ಧರ್ಮಸ್ಥಳ ಪ್ರಕರಣ: ಬೆಂಗಳೂರಿನಲ್ಲೇ ಷಡ್ಯಂತ್ರಕ್ಕೆ ಮಹಾ ಸ್ಕೆಚ್, ಚಿನ್ನಯ್ಯ ಸಮ್ಮುಖದಲ್ಲೇ ಎಸ್ಐಟಿಯಿಂದ ಮಹಜರು
ಧರ್ಮಸ್ಥಳ ಪ್ರಕರಣದ ತನಿಖೆಯಲ್ಲಿ ಬೆಂಗಳೂರಿನ ಸರ್ವೀಸ್ ಅಪಾರ್ಟ್‌ಮೆಂಟ್‌ನಲ್ಲಿ ಐವರು ಆರೋಪಿಗಳು ಷಡ್ಯಂತ್ರ ರೂಪಿಸಿದ್ದ ಬಗ್ಗೆ ಎಸ್‌ಐಟಿಗೆ ಮಹತ್ವದ ಮಾಹಿತಿ ಸಿಕ್ಕಿದೆ. ಸ್ಥಳದಲ್ಲಿ ಮಾಸ್ಕ್ಮ್ಯಾನ್ ಚಿನ್ನಯ್ಯನ ಕರೆತಂದು ಎಸ್ಐಟಿ ಮಹಜರು ಪ್ರಕ್ರಿಯೆ ನಡೆಸಿದೆ. ಅಪಾರ್ಟ್‌ಮೆಂಟ್‌ನಲ್ಲಿನ ದಾಖಲೆಗಳು ಮತ್ತು ಸಿಸಿಟಿವಿ ದೃಶ್ಯಗಳನ್ನೂ ಪರಿಶೀಲಿಸಲಾಗಿದೆ. ಎಸ್ಐಟಿ ತನಿಖೆ ಕುರಿತು ‘ಟಿವಿ9’ ವರದಿಗಾರ ವಿಕಾಸ್ ಮಾಡಿರುವ ವರದಿ ಇಲ್ಲಿದೆ.

ಬೆಂಗಳೂರು, ಆಗಸ್ಟ್ 31: ಧರ್ಮಸ್ಥಳದಲ್ಲಿ (Dharmasthala) ನೂರಾರು ಶವಗಳನ್ನು ಹೂತಿಟ್ಟಿದ್ದೇನೆ ಎಂದಿದ್ದ ಚಿನ್ನಯ್ಯನ ಹಿಂದಿರುವ ಗ್ಯಾಂಗ್ನ ಅಸಲಿ ಮುಖವಾಡ ಕಳಚಿದೆ. ಧರ್ಮಸ್ಥಳದಿಂದ ಬೆಂಗಳೂರಿಗೆ ಜಾಡು ಹಿಡಿದು ಬಂದ ಎಸ್‌ಐಟಿಗೆ ಮಹತ್ವದ ಮಾಹಿತಿ ಸಿಕ್ಕಿದೆ. ಬೆಂಗಳೂರಿನಲ್ಲಿ 2ನೇ ದಿನವೂ ಎಸ್ಐಟಿ ಶೋಧ ನಡೆಸಿದೆ. ಶನಿವಾರವಷ್ಟೇ ಪೀಣ್ಯದಲ್ಲಿರುವ ಜಯಂತ್.ಟಿ ಮನೆಯಲ್ಲೂ ಚಿನ್ನಯ್ಯನ ಸಮ್ಮುಖದಲ್ಲೇ ಸ್ಥಳ ಮಹಜರು ಮಾಡಲಾಗಿತ್ತು. ಇದೀಗ ಜಾಡು ಹಿಡಿದು ತನಿಖೆಯಲ್ಲಿ ಮುಂದೆ ಸಾಗಿದ ಎಸ್‌ಐಟಿಗೆ ಸರ್ವೀಸ್ ಅಪಾರ್ಟ್ಮೆಂಟ್ ಮಾಹಿತಿ ಸಿಕ್ಕಿದೆ.
