ಕಾರವಾರದಲ್ಲಿ ರಾಮನಾಥ ಜಾತ್ರೆ ಸಂಭ್ರಮ: ವಿವಾಹಕ್ಕೂ ಮುನ್ನ ಹೆಣ್ಮಕ್ಕಳು ದೀವಜ ನೀಡಬೇಕು, ಇಲ್ಲದಿದ್ದಲ್ಲಿ ಮದುವೆಯಾಗುವಂತಿಲ್ಲ!
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮಾಜಾಳಿ ಗ್ರಾಮದಲ್ಲಿ ನಡೆಯುವ ರಾಮನಾಥ ಜಾತ್ರೆಯ ಅದ್ಭುತ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಭಕ್ತ ಸಾಗರವೇ ಹರಿದು ಬಂದಿತ್ತು. ಪ್ರತಿವರ್ಷ ಗ್ರಾಮದಲ್ಲಿ ರಾಮನಾಥ ದೇವರಿಗೆ ವಿಶಿಷ್ಟ ರೀತಿಯಲ್ಲಿ ಹರಕೆ ತೀರಿಸುವ ಮೂಲಕ ವಿಜೃಂಭಣೆಯಿಂದ ಜಾತ್ರೆಯನ್ನ ಆಚರಿಸಲಾಗುತ್ತೆ.
ಕಾರವಾರ: ತಲತಲಾಂತರದಿಂದ ನಡೆದುಕೊಂಡು ಬಂದಿರುವ ಮಾಜಾಳಿ ರಾಮನಾಥ ಜಾತ್ರೆ ನಿನ್ನೆ ಅದ್ದೂರಿಯಾಗಿ ನಡೆದಿದೆ. ಈ ಜಾತ್ರೆಗೆ ವಿಶೇಷ ರೀತಿಯಲ್ಲಿ ಹರಕೆ ಹೊತ್ತ ಮಹಿಳೆಯರು ಉಪವಾಸವಿದ್ದು ವ್ರತ ಪೂರೈಸುತ್ತಾರೆ. ರಾಜ್ಯದಲ್ಲಿ ನಡೆಯುವ ಈ ಉತ್ಸವಕ್ಕೆ ವಿವಿಧ ರಾಜ್ಯದ ಜನರು ಆಗಮಿಸಿ ಸಂಭ್ರಮಿಸುತ್ತಾರೆ. ಬಣ್ಣ ಬಣ್ಣದ ಸೀರೆ, ಮುಡಿ ತುಂಬಾ ಹೂ ದೀಪದ ಕುಂಡಗಳನ್ನ ಹೊತ್ತು ನಾರಿಯರು ಭಕ್ತಿ ಪ್ರದರ್ಶಿಸುತ್ತಾರೆ. ಹೊಟ್ಟೆಗೆ ದಾರ ಪೋಣಿಸಿಕೊಂಡು ಭಕ್ತಿಯ ಪರಾಕಾಷ್ಟೆ ಮೆರೆಯುತ್ತಾರೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮಾಜಾಳಿ ಗ್ರಾಮದಲ್ಲಿ ನಡೆಯುವ ರಾಮನಾಥ ಜಾತ್ರೆಯ ಅದ್ಭುತ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಭಕ್ತ ಸಾಗರವೇ ಹರಿದು ಬಂದಿತ್ತು. ಪ್ರತಿವರ್ಷ ಗ್ರಾಮದಲ್ಲಿ ರಾಮನಾಥ ದೇವರಿಗೆ ವಿಶಿಷ್ಟ ರೀತಿಯಲ್ಲಿ ಹರಕೆ ತೀರಿಸುವ ಮೂಲಕ ವಿಜೃಂಭಣೆಯಿಂದ ಜಾತ್ರೆಯನ್ನ ಆಚರಿಸಲಾಗುತ್ತೆ. ವಿಶೇಷ ಏನಂದ್ರೆ ಮಾಘ ಹುಣ್ಣಿಮೆಯಂದು ಮಹಿಳೆಯರು ಉಪವಾಸ ಇದ್ದು ಐದು, ಏಳು, ಒಂಬತ್ತು ದೀಪಗಳಿರುವ ಕುಂಡವನ್ನು ತಲೆಮೇಲೆ ಹೊತ್ತು ತರುತ್ತಾರೆ. ಬಳಿಕ ದೇವಸ್ಥಾನದ ಆವರಣದಲ್ಲಿ ಕುಳಿತು ದೇವರ ಸ್ಮರಣೆ ಮಾಡ್ತಾರೆ. ಇದ್ರಿಂದ ಮದುವೆ ಆಗದವರಿಗೆ ಕಂಕಣಭಾಗ್ಯ, ಮಕ್ಕಳಾಗದವರಿಗೆ ಮಕ್ಕಳ ಭಾಗ್ಯ ಸಿಗುತ್ತೆ ಎಂಬ ನಂಬಿಕೆಯಿದೆ.
