ರೈತರಿಗೆ ‘ಖಾರ’ವಾದ ಮೆಣಸಿನಕಾಯಿ: ಸಂಕಷ್ಟಕ್ಕೆ ಸಿಲುಕಿದ ಅನ್ನದಾತ

Chili Price Crash: ಧಾರವಾಡ ಜಿಲ್ಲೆಯ ರೈತರು ಅನಾವೃಷ್ಟಿ ನಡುವೆಯೂ ಬೋರ್‌ವೆಲ್ ನೀರು ಬಳಸಿ ಮೆಣಸಿನಕಾಯಿ ಬೆಳೆದಿದ್ದರು. ಆದರೆ ಬೆಳೆ ಕಟಾವಿಗೆ ಬಂದಾಗ ದರ ಕುಸಿತವಾಗಿದೆ. ಕಾರ್ಮಿಕರ ಕೂಲಿ ಹಾಗೂ ಸಾಗಾಣಿಕಾ ವೆಚ್ಚವೂ ಸಿಗದ ಕಾರಣ, ರೈತರು ಕಂಗಾಲಾಗಿದ್ದಾರೆ. ಬೆಳೆ ಕಟಾವು ಮಾಡದೆ ಗಿಡದಲ್ಲೇ ಬಿಡುತ್ತಿದ್ದಾರೆ.

ರೈತರಿಗೆ ಖಾರವಾದ ಮೆಣಸಿನಕಾಯಿ: ಸಂಕಷ್ಟಕ್ಕೆ ಸಿಲುಕಿದ ಅನ್ನದಾತ
ಮೆಣಸಿನಕಾಯಿ
Image Credit source: tv9 kannada
Edited By:

Updated on: Aug 08, 2026 | 6:18 PM

ಧಾರವಾಡ, ಆಗಸ್ಟ್​​ 08: ಜಿಲ್ಲೆಯಲ್ಲಿ ಈ ಬಾರಿ ಅನಾವೃಷ್ಟಿ ಎದುರಾಗಿದೆ. ಇದರಿಂದಾಗಿ ರೈತರು (farmers) ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ಮಧ್ಯೆ ಅನೇಕ ರೈತರು ತಮ್ಮ ಬೆಳೆಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯೂ ಆಗಿದ್ದಾರೆ. ಆದರೆ ದರ ಕುಸಿತದ ಪರಿಣಾಮದಿಂದಾಗಿ ಚಿಂತೆಗೀಡಾಗಿದ್ದಾರೆ. ನೀರು ಹಾಯಿಸಿ ಮೆಣಸಿನಕಾಯಿಯನ್ನ (chili) ದಷ್ಟಪುಷ್ಟವಾಗಿ ಬೆಳೆಸಿರುವ ರೈತರು ಇದೀಗ ದರ ಕುಸಿತದಿಂದಾಗಿ ಗಿಡದಲ್ಲಿಯೇ  ಬಿಟ್ಟು ಬಿಟ್ಟಿದ್ದಾರೆ.

ಕೈ ಕೊಟ್ಟ ಮಳೆ: ಸಂಕಷ್ಟದಲ್ಲಿ ರೈತರು

ಧಾರವಾಡ ಜಿಲ್ಲೆಯಲ್ಲಿ ಮೆಣಸಿನಕಾಯಿಯೂ ಒಂದು ಪ್ರಮುಖ ಬೆಳೆ. ಈ ಬಾರಿಯೂ ಜಿಲ್ಲೆಯ ನವಲಗುಂದ, ಅಣ್ಣಿಗೇರಿ ತಾಲೂಕು ಸೇರಿದಂತೆ ಅನೇಕ ಕಡೆಗಳಲ್ಲಿ ಮೆಣಸಿನಕಾಯಿ ಬೆಳೆದಿದ್ದಾರೆ. ಆದರೆ ಆರಂಭದಲ್ಲಿ ಚೆನ್ನಾಗಿ ಸುರಿದಿದ್ದ ಮಳೆ ಬಳಿಕ ಕಣ್ಮರೆ ಆಯಿತು. ಇದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದರು. ಅದರಲ್ಲೂ ಮೆಣಸಿನಕಾಯಿ ಬೆಳೆಯಲು ಕೊಂಚ ಹೆಚ್ಚು ವೆಚ್ಚ ಮಾಡಬೇಕಾಗುತ್ತೆ. ಆದರೂ ಹಿಂಜರಿಯದ ಅನ್ನದಾತರು ಮೆಣಸಿನಕಾಯಿಯನ್ನೇ ನಾಟಿ ಮಾಡಿದ್ದರು.

