ಹುಬ್ಬಳ್ಳಿಯಲ್ಲಿ ಅಂಜಲಿ ಹತ್ಯೆ ಪ್ರಕರಣ; 98 ದಿನಗಳ ಬಳಿಕ ಚಾರ್ಜ್ ಶೀಟ್ ಸಲ್ಲಿಕೆ

ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಹುಬ್ಬಳ್ಳಿಯ ಅಂಜಲಿ ಅಂಬಿಗೇರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 98 ದಿನಗಳ ಬಳಿಕ ಸಿಐಡಿ ಅಧಿಕಾರಿಗಳು ತನಿಖೆ ನಡೆಸಿ 494 ಪುಟಗಳ ಚಾರ್ಜ್​ಶೀಟ್​ನ್ನು ಹುಬ್ಬಳ್ಳಿಯ ಜೆಎಂಎಫ್​​ಸಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ. ಹಾಗಾದರೆ, ಚಾರ್ಜ್​ಶೀಟ್​ನಲ್ಲಿ ಏನಿದೆ? ಈ ಕುರಿತು ಒಂದು ವರದಿ ಇಲ್ಲಿದೆ.

ಹುಬ್ಬಳ್ಳಿಯಲ್ಲಿ ಅಂಜಲಿ ಹತ್ಯೆ ಪ್ರಕರಣ; 98 ದಿನಗಳ ಬಳಿಕ ಚಾರ್ಜ್ ಶೀಟ್ ಸಲ್ಲಿಕೆ
ಹುಬ್ಬಳ್ಳಿಯಲ್ಲಿ ಅಂಜಲಿ ಹತ್ಯೆ ಪ್ರಕರಣ
Edited By: ಕಿರಣ್ ಹನುಮಂತ್​ ಮಾದಾರ್

Updated on: Aug 24, 2024 | 2:54 PM

ಹುಬ್ಬಳ್ಳಿ, ಆ.24: ಮೇ. 15ರಂದು ಹುಬ್ಬಳ್ಳಿ(Hubballi)ಯ ವೀರಾಪೂರ ಓಣಿಯಲ್ಲಿರುವ ಅಂಜಲಿ ಮನೆಗೆ ನುಗ್ಗಿ ಗಿರೀಶ್ ಅಲಿಯಾಸ್ ವಿಶ್ವ ಎಂಬಾತ ಕೊಲೆ ಮಾಡಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ  ಸಿಐಡಿ ಅಧಿಕಾರಿಗಳು ತನಿಖೆ ನಡೆಸಿ 494 ಪುಟಗಳ ಚಾರ್ಜ್​ಶೀಟ್​ನ್ನು ಹುಬ್ಬಳ್ಳಿಯ ಜೆಎಂಎಫ್​​ಸಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ. ಇದರಲ್ಲಿ ಮುಖ್ಯವಾಗಿ ಸಿಸಿಟಿವಿ, ಪ್ರತ್ಯಕ್ಷ ಸಾಕ್ಷಿ, ಹಂತಕನ ತಾಯಿ, ಗಿರೀಶ್ ಕೆಲಸ ಮಾಡ್ತಿದ್ದ ಹೊಟೆಲ್ ಸಿಬ್ಬಂದಿ ಸೇರಿ 85 ಸಾಕ್ಷಿಗಳನ್ನು ಉಲ್ಲೇಖಿಸಲಾಗಿದೆ. ಗಿರೀಶ್​ನಿಂದ ಅಂಜಲಿ ದೂರವಾಗಿದ್ದಕ್ಕೆ ಕೊಲೆ ಎಂದು ಉಲ್ಲೇಖ ಮಾಡಲಾಗಿದೆ.