ಇನ್ನು ಬಾಲಕರು ಮತ್ತು ಪ್ರೌಢಾವಸ್ಥೆಯಲ್ಲಿರುವ ಗಂಡ್ಮಕ್ಕಳು ಹೊಟ್ಟೆಗೆ ದಾರ ಪೋಣಿಸಿಕೊಳ್ಳುವುದರ ಮೂಲಕ ಭಕ್ತಿ ಸಮರ್ಪಿಸುತ್ತಾರೆ. ದೇವರ ಬಂಡಿಗೆ ಹೂವಿನ ಅಲಂಕಾರ ಮಾಡಿ ಉತ್ಸವ ನಡೆಸುತ್ತಾರೆ. ಮಾಜಾಳಿ ಗ್ರಾಮದ ನಡುವಿರುವ ರಾಮನಾಥ ದೇವರಿಗೆ 18 ಪರಿವಾರ ದೇವರುಗಳಿವೆ. ಧಾಡ್ ಮತ್ತು ಮಾರಿಕಾ ದೇವರುಗಳು ಮುಖ್ಯ ದೇವರುಗಳು. ಅನಾದಿ ಕಾಲದಿಂದಲೂ ಇಲ್ಲಿ ಜಾತ್ರೆ ನಡೆಯುತ್ತಾ ಬಂದಿವೆ. ಇನ್ನು ರಾಮನಾಥ ದೇವರಿಗೆ ವಿವಾಹ ಪೂರ್ವದಲ್ಲಿ ಹೆಣ್ಣುಮಕ್ಕಳು ಈ ರೀತಿ ದೀಪ ಹಚ್ಚಿ ದೀವಜ ನೀಡಲೇಬೇಕು. ಇಲ್ಲದಿದ್ದಲ್ಲಿ ಮದುವೆಯಾಗುವಂತಿಲ್ಲ. ಅಲ್ಲದೇ ರಾಮನಾಥ ದೇವರ ಕುಳಾವಿ ಮನೆತನಕ್ಕೆ ಬಂದ ಮಹಿಳೆಯರು ಕೂಡ ಪ್ರಥಮ ವರ್ಷದ ಜಾತ್ರೆಯಲ್ಲಿಯೇ ಕಡ್ಡಾಯವಾಗಿ ದೀವಜ ನೀಡಲೇಬೇಕು. ಹೀಗಾಗಿ ಬಾಲಕಿಯರಿಂದ ಹಿಡಿದು ಮಹಿಳೆಯರು ದೇವರಿಗೆ ದೀವಜ ನೀಡುವ ಪರಂಪರೆಯಿದೆ. ವಿಶೇಷ ಆಚರಣೆ ಮೂಲಕ ಹೆಸರಾದ ಜಾತ್ರೆ ಈ ಸಾರಿ ಸಂಪನ್ನವಾಗಿದೆ ಹೀಗೆ ಹತ್ತು ಹಲವು ವಿಶೇಷತೆಗಳಿರುವ ಈ ಜಾತ್ರೆಗೆ ಗೋವಾ ಮತ್ತು ಮಹಾರಾಷ್ಟ್ರದಿಂದಲೂ ಭಕ್ತರು ಆಗಮಿಸುವುದು ಮತ್ತೊಂದು ವಿಶೇಷ.
ಒಟ್ಟಾರೆ 2 ದಿನ ನಡೆಯುವ ಈ ವಿಶೇಷ ಉತ್ಸವಕ್ಕೆ ಸಹಸ್ರಾರು ಭಕ್ತರು ಭೇಟಿ ನೀಡಿದ್ರು. ಈ ಮೂಲಕ ತಲತಲಾಂತರದಿಂದ ನಡೆಸಿಕೊಂಡು ಬಂದಿರುವ ಆಚರಣೆಯಲ್ಲಿ ತಾವೂ ಭಾಗಿಯಾಗಿದ್ರು.
ವರದಿ: ವಿನಾಯಕ ಬಡಿಗೇರ, ಟಿವಿ9, ಕಾರವಾರ
ಇದನ್ನೂ ಓದಿ: ದೇವನಹಳ್ಳಿ: ರತ್ನಖಚಿತ ವಜ್ರಾಭರಣಗಳ ಜಾತ್ರೆ; ಸರ್ಕಾರದ ಖಜಾನೆಯಿಂದ ಹೊರಬಂದ ಆಭರಣ ನೋಡಲು ಮುಗಿಬಿದ್ದ ಭಕ್ತರು
Published On - 1:40 pm, Fri, 18 February 22