ಸಿಲಿಂಡರ್ ಬ್ಲಾಸ್ಟ್ನಲ್ಲಿ 8 ಅಯ್ಯಪ್ಪ ಮಾಲಾಧಾರಿಗಳ ಸಾವು: ತಿಂಗಳುಗಳೇ ಕಳೆದ್ರೂ ಸಿಗದ ಪರಿಹಾರ
ಹುಬ್ಬಳ್ಳಿಯಲ್ಲಿ ಸಂಭವಿಸಿದ್ದ ಸಿಲಿಂಡರ್ ಸ್ಫೋಟದಲ್ಲಿ ಮೃತಪಟ್ಟ 8 ಜನರ ಕುಟುಂಬಗಳಿಗೆ ಸರ್ಕಾರ ಘೋಷಿಸಿದ್ದ 5 ಲಕ್ಷ ರೂ. ಪರಿಹಾರ ಇನ್ನೂ ಸಿಕ್ಕಿಲ್ಲ. ಎರಡು ತಿಂಗಳಾದರೂ ಪರಿಹಾರ ಬಾರದಿರುವುದು ಸರ್ಕಾರದ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಹೊರೆಯಾಗುತ್ತಿರುವುದರಿಂದ ಪರಿಹಾರ ವಿತರಣೆಯಲ್ಲಿ ವಿಳಂಬವಾಗಿದೆ ಎಂಬ ಆರೋಪ ಕೇಳಿಬಂದಿದೆ.

ಹುಬ್ಬಳಿ, ಮಾರ್ಚ್ 09: ಕಾಂಗ್ರೆಸ್ (congress) ಸರ್ಕಾರಕ್ಕೆ ಗ್ಯಾರಂಟಿಗಳದ್ದೆ ಚಿಂತೆ. ಗ್ಯಾರಂಟಿಗಳಿಂದ ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ಹೊರೆಯಾಗ್ತಿದೆ. ಗ್ಯಾರಂಟಿಗಳನ್ನ ನಿಲ್ಲಸಿದರೂ ಕಷ್ಟವಾಗಿದೆ. ಹೀಗಾಗಿ ಸರ್ಕಾರದಿಂದ ಬರುವ ಅನುದಾನ ಸಮರ್ಪಕವಾಗಿ ಸಿಗ್ತಾ ಇಲ್ಲ, ಹಾಲಿನ ಪ್ರೋತ್ಸಾಹ ಧನ (amount) ಇರಬಹುದು, ಗೃಹಲಕ್ಷಿ ಹಣ ಇರಬಹುದು ಯಾವದೂ ಸರಿಯಾದ ಸಮಯಕ್ಕೆ ತಲುಪುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಇದರ ಮಧ್ಯೆ ಸರ್ಕಾರ ಘೋಷಣೆ ಮಾಡಿದ್ದ ಅದೊಂದು ಪರಿಹಾರದ ಘೋಷಣೆ ಕೇವಲ ಘೋಷಣೆಯಾಗಿಯೇ ಉಳಿದಿದೆ. ಎಂಟು ಜನ ಮೃತ ಕುಟುಂಬಕ್ಕೆ ಸಿಗಬೇಕಾದ ಪರಿಹಾರ ಧನ ಇನ್ನು ಸಿಕ್ಕಿಲ್ಲ. ಹೀಗಾಗಿ ಸರ್ಕಾರದ ಬಳಿ ದುಡ್ಡೆ ಇಲ್ವಾ ಅನ್ನೋ ಅನುಮಾನ ವ್ಯಕ್ತವಾಗಿದೆ.
8 ಜನರು ಸಾವು: ಹುಸಿಯಾಯ್ತಾ ಸರ್ಕಾರದ ಮಾತು?
