AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾತ್ಯತೀತತೆ ಉಳಿಯಲು ಹಿಂದೂಗಳು ಬಹುಸಂಖ್ಯೆಯಲ್ಲಿರಬೇಕು: ಬಿಜೆಪಿ ನಾಯಕ ಪ್ರಲ್ಹಾದ್ ಜೋಶಿ

ಹಿಂದುತ್ವವನ್ನು ಜೀವನ ಪದ್ಧತಿ ಎಂದು ನಂಬಿದ್ದೇವೆ. ಆದರೆ ಇತರ ಧರ್ಮಗಳಲ್ಲಿ ಹಾಗಲ್ಲ, ಇಂಥವರನ್ನು ಹೀಗೆಯೇ ಪೂಜೆ ಮಾಡಬೇಕು ಎಂಬ ನಿಯಮಗಳಿವೆ ಎಂದರು.

ಜಾತ್ಯತೀತತೆ ಉಳಿಯಲು ಹಿಂದೂಗಳು ಬಹುಸಂಖ್ಯೆಯಲ್ಲಿರಬೇಕು: ಬಿಜೆಪಿ ನಾಯಕ ಪ್ರಲ್ಹಾದ್ ಜೋಶಿ
ಪ್ರಲ್ಹಾದ್​ ಜೋಶಿ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Feb 27, 2022 | 8:05 PM

Share

ಧಾರವಾಡ: ಕೆಲವರು ತಮ್ಮನ್ನು ತಾವು ಜಾತ್ಯತೀತರು (Secularism) ಎಂದು ಪ್ರತಿಪಾದಿಸಿಕೊಳ್ಳುತ್ತಾರೆ. ಪ್ರತಿದಿನ ಏನೇನೋ ಭಾಷಣ ಮಾಡುತ್ತಾರೆ. ಜಾತ್ಯತೀತತೆ ಬಗ್ಗೆ ನಮಗೆ ಯಾವುದೇ ವಿರೋಧ ಇಲ್ಲ. ಆದರೆ ಜಾತ್ಯತೀತತೆ ಉಳಿಯಬೇಕಾದರೆ ಹಿಂದೂಗಳು ಬಹುಸಂಖ್ಯೆಯಲ್ಲಿರಬೇಕು. ಇಸ್ಲಾಂ ಧರ್ಮೀಯರು ಬಹುಸಂಖ್ಯಾತರಾಗಿರುವ ಕಡೆ ಜಾತ್ಯತೀತತೆ ಇಲ್ಲ. ಸಿದ್ದರಾಮಯ್ಯ (Siddaramiah) ಪಾಕಿಸ್ತಾನಕ್ಕೆ ಹೋಗಿ ಜಾತ್ಯತೀತತೆ ಬಗ್ಗೆ ಭಾಷಣ ಮಾಡಲಿ ನೋಡೋಣ. ಅಲ್ಲಿ ಹೋಗಿ ಇವರು ಜಾತ್ಯತೀತತೆ ಬಗ್ಗೆ ಹೇಳಿದರೆ ಉಳಿಯುವುದೇ ಇಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ (Pralhad Joshi) ಟೀಕಿಸಿದರು. ಅನೇಕ ಇಸ್ಲಾಂ ದೇಶಗಳಲ್ಲಿ ಇಂದು ಶಾಂತಿ ಇಲ್ಲ. ಭಾರತದಲ್ಲಿ ನಿಮಗೆ ನಿಮ್ಮ ವೈಯಕ್ತಿಕ ಸ್ವಾತಂತ್ರ್ಯ ಕಾಪಾಡಿಕೊಳ್ಳಲು ಅವಕಾಶವಿದೆ. ಯಾರನ್ನು ಪೂಜಿಸಿದರೂ ಪರವಾಗಿಲ್ಲ. ಆದರೆ ಭಾರತ್ ಮಾತಾಕೀ ಜೈ ಎಂದು ಹೇಳಲೇಬೇಕು. ಈ ದೇಶದಲ್ಲಿ ವಂದೇ ಮಾತರಂ ಎನ್ನಬೇಕಾದ ಅನಿವಾರ್ಯತೆಯ ಬಗ್ಗೆ ಎಲ್ಲರೂ ತಿಳಿಯಬೇಕಿದೆ ಎಂದರು.

