ಎಷ್ಟು ಹೇಳಿದ್ರೂ ಅಷ್ಟೇ: ಪಟಾಕಿಯಿಂದ ಕಣ್ಣು ಕಳೆದುಕೊಂಡ ಬಾಲಕರು, ದೀಪಾವಳಿ ಸಂಭ್ರಮದಲ್ಲಿ ಕುಟುಂಬದಲ್ಲಿ ಕತ್ತಲೆ
ಕಳೆದ ಕೆಲ ದಿನಗಳಿಂದ ಪಟಾಕಿಯಿಂದ ಗಾಯಗೊಂಡವರ ಸಂಖ್ಯೆ ಹೆಚ್ಚಾಗಿದ್ದು, ಇಂದು 150ಕ್ಕೂ ಹೆಚ್ಚು ಕಣ್ಣಿನ ಹಾನಿ ಕೇಸ್ಗಳು ದಾಖಲಾಗಿವೆ. ಶೇ 60% ರಷ್ಟು ಪ್ರಕರಣ ಪಟಾಕಿ ನಿಂತು ನೋಡುವಾಗ ಕಣ್ಣಿಗೆ ಹಾನಿಯಾದ ಘಟನೆಗಳೇ ಎಂದು ದೃಢಪಟ್ಟಿದ್ದು, ದೀಪಾವಳಿ ಸಂಭ್ರಮದ ಮಧ್ಯೆ ಪಟಾಕಿಗಳ ಅವಾಂತರದಿಂದ ಮೂವರು ಬಾಲಕರು ದೃಷ್ಟಿದೋಷಕ್ಕೆ ಒಳಗಾದ ಘಟನೆಗಳು ಬೆಂಗಳೂರಿನಲ್ಲೂ ಹಾಗೂ ಚಿಕ್ಕಬಳ್ಳಾಪುರದಲ್ಲಿ ವರದಿಯಾಗಿವೆ.

ಬೆಂಗಳೂರು, ಅಕ್ಟೋಬರ್ 22: ದೀಪಾವಳಿ (Deepavali) ಸಂಭ್ರಮ ಎಲ್ಲೆಡೆ ಮನೆಮಾಡಿರುವಾಗ ಬೆಂಗಳೂರಿನಲ್ಲಿ ಸಾಲು ಸಾಲು ಪಟಾಕಿ ಅವಘಡಗಳು ಸಂಭವಿಸುತ್ತಿವೆ. ಕಳೆದ ಕೆಲ ದಿನಗಳಿಂದ ಪಟಾಕಿಯಿಂದ ಗಾಯಗೊಂಡವರ ಸಂಖ್ಯೆ ಹೆಚ್ಚಾಗಿದ್ದು, ಇಂದು 150ಕ್ಕೂ ಹೆಚ್ಚು ಕಣ್ಣಿನ ಹಾನಿ ಕೇಸ್ಗಳು ದಾಖಲಾಗಿವೆ. ಶೇ 60% ರಷ್ಟು ಪ್ರಕರಣ ಪಟಾಕಿ ನಿಂತು ನೋಡುವಾಗ ಕಣ್ಣಿಗೆ ಹಾನಿಯಾದ ಘಟನೆಗಳೇ ಎಂದು ದೃಢಪಟ್ಟಿದೆ. 8 ಕ್ಕೂ ಹೆಚ್ಚು ಜನರು ಶಾಶ್ವತ ದೃಷ್ಠಿ ಕಳೆದು ಕೊಂಡಿದ್ದು, ದೀಪಾವಳಿ ಸಂಭ್ರಮದ ಮಧ್ಯೆ ಪಟಾಕಿಗಳ ಅವಾಂತರದಿಂದ ಮೂವರು ಬಾಲಕರು ದೃಷ್ಟಿದೋಷಕ್ಕೆ ಒಳಗಾದ ಘಟನೆಗಳು ಬೆಂಗಳೂರಿನಲ್ಲೂ ಹಾಗೂ ಚಿಕ್ಕಬಳ್ಳಾಪುರದಲ್ಲಿ ವರದಿಯಾಗಿವೆ.
ಕತ್ರಿಗುಪ್ಪೆ ಬಾಲಕನ ಕಣ್ಣಿಗೆ ಪಟಾಕಿ ಸಿಡಿದು ಗಾಯ
ಬೆಂಗಳೂರಿನ ಕತ್ರಿಗುಪ್ಪೆಯ 11 ವರ್ಷದ ವಿದ್ಯಾರ್ಥಿ ಪಟಾಕಿ ಆಟವಾಡುತ್ತಿದ್ದ ವೇಳೆ ದುರಂತ ಸಂಭವಿಸಿದೆ. ಪಟಾಕಿ ನೇರವಾಗಿ ವಿದ್ಯಾರ್ಥಿಯ ಕನ್ನಡಕಕ್ಕೆ ಸಿಡಿದು, ಕನ್ನಡಕ ಒಡೆದು ಅದರ ಚೂರುಗಳು ಕಣ್ಣಿನೊಳಗೆ ಪ್ರವೇಶಿಸಿದ್ದವು. ಪ್ರಭಾ ಕಣ್ಣಿನ ಆಸ್ಪತ್ರೆಯಲ್ಲಿ ತುರ್ತು ಶಸ್ತ್ರಚಿಕಿತ್ಸೆ ನಡೆಸಿದರೂ ಕಣ್ಣಿನ ದೃಷ್ಟಿ ಉಳಿಸಲಾಗಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಪೋಷಕರು ಆಘಾತಗೊಂಡಿದ್ದು, ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಎಚ್ಚರಿಕೆ ನೀಡಲಾಗಿದೆ.
