ರಾಜಕೀಯ ತಿರುವು ಪಡೆದುಕೊಂಡ ನಾಳಿನ ಹುಬ್ಬಳ್ಳಿ-ಧಾರವಾಡ ಬಂದ್: ಪೊಲೀಸ್ ಅಲರ್ಟ್
ಅಮಿತ್ ಶಾ ಅವರ ಅಂಬೇಡ್ಕರ್ ವಿರೋಧಿ ಹೇಳಿಕೆಯನ್ನು ಖಂಡಿಸಿ, ದಲಿತ ಸಂಘಟನೆಗಳು ನಾಳೆ ಹುಬ್ಬಳ್ಳಿ-ಧಾರವಾಡದಲ್ಲಿ ಬಂದ್‌ಗೆ ಕರೆ ನೀಡಿವೆ. ಈ ಬಂದ್‌ಗೆ ಬಿಜೆಪಿ ವಿರೋಧ ವ್ಯಕ್ತವಾಗಿದ್ದು, ರಾಜಕೀಯ ತಿರುವು ಪಡೆದುಕೊಂಡಿದೆ. ಹೀಗಾಗಿ ಪೊಲೀಸರು ಅಲರ್ಟ್ ಆಗಿದ್ದಾರೆ. ಹೋಟೆಲ್ ಮಾಲೀಕರ ಸಂಘ ಬಂದ್‌ಗೆ ಬೆಂಬಲ ನೀಡಿಲ್ಲ.
ಹುಬ್ಬಳ್ಳಿ, ಜನವರಿ 08: ಕೇಂದ್ರ ಸಚಿವ ಅಮಿತ್ ಶಾ (Amit Shah) ಅಂಬೇಡ್ಕರ್ ವಿರುದ್ಧ ಆಡಿರು ಮಾತಿಗೆ ಕರ್ನಾಟಕದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ. ಇದು ದಿನದಿಂದ ದಿನಕ್ಕೆ ರಾಜಕೀಯ ತಿರುವು ಕೂಡ ಪಡೆದುಕೊಳ್ಳುತ್ತಿವೆ. ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಂದ್ ಮಾಡಿ ಪ್ರತಿಭಟನೆ ಮಾಡಲಾಗುತ್ತಿದೆ. ಇನ್ನೂ ನಾಳೆ ಹುಬ್ಬಳ್ಳಿ-ಧಾರವಾಡ ಬಂದ್‌ಗೆ ದಲಿತ ಸಂಘಟನೆಗಳು ಕರೆ ನೀಡಲಾಗಿದ್ದು, ಅವಳಿ ನಗರದ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ.
ಅಂಬೇಡ್ಕರ್ ಬಗ್ಗೆ ಅಮಿತ್ ಶಾ ಹೇಳಿಕೆ ಖಂಡಿಸಿ ನಾಳೆ ಹುಬ್ಬಳ್ಳಿ-ಧಾರವಾಡ ಬಂದ್‌ಗೆ ದಲಿತ ಸಂಘಟನೆಗಳು ಕರೆ ನೀಡಿವೆ. ಹೀಗಾಗಿ ಗುಲಾಬಿ ಹೂ ಕೊಟ್ಟು ಬಂದ್‌ಗೆ ಸಹಕರಿಸುವಂತೆ ಹುಬ್ಬಳ್ಳಿಯ ಜನತಾ ಬಜಾರ್ ಮಾರುಕಟ್ಟೆಯಲ್ಲಿ ಸಂಘಟನೆಗಳಿಂದ ಮನವಿ ಮಾಡಲಾಗಿದೆ. ಬೀದಿ ಬದಿ ವ್ಯಾಪಾರಿಗಳು, ಕಿರಾಣಿ ಅಂಗಡಿಗಳ ಮಾಲೀಕರಿಗೂ ಮನವಿ ಮಾಡಲಾಗಿದೆ.