ಇದನ್ನೂ ಓದಿ: ಧಾರವಾಡ ಕೃಷಿ ವಿವಿ ಸಂಶೋಧನೆಗೆ ಜಾಗತಿಕ ಮನ್ನಣೆ: ಇಂಡೋನೇಷ್ಯಾಗೆ ಗೋಧಿ ಬೀಜ ರಫ್ತು

ಯಾವಾಗ ಮಳೆರಾಯ ಕೈಕೊಟ್ಟನೋ ಕೂಡಲೇ ಬೋರ್ ವೆಲ್ ಅಥವಾ ಕೃಷಿ ಹೊಂಡಗಳಿಂದ ಬೆಳೆಗೆ ನೀರುಣಿಸಿದರು. ಹೀಗೆ ಬೆಳೆಗೆ ನೀರುಣಿಸಲು ರೈತರು ಸಾಕಷ್ಟು ಕಷ್ಟಪಟ್ಟಿದ್ದಾರೆ. ವಿಪರ್ಯಾಸದ ಸಂಗತಿಯೆಂದರೆ, ಇನ್ನೇನು ಬೆಳೆಯನ್ನು ಕಟಾವು ಮಾಡಬೇಕು ಅನ್ನೋ ಹೊತ್ತಿಗೆ ಮೆಣಸಿನಕಾಯಿ ದರದಲ್ಲಿ ತೀವ್ರ ಇಳಿಕೆ ಕಂಡು ಬಂದಿದೆ. ಇದರಿಂದಾಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಒಮ್ಮೆಲೇ ದರದಲ್ಲಿ ತೀವ್ರ ಕುಸಿತ

ಎಲ್ಲೆಲ್ಲೋ ವಿಚಾರಿಸಿ ರೈತರು ಉತ್ತಮ ತಳಿಯ ಸಸಿಯನ್ನು ದುಬಾರಿ ಬೆಲೆಗೆ ಖರೀದಿಸಿ ತಂದು ನಾಟಿ ಮಾಡಿದ್ದರು. ಮಳೆ ಮಾಯವಾದ ಕೂಡಲೇ ತುಂತುರು ಹನಿ ನೀರಾವರಿ ಮೂಲಕ ರೈತರು ಬೆಳೆಗೆ ನೀರುಣಿಸಿ, ಅದ್ಭುತ ಬೆಳೆಯನ್ನು ತೆಗೆದಿದ್ದರು. ಇದೀಗ ಮೈತುಂಬಾ ಕಾಯಿ ಬಿಟ್ಟು, ಗಿಡಗಳು ಹೊಯ್ದಾಡುತ್ತಿವೆ. ಇದೀಗ ಕಾಯಿಯನ್ನು ಕಟಾವು ಮಾಡಿ ಮಾರುಕಟ್ಟೆಗೆ ಕಳಿಸಬೇಕಾಗಿದೆ. ಆದರೆ ಒಮ್ಮೆಲೇ ದರದಲ್ಲಿ ತೀವ್ರ ಕುಸಿತ ಕಂಡು ಬಂದಿದೆ. ಇದರಿಂದಾಗಿ ರೈತರು ಕಂಗಾಲಾಗಿದ್ದು, ಕಾಯಿಯನ್ನು ಕೀಳಿಸದೇ ಗಿಡದಲ್ಲಿ ಹಾಗೆಯೇ ಬಿಡುತ್ತಿದ್ದಾರೆ.

