ಯಡಿಯೂರಪ್ಪ ವಿಚಾರದಲ್ಲಿ ಕೋರ್ಟ್​ನಿಂದ ಸರ್ಕಾರಕ್ಕೆ ಕಪಾಳ‌‌ಮೋಕ್ಷ: ಪ್ರಲ್ಹಾದ್ ಜೋಶಿ

| Updated By: ಗಣಪತಿ ಶರ್ಮ

Updated on: Jun 15, 2024 | 12:25 PM

ಪೋಕ್ಸೋ ಪ್ರಕರಣದಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿಎಸ್ ಯಡಿಯೂರಪ್ಪಗೆ ಕರ್ನಾಟಕ ಹೈಕೋರ್ಟ್​ನಿಂದ ಜಾಮೀನು ದೊರೆತ ಬೆನ್ನಲ್ಲೇ ಆ ವಿಚಾರವಾಗಿ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ. ಹಿಂದೂಗಳ ಮೇಲಿನ ಹಲ್ಲೆ ಹಾಗೂ ದರ್ಶನ್ ವಿಚಾರವಾಗಿಯೂ ಅವರು ಪ್ರತಿಕ್ರಿಯಿಸಿದ್ದು, ವಿವರ ಇಲ್ಲಿದೆ.

ಯಡಿಯೂರಪ್ಪ ವಿಚಾರದಲ್ಲಿ ಕೋರ್ಟ್​ನಿಂದ ಸರ್ಕಾರಕ್ಕೆ ಕಪಾಳ‌‌ಮೋಕ್ಷ: ಪ್ರಲ್ಹಾದ್ ಜೋಶಿ
ಪ್ರಲ್ಹಾದ್ ಜೋಶಿ
Follow us on

ಹುಬ್ಬಳ್ಳಿ, ಜೂನ್ 15: ಬಿಎಸ್ ಯಡಿಯೂರಪ್ಪ (BS Yediyurappa) ವಿರುದ್ಧದ ಪ್ರಕರಣದಲ್ಲಿ ಹೈಕೋರ್ಟ್ ಕರ್ನಾಟಕ ಸರ್ಕಾರಕ್ಕೆ ಕಪಾಳ‌‌ಮೋಕ್ಷ ಮಾಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi)ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮೊದಲೇ ನೋಟಿಸ್ ಕೊಟ್ಟು, ಲೋಕಸಭಾ ಚುನಾವಣೆ ಮುಗಿದು ನಮ್ಮ ಸರ್ಕಾರ ಬಂದಿರುವ ಸಮಯದಲ್ಲಿ ಹೀಗೆ ಮಾಡಿದ್ದಾರೆ. ಯಡಿಯೂರಪ್ಪ ನಮ್ಮ ಪಕ್ಷದ ಹಿರಿಯ ನಾಯಕರು. ಸಂಸದೀಯ ಮಂಡಳಿ ಮೆಂಬರ್ ಆಗಿ ದೆಹಲಿಯಲ್ಲಿ ಇರುವುದು ಸಹಜ. ಅವರಿಗೆ ಜಾಮೀನು ರಹಿತ ವಾರೆಂಟ್ ಹೊರಡಿಸಿದ್ದು ತಪ್ಪು ಎಂದು ನ್ಯಾಯಾಲಯವೇ ಹೇಳಿದೆ. ರಾಜ್ಯ ಸರ್ಕಾರವೇ ಇದರ ಸೂತ್ರಧಾರಿ ಎಂದರು.

ಈ ಎಲ್ಲ ಬೆಳವಣಿಗೆಯ ನಂತರ ಇದು ರಾಹುಲ್ ಗಾಂಧಿ ಒತ್ತಡದ ಮೇಲೆ ನಡೆದಿದೆ ಎಂಬುದು ಸ್ಪಷ್ಟ. ಸಿದ್ದರಾಮಯ್ಯ ಖುರ್ಚಿ ಉಳಿಸಿಕೊಳ್ಳಲು ಅತ್ಯಂತ ಹಿರಿಯ ನಾಯಕ ಯಡಿಯೂರಪ್ಪರನ್ನು ಬಂಧಿಸುವ‌ ಮೂಲಕ ಸೇಡಿನ ರಾಜಕಾರಣಕ್ಕೆ ಕಾಂಗ್ರೆಸ್ ಸರ್ಕಾರ ಮುಂದಾಗಿತ್ತು. ಆದರೆ, ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಬಲವಾಗಿದೆ ಎಂದು ಜೋಶಿ ಹೇಳಿದರು.

