ಹುಬ್ಬಳ್ಳಿ, ಮಾರ್ಚ್ 09: ಲೋಕಸಭೆ ಕ್ಷೇತ್ರಗಳ ವಿಂಗಡಣೆಯಲ್ಲಿ ಯಾವುದೇ ಕಾರಣಕ್ಕೂ ದಕ್ಷಿಣ ಭಾರತಕ್ಕೆ ಅನ್ಯಾಯ ಆಗುವುದಿಲ್ಲ. ಕಾಂಗ್ರೆಸ್ (congress) ವಿನಾಕಾರಣ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದೆ ಅಷ್ಟೇ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಸ್ಪಷ್ಟಪಡಿಸಿದರು. ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿಗರು ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಹೀಗೆ ಏನೆಲ್ಲಾ ಹಬ್ಬಿಸುತ್ತಿದ್ದಾರೆ. ಇದು ಸರಿಯಲ್ಲ ಎಂದು ಹೇಳಿದ್ದಾರೆ.
ಕ್ಷೇತ್ರ ವಿಂಗಡಣೆ ಕೈಗೊಂಡಲ್ಲಿ ದಕ್ಷಿಣ ಭಾರತದಲ್ಲಿ ಸಂಖ್ಯೆ ಕಡಿಮೆ ಆಗುವುದಿಲ್ಲ ಎಂಬುದನ್ನು ಕೇಂದ್ರ ಗೃಹ ಸಚಿವರೂ ಹೇಳಿದ್ದಾರೆ. ನಾನೂ ಅದನ್ನೇ ಪುನರುಚ್ಚರಿಸುತ್ತಿದ್ದೇನೆ. ದಕ್ಷಿಣ ಭಾರತಕ್ಕೆ ಅನ್ಯಾಯವಾಗದಂತೆ ಕೇಂದ್ರ ಸರ್ಕಾರ ನೋಡಿಕೊಳ್ಳುತ್ತದೆ ಎಂದು ಭರವಸೆ ನೀಡಿದರು.
ಕರ್ನಾಟಕ, ತೆಲಂಗಾಣ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದಲ್ಲಿ ಬಿಜೆಪಿ ಎಂಪಿಗಳ ಸಂಖ್ಯೆ ಸಹ ದೊಡ್ಡದಿದೆ. ಬರೀ ಕಾಂಗ್ರೆಸ್ ಅಷ್ಟೇ ಇಲ್ಲ. ನಮಗೂ ಜವಾಬ್ದಾರಿ, ಕಾಳಜಿ ಅನ್ನೋದಿದೆ ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಕ್ಷೇತ್ರ ವಿಂಗಡಣೆ ಸಂಸತ್ ಮುಂದೆ ಬಂದು ಚರ್ಚೆಯಾಗಬೇಕು, ಡಿ.ಲಿಮಿಟೇಶನ್ ಕಮಿಶನ್ಗೆ ಶಿಫಾರಸ್ಸು ಆಗಬೇಕು, ಹೀಗೆ ಅದರದ್ದೇ ಆದ ನೀತಿ ನಿಯಮಗಳಿವೆ. ಕಾಂಗ್ರೆಸ್ಸಿಗರು ಅದೆಲ್ಲಾ ಗೊತ್ತಿಲ್ಲದವರಂತೆ ಮಾತನಾಡುವುದು ಸರಿಯಲ್ಲ ಎಂದರು.
ಇದನ್ನೂ ಓದಿ: ಪ್ರವಾಸಿಗರ ಮೇಲೆ ಅತ್ಯಾಚಾರ ಕೇಸ್: ಇದು ಸರ್ಕಾರದ ವೈಫಲ್ಯ ಎಂದ ಪ್ರಲ್ಹಾದ್ ಜೋಶಿ
ತೆಲಂಗಾಣ ಸರ್ಕಾರದಲ್ಲಿ ದುಡ್ಡಿಲ್ಲ. ಹಾಗಾಗಿ ಜಾರಿಗೂ ಮೊದಲು ಚರ್ಚೆಯಾಗಬೇಕು ಎಂದು ತೆಲಂಗಾಣ ಸಿಎಂ ಹೇಳಿದ್ದಾರೆ. ಇನ್ನು ತಮಿಳುನಾಡು ಸ್ಟಾಲಿನ್ ಸರ್ಕಾರ ಕಡು ಭ್ರಷ್ಟ ಸರ್ಕಾರವಾಗಿದೆ. ಇದನ್ನೆಲ್ಲಾ ಮುಚ್ಚಿಕೊಳ್ಳಲು ಕ್ಷೇತ್ರ ವಿಂಗಡಣೆ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ಗೆ ಒಗ್ಗಟ್ಟಿನಿಂದ ಹೋಗಿ ಎಂದು ಸಲಹೆ ನೀಡುವ ಮೂಲಕ ಇಬ್ಬರಲ್ಲೂ ಒಗ್ಗಟ್ಟಿಲ್ಲ ಎಂಬುದನ್ನು ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಒಪ್ಪಿಕೊಂಡಿದ್ದಾರೆ. ತಮ್ಮ ತಂದೆ 2028ರವರೆಗೆ ಇನ್ನೂ ಮೂರು ಬಾರಿ ಬಜೆಟ್ ಮಂಡಿಸುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಅವರ ಪುತ್ರ ಹೇಳಿದ್ದಾರೆ. ಇನ್ನು ಕೆಲವರು ಡಿಸಿಎಂ ಡಿಕೆ ಶಿವಕುಮಾರ್ ಮುಂದಿನ ಬಜೆಟ್ ಮಂಡಿಸುತ್ತಾರೆ ಎನ್ನುತ್ತಿದ್ದಾರೆ. ಇದರಲ್ಲೇ ಗುತ್ತಾಗುತ್ತಿದೆ ಎಷ್ಟು ಒಗ್ಗಟ್ಟಿದೆ ಎಂಬುದು ಎಂದು ವ್ಯಂಗ್ಯವಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.