
ಹುಬ್ಬಳ್ಳಿ, (ಅಕ್ಟೋಬರ್ 11): ರಾಜ್ಯದ ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ಚರ್ಚಿಸಲು ನಾಳೆ (ಅಕ್ಟೋಬರ್ 12) ದೆಹಲಿಯಲ್ಲಿ ಸಭೆ ನಡೆಯಲಿದೆ. ಈ ಸಭೆಗೆ ರೈತರು ಹೋಗ್ತಾರೋ ಇಲ್ವೋ ಅನ್ನೋ ಅನುಮಾನ ಕಾಡಿತ್ತು. ಆದ್ರೆ ಇದೀಗ ರೈತರು ಹೋಗಲು ಒಪ್ಪಿಕೊಂಡಿದ್ದು, 34 ಜನರ ವಿಮಾನ ಟಿಕೆಟ್ ಗಳನ್ನು ಶಾಸಕ ಎಂ ಆರ್ ಪಾಟೀಲ್ ಬುಕ್ ಮಾಡಿಸಿದ್ದಾರೆ. ಇದರೊಂದಿಗೆ ಕುಂದ ಗೋಳ ಶಾಸಕ ಎಂ. ಆರ್. ಪಾಟೀಲ್ ಅವರು ರೈತರಿಗೆ ಕೊಟ್ಟಿದ್ದ ಮಾತನ್ನು ಉಳಿಸಿಕೊಂಡಿದ್ದಾರೆ. ಇನ್ನು ನಾಳೆ ದೆಹಲಿಯಲ್ಲಿ ಮಧ್ಯಾಹ್ನ ಮೂರು ಗಂಟೆ ಸಭೆ ಆರಂಭವಾಗಲಿದ್ದು, . ದೇಶದ ಕಬ್ಬು ಬೆಳೆಗಾರರ ಚಿತ್ತ ಸಭೆ ಮೇಲೆ ನೆಟ್ಟಿದೆ.
ರೈತರು ನಾವು ಹಣ ಖರ್ಚು ಮಾಡಿ ದೆಹಲಿಗೆ ತೆರಳಲು ಆಗುವುದಿಲ್ಲ ಎಂದಿದ್ದರು. ಆಗ ಶಾಸಕ ಎಂ. ಆರ್. ಪಾಟೀಲ್ ದೆಹಲಿಯಲ್ಲಿ ನಡೆಯುವ ಸಭೆಗೆ ಎಷ್ಟು ಜನ ರೈತರು ಬರುತ್ತಿರೋ ಅಷ್ಟು ರೈತರಿಗೆ ವಿಮಾನ ಟಿಕೆಟ್ ಬುಕ್ ಮಾಡುವ ಭರವಸೆ ನೀಡಿದ್ದರು. ಅದರಂತೆ ಶಾಸಕ ಎಂ. ಆರ್. ಪಾಟೀಲ್ ಅವರು ನಾಳೆ ದೆಹಲಿಯಲ್ಲಿ ಕಬ್ಬು ಬೆಳೆಗಾರರ ಸಭೆಗೆ ತೆರಳಲು 34 ರೈತರಿಗೆ ವಿಮಾನ ಟಿಕೆಟ್ ಬುಕ್ ಮಾಡಿದ್ದಾರೆ.
