ಭ್ರಷ್ಟ ಸರಕಾರ ಮುಸ್ಲಿಮರನ್ನು ಓಲೈಸುತ್ತಿದೆ; ಧಾರ್ಮಿಕ ಪ್ರವಾಸಿ ತಾಣಗಳ ಅಭಿವೃದ್ಧಿ ಆದೇಶ ಸಂಬಂಧ ಕಾಂಗ್ರೆಸ್ ವಿರುದ್ಧ ಬೆಲ್ಲದ್ ಕಿಡಿ

ಧಾರವಾಡದಲ್ಲಿ ಪ್ರತಿಪಕ್ಷದ ಉಪನಾಯಕ ಅರವಿಂದ್ ಬೆಲ್ಲದ್ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆದಿದ್ದಾರೆ. ಪ್ರವಾಸಿ ತಾಣಗಳಾಗಿರೋ ಹಿಂದೂ ದೇವಾಲಯಗಳನ್ನು ಅಭಿವೃದ್ಧಿ ಮಾಡದಂತೆ ಕಾಂಗ್ರೆಸ್ ಸರ್ಕಾರ ಆದೇಶ ಮಾಡಿದೆ. ಭ್ರಷ್ಟ ಕಾಂಗ್ರೆಸ್ ಸರಕಾರ ಮುಸ್ಲಿಮರನ್ನು ಓಲೈಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಭ್ರಷ್ಟ ಸರಕಾರ ಮುಸ್ಲಿಮರನ್ನು ಓಲೈಸುತ್ತಿದೆ; ಧಾರ್ಮಿಕ ಪ್ರವಾಸಿ ತಾಣಗಳ ಅಭಿವೃದ್ಧಿ ಆದೇಶ ಸಂಬಂಧ ಕಾಂಗ್ರೆಸ್ ವಿರುದ್ಧ ಬೆಲ್ಲದ್ ಕಿಡಿ
ಅರವಿಂದ್ ಬೆಲ್ಲದ್
Edited By: ಆಯೇಷಾ ಬಾನು

Updated on: Aug 22, 2024 | 3:14 PM

ಧಾರವಾಡ, ಆಗಸ್ಟ್​.22: ಕಾಂಗ್ರೆಸ್ ಸರ್ಕಾರ (Congress Government) ರಾಜ್ಯದಲ್ಲಿನ ಧಾರ್ಮಿಕ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಬಾರದೆಂದು ಪ್ರವಾಸೋದ್ಯಮ ಇಲಾಖೆಗೆ ಆದೇಶ ಮಾಡಿದೆ ಎಂದು ಪ್ರತಿಪಕ್ಷದ ಉಪನಾಯಕ ಅರವಿಂದ್ ಬೆಲ್ಲದ್ (Arvind Bellad) ಅವರು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಭ್ರಷ್ಟ ಕಾಂಗ್ರೆಸ್ ಸರಕಾರ ಮುಸ್ಲಿಮರನ್ನು ಓಲೈಸುತ್ತಿದೆ. ಇದೀಗ ಹಿಂದೂಗಳಿಗೆ ಘಾಸಿಯಾಗುವಂಥ ನಿರ್ಧಾರ ತೆಗೆದುಕೊಂಡಿದೆ ಎಂದು ಧಾರವಾಡದಲ್ಲಿ  ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಮ್ಮ ದೇಶದಲ್ಲಿ ಯಾತ್ರೆಗೆ ವಿಶೇಷ ಮಹತ್ವ ಇದೆ. ಧಾರ್ಮಿಕ ಸ್ಥಳಗಳಿಗೆ ಯಾತ್ರೆಗೆ ಅನ್ಯೋನ್ಯ ಸಂಬಂಧವಿದೆ. ನಮ್ಮಲ್ಲಿ ಪ್ರವಾಸವೆಂದರೆ ಧಾರ್ಮಿಕ ಕ್ಷೇತ್ರಗಳಿಗೆ ಹೋಗೋದು. ಶೇ.95ರಷ್ಟು ಜನರು ಧಾರ್ಮಿಕ ಪ್ರವಾಸಕ್ಕೆ ಹೋಗುತ್ತಾರೆ. ಧಾರ್ಮಿಕ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಬೇಕು. ಇದು ಬ್ರಿಟಿಷರ ಕಾಲದಿಂದಲೂ ಇದೆ. ಆದರೆ ಇದೀಗ ಸರಕಾರ ಹೊಸ ಆದೇಶ ಮಾಡಿದೆ. ಪ್ರವಾಸಿ ತಾಣಗಳಾಗಿರೋ ಹಿಂದೂ ದೇವಾಲಯಗಳನ್ನು ಅಭಿವೃದ್ಧಿ ಮಾಡದಂತೆ ಆದೇಶ ನೀಡಿದೆ. ಸುತ್ತೋಲೆ ಮೂಲಕ ಪ್ರವಾಸೋದ್ಯಮ ಇಲಾಖೆಗೆ ಆದೇಶಿಸಿದೆ. ಆ ಮೂಲಕ ಹಿಂದೂಗಳಿಗೆ ಮರ್ಮಾಘಾತ ಎಸಗಿದೆ ಎಂದು ಕಿಡಿಕಾರಿದ್ದಾರೆ.