‘ಬುರುಡೆ’ ಕಥೆ ಹೇಳುವುದಕ್ಕೂ ಮುನ್ನ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೇ ಐವರ ಗ್ಯಾಂಗ್ ಷಡ್ಯಂತ್ರ ರೂಪಿಸಿರುವ ಸ್ಫೋಟಕ ಮಾಹಿತಿ ಎಸ್ಐಟಿ ತನಿಖೆಯಲ್ಲಿ ಬಯಲಾಗಿದೆ. ಇದೇ ಸರ್ವೀಸ್ ಅಪಾರ್ಟ್‌ಮೆಂಟ್‌ನಲ್ಲಿ ಬುರುಡೆ ಗ್ಯಾಂಗ್ ಷಡ್ಯಂತ್ರ ಮಾಡಿತ್ತು ಎಂಬುದು ಗೊತ್ತಾಗಿದೆ. ಬೆಂಗಳೂರಿನ ವಿದ್ಯಾರಣ್ಯಪುರದ ಬಿ.ಕೆ.ಬಡಾವಣೆಯಲ್ಲಿರೋ ಸರ್ವೀಸ್ ಅಪಾರ್ಟ್‌ಮೆಂಟ್‌ನಲ್ಲಿ ಐವರು ಉಳಿದುಕೊಂಡು ಪಕ್ಕಾ ಸಂಚು ರೂಪಿಸಿದ್ದರು ಎಂಬ ಮಾಹಿತಿ ಸಿಕ್ಕಿದೆ. ಇದೇ ಅಪಾರ್ಟ್ಮೆಂಟ್ನಲ್ಲೇ ಉಳಿದುಕೊಂಡು ಮಾಸ್ಕ್ಮ್ಯಾನ್ ಚಿನ್ನಯ್ಯ ಹಾಗೂ ಗ್ಯಾಂಗ್ ಬುರುಡೆ ಕಥೆ ಕಟ್ಟಿರುವುದು ಗೊತ್ತಾಗಿದೆ.
ಷಡ್ಯಂತ್ರ ರೂಪಿಸಿದ್ದು ಯಾರು?
ಬುರುಡೆ ಗ್ಯಾಂಗ್ನ ‘ಬುರುಡೆ’ ಪುರಾಣ ಗೊತ್ತಾದ ಮೇಲೆ, ಷಡ್ಯಂತ್ರ ರೂಪಿಸಿದ್ದು ಯಾರು ಎಂಬುದೂ ಎಸ್ಐಟಿ ತನಿಖೆಯಲ್ಲಿ ಬಯಲಾಗಿದೆ. ಹಿಂದೂ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ, ಹೋರಾಟಗಾರರಾದ ಗಿರೀಶ್ ಮಟ್ಟಣ್ಣನವರ್, ಟಿ.ಜಯಂತ್, ಸುಜಾತ ಭಟ್, ಚಿನ್ನಯ್ಯ ಸೇರಿ ಐವರು ಕುತಂತ್ರ ರೂಪಿಸಿರುವುದು ಗೊತ್ತಾಗಿದೆ. ‘ಬುರುಡೆ’ ಇಟ್ಟುಕೊಂಡು ಸಂಚು ರೂಪಿಸಿರುವುದು ಬಯಲಾಗಿದೆ.
ಸರ್ವೀಸ್ ಅಪಾರ್ಟ್ಮೆಂಟ್ ಇಂಚಿಂಚೂ ಶೋಧ
ಸರ್ವೀಸ್ ಅಪಾರ್ಟ್ಮೆಂಟ್ ಇಂಚಿಂಚೂ ಶೋಧ ಮಾಡಲಾಯಿತು. ಯಾರ ಹೆಸರಲ್ಲಿ ಯಾವಾಗ ರೂಂ ಬುಕಿಂಗ್ ಆಗುತ್ತಿತ್ತು? ಎಷ್ಟು ಜನ ರೂಂಗೆ ಬರುತ್ತಿದ್ದರು? ಎಷ್ಟು ಬಾರಿ ಬುಕ್ ಆಗಿದೆ ಎಂಬ ಆಯಾಮದಲ್ಲಿ ತನಿಖೆ ನಡೆಸಲಾಗಿದೆ. ಲೆಡ್ಜರ್ ಬುಕ್, ಅಪಾರ್ಟ್ಮೆಂಟ್ನ ಸಿಸಿಟಿವಿಯನ್ನೂ ಪರಿಶೀಲನೆ ಮಾಡಲಾಯಿತು. ಎಲ್ಲಾ ಪ್ರಕ್ರಿಯೆ, ಹೇಳಿಕೆಗಳು ವಿಡಿಯೋ ರೆಕಾರ್ಡ್ ಮಾಡಲಾಯಿತು.
ಸರ್ವೀಸ್ ಅಪಾರ್ಟ್ಮೆಂಟ್ನಿಂದ ಕೆಲವೇ ದೂರದಲ್ಲೇ ಗಿರೀಶ್ ಮಟ್ಟಣ್ಣನವರ್ ಅಪಾರ್ಟ್ಮೆಂಟ್ ಇರುವುದು ಗೊತ್ತಾಗಿದೆ. ಕೇವಲ ಒಂದೂವರೆ ಕಿ.ಮೀ ದೂರ ಇರುವುದು ಗೊತ್ತಾಗಿದೆ.