ಆರೋಪಿ ಗಿರೀಶ್ ಮೈಸೂರಿನ ಮಹಾರಾಜ ಹೋಟೆಲ್ ಆವರಣದ ಎಂಎಸ್ಸಿ ಪಬ್ ಆ್ಯಂಡ್ ಬಾರ್​ನಲ್ಲಿ ಕೆಲಸ ಮಾಡುತ್ತಿದ್ದ. ಗಿರೀಶ್ ಕೆಲಸ ಮಾಡುವ ಸಮಯದಲ್ಲಿಯೇ 3 ರಿಂದ 4 ಬಾರಿ ಅಂಜಲಿ, ಗಿರೀಶ್ ಭೇಟಿಗೆ ತೆರಳಿದ್ದರು. 2024 ರ ಎಪ್ರೀಲ್​ನಲ್ಲಿ ಇಬ್ಬರ ನಡುವೆ ಮನಸ್ತಾಪವಾಗಿದೆ. ಈ ವೇಳೆ ಗಿರೀಶ್ ಕರೆಯನ್ನು ಅಂಜಲಿ ಸ್ವೀಕರಿಸಿಲ್ಲ. ಇದಲ್ಲದೆ ಅಂಜಲಿ ಗಿರೀಶ್ ನಂಬರ್ ಬ್ಲಾಕ್ ಮಾಡಿದ್ದಳು. ಹೀಗಾಗಿ ಅಂಜಲಿ ಮನೆಗೆ ಬಂದು ಕೊಲೆ ಮಾಡಿದ್ದಾನೆಂದು ದೋಷಾರೋಪ ಪಟ್ಟಿಯಲ್ಲಿ ನಮೂದಿಸಲಾಗಿದೆ.

ಇದನ್ನೂ ಓದಿ:ಅಂಜಲಿ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್; ಕೊಲೆಯಲ್ಲಿ ನೇಹಾ ತಂದೆ ನಿರಂಜನ ಆಪ್ತ ಸಹಾಯಕನ ಕೈವಾಡ ಆರೋಪ

ಮೈಸೂರಿನಿಂದಲೇ ಚಾಕು ತಂದಿದ್ದ ಗಿರೀಶ್

ಮೈಸೂರಿನಿಂದಲೇ ಚಾಕು ತಂದಿದ್ದ ಹಂತಕ ಗಿರೀಶ್, ಮೈಸೂರಿನ ಬಸ್ ನಿಲ್ದಾಣದ ಪಕ್ಕ ಗುರುತು ಸಿಗಬಾರದು ಎನ್ನುವ ಕಾರಣಕ್ಕೆ ಮಾಸ್ಕ್ ಖರೀದಿ ಮಾಡಿದ್ದ. ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಗಿರೀಶ್​, ಮೇ. 17 ರಂದು ಮೈಸೂರಿನಿಂದ ಬೆಳಗಾವಿಗೆ ವಿಶ್ವ ಮಾನವ ರೈಲಿನಲ್ಲಿ ಪ್ರಯಾಣ ಮಾಡುವಾಗ ರೈಲ್ವೆ ಪೊಲೀಸರು ಕೈಗೆ ಸಿಕ್ಕಿ ಬಿದ್ದಿದ್ದ. ರೈಲಿನಲ್ಲಿ ಮಹಿಳಾ ಪ್ರಯಾಣಿಕರ ಜೊತೆ ಕಿರಿಕ್ ಮಾಡಿಕೊಂಡು, ದಾವಣಗೆರೆ ಬಳಿ ರೈಲಿನಿಂದ ಬಿದ್ದು ಗಾಯ ಮಾಡಿಕೊಂಡಿದ್ದ. ಇನ್ನು ಅಂಜಲಿ ಕೊಲೆ ಪ್ರಕರಣದ ಹಿನ್ನಲೆ ನಾಲ್ಕು ಜನ ಪೊಲೀಸ್ ಅಧಿಕಾರಿಗಳ ತಲೆದಂಡವೂ ಆಗಿತ್ತು. ಇದೀಗ ಕೊಲೆ ನಡೆದ 98 ದಿನಗಳ ಬಳಿಕ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Shivakumar Pattar

ಶಿವಕುಮಾರ್ ಎಸ್ ಪತ್ತಾರ.. ಹುಟ್ಟಿದ್ದು ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.ಕೊಪ್ಪಳದಿಂದ ಆರಂಭವಾಗಿರೋ ವೃತ್ತಿ ಬದುಕು ‌ಸದ್ಯ ಹುಬ್ಬಳ್ಳಿಗೆ ಬಂದು ನಿಂತಿದೆ.ಈ ಮದ್ಯೆ ರಾಯಚೂರು,ಬಳ್ಳಾರಿ,ವರದಿಗಾರನಾಗಿ ಕೆಲಸ ಮಾಡಿದ್ದೇನೆ.ರಹಸ್ಯ ಕಾರ್ಯಾಚರಣೆ ನನಗಿಷ್ಟ.ಟಿವಿ9 ನಲ್ಲಿ ಕೆಲ ರಹಸ್ಯ ಕಾರ್ಯಾಚರಣೆಗಳ ವರದಿಯನ್ನು ಮಾಡಿದ್ದೇನೆ.ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More
Follow Us