ಸಕ್ಕರೆಯ ಕನಿಷ್ಟ ಮಾರಾಟ ಬೆಲೆ ಪ್ರತಿ ಕಿಲೋ ಗೆ 31 ರೂಪಾಯಿಯಿಂದ ಆರವತ್ತು ರೂಪಾಯಿಗೆ ಹೆಚ್ಚಿಸಬೇಕು. ಎಪ್ ಆರ್ ಪಿ ಯನ್ನು ಪ್ರತಿ ಟನ್ ಗೆ 5500 ನಿಗದಿ ಮಾಡಬೇಕು. ರಾಜ್ಯದ ಎಲ್ಲಾ ಎಥೆನಾಲ್ ಖರೀದಿ ಮಾಡಬೇಕು, ಸ್ವಾಮಿನಾಥನ ವರದಿ ಜಾರಿಗೆ ಆಗ್ರಹಿಸಿ ಕಬ್ಬು ಬೆಳೆಗಾರರು ಕೇಂದ್ರದ ಮುಂದೆ ಬೇಡಿಕೆ ಇಟ್ಟಿದ್ದಾರೆ. ಇದೇ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹುಬ್ಬಳ್ಳಿಯಲ್ಲಿ ಕಳೆದ ತಿಂಗಳು ಬೃಹತ್ ಪ್ರತಿಭಟನೆ ನಡೆಸಿದ್ದರು. ಆಗ ಕುಂದಗೋಳ ಶಾಸಕ ಎಂ ಆರ್ ಪಾಟೀಲ್ ಮತ್ತು ಶಾಸಕ ಮಹೇಶ್ ಟೆಂಗಿನಕಾಯಿ, ರೈತರ ಜೊತೆ ಸಂದಾನದ ಮಾತುಕತೆ ಮಾಡಿದ್ದರು. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಜೊತೆ ಮಾತನಾಡಿ ದೆಹಲಿಯಲ್ಲಿ ಸಭೆ ಪಿಕ್ಸ್ ಮಾಡಿಸಿ, ರೈತರ ಮುಂದೆಯ ಸಮಸ್ಯೆ ಚರ್ಚಿಸಿ ನಿರ್ಧಾರ ಕೈಗೊಳ್ಳೋದಾಗಿ ಹೇಳಿದ್ದರು. ಇದಕ್ಕೆ ರೈತರು ಒಪ್ಪಿಕೊಂಡು ಪ್ರತಿಭಟನೆ ಕೈಬಿಟ್ಟಿದ್ದರು.
ಕೊಟ್ಟ ಮಾತಿನಂತೆ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನಾಳೆ ದೆಹಲಿಯಲ್ಲಿ ಸಭೆ ಫಿಕ್ಸ್ ಮಾಡಿದ್ದಾರೆ. ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾನ್, ಪ್ರಲ್ಹಾದ್ ಜೋಶಿ ಸೇರಿದಂತೆ ಅನೇಕ ಸಚಿವರು, ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಬಾಗಿಯಾಗುತ್ತಿದ್ದಾರೆ. ರಾಜ್ಯದಿಂದ ಸಚಿವರಾದ ಲಕ್ಷ್ಮಣ್ ಸವದಿ ಮತ್ತು ಸಕ್ಕರೆ ಸಚಿವರು ಬಾಗಿಯಾಗೋ ಸಾಧ್ಯತೆ ಇದೆ. ಇನ್ನು ರೈತರು ದೆಹಲಿ ಸಬೆಗೆ ಹೋಗೋದಿಲ್ಲಾ, ದೆಹಲಿ ಸಭೆಯಲ್ಲಿ ನಮ್ಮ ಬೇಡಿಕೆ ಈಡೇರೋ ಭರವಸೆ ಸಿಕ್ರೆ ಮಾತ್ರ ಸಭೆಗೆ ಬರ್ತೇವೆ, ಇಲ್ಲದಿದ್ದರೆ ಸಭೆಗೆ ಬಹಿಷ್ಕಾರ ಹಾಕ್ತೇವೆ ಅಂತ ಹೇಳಿದ್ರು. ಹೀಗಾಗಿ ರೈತರು ಸಭೆಗೆ ಹೋಗ್ತಾರಾ ಇಲ್ವಾ ಅನ್ನೋ ಅನುಮಾನ ಕಾಡಿತ್ತು. ಆದ್ರೆ ಇದೀಗ ದೆಹಲಿ ಸಭೆಗೆ ಹೋಗಲು ರೈತರು ಒಪ್ಪಿಕೊಂಡಿದ್ದು, ನಾಳೆ ನಡೆಯಲಿರೋ ಸಭೆಗೆ ಹೋಗಲು ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಕುಂದಗೋಳ ಬಿಜೆಪಿ ಶಾಸಕ ಎಂ ಆರ್ ಪಾಟೀಲ್ 34 ರೈತರ ನಿಯೋಗವನ್ನು ದೆಹಲಿಗೆ ಕರೆದುಕೊಂಡು ಹೋಗಲು ವಿಮಾನದ ಟಿಕೆಟ್ ಬುಕ್ ಮಾಡಿದ್ದಾರೆ. ನಾಳೆ ಮುಂಜಾನೆ 9 ಕ್ಕೆ ಬೆಳಗಾವಿ ವಿಮಾನ ನಿಲ್ದಾಣದಿಂದ ರೈತರು ದೆಹಲಿಗೆ ಹೋಗಲಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ರೈತರ ಪರವಿದ್ದು, ರೈತರ ಬೇಡಿಕೆಗಳನ್ನು ಈಡೇರಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ ಅಂತ ಶಾಸಕ ಎಂ ಆರ್ ಪಾಟೀಲ್ ಹೇಳಿದ್ದಾರೆ.