ಧಾರವಾಡದ ಕಡಪಾ ಮೈದಾನದಲ್ಲಿ ಭಾನುವಾರ ನಡೆದ ಹಿಂದೂ ಸಮಾವೇಶದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವಧಿಯಲ್ಲಿ ಅನೇಕ ಹಿಂದೂ ಹೋರಾಟಗಾರರ ಕೊಲೆಯಾಗಿದೆ. ಸಿಮಿ ಸಂಘಟನೆಯನ್ನು ಈ ಹಿಂದೆ ಬ್ಯಾನ್ ಮಾಡಲಾಗಿತ್ತು. ಅವರೆಲ್ಲರೂ ಪಿಎಫ್‌ಐ, ಎಸ್‌ಡಿಪಿಐ ಹೆಸರಿನಲ್ಲಿ ಮತ್ತೆ ಬಂದಿದ್ದಾರೆ. ಹಿಂದುತ್ವ, ಬಿಜೆಪಿ ಪರ ಇದ್ದವರನ್ನು ಕೊಲ್ಲುತ್ತಿದ್ದಾರೆ. ಅವರಿಗೆ ಬೆಂಬಲವಾಗಿ ನಿಂತಿರುವುದು ಕಾಂಗ್ರೆಸ್ ನಾಯಕರು ಎಂದು ದೂರಿದರು. ಹಿಂದೂ ಸಂಸ್ಕೃತಿಯಲ್ಲಿ‌ ಯಾರನ್ನು ಬೇಕಾದರೂ ಪೂಜಿಸುವ ಸ್ವಾತಂತ್ರ್ಯವಿದೆ. ಯಾರನ್ನು ಪೂಜೆ ಮಾಡಿದರೂ ಅವರನ್ನು ಹಿಂದೂ ಎಂದು ಒಪ್ಪಿಕೊಳ್ಳುತ್ತೇವೆ. ಹಿಂದುತ್ವವನ್ನು ಜೀವನ ಪದ್ಧತಿ ಎಂದು ನಂಬಿದ್ದೇವೆ. ಆದರೆ ಇತರ ಧರ್ಮಗಳಲ್ಲಿ ಹಾಗಲ್ಲ, ಇಂಥವರನ್ನು ಹೀಗೆಯೇ ಪೂಜೆ ಮಾಡಬೇಕು ಎಂಬ ನಿಯಮಗಳಿವೆ. ಇಸ್ಲಾಂನಲ್ಲಿ ಶಿಯಾ-ಸುನ್ನಿ ಎಂದೆಲ್ಲಾ ಇದೆ. ಅವರನ್ನು ಇವರು, ಇವರನ್ನು ಅವರು ಹೊಡೆಯುತ್ತಾರೆ ಎಂದರು.

ಕಾರ್ಯಕ್ರಮದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆಗೆ ಒತ್ತಾಯಿಸಿ ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಪಾದಯಾತ್ರೆಯ ಬಗ್ಗೆಯೂ ಅವರು ಟೀಕೆ ಮಾಡಿದರು. ಮುಖ್ಯಮಂತ್ರಿ ಪದವಿ ಸಿಗಬಹುದು ಎನ್ನುವ ಆಸೆಯಿಂದಾಗಿ ಕಾಂಗ್ರೆಸ್‌ ಮುಖಂಡರು ಮೇಕೆದಾಟು ಪಾದಯಾತ್ರೆ ಮಾಡುತ್ತಿದ್ದಾರೆ. ಬಳ್ಳಾರಿ ಪಾದಯಾತ್ರೆಯ ಮೂಲಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಈಗ ಮೇಕೆದಾಟು ಪಾದಯಾತ್ರೆ ಮೂಲಕ ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ. ಈ ಯಾತ್ರೆ ಸಮರ್ಪಕ ರೀತಿಯಲ್ಲಿ ಪೂರ್ಣಗೊಳ್ಳುವುದು ಸಿದ್ದರಾಮಯ್ಯ ಅವರಿಗೇ ಇಷ್ಟವಿಲ್ಲ. ರಾಹುಲ್ ಗಾಂಧಿ ಅವರು ದೆಹಲಿಗೆ ಕರೆದು ತಾಕೀತು ಮಾಡಿದ್ದರಿಂದ ಸಿದ್ದರಾಮಯ್ಯ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ ಎಂದರು.