ಹುಬ್ಬಳ್ಳಿಯ ಉಣಕಲ್ ಸಮೀಪ ಇರುವ ಅಚ್ಚವ್ವನ ಕಾಲೋನಿಯ ಅಯ್ಯಪ್ಪನ ಸನ್ನಿಧಿಯಲ್ಲಿ ಸಿಲಿಂಡರ್ ಬ್ಲಾಸ್ಟ್ ಆದ ಪ್ರಕರಣ ಇನ್ನು ಹಚ್ಚ ಹಸಿರಾಗಿದೆ. ಡಿಸೆಂಬರ್ 22 ರಂದು ನಡೆದ ಘೋರ ದುರಂತದಲ್ಲಿ 9 ಜನ ಅಯ್ಯಪ್ಪ ಮಾಲಾಧಾರಿಗಳು ಗಾಯಗೊಂಡಿದ್ದರು. 9 ಜನರ ಪೈಕಿ ಎಂಟು ಜನ ಚಿಕಿತ್ಸೆ ಫಲಿಸದೆ ಮೃತರಾಗಿದ್ದಾರೆ. ಎಂಟು ಜನ ಅಯ್ಯಪ್ಪ ಮಾಲಾಧಾರಿಗಳು ಮೃತರಾಗಿ ತಿಂಗಳುಗಳೇ ಕಳಿದಿವೆ. ಆದರೆ ಈ ಪ್ರಕರಣದಲ್ಲಿ ಸರ್ಕಾರ ಕೊಟ್ಟ ಮಾತು ಹುಸಿಯಾಗಿದೆ.
ಇದನ್ನೂ ಓದಿ: ಸಿಲಿಂಡರ್ ಸ್ಫೋಟ ಕೇಸ್: ಮೃತ 8 ಅಯ್ಯಪ್ಪ ಮಾಲಾಧಾರಿ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ಘೋಷಣೆ
ಸರ್ಕಾರ ಈ ಪ್ರಕರಣ ಗಂಭೀರವಾಗಿ ಪರಿಗಣಿಸಿ ಮೃತರ ಕುಟುಂಬಕ್ಕೆ ತಲಾ ಐದು ಲಕ್ಷ ರೂ ಪರಿಹಾರ ಘೋಷಣೆ ಮಾಡಿತ್ತು. ಘಟನೆಯಲ್ಲಿ ನಿಜಲಿಂಗಪ್ಪ ಬೇಪುರಿ, ಸಂಜಯ್ ಸವದತ್ತಿ, ಲಿಂಗರಾಜ್ ಬೀರನೂರ, ರಾಜು ಮೂಗೇರಿ, ಮಂಜು ವಾಗ್ಮೋಡೆ, ಶಂಕರ್ ಊರ್ಬಿ, ಪ್ರಕಾಶ್ ಬಾರಕೇರ ಹಾಗೂ ತೇಜಸ್ವರ್ ಸುತಾರೆ ಮೃತರಾದವರು.
ಬಾರದ ಪರಿಹಾರ
ಯಾವಾಗ ಹುಬ್ಬಳ್ಳಿಯಲ್ಲಿ ಇಂತಹದ್ದೊಂದು ಘೋರ ದುರಂತ ಸಂಭವಿಸಿತೋ, ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಪ್ರಕರಣ ಗಂಭೀರವಾಗಿ ತಗೆದುಕೊಂಡು ಸಿಎಂ ಗಮನಕ್ಕೆ ತಂದಿದ್ದರು. ಎಲ್ಲರೂ ಬಡವರಾಗಿರುವ ಕಾರಣ ಸರ್ಕಾರ ಐದು ಲಕ್ಷ ರೂ. ಪರಿಹಾರ ಘೋಷಣೆ ಮಾಡಿತ್ತು. ಆದರೆ ಘೋಷಣೆ ಘೋಷಣೆಯಾಗಿಯೇ ಉಳಿದಿದೆ. ಘಟನೆ ನಡೆದು ಎರಡು ತಿಂಗಳ ಮೇಲಾಗಿದೆ, ಆದರೂ ಪರಿಹಾರ ಬಂದಿಲ್ಲ.
