ದೇವನಹಳ್ಳಿ: ಮೂರು ವರ್ಷಗಳಿಂದ ನಿಂತಲ್ಲೆ ನಿಂತ ರಸ್ತೆ ಕಾಮಗಾರಿ; ಹಾರಿ ಹೋಯ್ತು ಓರ್ವನ ಪ್ರಾಣ ಪಕ್ಷಿ
ನೆಲಮಂಗಲದಿಂದ ಏರ್ಪೋಟ್ಗೆ ಸಂಪರ್ಕ ಕಲ್ಪಿಸೂ ರಸ್ತೆಯಲ್ಲಿ ವಾಹನ ಸವಾರರ ಪರದಾಡುತ್ತಿದ್ದಾರೆ. ಮೇಲ್ದರ್ಜೇಗೇರಿಸುವ ಈ ರಸ್ತೆ ಕಾಮಗಾರಿಯ ನಿರ್ಲಕ್ಷ್ಯಕ್ಕೆ ಈಗಾಗಲೇ ಓರ್ವನ ಬಲಿಯಾಗಿದೆ.
ದೇವನಹಳ್ಳಿ: ಸಿಲಿಕಾನ್ ಸಿಟಿಯಿಂದ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯನ್ನು ಮೇಲ್ದರ್ಜೆಗೆ ಏರಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಅಂದುಕೊಂಡಂತೆ ಆಗಿದ್ದಿದ್ದರೆ ಇಷ್ಟೊತ್ತಿಗೆ ಕಾಮಗಾರಿ ಪೂರ್ಣವಾಗಿ ವಾಹನಗಳ ಸುಗಮ ಸಂಚಾರ ಆಗುತ್ತಿತ್ತು. ಆದರೆ ಕಳೆದ ಮೂರು ವರ್ಷಗಳಿಂದ ಕಾಮಗಾರಿ ಸ್ಥಗಿತಗೊಂಡ ಪರಿಣಾಮ ಹೆದ್ದಾರಿಯೇ ಸಾವಿನ ರಹದಾರಿಯಾಗಿ ಪರಿಣಮಿಸಿದೆ. ಹೆದ್ದಾರಿಯಲ್ಲಿ ಸಂಚಾರ ನಡೆಸಲು ವಾಹನ ಸವಾರರು ಪರದಾಡುತ್ತಿದ್ದು, ಬೈಕ್ ಅಪಘಾತಕ್ಕೀಡಾಗಿ ಅಮಾಯಕ ಯುವಕನೊಬ್ಬ ಸಾವನ್ನಪ್ಪಿರುವ ಘಟನೆಯೊಂದು ನಡೆದಿದೆ.
ಯಲಹಂಕ ತಾಲೂಕಿನ ರಾಜಾನುಕುಂಟೆಯಲ್ಲಿ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ ಪ್ರದೀಪ್ ಅಪಘಾತದಲ್ಲಿ ಮೃತಪಟ್ಟ ದುರ್ದೈವಿಯಾಗಿದ್ದಾನೆ. ಶನಿವಾರ (ಅ.29) ರಾತ್ರಿ ರಾಜಾನುಕುಂಟೆ ಪಕ್ಕದಲ್ಲಿರುವ ಇಟಗಲ್ ಪುರ ಗ್ರಾಮದ ಮನೆಗೆ ಪ್ರದೀಪ್ ಬೈಕ್ ಮೂಲಕ ತೆರಳುತ್ತಿದ್ದ. ಈ ವೇಳೆ ರಾತ್ರಿ ಮಳೆ ಕೂಡ ಜೋರಾಗಿ ಬರುತ್ತಿತ್ತು. ಇದರಿಂದಾಗಿ ಸರಿಯಾಗಿ ರಸ್ತೆ ಕಾಣದ ಪರಿಣಾಮ ಹೆದ್ದಾರಿ ನಿರ್ಮಾಣಕ್ಕೆ ಅಂತ ಸುರಿದಿದ್ದ ಕಲ್ಲುಗಳ ಮೇಲೆ ಬೈಕ್ ಹತ್ತಿ ದುರ್ಘಟನೆ ಸಂಭವಿಸಿದೆ.
