ಸರ್ಕಾರಿ ಹುದ್ದೆಗಳ ಭರ್ತಿಗೆ ಬಿಜೆಪಿ ಹೋರಾಟದ ಬ್ಯಾನರ್‌ಗಳಲ್ಲಿ ರಾಜ್ಯಾಧ್ಯಕ್ಷರ ಫೋಟೊಗೆ ಕೋಕ್, ಶುರುವಾಯ್ತು ರಾಜಕೀಯ ಚರ್ಚೆ

ಸರ್ಕಾರಿ ಉದ್ಯೋಗಗಳ ನೇಮಕಾತಿ ವಿಚಾರವಾಗಿ ಧಾರವಾಡದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಸಂಬಂಧಿಸಿದ ಯಾವೊಂದು ಬ್ಯಾನರ್​​ಗಳಲ್ಲಿಯೂ ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಭಾವಚಿತ್ರ ಇಲ್ಲದೇ ಇರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ ಒಳಜಗಳದ ಹಿನ್ನೆಲೆ ಉದ್ದೇಶಪೂರ್ವಕ ಈ ರೀತಿ ಮಾಡಲಾಗಿದೆಯೇ ಎಂಬ ಚರ್ಚೆ ಈಗ ಶುರುವಾಗಿದೆ.

ಸರ್ಕಾರಿ ಹುದ್ದೆಗಳ ಭರ್ತಿಗೆ ಬಿಜೆಪಿ ಹೋರಾಟದ ಬ್ಯಾನರ್‌ಗಳಲ್ಲಿ ರಾಜ್ಯಾಧ್ಯಕ್ಷರ ಫೋಟೊಗೆ ಕೋಕ್, ಶುರುವಾಯ್ತು ರಾಜಕೀಯ ಚರ್ಚೆ
ಬಿಜೆಪಿ ಬ್ಯಾನರ್​
Image Credit source: tv9

Updated on: Feb 26, 2026 | 11:42 AM

ಧಾರವಾಡ, ಫೆಬ್ರವರಿ 26: ಖಾಲಿ ಇರುವ ಸರ್ಕಾರಿ ಹುದ್ದೆಗಳ ಭರ್ತಿಗಾಗಿ ಫೆಬ್ರವರಿ 24ರಂದು ಧಾರವಾಡದಲ್ಲಿ (Dharwad) ಬಿಜೆಪಿ (BJP) ಆಯೋಜಿಸಿದ್ದ ಪ್ರತಿಭಟನೆ ಇದೀಗ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಉದ್ಯೋಗಾಕಾಂಕ್ಷಿಗಳ ಪರವಾಗಿ ಕರೆ ನೀಡಿದ್ದ ಈ ಹೋರಾಟ ಶ್ರೀನಗರ ವೃತ್ತದಿಂದ ಜಯನಗರ ಮಾರ್ಗವಾಗಿ ಮಿಚಗಿನ್ ಕಂಪೌಂಡ್‌ ವರೆಗೆ ಜಾಥಾ ರೂಪದಲ್ಲಿ ನಡೆದಿತ್ತು. ಪ್ರತಿಭಟನೆ ಹಿನ್ನೆಲೆಯಲ್ಲಿ ನಗರದಲ್ಲಿ ಸುಮಾರು 40ಕ್ಕೂ ಹೆಚ್ಚು ಕಡೆಗಳಲ್ಲಿ ಬ್ಯಾನರ್‌ಗಳನ್ನು ಅಳವಡಿಸಲಾಗಿತ್ತು. ಇವುಗಳಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಫೋಟೊಗಳೇ ಇರಲಿಲ್ಲ ಎಂಬುದು ಈಗ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.

ಬ್ಯಾನರ್‌ಗಳ ಮೇಲ್ಭಾಗದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನಸಭಾ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹಾಗೂ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಭಾವಚಿತ್ರಗಳನ್ನು ಅಳವಡಿಸಲಾಗಿತ್ತು.

ಬ್ಯಾನರ್​​ಗಳ ಕೆಳಭಾಗದಲ್ಲಿ ಎಡಗಡೆ ಶಾಸಕ ಅರವಿಂದ ಬೆಲ್ಲದ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಚಿತ್ರಗಳನ್ನು ಬಳಸಲಾಗಿತ್ತು. ಆದರೆ ಯಾವುದೇ ಬ್ಯಾನರ್‌ನಲ್ಲೂ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಭಾವಚಿತ್ರ ಕಾಣಿಸದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಪಕ್ಷದ ಅಧಿಕೃತ ಹೋರಾಟದ ಬ್ಯಾನರ್‌ಗಳಲ್ಲಿ ರಾಜ್ಯಾಧ್ಯಕ್ಷರ ಚಿತ್ರಕ್ಕೆ ಕತ್ತರಿ ಹಾಕಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಶಾಸಕ ಅರವಿಂದ ಬೆಲ್ಲದ ಉದ್ದೇಶಪೂರ್ವಕವಾಗಿಯೇ ವಿಜಯೇಂದ್ರ ಫೋಟೊ ಕೈಬಿಟ್ಟಿದ್ದಾರೆ ಎನ್ನುವ ಮಾತುಗಳು ಕೂಡ ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ.

ಇದನ್ನೂ ಓದಿ: ರಾಜ್ಯ ಸರ್ಕಾರ ದಿವಾಳಿ, ಸಂಬಳ ನೀಡಲೂ ಹಣವಿಲ್ಲ: ವಿಪಕ್ಷ ನಾಯಕ ಅಶೋಕ್​​ ಸ್ಫೋಟಕ ಆರೋಪ 

ಈ ಘಟನೆ ಬಿಜೆಪಿ ಒಳಜಗಳವನ್ನು ಬಿಂಬಿಸುತ್ತಿದೆಯಾ? ಅಥವಾ ಸ್ಥಳೀಯ ಮಟ್ಟದ ಆಯೋಜನಾ ನಿರ್ಲಕ್ಷ್ಯವೇ? ಎಂಬ ಪ್ರಶ್ನೆಗಳು ಉದ್ಭವವಾಗಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Follow Us