ಚಿಕ್ಕಬಳ್ಳಾಪುರ: ಸಿಎಂ ಆಪ್ತ, ಕಾಂಗ್ರೆಸ್ ಶಾಸಕರ ಕರೆ ಸ್ವೀಕರಿಸದ ಅಧಿಕಾರಿ ಅಮಾನತು!
ಚಿಕ್ಕಬಳ್ಳಾಪುರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಬಿಂದುಮಣಿ ಅವರನ್ನು ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರ ಕರೆಗಳನ್ನು ನಿರ್ಲಕ್ಷಿಸಿದ ಆರೋಪದ ಮೇಲೆ ಅಮಾನತುಗೊಳಿಸಲಾಗಿದೆ. ಶಾಸಕರ ಮೂರು ದಿನಗಳ ನಿರಂತರ ಕರೆಗಳನ್ನು ಸ್ವೀಕರಿಸದಿರುವುದು ಕರ್ತವ್ಯಲೋಪ ಎಂದು ಪರಿಗಣಿಸಲಾಗಿದೆ. ಇಲಾಖಾ ವಿಚಾರಣೆ ನಡೆಯುವವರೆಗೆ ಅವರನ್ನು ಅಮಾನತು ಮಾಡಲಾಗಿದೆ.

ಚಿಕ್ಕಬಳ್ಳಾಪುರ, ಆಗಸ್ಟ್ 31: ಸಿಎಂ ಸಿದ್ದರಾಮಯ್ಯ ಆಪ್ತ, ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ (MLA SN Subbareddy) ಅವರ ಫೋನ್ ಕರೆ ಸ್ವೀಕರಿಸದ ಹಿನ್ನಲೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಬಿಂದಿಮಣಿ ಎಂ.ಎಲ್ ಅವರನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ (Suspended). ಕರ್ತವ್ಯದಲ್ಲಿ ನಿರ್ಲಕ್ಷ್ಯ ಆರೋಪಿಸಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧೀನ ಕಾರ್ಯದರ್ಶಿ ಎಸ್.ಎಜಾಸ್ ಪಾಷ ರಾಜ್ಯಪಾಲರ ಆದೇಶಾನುಸಾರ ಅಮಾನತು ಮಾಡಿ ಆದೇಶಿಸಿದ್ದಾರೆ.
ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಕಾರ್ಯಗಳ ಬಗ್ಗೆ ಮಾತನಾಡಬೇಕೆಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಬಿಂದುಮಣಿ ಅವರಿಗೆ ಸುಮಾರು 03 ದಿನಗಳ ಕಾಲ ಕರೆ ಮಾಡಿದ್ದಾರೆ. ಆದರೆ ದೂರವಾಣಿ ಕರೆಯನ್ನು ಸ್ವೀಕರಿಸದೇ ಬಿಂದುಮಣಿ ಅವರು ಕರ್ತವ್ಯ ನಿರ್ಲಕ್ಷ್ಯ ತೋರಿರುತ್ತಾರೆ. ಆದ್ದರಿಂದ ಇವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಶಾಕರು ಕೋರಿದ್ದರು.
ಇದನ್ನೂ ಓದಿ: ಮೈಸೂರು: ರಾಷ್ಟ್ರಪತಿ ಸ್ವಾಗತಕ್ಕೆ ಸ್ವಚ್ಛತೆ; 50ಕ್ಕೂ ಹೆಚ್ಚು ಅಂಗಡಿಗಳು ತೆರವು, ವ್ಯಾಪಾರಿಗಳು ಆಕ್ರೋಶ
ಜಿಲ್ಲಾಧಿಕಾರಿ ಬಿಂದುಮಣಿ ಅವರು ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸದೇ ಸರ್ಕಾರದ ಅಧಿಕಾರಿಗೆ ತರವಲ್ಲದ ರೀತಿಯಲ್ಲಿ ವರ್ತಿಸಿ ಬೇಜವಾಬ್ದಾರಿತನ ತೋರಿದ್ದು, ಕರ್ನಾಟಕ ನಾಗರೀಕ ಸೇವಾ ನಿಯಮಗಳು 2021ರ ನಿಯಮ 3 (1), (i), (iii), ಗಳನ್ನು ಉಲ್ಲಂಘಿಸಿರುತ್ತಾರೆ. ಆದ್ದರಿಂದ ಸದರಿ ಅಧಿಕಾರಿಯನ್ನು ಸೇವೆಯಿಂದ ಅಮಾನತ್ತುಗೊಳಿಸುವಂತೆ ಕೋರಿ ಅಲ್ಪಸಂಖ್ಯಾತ ನಿರ್ದೇಶನಾಲಯದ ನಿರ್ದೇಶಕರು, ಇಲಾಖೆಯ ಅಧೀನ ಕಾರ್ಯದರ್ಶಿಗೆ ಪ್ರಸ್ತಾವ ಕೂಡ ಸಲ್ಲಿಸಿದ್ದರು.
ಇದನ್ನೂ ಓದಿ: ಮುಳ್ಳಯ್ಯನಗಿರಿ ಸೇರಿ ಚಿಕ್ಕಮಗಳೂರಿನ ಈ ಸ್ಥಳಗಳಿಗೆ ಪ್ರವಾಸ ಹೋಗೋ ಯೋಜನೆ ಇದೆಯಾ? ಹೊಸ ನಿಯಮಗಳ ಬಗ್ಗೆ ತಿಳಿದಿರಿ
ಈ ಪ್ರಸ್ತಾವ ಆಧರಿಸಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಬಿಂದುಮಣಿ ಅವರನ್ನು ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ, ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರ ನಿಯಮ 10(1)(ಡಿ) ರನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:46 pm, Sun, 31 August 25