ನಾಳೆ ದೆಹಲಿಯಲ್ಲಿ ಮಧ್ಯಾಹ್ನ ಮೂರು ಗಂಟೆ ಸಭೆ ಆರಂಭವಾಗಲಿದೆ. ಹೀಗಾಗಿ ಸಭೆ ಮೇಲೆ ದೇಶದ ಕಬ್ಬು ಬೆಳೆಗಾರರ ಚಿತ್ತ ನೆಟ್ಟಿದೆ. ನಾಳಿನ ಸಭೆಯಲ್ಲಿ ರೈತರ ಯಾವೆಲ್ಲಾ ಬೇಡಿಕೆಗಳು ಚರ್ಚೆಗೆ ಬರ್ತಾವೆ, ಅವುಗಳಲ್ಲಿ ಎಷ್ಟರ ಮಟ್ಟಿಗೆ ಈಡೇರುತ್ತವೆ ಅನ್ನೋದನ್ನು ಕಾಯ್ದು ನೋಡುತ್ತಿದ್ದಾರೆ. ಒಂದಡೆ ನಾಳೆ ದೆಹಲಿಯಲ್ಲಿ ಸಭೆ ನಿಗದಿಯಾಗಿದ್ದರು ಕೂಡಾ, ಮತ್ತೊಂದಡೆ ರೈತರು ಅಕ್ಟೋಬರ್ 13 ರಂದು ರಾಷ್ಟ್ರೀಯ ಹೆದ್ದಾರಿ ಬಂದ್ ಗೆ ಕರೆ ನೀಡಿದ್ದಾರೆ. ಈ ಬಗ್ಗೆ ವಿಡಿಯೋ ಹರಿಬಿಟ್ಟಿರೋ ರೈತ ಮುಖಂಡ ಚೂನಪ್ಪ ಪೂಜಾರಿ, ನಾಳಿನ ಸಭೆಯಲ್ಲಿ ನಮ್ಮ ಬೇಡಿಕೆ ಈಡೇರಿದ್ರೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಕರೆದು ಸನ್ಮಾನ ಮಾಡ್ತೇವೆ. ಇಲ್ಲದಿದ್ದರೆ, ಅಕ್ಟೋಬರ್ 13 ರಂದು ಕರ್ನಾಟಕ, ಮಹರಾಷ್ಟ್ರದಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡ್ತೇವೆ. ರೈತರು ಹೋರಾಟಕ್ಕೆ ಸಿದ್ದವಿರಬೇಕು ಅಂತ ಹೇಳಿದ್ದಾರೆ.
ನಾಳೆ ಮಧ್ಯಾಹ್ನ ನಡೆಯಲಿರೋ ಸಭೆ ಮೇಲೆ ಕಬ್ಬು ಬೆಳೆಗಾರರು ದೃಷ್ಟಿಯಿದ್ದು, ರೈತರ ಬೇಡಿಕೆಗಳು ಎಷ್ಟರ ಮಟ್ಟಿಗೆ ಈಡೇರುತ್ತವೆ ಅನ್ನೋದು ನಾಳೆ ಸಂಜೆ ಗೊತ್ತಾಗಲಿದೆ. ಆದಷ್ಟು ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ.