ಮಕ್ಕಳ ನಡಿಗೆ ಹಸಿರಿನ ಕಡೆಗೆ: ಶಾಲೆಗಳ ಆವರಣದಲ್ಲಿ 50 ಲಕ್ಷ ಸಸಿ ನೆಡುವ ಯೋಜನೆ
ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ, ಇಕೋ ವಾಚ್, ಬಾಲಬಳಗ ಸೃಜನಶೀಲ ಶಿಕ್ಷಣ ಪ್ರತಿಷ್ಠಾನ ವತಿಯಿಂದ ವಿದ್ಯಾವರ್ಧಕ ಸಂಘದ ಪಟೀಲ್ ಪುಟ್ಟಪ್ಲ ಸಭಾಭವನದಲ್ಲಿ ಏರ್ಪಡಿಸಿದ್ದ 'ಮಕ್ಕಳ ನಡಿಗೆ ಹಸಿರಿನ ಕಡೆಗೆ' ವಿಶೇಷ ಕಾರ್ಯಾಗಾರವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದ್ದಾರೆ.
ಧಾರವಾಡ, ಆಗಸ್ಟ್ 28: ಪರಿಸರದ ಜೊತೆಗಿದ್ದಾಗ ಮಾತ್ರ ಮನುಷ್ಯತ್ವಕ್ಕೆ ಬೆಲೆ ಸಿಗಲಿದೆ. ಆದರೆ ಇಂದಿನ ದಿನಗಳಲ್ಲಿ ನಾವೆಲ್ಲ ಪರಿಸರದಿಂದ ದೂರ ಸರಿಯುತ್ತಿರುವುದು ಬೇಸರದ ಸಂಗತಿ. ಈ ಹಿನ್ನಲೆಯಲ್ಲಿ ಮಕ್ಕಳಿಗೆ ಪರಿಸರದ ಪಾಠ ಮಾಡಬೇಕಾದ ಅನಿವಾರ್ಯತೆ ಹೆಚ್ಚಿದೆ ಅಂತಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ (Madhu Bangarappa) ಹೇಳಿದರು. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ, ಇಕೋ ವಾಚ್, ಬಾಲಬಳಗ ಸೃಜನಶೀಲ ಶಿಕ್ಷಣ ಪ್ರತಿಷ್ಠಾನ ವತಿಯಿಂದ ವಿದ್ಯಾವರ್ಧಕ ಸಂಘದ ಪಟೀಲ್ ಪುಟ್ಟಪ್ಲ ಸಭಾಭವನದಲ್ಲಿ ಏರ್ಪಡಿಸಿದ್ದ ‘ಮಕ್ಕಳ ನಡಿಗೆ ಹಸಿರಿನ ಕಡೆಗೆ’ ವಿಶೇಷ ಕಾರ್ಯಾಗಾರ ಉದ್ಘಾಟಿಸಿದ ಅವರು ಮಾತನಾಡಿದರು.
ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಲು ಅರಣ್ಯ ಇಲಾಖೆ ಜೊತೆಗೆ ಸೇರಿ ಶಾಲಾ ಆವರಣದಲ್ಲಿ 50 ಲಕ್ಷ ಸಸಿ ನೆಡುವ ಯೋಜನೆ ಹಾಕಿಕೊಳ್ಳಲಾಗಿದೆ. ಮಕ್ಕಳ ಮಧ್ಯಾಹ್ನದ ಬಿಸಿಯೂಟದ ಬಳಿಕ ಮಕ್ಕಳು ನೆಟ್ಟ ಸಸಿಗಳ ಬುಡದಲ್ಲೇ ತಾಟು ತೊಳೆಯಲು ಸೂಚನೆ ನೀಡಲಿದ್ದೇವೆ. ಇದರಿಂದ ಮಕ್ಕಳ ಕೈಯಿಂದ ಪರಿಸರ ಕಾಳಜಿ ಕಾರ್ಯವೂ ನೆರವೇರಲಿದೆ ಎಂದರು.
ಇದನ್ನೂ ಓದ: ನವೆಂಬರ್ವರೆಗೂ ಸಕ್ರಿಯ ರಾಜಕಾರಣದಿಂದ ದೂರ: ಅಚ್ಚರಿ ಮೂಡಿಸಿದ ಶಂಕರ್ ಪಾಟೀಲ್ ಮುನೇನಕೊಪ್ಪ ಮಾತು
ರಾಜ್ಯದ 77 ಸಾವಿರ ಶಾಲೆಗಳಲ್ಲಿ 1.20 ಕೋಟಿ ಮಕ್ಕಳಿಗೆ (1ರಿಂದ 12ನೇ ತರಗತಿ) ಶಿಕ್ಷಣ ನೀಡಬೇಕಿದೆ. ಹೀಗಾಗಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಸೇರಿ ಅನೇಕ ಸವಾಲುಗಳು ನಮ್ಮೆದುರಿಗಿವೆ ಎಂದ ಅವರು, ತಂದೆ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಮಕ್ಕಳನ್ನು ಶಾಲೆಗೆ ಕರೆತರಲು, ಮಕ್ಕಳ ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ನಿತ್ಯ ಶಾಲೆಗೆ ಹಾಜರಾಗುವ ವಿದ್ಯಾರ್ಥಿಗೆ ದಿನಕ್ಕೆ ರು. 1 ನೀಡುವ ಅಕ್ಷಯ ಯೋಜನೆ ಜಾರಿಗೊಳಿಸಿದ್ದರು. ಈಗ ಅದು ಬಿಸಿಯೂಟ, ಸೈಕಲ್ ವಿತರಣೆ ಸೇರಿ ಬೇರೆ ಬೇರೆ ಸ್ವರೂಪ ಪಡೆದಿದೆ. ಶಿಕ್ಷಣ ಕ್ಷೇತ್ರದಲ್ಲಿ ನಾವು ಸಾಕಷ್ಟು ಹಿಂದಿದ್ದೇವೆ. ಇನ್ನು 2 ವರ್ಷ ಸಮಯ ನೀಡಿದರೆ, ಮಕ್ಕಳ ಭವಿಷ್ಯ ಸುಭದ್ರಗೊಳಿಸುವ ಕೆಲಸ ಮಾಡುವುದಾಗಿ ಹೇಳಿದರು.
