ಅಮಿತ್ ಶಾ ಹೇಳಿಕೆ ಖಂಡಿಸಿ ನಾಳೆ ಕರೆ ಕೊಟ್ಟಿದ್ದ ವಿಜಯಪುರ ಬಂದ್ ಮುಂದೂಡಿಕೆ: ಕಾರಣ ಇಲ್ಲಿದೆ
ಅಮಿತ್ ಶಾ ಅವರು ಬಿ.ಆರ್. ಅಂಬೇಡ್ಕರ್ ವಿರುದ್ಧದ ಹೇಳಿಕೆಯನ್ನು ಖಂಡಿಸಿ ವಿಜಯಪುರ ಕರೆ ನೀಡಲಾಗಿದ್ದ ಬಂದ್ ಅನ್ನು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ ಹಿನ್ನಲೆ ಮುಂದೂಡಲಾಗಿದೆ. ವಿವಿಧ ದಲಿತ ಮತ್ತು ಅಹಿಂದ ಸಂಘಟನೆಗಳು ಈ ಬಗ್ಗೆ ಮಾಹಿತಿ ನೀಡಿವೆ. ಡಿಸೆಂಬರ್ 30 ರಂದು ಬಂದ್ಗೆ ಕರೆ ನೀಡಲಾಗಿದೆ.
ವಿಜಯಪುರ, ಡಿಸೆಂಬರ್ 27: ಬಿಆರ್ ಅಂಬೇಡ್ಕರ್ ಅವರ ಕುರಿತಾಗಿ ಕೇಂದ್ರ ಸಚಿವ ಅಮಿತ್ ಶಾ (Amit Shah) ಅವಮಾನಕಾರಿ ಹೇಳಿಕೆ ಖಂಡಿಸಿ ವಿವಿಧ ದಲಿತ ಪರ ಸಂಘಟನೆಗಳು ನಾಳೆ ವಿಜಯಪುರ ಬಂದ್ಗೆ ಕರೆ ನೀಡಿದ್ದರು. ಆದರೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನ ಹಿನ್ನಲೆ ವಿಜಯಪುರ ಬಂದ್ ಅನ್ನು ಹೋರಾಟಗಾರರು ಮುಂದೂಡಿದ್ದಾರೆ. ನಾಳೆ ಬದಲಾಗಿ ಡಿಸೆಂಬರ್ 30ರಂದು ಬಂದ್ಗೆ ಕರೆ ನೀಡಿದ್ದಾರೆ.
ಮಾಜಿ ಶಾಸಕ ಪ್ರೊ. ರಾಜು ಅಲಗೂರು, ಸೋಮನಾಥ ಕಳ್ಳಿಮನಿ, ಅಬ್ದುಲ್ ಹಮೀದ್ ಮುಶ್ರೀಫ್ ಹಾಗೂ ಇತರರಿಂದ ನಗರದ ಪ್ರವಾಸಿ ತಾಣದಲ್ಲಿ ಸುದ್ದಿಗೋಷ್ಟಿ ಮಾಡಿದ್ದು, ಅಹಿಂದ, ಪ್ರಗತಿಪರ, ದಲಿತಪರ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಾಳೆ ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಿಜಯಪುರ ಬಂದ್ಗೆ ಕರೆ ನೀಡಲಾಗಿತ್ತು. ಆದರೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ ಕಾರಣ ಬಂದ್ ಮುಂದೂಡಲಾಗಿದೆ. ಬಂದ್ ಮುಂದೂಡಿಕೆ ಬಗ್ಗೆ ಜಿಲ್ಲಾಡಳಿತಕ್ಕೂ ಮಾಹಿತಿ ನೀಡಿರುವುದಾಗಿ ತಿಳಿಸಿದ್ದಾರೆ.
ಬೃಹತ್ ಪ್ರತಿಭಟನಾ ಮೆರವಣಿಗೆ ರದ್ದು
ಇದೇ ರೀತಿಯಾಗಿ ಕೇಂದ್ರ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಇಂದು ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಲ್ಲಿ ನಡೆಯಬೇಕಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆ ಹೋರಾಟವನ್ನು ರದ್ದು ಮಾಡಲಾಗಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ ಕಾರಣ ಪ್ರತಿಭಟನಾ ಹೋರಾಟವನ್ನು ಮುಂದೂಡಲಾಗಿದೆ ಎಂದು ದಲಿತ ಮುಖಂಡರಾದ ಅಶೋಕ ಚಲವಾದಿ ಹಾಗೂ ಅರವಿಂದ ಸಾಲವಾಡಗಿ ಹಾಗೂ ಇತರರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಅಮಿತ್ ಶಾ ಹೇಳಿಕೆ ಖಂಡಿಸಿ ನಾಳೆ ಕಲಬುರಗಿ ಬಂದ್ಗೆ ಕರೆ: ಶಾಲಾ, ಕಾಲೇಜುಗಳಿಗೆ ರಜೆ
ಬಸವನಬಾಗೇವಾಡಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಭಾವಚಿತ್ರ ಹಾಕಿ ಸಂತಾಪ ಸೂಚಿಸಲಾಗಿದೆ. ಅವರ ಆತ್ಮಕ್ಕೆ ಶಾಂತಿ ಕೋರಲಾಗಿದೆ. ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ವಿವಿಧ ದಲಿತಪರ ಸಂಘಟನೆಗಳಿಂದ ಬಸವನಬಾಗೇವಾಡಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆಯನ್ನು ಇಂದು ಹಮ್ಮಿಕೊಂಡಿದ್ದನ್ನು ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.
ಪರಶುರಾಮ ದಿಂಡವಾರ, ಮಹಾಂತೇಶ ಸಾಸಾಬಾಳ, ತಮ್ಮಣ್ಣ ಕಾನಾಗಡ್ಡಿ, ಮಹಾಂತೇಶ ಚಕ್ರವರ್ತಿ, ಮುತ್ತುರಾಜ ಬಾಗೇವಾಡಿ ಸೇರಿದಂತೆ ಮುಂತಾದವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಶ್ರದ್ದಾಂಜಲಿ ಸಲ್ಲಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:54 pm, Fri, 27 December 24