
ಬೆಂಗಳೂರು/ದೆಹಲಿ, ಅಕ್ಟೋಬರ್ 22: ಮೈಸೂರು ದಸರಾ ಮಹೋತ್ಸವದಲ್ಲಿ ಬ್ಯುಸಿ ಆಗಿದ್ದ ಸಿಎಂ ಡಿಕೆ ಶಿವಕುಮಾರ್, ನಾಡಹಬ್ಬ ಮುಗಿಯುತ್ತಿದ್ದಂತೆ ಇಂದು ದೆಹಲಿಗೆ ಹಾರಿದ್ದಾರೆ. ಕರ್ನಾಟಕಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಚರ್ಚೆ ಮಾಡಲು ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದಾರೆ. ಅದರಲ್ಲೂ ಪ್ರಮುಖವಾಗಿ, ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಿ, ಶರಾವತಿ ಪಂಪ್ಡ್ ಸ್ಟೋರೇಜ್ ಮತ್ತು ಮೇಕೆದಾಟು ಯೋಜನೆಗೆ ಅನುಮೋದನೆಗೆ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ.
ದೆಹಲಿಯ ಪರಿಸರ ಭವನದಲ್ಲಿ ಕೇಂದ್ರ ಸಚಿವ ಭೂಪೇಂದ್ರ ಯಾದವ್ರನ್ನ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್, ಶರಾವತಿ ಪಂಪ್ಡ್ ಸ್ಟೋರೇಜ್ ಮತ್ತು ಮೇಕೆದಾಟು ಯೋಜನೆಗಳ ಪ್ರಸ್ತಾವನೆಗಳನ್ನ ಶೀಘ್ರ ಪರಿಶೀಲಿಸಿ ಶಿಫಾರಸು ಮಾಡುವಂತೆ ಮನವಿ ಸಲ್ಲಿಸಿದರು.
ಇದನ್ನೂ ಓದಿ: ಸಿಎಂ ಡಿಕೆಶಿ ದೆಹಲಿ ಭೇಟಿಯ ಹಿಂದಿರುವ ಅಸಲಿ ಕಾರಣ ಬಿಚ್ಚಿಟ್ಟ ಡಿಸಿಎಂ ಪರಮೇಶ್ವರ್: ಇಲ್ಲಿದೆ ಮಾಹಿತಿ
ಕಸ್ತೂರಿ ರಂಗನ್ ವರದಿ ಭೌತಿಕ ಸಮೀಕ್ಷೆ ಮುಗಿಯುವವರೆಗೆ ಕರಡು ಅಧಿಸೂಚನೆ ಅಂತಿಮಗೊಳಿಸಬಾರದು. ಬೆಳಗಾವಿಯ ಎಕೊ ಕೇನ್ ಸಕ್ಕರೆ ಕಾರ್ಖಾನೆಯನ್ನ ಪರಿಸರ ಸೂಕ್ಷ್ಮ ವಲಯದಿಂದ ಕೈಬಿಡಬೇಕು. ಏಕೆಂದರೆ 500 ಕಾರ್ಮಿಕರು, 5000 ಕುಟುಂಬ ಕಾರ್ಖಾನೆ ಅವಲಂಬಿಸಿವೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.
ಇನ್ನು ಕೇಂದ್ರ ಸಂವಹನ ಹಾಗೂ ಈಶಾನ್ಯ ವಲಯ ಅಭಿವೃದ್ಧಿ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಸಿಎಂ ಡಿಕೆ ಶಿವಕುಮಾರ್ ಭೇಟಿ ಮಾಡಿದ್ದಾರೆ. ಈ ವೇಳೆ ಕರ್ನಾಟಕದಲ್ಲಿ ದೂರಸಂಪರ್ಕ ಮತ್ತು ಡಿಜಿಟಲ್ ಸಂಪರ್ಕ ವ್ಯವಸ್ಥೆಯನ್ನು ಬಲಪಡಿಸುವ ಅವಕಾಶಗಳ ಕುರಿತು ಚರ್ಚೆ ಮಾಡಿದ್ದಾರೆ.