ಸಿಎಂ ಸಿದ್ದರಾಮಯ್ಯ, ಪ್ರವಾಸೋದ್ಯಮ ಸಚಿವ ಎಚ್. ಕೆ. ಪಾಟೀಲ್ ಸೇರಿ ಈ ಕೆಲಸ ಮಾಡಿದ್ದಾರೆ. ಈ ಆದೇಶವನ್ನು ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ. ಹಿಂದೂಗಳೆಲ್ಲ ರಸ್ತೆಗಿಳಿಯಬೇಕಾಗುತ್ತದೆ. ಮುಸ್ಲಿಂ ಓಲೈಕೆ ಮಾಡಿ, ಸಾವಿರಾರು ಕೋಟಿ ಕೊಡಿ. ಆದರೆ ಹಿಂದೂಗಳಿಗೆ ಕೊಡೋ ದುಡ್ಡಿಗೇಕೆ ಕತ್ತರಿ? ಪ್ರವಾಸೋದ್ಯಮ ಇಲಾಖೆಯಿಂದ ನಡೆಯುತ್ತಿದ್ದ ಅಭಿವೃದ್ಧಿಯೇಕೆ ನಿಲ್ಲಿಸುತ್ತೀರಿ? ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಬೆಲ್ಲದ್ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ತಮ್ಮ ಕ್ಷೇತ್ರದ ಅನುದಾನವನ್ನು ಕಸಿದುಕೊಳ್ಳಬೇಡಿ ಎಂದು ಕಾಂಗ್ರೆಸ್ ಶಾಸಕರಿಗೆ ಹೇಳಿದ ಅರವಿಂದ್ ಬೆಲ್ಲದ್

ಸರ್ಕಾರದ ಆದೇಶದಲ್ಲೇನಿದೆ?

ಸರ್ಕಾರದ ಅನುಬಂಧ-3ರಲ್ಲಿ, ದೇವಸ್ಥಾನಗಳ ಅಭಿವೃದ್ಧಿ ಕಾಮಗಾರಿಗಳಿಗೆ ಮುಜರಾಯಿ ಇಲಾಖೆಯಡಿ ಅನುದಾನ ಒದಗಿಸುವುದರಿಂದ ಪ್ರವಾಸೋದ್ಯಮ ಇಲಾಖೆಯಡಿ ಯಾವುದೇ ದೇವಸ್ಥಾನಗಳ ಮೂಲಭೂತ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವುದು ಸಮಂಜಸವಿರುವುದಿಲ್ಲ. ಪ್ರಸ್ತಾವಿತ ಲೆಕ್ಕಶೀರ್ಷಿಕೆಗಳಡಿಯ ಅನುದಾನದಿಂದ ಯಾತ್ರಿ ನಿವಾಸಗಳು ಇವೇ ಮುಂತಾದ ಅನೇಕ ಸಣ್ಣ ಸಣ್ಣ ಕಾಮಗಾರಿಗಳಿಗೆ ಇಲಾಖೆ ಅನುಮೋದನೆ ನೀಡಿರುವ ಪರಿಣಾಮ ಸಾಕಷ್ಟು ಮೊತ್ತದ ಕಾಮಗಾರಿಗಳಿಗೆ ಅನುದಾನದ ಕೊರತೆಯಾಗುತ್ತಿರುವುದನ್ನು ಗಮನಿಸಲಾಗಿದೆ.

ಖಾಸಗಿ ಜಾಗ ಅಥವಾ ಖಾಸಗಿ ಸಂಸ್ಥೆಯ ಪ್ರದೇಶದಲ್ಲಿ ಕೈಗೊಳ್ಳಲಾಗುವ ಯಾವುದೇ ಕಾಮಗಾರಿಗಳಿಗೆ ಬಂಡವಾಳ ಲೆಕ್ಕ ಶೀರ್ಷಿಕೆಯಡಿ ಅನುದಾನ ಬಿಡುಗಡೆ ಮಾಡಲು ನಿಯಮಗಳಲ್ಲಿ ಅವಕಾಶವಿರುವುದಿಲ್ಲ. ಆದ್ದರಿಂದ, ಇಂತಹ ಕಾಮಗಾರಿಗಳ ಬಗ್ಗೆ ಪರಿಶೀಲಿಸಿ ಅವುಗಳನ್ನು ಕೂಡಲೇ ಕೈಬಿಡುವಂತೆ ಆಡಳಿತ ಇಲಾಖೆಗೆ ತಿಳಿಸಿದೆ.