ನಾಳೆಯ ಬಂದ್‌ಗೆ ಹೋಟೆಲ್ ಮಾಲೀಕರ ಸಂಘ ಬೆಂಬಲವಿಲ್ಲ
ನಾಳೆಯ ಬಂದ್‌ಗೆ ಹೋಟೆಲ್ ಮಾಲೀಕರ ಸಂಘ ಬೆಂಬಲ ನೀಡಿಲ್ಲ. ಈ ಬಗ್ಗೆ ಹೋಟೆಲ್ ಮಾಲೀಕರ ಸಂಘದಿಂದ ಯಾವುದೇ ನಿರ್ಧಾರ ಮಾಡಿಲ್ಲ. ಟಿವಿ9ಗೆ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸುಕುಮಾರ್ ಶೆಟ್ಟಿ ಪ್ರತಿಕ್ರಿಯಿಸಿದ್ದು, ಹೋಟೆಲ್ ಮುಚ್ಚುವ ಬಗ್ಗೆ ಆಯಾ ಮಾಲೀಕರ ನಿರ್ಧಾರಕ್ಕೆ ಬಿಟ್ಟಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಮಿತ್ ಶಾ ಹೇಳಿಕೆ ಖಂಡಿಸಿ ನಾಳೆ ಕರೆ ಕೊಟ್ಟಿದ್ದ ವಿಜಯಪುರ ಬಂದ್ ಮುಂದೂಡಿಕೆ: ಕಾರಣ ಇಲ್ಲಿದೆ
ಇನ್ನು ನಾಳೆ ದಲಿತ ಪರ ಸಂಘಟನೆಗಳ ಹುಬ್ಬಳ್ಳಿ-ಧಾರವಾಡ ಬಂದ್ ಕರೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. ಹೀಗಾಗಿ ಇದು ಸದ್ಯ ರಾಜಕೀಯ ತಿರುವುಪಡೆದುಕೊಂಡ ಹಿನ್ನೆಲೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಅಲರ್ಟ್ ಆಗಿದ್ದಾರೆ. ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಪೊಲೀಸರಿಂದ ರೋಲ್ಕಾಲ್ ಮಾಡಲಾಗಿದೆ.
ಬಲವಂತವಾಗಿ ಬಂದ್ ಮಾಡಿಸಿದರೆ ಕ್ರಮ: ಎನ್ ಶಶಿಕುಮಾರ್
ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಪ್ರತಿಕ್ರಿಯೆ ನೀಡಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಂಘಟನಾಕಾರರು ಎಚ್ಚರ ವಹಿಸಬೇಕು. ಬಂದ್ ಎನ್ನುವುದು ಇಲ್ಲ. ಬಲವಂತವಾಗಿ ಬಂದ್ ಮಾಡಿಸುವ ಹಾಗಿಲ್ಲ. ಸಂಘಟನಾಕಾರರು ಶಾಂತಿಯುತವಾಗಿ ತಮ್ಮ ಹೋರಾಟ ನಡೆಸಬಹುದು. ಬಲವಂತವಾಗಿ ಬಂದ್ ಮಾಡಿಸಿದರೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. 1500 ಸಿಬ್ಬಂದಿಯನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಮ್ಮ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಪೂರ್ವ ಭಾವಿ ಸಭೆ
ಒಂದು ಕಡ ನಾಳೆ ಬಂದ್ ಮಾಡಲಾಗುತ್ತಿದ್ದು, ಮತ್ತೊಂದು ಕಡೆ ಸಂವಿಧಾನ ಬದಲಿಸಿದ್ದು ಯಾರೂ ಪುಸ್ತಕ ಬಿಡುಗಡೆ ಕುರಿತಾಗಿ ಹುಬ್ಬಳ್ಳಿಯ ಅರವಿಂದ ನಗರದ ಬಿಜೆಪಿ ಕಚೇರಿಯಲ್ಲಿ ಪೂರ್ವ ಭಾವಿ ಸಭೆ ಮಾಡಲಾಗಿದೆ. ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ನೇತೃತ್ವದಲ್ಲಿ ಸಭೆ ಮಾಡಲಾಗಿದ್ದು, ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆಯಲ್ಲಿ ಇದೇ 13 ರಂದು ಸಂವಿಧಾನ ಬದಲಿಸಿದ್ದು ಯಾರೂ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಛಲವಾದಿ ನಾರಾಯಣ ಸ್ವಾಮಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:02 pm, Wed, 8 January 25