ಚಿಕ್ಕಬಳ್ಳಾಪುರದ 5 ವರ್ಷದ ಬಾಲಕಿಗೆ ದೃಷ್ಟಿದೋಷ
ಚಿಕ್ಕಬಳ್ಳಾಪುರದ ಮೂಲದ 5 ವರ್ಷದ ಹೆಣ್ಣುಮಗು ಪಟಾಕಿ ನೋಡುತ್ತಿದ್ದ ವೇಳೆ ಬಿಜಿಲಿ ಪಟಾಕಿ ಸಿಡಿದು ಬಲಕಣ್ಣಿಗೆ ತೀವ್ರ ಗಾಯವಾಗಿದ್ದು, ಕರಿಗುಡ್ಡೆ ಭಾಗ ಸಂಪೂರ್ಣವಾಗಿ ಸುಟ್ಟು ಹೋದ ಕಾರಣ ದೃಷ್ಟಿ ಕಳೆದುಕೊಂಡಿದ್ದಾಳೆ. ಸದ್ಯ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರು ಶಸ್ತ್ರಚಿಕಿತ್ಸೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಭವಿಷ್ಯದಲ್ಲಿ ದೃಷ್ಟಿ ಮರಳಿ ಬರುವ ಸಾಧ್ಯತೆ ಅಸ್ಪಷ್ಟವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಸಿದ್ಧಾಪುರದ ಪಿಯು ವಿದ್ಯಾರ್ಥಿಗೆ ರಸ್ತೆ ಮಧ್ಯೆ ಅವಘಡ
ಸಿದ್ಧಾಪುರದ ಪಿಯುಸಿ ವಿದ್ಯಾರ್ಥಿಯೊಬ್ಬ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಪಟಾಕಿ ಸಿಡಿದು ಕಣ್ಣಿಗೆ ತೀವ್ರ ಗಾಯವಾಗಿದೆ. ಕೆಲವು ಯುವಕರು ಕಲ್ಲಿನ ಮೇಲೆ ಪಟಾಕಿ ಇಟ್ಟು ಸಿಡಿಸಿದಾಗ ಸ್ಫೋಟದ ತೀವ್ರತೆ ಹೆಚ್ಚಾಗಿ ವಿದ್ಯಾರ್ಥಿ ಗಾಯಗೊಂಡಿದ್ದಾನೆ. ಪೋಷಕರು ಪಟಾಕಿ ಸುರಕ್ಷತೆ ಕುರಿತು ನಿರ್ಲಕ್ಷ್ಯ ತೋರಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಾಯಗೊಂಡ ವಿದ್ಯಾರ್ಥಿ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಶಸ್ತ್ರಚಿಕಿತ್ಸೆಗಾಗಿ ವೈದ್ಯರು ಇಬ್ಬರು ದಿನಗಳ ವೀಕ್ಷಣೆಯಲ್ಲಿದ್ದಾರೆ.
ಇದನ್ನೂ ಓದಿ ದೀಪಾವಳಿ ಪಟಾಕಿಯಿಂದ ಅವಾಂತರ: ಬೆಂಗಳೂರಿನಲ್ಲಿ 90ಕ್ಕೂ ಜನರ ಕಣ್ಣಿಗೆ ಹಾನಿ, ಗಾಳಿ ಗುಣಮಟ್ಟ ಕುಸಿತ
ಬೆಂಗಳೂರಿನ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಕೇಸ್ಗಳು
- ನಾರಾಯಣ ನೇತ್ರಾಲಯ – 75 ಕೇಸ್
- ಮಿಂಟೋ ಆಸ್ಪತ್ರೆ – 28 ಕೇಸ್
- ಶಂಕರ ಕಣ್ಣಿನ ಆಸ್ಪತ್ರೆ – 27
- ಪ್ರಭಾ ಕಣ್ಣಿನ ಆಸ್ಪತ್ರೆ – 11 ಕೇಸ್
- ಮೋದಿ ಆಸ್ಪತ್ರೆ – 3
- ಅಗ್ರವಾಲ್ ಕಣ್ಣಿನ ಆಸ್ಪತ್ರೆ -3 ಕೇಸ್
ದೀಪಾವಳಿ ಸಂಭ್ರಮವನ್ನು ಪಟಾಕಿ ಅವಘಡಗಳು ಕತ್ತಲೆಯನ್ನಾಗಿ ಮಾಡಿದ್ದು, ಕಣ್ಣಿನ ಸುರಕ್ಷತೆ ಬಗ್ಗೆ ಜನರಲ್ಲಿ ಆತಂಕ ಹೆಚ್ಚಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