ಇನ್ನು ಇದೇ ವೇಳೆ ಅರವಿಂದ ಬೆಲ್ಲದ್ ಅವರು ಮುಡಾ ಪ್ರಕರಣದಲ್ಲಿ ದಾಖಲೆಗಳಿಗೆ ವೈಟ್ನರ್ ಹಚ್ಚಿದ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಕರಣ ಬೆಳಕಿಗೆ ಬಂದ ತಕ್ಷಣ ಭೈರತಿ ಮೈಸೂರಿಗೆ ಹೋಗಿದ್ರು. ಸಚಿವ ಭೈರತಿ ಸುರೇಶ್ ದಾಖಲೆ ತೆಗೆದುಕೊಂಡು ಹೋಗಿದ್ದಾರೆ. ಮೈಸೂರಿನಲ್ಲಿ ಎರಡು ದಾಖಲೆ ಜನ, ಮಾಧ್ಯಮಗಳಿಗೆ ಸಿಕ್ಕಿವೆ. ಆ ದಾಖಲೆಗೆ ವೈಟ್ನರ್ ಹಚ್ಚಿ ಗದ್ದಲ ಮಾಡುವ ಕೆಲಸ ಆಗಿದೆ. ನನಗೆ ನ್ಯಾಯಾಲಯದ ಮೇಲೆ ಸಂಪೂರ್ಣ ಭರವಸೆ ಇದೆ. ರಾಜ್ಯಪಾಲರ ನಿಲುವನ್ನು ಆ.29ಕ್ಕೆ ಕೋರ್ಟ್​ ಎತ್ತಿ ಹಿಡಿಯುತ್ತೆ. ರಾಜ್ಯಪಾಲರಿಗೆ ದೂರು ಹಿನ್ನೆಲೆ ತನಿಖೆಗೆ ಆದೇಶ ಮಾಡಿದ್ದಾರೆ. ತನ್ನ ಮೇಲೆ ತನಿಖೆ ಬೇಡ ಎಂದು ಹೇಳಲು ಸಿಎಂಗೆ ಹಕ್ಕಿಲ್ಲ. ರಾಜೀನಾಮೆ ಕೊಡೋದು ಬಿಟ್ಟು ಸಿಎಂಗೆ ಬೇರೆ ದಾರಿ ಇಲ್ಲ ಎಂದರು.

ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ಕೇಳಿದ ವಿಚಾರಕ್ಕೆ ಸಂಬಂಧಿಸಿ ಬೆಲ್ಲದ್ ಮಾತನಾಡಿದ್ದು, ಯಾವುದೇ ಹಗರಣ‌ಗಳು ಇದ್ದರೂ ತನಿಖೆ ಆಗಲಿ. ತನಿಖೆ ಮಾಡುವುದು ಬೇಡ ಎಂದಿದ್ದು ಯಾರು ಎಂದು ಪ್ರಶ್ನೆ ಮಾಡಿದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:12 pm, Thu, 22 August 24

Narasimha Murti Pyati

ಕೊಪ್ಪಳದವರಾದ ನರಸಿಂಹಮೂರ್ತಿ ಪ್ಯಾಟಿ ಸದ್ಯ ಟಿವಿ9 ವಾಹಿನಿಯ ಧಾರವಾಡ ಜಿಲ್ಲಾ ಹಿರಿಯ ವರದಿಗಾರರು. ಮೆಕ್ಯಾನಿಕಲ್ ಇಂಜನಿಯರಿಂಗ್ ಮುಗಿಸಿರುವ ಇವರು, ಕೆಲವರ್ಷ ಕೊಪ್ಪಳ ಜಿಲ್ಲೆಯಲ್ಲಿ ಐಟಿಐ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಮೊದಲು ಕೊಪ್ಪಳ ಜಿಲ್ಲೆ, ನಂತರ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ ಕಳೆದ 17 ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಯ ಜೊತೆಗೆ ಪ್ರಬಂಧ ರಚನೆ ಇವರ ಆಸಕ್ತಿಯಾಗಿದ್ದು ಈಗಾಗಲೇ 'ಬ್ರಾಹ್ಮಣ ಕುರುಬ' ಮತ್ತು 'ಕೃಷ್ಣಾಚಾರ್ @ ಕಿಷ್ಕಿಂಧಾ ಬಾರ್' ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಪ್ರಬಂಧಗಳು ಕಥನದ ಚೆಲುವು, ಸೊಬಗು ಮತ್ತು ಅರ್ಥವ್ಯಾಪ್ತಿಯಿಂದಾಗಿ ಓದುಗನ ಮನ ತಣಿಸುತ್ತವೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಸಾವಯವ ಹಾಗೂ ಅರಣ್ಯ ಕೃಷಿಕರೂ ಆಗಿರುವ ನರಸಿಂಹಮೂರ್ತಿ ಪ್ಯಾಟಿ ಸಂಗೀತ, ಟ್ರೆಕ್ಕಿಂಗ್, ಪ್ರವಾಸಗಳಲ್ಲೂ ಆಸಕ್ತಿ ಹೊಂದಿದ್ದಾರೆ.

Read More
Follow Us