ಬೆಂಗಳೂರು ಎಸ್​ಎಂವಿಟಿ ಕಾರವಾರ, ಯಶವಂತಪುರ ಮಂಗಳೂರು ಮಧ್ಯೆ ವಿಶೇಷ ರೈಲು: ವೇಳಾಪಟ್ಟಿ, ಇತರ ವಿವರ ಇಲ್ಲಿದೆ

|

Updated on: Oct 21, 2024 | 9:28 AM

ದೀಪಾವಳಿ ಸಂದರ್ಭದಲ್ಲಿ ಬೆಂಗಳೂರು, ಮಂಗಳೂರು, ಕಾರವಾರ ಪ್ರಯಾಣಿಕರಿಗೆ ನೈಋತ್ಯ ರೈಲ್ವೆ ಶುಭ ಸುದ್ದಿ ನೀಡಿದೆ. ಹಬ್ಬಕ್ಕೆ ಊರಿಗೆ ಹೋಗುವವರಿಗೆ ಮತ್ತು ರಾಜಧಾನಿಗೆ ಬರುವವರಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ. ವಿಶೇಷ ರೈಲಿನ ವೇಳಾಪಟ್ಟಿ, ನಿಲ್ದಾಣಗಳು ಹಾಗೂ ಇತರ ವಿವರ ಇಲ್ಲಿದೆ.

ಬೆಂಗಳೂರು ಎಸ್​ಎಂವಿಟಿ ಕಾರವಾರ, ಯಶವಂತಪುರ ಮಂಗಳೂರು ಮಧ್ಯೆ ವಿಶೇಷ ರೈಲು: ವೇಳಾಪಟ್ಟಿ, ಇತರ ವಿವರ ಇಲ್ಲಿದೆ
ಬೆಂಗಳೂರು ಎಸ್​ಎಂವಿಟಿ ಕಾರವಾರ, ಯಶವಂತಪುರ ಮಂಗಳೂರು ಮಧ್ಯೆ ವಿಶೇಷ ರೈಲು (ಸಾಂದರ್ಭಿಕ ಚಿತ್ರ)
Follow us on

ಬೆಂಗಳೂರು, ಅಕ್ಟೋಬರ್ 21: ದೀಪಾವಳಿ ಹಬ್ಬಕ್ಕೆ ಇನ್ನು ಕೆಲವೇ ದಿನಗಳಿದ್ದು, ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸುವ ದೃಷ್ಟಿಯಿಂದ ನೈಋತ್ಯ ರೈಲ್ವೆ ವಿಶೇಷ ರೈಲುಗಳನ್ನು ಘೋಷಿಸಿದೆ. ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್-ಕಾರವಾರ ಮತ್ತು ಯಶವಂತಪುರ-ಮಂಗಳೂರು ಜಂಕ್ಷನ್ ನಿಲ್ದಾಣಗಳ ಮಧ್ಯೆ ಒಂದು ಟ್ರಿಪ್ ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿದೆ.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಸರಿದೂಗಿಸುವ ಸಲುವಾಗಿ ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್-ಕಾರವಾರ ಮತ್ತು ಯಶವಂತಪುರ-ಮಂಗಳೂರು ಜಂಕ್ಷನ್ ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲುಗಳನ್ನು ಓಡಿಸಲು ನೈಋತ್ಯ ರೈಲ್ವೆ ವಲಯವು ನಿರ್ಧರಿಸಿದೆ ಎಂದು ನೈಋತ್ಯ ರೈಲ್ವೆ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರಕಟಣೆ ನೀಡಿದೆ.

ನೈಋತ್ಯ ರೈಲ್ವೆ ಎಕ್ಸ್​ ಸಂದೇಶ


ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ವೇಳಾಪಟ್ಟಿ

ರೈಲು ಸಂಖ್ಯೆ 06597 / 06598 ಎಸ್‌ಎಂವಿಟಿ ಬೆಂಗಳೂರು – ಕಾರವಾರ, ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ಸ್ಪೆಷಲ್ ವಿವರಗಳು ಈ ಕೆಳಗಿನಂತಿವೆ;

ರೈಲು ಸಂಖ್ಯೆ 06597 ಅಕ್ಟೋಬರ್ 30 ರಂದು ಮಧ್ಯಾಹ್ನ 1 ಗಂಟೆಗೆ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್, ಬೆಂಗಳೂರು ನಿಲ್ದಾಣದಿಂದ ಹೊರಟು ಮರುದಿನ ಬೆಳಿಗ್ಗೆ 4 ಗಂಟೆಗೆ ಕಾರವಾರ ನಿಲ್ದಾಣವನ್ನು ತಲುಪಲಿದೆ.

ರೈಲು ಸಂಖ್ಯೆ 06598 ಅಕ್ಟೋಬರ್ 31 ರಂದು ಮಧ್ಯಾಹ್ನ 12 ಗಂಟೆಗೆ ಕಾರವಾರ ನಿಲ್ದಾಣದಿಂದ ಹೊರಟು ಮರುದಿನ ಬೆಳಿಗ್ಗೆ 4 ಗಂಟೆಗೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್, ಬೆಂಗಳೂರು ನಿಲ್ದಾಣವನ್ನು ತಲುಪಲಿದೆ.

ಎಲ್ಲೆಲ್ಲಿ ನಿಲುಗಡೆ?