ಕಲ್ಲುಗಳ ಮೇಲೆ ಬೈಕ್ ಹತ್ತುತ್ತಿದ್ದಂತೆ ಸವಾರ ಪ್ರದೀಪನ ನಿಯಂತ್ರಣ ತಪ್ಪಿದ್ದು ರಸ್ತೆ ಪಕ್ಕದಲ್ಲಿದ್ದ ಮರಕ್ಕೆ ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ಸವಾರ ಪ್ರದೀಪ್ ಗಂಭೀರವಾಗಿ ಗಾಯಗೊಂಡಿದ್ದನು. ಕೂಡಲೇ ಸ್ಥಳಿಯರು ಪ್ರದೀಪನನ್ನ ಸ್ಥಳಿಯ ಆಸ್ವತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಆಸ್ವತ್ರೆಯಲ್ಲಿ ಸಾವನ್ನಪಿದ್ದಾನೆ.
ಕಳೆದ ಮೂರು ವರ್ಷಗಳಿಂದ ನೆಲಮಂಗಲದಿಂದ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣಕ್ಕೆ ಸಂಪರ್ಕ ಕಲ್ಪಿಸುವ ನೆಲಮಂಗಲ ಕಾಕೋಳು ರಾಜಾನುಕುಂಟೆ ಮಾರ್ಗವನ್ನ ಹೆದ್ದಾರಿಯಾಗಿ ಬದಲಾಯಿಸಲು ರಾಜ್ಯ ಸರ್ಕಾರ ಗುತ್ತಿಗೆ ನೀಡಿತ್ತು. ಆದರೆ ಹೆದ್ದಾರಿ ನಿರ್ಮಾಣ ಕಾಮಗಾರಿ ಆರಂಭಿಸಿದ ಗುತ್ತಿಗೆದಾರರು ಮೂರು ವರ್ಷ ಕಳೆದು ನಾಲ್ಕು ವರ್ಷವಾಗುತ್ತಾ ಬಂದರೂ ಈ ವರೆಗೂ ಕಾಮಗಾರಿ ಪೂರ್ಣಗೊಳಿಸಲಿಲ್ಲ.
ಗ್ರಾಮೀಣ ಭಾಗದ ಬಳಿ ರಸ್ತೆಯನ್ನ ಕೆಡವಿ ಹಾಗೆ ಬಿಟ್ಟಿದ್ದು ಪ್ರತಿನಿತ್ಯ ಒಂದೊಂದು ಅಪಘಾತವಾಗುತ್ತಿದೆ. ಅದೇ ರೀತಿ ಶನಿವಾರ ರಾತ್ರಿ ಸಹ ಇದೇ ಕುಂಟುತ್ತಾ ಸಾಗಿರುವ ಹೆದ್ದಾರಿ ಕಾಮಗಾರಿಯಿಂದ ರಸ್ತೆ ಸರಿಯಾಗಿ ಕಾಣದೆ ಪ್ರದೀಪ ಬೈಕ್ನಿಂದ ಬಿದ್ದು ಸಾವನ್ನಪಿದ್ದು ಮೃತನ ಸಾವಿಗೆ ಕಾಮಗಾರಿಯ ನಿರ್ಲಕ್ಷ್ಯವಏ ಕಾರಣ ಅಂತ ಸ್ಥಳಿಯರು ಆರೋಪಿಸಿದ್ದಾರೆ.
ಒಟ್ಟಾರೆ ಜೀವನದಲ್ಲಿ ಸಾಕಷ್ಟು ಆಸೆಗಳನ್ನ ಹೊತ್ತು ಸಾಗಿದ್ದ ಯುವಕ ಹೆದ್ದಾರಿ ಕಾಮಗಾರಿಯ ನಿರ್ಲಕ್ಷ್ಯಕ್ಕೆ ಬಲಿಯಾಗಿದ್ದು ಮಾತ್ರ ನಿಜಕ್ಕೂ ವಿಪರ್ಯಾಸ. ಇನ್ನೂ ವರ್ಷಗಳಿಂದ ನೆನೆಗುಂದಿಗೆ ಬಿದ್ದಿರುವ ಕಾಮಗಾರಿಯಿಂದ ಸುತ್ತಾಮುತ್ತಲಿನ ಜನ ಹೈರಾಣಾಗಿದ್ದಾರೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಹೆದ್ದಾರಿ ಕಾಮಗಾರಿ ಮುಗಿಸುವ ಮೂಲಕ ಮತ್ತೋಮ್ಮೆ ಇಂತಹ ದುರ್ಘಟನೆಗಳು ನಡೆಯದಂತೆ ಎಚ್ಚರವಹಿಸಬೇಕಿದೆ.
ವರದಿ: ನವೀನ್, ಟಿವಿ9 ದೇವನಹಳ್ಳಿ
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:31 am, Mon, 31 October 22