ಬುಟ್ಟಿ ಬೋರಲು ಹಾಕಿ ಅವಮಾನಿಸಿದ್ದರು. ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆದರೆ ವಿದ್ಯಾರ್ಥಿಗಳ ವಿರುದ್ಧ ಪೊಲೀಸರಿಗೆ ದೂರು ನಿಡಲು ಶಿಕ್ಷಕ ಪ್ರಕಾಶ್ ಒಪ್ಪಿರಲಿಲ್ಲ. ತಮ್ಮನ್ನು ಅವಮಾನಿಸಿದ ವಿದ್ಯಾರ್ಥಿಗಳನ್ನು ಕ್ಷಮಿಸಿ, ಪ್ರತಿದಿನ ತರಗತಿಗೆ ಹಾಜರಾಗುವಂತೆ ಸೂಚಿಸಿದ್ದರು. ಆದರೆ ವಿದ್ಯಾರ್ಥಿಗಳ ವರ್ತನೆಯಿಂದ ಸಿಟ್ಟಿಗೆದ್ದಿದ್ದ ಗ್ರಾಮಸ್ಥರು ಮತ್ತು ಪೋಷಕರು ಮಕ್ಕಳನ್ನು ಕರೆತಂದು ಕ್ಷಮೆ ಕೇಳಿಸಿದ್ದರು. ಶಿಕ್ಷಕರ ಕಾಲಿಗೆ ನಮಸ್ಕರಿಸಿ, ತಮ್ಮನ್ನು ಕ್ಷಮಿಸುವಂತೆ ಈ ವಿದ್ಯಾರ್ಥಿಗಳು ಕೇಳಿದ್ದರು.
ಶಿಕ್ಷಕರು ದೂರು ನೀಡದಿದ್ದರೂ ಘಟನೆಯು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದರಿಂದ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದರು. ಮಕ್ಕಳು ಮಾಡಿರುವ ತಪ್ಪನ್ನು ಅವರಿಗೆ ಮನವರಿಕೆ ಮಾಡಿಕೊಟ್ಟು ತಕ್ಕ ಪಾಠ ಕಲಿಸಬೇಕು. ಅದರೆ ಅವರ ವಿದ್ಯಾಭ್ಯಾಸಕ್ಕೆ, ಭವಿಷ್ಯಕ್ಕೆ ತೊಂದರೆಯಾಗಬಾರದು ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಸಲಹೆ ನೀಡಿದ್ದರು. ಆದರೆ ಸ್ವತಃ ಈ ಮಕ್ಕಳ ಪೋಷಕರೇ ತಮ್ಮ ಮಕ್ಕಳ ಕಿವಿಹಿಂಡಿ, ಶಾಲೆಗೆ ಕರೆತಂದು ಶಿಕ್ಷಕರ ಕಾಲಿನ ಮೇಲೆ ಕೆಡವಿದ್ದರು.
ಹಾವೇರಿ ಜಿಲ್ಲೆಯಿಂದ ವರ್ಗಾವಣೆಗೊಂಡು ನಲ್ಲೂರು ಶಾಲೆಗೆ ಬಂದಿದ್ದ ಶಿಕ್ಷಕ ಪ್ರಕಾಶ್ ಅವರು ಗುಟ್ಕಾ ಜಗಿಯುವ ವಿದ್ಯಾರ್ಥಿಗಳಿಗೆ ಛೀಮಾರಿ ಹಾಕಿದ್ದರು. ಶಿಕ್ಷಕರ ಮಾತನ್ನು ಲೇವಡಿ ಮಾಡಿದ್ದ ವಿದ್ಯಾರ್ಥಿಗಳು, ಅವರನ್ನು ಡಸ್ಟ್ಬಿನ್ನಿಂದ ಹೊಡೆಯಲು ಯತ್ನಿಸಿ, ತಲೆಯ ಮೇಲೆ ಡಸ್ಟ್ಬಿನ್ ಬಾರಲು ಹಾಕಿ ಅನುಚಿತವಾಗಿ ವರ್ತಿಸಿದ್ದರು.
ಇದನ್ನೂ ಓದಿ: ದಾವಣಗೆರೆಯ ನವೋದಯ ಶಾಲೆಯ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು, 4 ಕೊಠಡಿಗಳು ಸೀಲ್‌ಡೌನ್ ಇದನ್ನೂ ಓದಿ: ದಾವಣಗೆರೆಯಲ್ಲಿ ಗುರುಗಳನ್ನು ನಿಂದಿಸಿ ಅವಮಾನಿಸಿದ್ದ ಪ್ರಕರಣ; ಶಿಕ್ಷಕನ ಕಾಲಿಗೆ ಬಿದ್ದು ಕ್ಷಮೆ ಕೇಳಿದ ವಿದ್ಯಾರ್ಥಿ