ಈ ವಿಶೇಷ ರೈಲು ಚಿಕ್ಕಬಣಾವರ, ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಮಣ್ಯ ರೋಡ್, ಕಬಕ ಪುತ್ತೂರು, ಬಂಟ್ವಾಳ, ಸುರತ್ಕಲ್, ಮುಲ್ಕಿ, ಉಡುಪಿ, ಬರ್ಕೂರು, ಕುಂದಾಪುರ, ಬೈಂದೂರು, ಭಟ್ಕಳ, ಮುರುಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್ ಮತ್ತು ಅಂಕೋಲಗಳಲ್ಲಿ ನಿಲುಗಡೆ ಹೊಂದಿರಲಿದೆ.

ಈ ರೈಲಿನಲ್ಲಿ 4 ಜನರಲ್ ಸೆಕೆಂಡ್ ಕ್ಲಾಸ್ ಬೋಗಿಗಳು, 10 ಸ್ವೀಪರ್ ಕ್ಲಾಸ್ ಬೋಗಿಗಳು, 2 ಎಸಿ 3 ಟಯರ್ ಬೋಗಿಗಳು ಮತ್ತು 2 ಸೆಕೆಂಡ್ ಕ್ಲಾಸ್ ಲಗೇಜ್/ಬ್ರೇಕ್ ವ್ಯಾನ್ಸ್ ಮತ್ತು ಅಂಗವಿಕಲರ ಬೋಗಿಗಳು ಸೇರಿದಂತೆ ಒಟ್ಟು 12 ಬೋಗಿಗಳು ಇರಲಿವೆ.

ಯಶವಂತಪುರ ಎಕ್ಸ್‌ಪ್ರೆಸ್‌ ಸ್ಪೆಷಲ್ ವೇಳಾಪಟ್ಟಿ

ಯಶವಂತಪುರ ಮಂಗಳೂರು ಮಧ್ಯೆ ಸಂಚರಿಸುವ ಯಶವಂತಪುರ ಎಕ್ಸ್‌ಪ್ರೆಸ್‌ ಸ್ಪೆಷಲ್ 06565 / 06566 ವಿವರಗಳು ಹೀಗಿವೆ;

ರೈಲು ಸಂಖ್ಯೆ 06565 ಅಕ್ಟೋಬರ್ 30 ರಂದು ರಾತ್ರಿ 11.50ಕ್ಕೆ ಯಶವಂತಪುರ ನಿಲ್ದಾಣದಿಂದ ಹೊರಟು ಮರುದಿನ ಬೆಳಿಗ್ಗೆ 11.45 ಕ್ಕೆ ಮಂಗಳೂರು ಜಂಕ್ಷನ್ ನಿಲ್ದಾಣವನ್ನು ತಲುಪಲಿದೆ.

ರೈಲು ಸಂಖ್ಯೆ 06566 ಅಕ್ಟೋಬರ್ 31 ರಂದು ಮಧ್ಯಾಹ್ನ 1 ಗಂಟೆಗೆ ಮಂಗಳೂರು ಜಂಕ್ಷನ್ ನಿಲ್ದಾಣದಿಂದ ಹೊರಟು ರಾತ್ರಿ 9:15 ಗಂಟೆಗೆ ಯಶವಂತಪುರ ನಿಲ್ದಾಣವನ್ನು ತಲುಪಲಿದೆ.

ಎಲ್ಲೆಲ್ಲಿ ನಿಲುಗಡೆ?

ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಮಣ್ಯ ರೋಡ್, ಕಬಕಪುತ್ತೂರು ಮತ್ತು ಬಂಟ್ವಾಳಗಳಲ್ಲಿ ನಿಲುಗಡೆ ಹೊಂದಿರಲಿದೆ.

ಈ ರೈಲು 4 ಜನರಲ್ ಸೆಕೆಂಡ್ ಕ್ಲಾಸ್ ಬೋಗಿಗಳು, 7 ಸ್ವೀಪರ್ ಕ್ಲಾಸ್ ಬೋಗಿಗಳು, 6 ಎಸಿ 3 ಟಯರ್ ಬೋಗಿಗಳು, 2 ಎಸಿ ಟೂ-ಟಯರ್ ಬೋಗಿಗಳು ಮತ್ತು 2 ಲಗೇಜ್/ಬ್ರೇಕ್ ವ್ಯಾನ್ಸ್ ಕಮ್ ಜೆನರೇಟರ್ ಕಾರ್ ಸೇರಿದಂತೆ ಒಟ್ಟು 21 ಬೋಗಿಗಳನ್ನು ಹೊಂದಿರಲಿದೆ.

ಇದನ್ನೂ ಓದಿ: ಕಲಬುರಗಿ ಬೆಂಗಳೂರು ನಡುವೆ 2 ವಿಶೇಷ ರೈಲು: ಹೊರಡುವ ಸಮಯ, ನಿಲುಗಡೆ ಇತ್ಯಾದಿ ಮಾಹಿತಿ ಇಲ್ಲಿದೆ

ಪ್ರಯಾಣಿಕರು ರೈಲಿನ ಸಮಯ ಹಾಗೂ ಇತರ ವಿವರಗಳನ್ನು ಅಧಿಕೃತ ವೆಬ್‌ಸೈಟ್ ಆದ www.enquiry.Indianrail.gov.in ಇದರಲ್ಲಿ ಪರಿಶೀಲಸಬಹುದು. ಅಥವಾ NTES ಆ್ಯಪ್ ಮೂಲಕ ಅಥವಾ 139 ಕ್ಕೆ ಕರೆಮಾಡುವುದರ ಮೂಲಕ ತಿಳಿದುಕೊಳ್ಳಬಹುದು ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