4-5 ತಿಂಗಳ ಹಿಂದೆಯೇ ಲಾಡ್ಜ್ನಲ್ಲಿ ಉಳಿದುಕೊಂಡಿದ್ದ ಗ್ಯಾಂಗ್
ಅಪಾರ್ಟ್‌ಮೆಂಟ್‌ನಲ್ಲಿ ಸಂಚು ರೂಪಿಸುವುದಕ್ಕೂ ಮುಂಚೆ, ಅಂದರೆ, ನಾಲ್ಕೈದು ತಿಂಗಳ ಹಿಂದೆ ಲಾಡ್ಜ್ನಲ್ಲೂ ಗ್ಯಾಂಗ್ ಉಳಿದುಕೊಂಡಿರುವುದು ಗೊತ್ತಾಗಿದೆ. ವಿದ್ಯಾರಣ್ಯಪುರದ ತಿಂಡ್ಲು ಸರ್ಕಲ್ನಲ್ಲಿರೋ ಲಾಡ್ಜ್ನಲ್ಲೂ ಎಸ್ಐಟಿ ಮಹಜರು ನಡೆಸಿದೆ. ಎಸ್ಪಿ ಸೈಮನ್ ನೇತೃತ್ವದಲ್ಲಿ 20 ಅಧಿಕಾರಿಗಳು, ಸಿಬ್ಬಂದಿಯಿಂದ ಮಹಜರು ಪ್ರಕ್ರಿಯೆ ನಡೆಯಿತು.
‘ಬುರುಡೆ’ ಸಮೇತ ಸುಪ್ರೀಂಕೋರ್ಟ್ ಕದತಟ್ಟಿದ್ದ ಗ್ಯಾಂಗ್!
ಬುರುಡೆ ಕಥೆ ಕಟ್ಟಿದ ಮೇಲೆ ಯೋಜನೆಯನ್ನು ಕಾರ್ಯರೂಪಕ್ಕೆ ತರುವುದಕ್ಕಾಗಿ ಬುರುಡೆ ಸಮೇತವೇ ಸುಪ್ರೀಂಕೋರ್ಟ್ ಕದವನ್ನು ಗ್ಯಾಂಗ್ ತಟ್ಟಿತ್ತು. ಬುರುಡೆ ಬಗ್ಗೆ ದೆಹಲಿಯ ವಕೀಲರನ್ನೂ ಗ್ಯಾಂಗ್ ನಂಬಿಸಿತ್ತು. ಬ್ಯಾಗ್ನಲ್ಲಿ ಬುರುಡೆ ಇಟ್ಟುಕೊಂಡು ಸುಪ್ರೀಂಗೆ ತೆರಳಿದ್ದರು. ಇದಕ್ಕೆ ಸಾಕ್ಷಿಯಾಗಿ ದೂರುದಾರ ಜಯಂತ್.ಟಿ ಫೋಟೋವೊಂದನ್ನು ಬಿಡುಗಡೆ ಮಾಡಿದ್ದಾರೆ.
ಇದನ್ನೂ ಓದಿ: ಧರ್ಮಸ್ಥಳ ಕೇಸ್ ಗೆ ಟ್ವಿಸ್ಟ್: ದೆಹಲಿ ನೋಡಿತ್ತು ಚಿನ್ನಯ್ಯ ತಂದಿದ್ದ ಬುರುಡೆ, ದಿಲ್ಲಿ ಗ್ಯಾಂಗ್ ಹೆಸರು ಬಿಚ್ಚಿಟ್ಟ ಜಯಂತ್
ಅದೇನೇ ಹೇಳಿ, ಬುರುಡೆ ಕಥೆ ಕಟ್ಟುವ ಮುಂಚೆ ಬೆಂಗಳೂರಿನಲ್ಲೇ ಸಂಚು ಮಾಡಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಚಿನ್ನಯ್ಯನ ಹೇಳಿಕೆ ಆಧಾರದ ಮೇಲೆಯೇ ಎಸ್ಐಟಿ ತನಿಖೆ ನಡೆಸುತ್ತಿದೆ. ಮುಂದೆ ಮತ್ಯಾರ ಹೆಸರು ಬಯಲಾಗುತ್ತದೆಯೋ ಕಾದುನೋಡಬೇಕಿದೆ.
ವರದಿ: ವಿಕಾಸ್, ಟಿವಿ9, ಬೆಂಗಳೂರು