ಶಾಸಕ ಎನ್.ಎಚ್. ಕೋನರೆಡ್ಡಿ ಮಾತನಾಡಿ, ಇಂದಿನ ಮಕ್ಕಳಿಗೆ ಕೃಷಿ, ಪರಿಸರದ ಜ್ಞಾನವೇ ಇಲ್ಲ. ಹಣ್ಣುಗಳ ಬಗ್ಗೆ ಅರಿವೂ ಇಲ್ಲ. ಹೀಗಾಗಿ ಪ್ರತಿ ಶಾಲೆ ಆವರಣದಲ್ಲಿ ಹಣ್ಣಿನ ಗಿಡಗಳನ್ನು ಬೆಳೆಸುವುದರ ಜತೆಗೆ ಪರಿಸರ ಮಾಹಿತಿ ಜತೆಗೆ ಸ್ವಾದಿಷ್ಟ ಹಣ್ಣಿನ ಸವಿಯೂ ಸಿಗಲಿದೆ ಎಂದರು.
ಇದನ್ನೂ ಓದಿ: ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಸೆ 9ರಿಂದ ನಾಲ್ಕು ದಿನ ಕೃಷಿ ಮೇಳ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪರಿಸರವಾದಿ ಸುರೇಶ ಹೆಬ್ಳೀಕರ್, ಕೌಶಲಗಳ ಅಭಿವೃದ್ಧಿಯಾಗುವ ಶಿಕ್ಷಣ ಜಾರಿಗೆ ತರಬೇಕಿದೆ. ಈ ನಿಟ್ಟಿನಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಸ್ವಲ್ಪವಾದರೂ ಬದಲಾವಣೆ ಮಾಡುವ ಕುರಿತು ಸಚಿವರು ಚಿಂತನೆ ನಡೆಸಬೇಕು ಎಂದರು.
ಸಂವಿಧಾನದ ಅರಿವು ಕೂಡ ಮುಖ್ಯ: ಮಧು ಬಂಗಾರಪ್ಪ
ಇದೇ ವೇಳೆ ಸಂವಿಧಾನದ ಬಗ್ಗೆಯೂ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಮಕ್ಕಳಿಗೆ ಸಂವಿಧಾನದ ಅರಿವು ಅತೀ ಅವಶ್ಯಕ. ಈ ಜ್ಞಾನ ನೀಡಲು ಶಾಲೆಯಲ್ಲಿ ಭಾರತ ಸಂವಿಧಾನದ ಪ್ರಸ್ತಾವನೆ ಓದುವುದು ಕಡ್ಡಾಯಗೊಳಿಸಲಾಗುವುದು. ಸೆ. 5ರಿಂದ ಈ ಯೋಜನೆ ಜಾರಿಗೆ ಬರಲಿದ್ದು, 2-3 ದಿನಗಳಲ್ಲಿ ಈ ಕುರಿತು ಅಧಿಕೃತ ಆದೇಶವನ್ನು ಇಲಾಖೆ ವತಿಯಿಂದ ಹೊರಡಿಸಲಾಗುವುದು ಎಂದರು.
ಪರಿಸರ ಉಳಿದರೆ ನಾವು ಉಳಿಯುತ್ತೇವೆ: ಸುರೇಶ ಹೆಬ್ಳೀಕರ್
ಇನ್ನು ಟಿವಿ-9 ಡಿಜಿಟಲ್ ಜೊತೆಗೆ ಮಾತನಾಡಿದ ಪರಿಸರವಾದಿ ಸುರೇಶ ಹೆಬ್ಳೀಕರ್, ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಪರಿಸರದ ಪಾಠಗಳು ಕಡಿಮೆಯಾಗಿವೆ. ಇದೇ ಕಾರಣಕ್ಕೆ ಮಕ್ಕಳಿಗೆ ಪರಿಸರದ ಬಗ್ಗೆ ಅರಿವು ಮೂಡಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಪರಿಸರ ಉಳಿದರೆ ನಾವು ಉಳಿಯುತ್ತೇವೆ. ಈ ಸತ್ಯವನ್ನು ಎಲ್ಲರೂ ಮನಗಂಡು, ಪರಿಸರ ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಅಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.