ಧಾರವಾಡದಲ್ಲಿ ಹಿಂದೂ ಕಾರ್ಯಕರ್ತನ ಮೇಲೆ ಹಲ್ಲೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಹಿಂದೂಗಳ ಮೇಲೆ ಹಲ್ಲೆಗಳಾಗುತ್ತಿವೆ. ಧಾರವಾಡದಲ್ಲಿ ಅಕ್ರಮವಾಗಿ ಗೋವು ಸಾಗಾಟ ಮಾಡುತ್ತಿದ್ದರು. ಆರೋಗ್ಯವಂತ ದೇಶಿ ಗೋವುಗಳ ಸಾಗಾಟ ಮಾಡುತ್ತಿದ್ದರು. ಹಲ್ಲೆ ಮಾಡಿರುವ ವ್ಯಕ್ತಿ ಮಾಹಿತಿ ಕೊಟ್ಟಿದ್ದಕ್ಕೆ ಹಲ್ಲೆಯಾಗಿದೆ. ಮುಸ್ಲಿಂ ಮತಾಂಧರಿಗೆ ಯಾವುದೇ ಭಯ ಇಲ್ಲ. ರಾಜ್ಯದಲ್ಲಿ ಸಿದ್ದರಾಮಯ್ಯ ಹಿಂದೂ ವಿರೋಧಿ ಸರ್ಕಾರ ನಡೆಸುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ಸರಿಯಾದ ಕ್ರಮ ತಗೆದುಕೊಳ್ಳದೆ ಹೋದರೆ ನಾವು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: POCSO Case: ಪೋಕ್ಸೋ ಪ್ರಕರಣದಲ್ಲಿ ಬಿಎಸ್​ ಯಡಿಯೂರಪ್ಪಗೆ ಬಿಗ್​ ರಿಲೀಫ್​: ಬಂಧಿಸದಂತೆ ಹೈಕೋರ್ಟ್ ಆದೇಶ

ಎಲ್ಲ ನಟರನ್ನು ಒಂದೇ ರೀತಿ ನೋಡಬಾರದು: ಜೋಶಿ

ಕೊಲೆ ಆರೋಪದಲ್ಲಿ ದರ್ಶನ ಬಂಧನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅಭಿಮಾನಿಗಳ ಅತೀರೇಕದ ವರ್ತನೆಯನ್ನು ನಾಯಕ‌ ನಟರು ನಿಯಂತ್ರಣ ಮಾಡಬೇಕು. ಯಾರೋ ಒಬ್ಬರು ನಟ ತಪ್ಪು ಮಾಡಿದರೆ ಎಲ್ಲರನ್ನೂ ಒಂದೇ ತರಹ ನೋಡಬಾರದು ಎಂದರು. ದರ್ಶನ ಕೃಷಿ ರಾಯಭಾರಿ ಆಗಿರುವ ಬಗ್ಗೆ ಪ್ರತಿಕ್ರಿಯಿಸಿ, ಯಾವುದೇ ಸರ್ಕಾರ ಮಾಡಲಿ, ಅವರ ಪೂರ್ವಾಪರ ಯೋಚನೆ ಮಾಡಬೇಕು. ರಾಯಭಾರಿ ನೇಮಕ ಮಾಡುವ ಸಮಯದಲ್ಲಿ ಪೂರ್ವಾಪರ ಯೋಚನೆ ಮಾಡಬೇಕು. ಅದು ಹಿಂದಿನ ಸರ್ಕಾರ ಮಾಡಿದ್ದರೂ ತಪ್ಪು. ಯಾಕೆಂದರೆ ಅವರು ಹಲ್ಲೆ ಮಾಡಿ ಜೈಲಲ್ಲಿ ಇದ್ದರು. ಪುನೀತ್ ರಾಜಕುಮಾರ್ ಹಲವಾರು ಯೋಜನೆಗೆ ರಾಯಭಾರಿ ಆಗಿದ್ದರು. ಅಂಬರೀಷ್ ಒಳ್ಳೆಯ ನಟ, ವಿಷ್ಣುವರ್ಧನ್ ಒಳ್ಳೆಯ ನಟರಾಗಿದ್ದರು. ಹೀಗಾಗಿ ಎಲ್ಲರನ್ನೂ ಒಂದೇ ರೀತಿ ನೋಡಬಾರದು ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