ಇನ್ನು ಇದೇ ಘೋರ ದುರಂತದಲ್ಲಿ ಮನ ಕಲಕುವ ಘಟನೆಯೊಂದು ನಡೆದಿತ್ತು. 9 ಜನರ ಪೈಕಿ ಓರ್ವ ಬಾಲಕ ಮಾತ್ರ ಬದುಕಿದ್ದಾನೆ. ಅವನ ತಂದೆ ಘೋರ ದುರಂತದಲ್ಲಿ ಮೃತರಾಗಿದ್ದಾರೆ. ಅಚ್ಚವ್ವನ ಕಾಲೋನಿ ನಿವಾಸಿ ಪ್ರಕಾಶ್ ಬಾರಕೇರ ಹಾಗೂ ಅವರ ಮಗ ವಿನಾಯಕ ಇಬ್ಬರು ಗಾಯಗೊಂಡಿದ್ದರು. ಆದರೆ ದುರಂತದಲ್ಲಿ ಪ್ರಕಾಶ್ ಬಾರಕೇರ ಮೃತರಾಗಿದ್ದು, ವಿನಾಯಕ್ ಬಾರಕೇರ ಬರೋಬ್ಬರಿ ಎರಡು ತಿಂಗಳ ನಂತರ ಕಳೆದ ವಾರ ಆಸ್ಪತ್ರೆಯಿಂದ ಡಿಶ್ಚಾರ್ಜ್ ಆಗಿದ್ದಾರೆ. ಆದರೆ ಇತನಿಗೆ ತನ್ನ ತಂದೆ ಇಲ್ಲ ಅನ್ನೋ ವಿಚಾರವೇ ಗೊತ್ತಿಲ್ಲ.
ನಮಗೆ ಹಣ ಬಂದಿಲ್ಲ: ವಿನಾಯಕ್ ಅಜ್ಜಿ ಆಕ್ರೋಶ
ಮಗನಿಗೆ ತಾಯಿ ಹಾಗೂ ಅಜ್ಜಿ ಆ ವಿಷಯವನ್ನು ಇದುವರೆಗೂ ತಿಳಿಸಿಲ್ಲ. ವಿನಾಯಕ್ ಮನೆಗೆ ಬಂದಿದ್ದು ಒಂದು ಕಡೆಯಾದ್ರೆ, ಮನೆಗೆ ಆಧಾರದವಾಗಿದ್ದ ಪ್ರಕಾಶ್ ಇದೀಗ ಬದುಕಿಲ್ಲ. ಮನೆಯಲ್ಲಿ ಇರೋದು ಇಬ್ಬರು ಹೆಣ್ಮಕ್ಕಳೆ, ಹಾಗಾಗಿ ಜೀವನ ನಡೆಸೋದು ಕಷ್ಟವಾಗಿದೆ. ಸರ್ಕಾರದಿಂದ ಪರಿಹಾರ ಘೋಷಣೆ ಮಾಡಿದರೂ ಆ ಹಣ ನಮಗೆ ಬಂದಿಲ್ಲ ಎಂದು ವಿನಾಯಕ್ ಅಜ್ಜಿ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ ಸಿಲಿಂಡರ್ ಸ್ಫೋಟ: ಪವಾಡ ಸದೃಶ ರೀತಿಯಲ್ಲಿ ಬದುಕುಳಿದ ವಿನಾಯಕ್ ಬಾರಕೇರ
ಒಟ್ಟಾರೆ ಸಿಲಿಂಡರ್ ಸ್ಪೋಟದ ಘೋರ ದುರಂತದಲ್ಲಿ ಎಂಟು ಜನ ಮೃತರಾಗಿದ್ದು, ಬಹುತೇಕ ಎಲ್ಲರೂ ಮನೆಗೆ ಆಧಾರದವಾದವರೇ. ಇದ್ದ ಒಂಟಿ ಮಕ್ಕಳನ್ನು ಕಳೆದುಕೊಂಡು ತಂದೆ ತಾಯಿ ಅನಾಥರಾಗಿದ್ದಾರೆ. ಆದರೆ ಸರ್ಕಾರ ಮಾತ್ರ ಪರಿಹಾರ ನೀಡದೆ ಇರೋದು ನಿಜಕ್ಕೂ ದುರ್ದೈವ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.