ಕರ್ನಾಟಕದಲ್ಲಿಯೂ ಕಾಂಗ್ರೆಸ್ ಹಲವು ವರ್ಷ ಅಧಿಕಾರದಲ್ಲಿತ್ತು. ಕೇಂದ್ರದಲ್ಲಿಯೂ ಅವರದೇ ಸರ್ಕಾರವಿತ್ತು. ಆದರೆ ಈಗ ನೀರಿನ ನೆಪದಲ್ಲಿ ಪಾದಯಾತ್ರೆಗೆ ಮುಂದಾಗಿದೆ. ಅವರು ಇನ್ನಷ್ಟು ವರ್ಷಗಳ ಕಾಲ ವಿರೋಧ ಪಕ್ಷವಾಗಿಯೇ ಇರಬೇಕು. ಅದನ್ನು ಅರ್ಥ ಮಾಡಿಕೊಂಡು ಇದೇ ರೀತಿ ಧರಣಿ ಹಾಗೂ ಪಾದಯಾತ್ರೆ ರೂಢಿಸಿಕೊಳ್ಳಲಿ ಎಂದರು. ಕರ್ನಾಟಕದಲ್ಲಿ ಎಸ್‌ಡಿಪಿಐ ರಾಜಕೀಯ ಪಕ್ಷವೆಂದು ನೋಂದಣಿ ಮಾಡಿಕೊಂಡಿರುವ ಕಾರಣ ನಿಷೇಧಕ್ಕೆ ತಾಂತ್ರಿಕ ಕಾರಣಗಳು ಅಡ್ಡಿಯಾಗಿವೆ. ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳ ನಿಷೇಧಕ್ಕೆ ನನ್ನ ಬೆಂಬಲವಿದೆ ಎಂದು ಹೇಳಿದರು.

ಉಕ್ರೇನ್​ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ರಕ್ಷಣೆಗೆ ಭಾರತ ಸರ್ಕಾರ ಪ್ರಯತ್ನಿಸುತ್ತಿದೆ. ಹಲವು ಭಾರತೀಯರನ್ನು ವಿಶೇಷ ವಿಮಾನದ ಮೂಲಕ ಈಗಾಗಲೇ ಭಾರತಕ್ಕೆ ಕರೆತರಲಾಗಿದೆ. ಉಳಿದವರನ್ನು ಆದಷ್ಟು ಬೇಗನೆ ಸ್ವದೇಶಕ್ಕೆ ಕರೆತರುತ್ತೇವೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದಾಗಲೂ ಭಾರತೀಯರ ರಕ್ಷಣೆಯನ್ನೇ ಒತ್ತಿ ಹೇಳಿದ್ದಾರೆ. ರಷ್ಯಾ ಕ್ಷಿಪಣಿ ದಾಳಿ ನಡೆಸುತ್ತಿರುವಿದರಿಂದ ಅಲ್ಲಿರುವ ಭಾರತೀಯರು ಎಚ್ಚರಿಕೆಯಿಂದ ವರ್ತಿಸಬೇಕಿದೆ ಎಂದರು.

ಇದನ್ನೂ ಓದಿ: ದೇಶ ವಿರೋಧಿ ಸಂಘಟನೆಗಳಿಂದ ಹಿಜಾಬ್ ವಿವಾದ ಪ್ರಚಾರ: ಸಚಿವ ಪ್ರಲ್ಹಾದ್ ಜೋಶಿ ಆರೋಪ

ಇದನ್ನೂ ಓದಿ: ಹುಬ್ಬಳ್ಳಿಯ ತಮ್ಮ ನೆಚ್ಚಿನ ಹೋಟೆಲ್​ಗೆ ಪತ್ನಿ ಸಮೇತರಾಗಿ ಆಗಮಿಸಿ ಇಷ್ಟದ ತಿಂಡಿ ಸವಿದರು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