ಕೇಂದ್ರ ಸಚಿವರ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ‘ಕೇಂದ್ರ ಸಚಿವ ಭೂಪೇಂದ್ರ ಯಾದವ್ರನ್ನ ಭೇಟಿಯಾದೆ. ನಾನು ಇಂದು ಕಸ್ತೂರಿ ರಂಗನ್, ಮೇಕೆದಾಟು ವಿಚಾರ ಮಾತನಾಡಿದೆ. ಮೇಕೆದಾಟು ವಿಚಾರದಲ್ಲಿ ಅನುಮತಿ ಕೇಳಿದ್ದೇವೆ. ಕಸ್ತೂರಿ ರಂಗನ್ ವಿಚಾರವಾಗಿ ಸಂಬಂಧಪಟ್ಟ ಪಕ್ಕದ ರಾಜ್ಯದವರನ್ನು ಕರೆಸುತ್ತೇವೆ ಅಂತ ಹೇಳಿದ್ದೇನೆ. ಅದಕ್ಕೆ ಸಮಯ ಕೊಡುವುದಾಗಿ ಹೇಳಿದ್ದಾರೆ. ಮಹದಾಯಿ ವಿಚಾರದಲ್ಲಿ ಕಾನೂನಾತ್ಮಕ ವಿಚಾರವನ್ನ ತಿಳಿಸಿದ್ದೇನೆ. 3 ರಾಜ್ಯಗಳ ಸಿಎಂಗಳನ್ನ ಕರೆಸಿ ಮಾತನಾಡುತ್ತೇವೆ’ ಎಂದು ಹೇಳಿದ್ದಾರೆ ಎಂದರು.
‘ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಪತ್ರ ಬರೆದಿದ್ದು ನನಗೆ ಈಗ ಗೊತ್ತಾಯ್ತು. ನಾನು ಸಿಎಂ ಎಂದು ಒಪ್ಪಿಕೊಳ್ಳುವುದಕ್ಕೇ ತಯಾರಿರಲಿಲ್ಲ. ಈಗ ಮಾನ್ಯ ಮುಖ್ಯಮಂತ್ರಿಗಳೇ ಅಂತ ಪತ್ರ ಬರೆದಿದ್ದಾರೆ. ಇವತ್ತು ಕುಮಾರಸ್ವಾಮಿ ಪತ್ರ ಬರೆದಿದ್ದಾರೆ, ನಾನು ನೋಡಿಲ್ಲ. ಪತ್ರದಲ್ಲೇನಿದೆ ನೋಡಿ, ಮುಂದಿನ ನಿರ್ಧಾರ ಮಾಡುತ್ತೇನೆ. ಒಳ್ಳೆಯದನ್ನ ಮಾಡುವುದಕ್ಕೆ ನಾವು ಸಹಕಾರ ಕೊಡೋಣ. ಎಲ್ಲಿ ಜಾಗ ಇದೆ ಎಂದು ನೋಡೋಣ. ಕೈಗಾರಿಕಾ ಸಚಿವರ ಜತೆ ನಾನು ಚರ್ಚೆ ಮಾಡುತ್ತೇನೆ. ಅಲ್ಲಿ ಏನೇನಾಗಿದೆ ನೋಡೋಣ, ಚರ್ಚಿಸಿ ತೀರ್ಮಾನ ಮಾಡುತ್ತೇವೆ’ ಎಂದಿದ್ದಾರೆ.
ಖಾಲಿ ಇರುವ ಸಚಿವ ಸ್ಥಾನಭರ್ತಿ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ಕೆ.ಸಿ.ವೇಣುಗೋಪಾಲ್ ಜೊತೆ ಚರ್ಚೆ ಮಾಡಲಾಗಿದೆ. ರಾಹುಲ್ ಗಾಂಧಿ ಜೊತೆ ಚರ್ಚಿಸ್ತೇನೆ ಎಂದು ಹೇಳಿದ್ದಾರೆ. ಕೆಲವು ಶಾಸಕರಿಗೆ ಅಧಿಕಾರ ಹಂಚಬೇಕಾಗಿದೆ. ಸ್ಟಿಂಗ್ ಆಪರೇಷನ್ ಬಗ್ಗೆ ವರಿಷ್ಠರ ಜೊತೆ ಚರ್ಚಿಸಿಲ್ಲ. ಕಾರ್ಯಕರ್ತರಿಗೆ 3-4 ದಿನಗಳಲ್ಲಿ ಜವಾಬ್ದಾರಿ ಹಂಚಿಕೆ ಮಾಡಲಾಗುವುದು’ ಎಂದು ಹೇಳಿದ್ದಾರೆ.
ವರದಿ: ನಟರಾಜ್
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:41 pm, Thu, 22 October 26