10 ಕೆಜಿಗೆ 80 ರಿಂದ 100 ರೂ. ದರ

ಮತ್ತೆ ಕೆಲವರು ಬಂದಷ್ಟು ದುಡ್ಡು ಬರಲಿ ಅಂತಾ ಮಾರುಕಟ್ಟೆಗೆ ಒಯ್ದರೆ, 10 ಕೆಜಿಗೆ 80 ರಿಂದ 100 ರೂ. ದರ ನಿಗದಿಪಡಿಸಲಾಗುತ್ತಿದೆ. ಒಂದು ವೇಳೆ ರೈತರು ಈ ದರಕ್ಕೆ ಮೆಣಸಿನಕಾಯಿಯನ್ನು ಮಾರಾಟ ಮಾಡಿದರೆ, ಅವರಿಗೆ ಮತ್ತಷ್ಟು ನಷ್ಟವಾಗುತ್ತೆ. ಏಕೆಂದರೆ ಮೆಣಸಿನಕಾಯಿ ಕೀಳಲು ಕಾರ್ಮಿಕರಿಗೆ ಸಾಕಷ್ಟು ಕೂಲಿ ನೀಡಬೇಕಾಗುತ್ತೆ. ಇದೆಲ್ಲ ಮಾಡಿದ ಬಳಿಕ ತಾವೇ ವಾಹನದ ಖರ್ಚನ್ನು ಭರಿಸಿ, ಮಾರುಕಟ್ಟೆಗೆ ತೆಗೆದುಕೊಂಡು ಹೋಗಬೇಕು. ಹೀಗೆ ತೆಗೆದುಕೊಂಡ ಹೋದ ಮೆಣಸಿನಕಾಯಿಗೆ ಕನಿಷ್ಟ ಕೆಜಿಗೆ 25 ರೂ ನಿಗದಿಯಾದರೆ ಅದುವರೆಗೂ ರೈತರು ಮಾಡಿರುವ ಖರ್ಚಾದರೂ ಹೊರಗೆ ಹೋಗುತ್ತೆ. ಈ ದರದ ಮೇಲೆ ಏನಾದರೂ ನಿಗದಿಯಾದರಷ್ಟೇ ಅದು ಲಾಭದ ಲೆಕ್ಕಕ್ಕೆ ಸೇರುತ್ತೆ. ಇಲ್ಲವಾದರೆ ರೈತರು ಇಷ್ಟು ದಿನ ಕಟ್ಟಪಟ್ಟಿದ್ದು ವ್ಯರ್ಥ ಎಂದೇ ಅರ್ಥ. ಈಗಾಗಲೇ ಎಕರೆಗೆ ಸಾವಿರಾರು ರೂ ವ್ಯಯಿಸಿರುವ ರೈತರು ಮತ್ತೆ ಕಾಯಿ ಕೀಳಲು ಹಣ ಖರ್ಚು ಮಾಡಬೇಕು. ಇಷ್ಟಾದರೂ ಲಾಭ ಬರದೇ ಇದ್ದರೆ ಏನು ಮಾಡೋದು ಅಂದುಕೊಂಡು ಕಾಯಿ ಕೀಳದೇ ಹಾಗೆಯೇ ಬಿಡುತ್ತಿದ್ದಾರೆ.

ಇದನ್ನೂ ಓದಿ: ಧಾರವಾಡ: ಮೆಣಸಿನಕಾಯಿ ದರ ಕುಸಿತ, 3 ಎಕರೆಯಲ್ಲಿ ಬೆಳೆದಿದ್ದ ಬೆಳೆ ನಾಶ ಮಾಡಿದ ರೈತ!

ಇದೀಗ ಜಿಲ್ಲೆಯಲ್ಲಿ ಕೊಂಚ ಮಳೆಯಾಗುತ್ತಿದ್ದು, ಈ ಬೆಳೆ ಕಟಾವು ಮಾಡಿ ಒಂದಷ್ಟು ಆದಾಯ ಬಂದರೆ ಮುಂದಿನ ಬೆಳೆಗೆ ಯೋಚನೆ ಮಾಡಬಹುದು ಅನ್ನೋದು ರೈತರ ಲೆಕ್ಕಾಚಾರ. ಆದರೆ ಇದೀಗ ಈ ಬೆಳೆಯಿಂದ ಯಾವುದೇ ಲಾಭವೇ ಇಲ್ಲ ಅಂದಾಗ ಅವರು ಮುಂದಿನ ಬೆಳೆಯ ಯೋಚನೆಯನ್ನೇ ಕೈ ಬಿಡುವಂತಾಗಿದೆ. ಒಟ್ಟಿನಲ್ಲಿ ಬೆಳೆ ಬಂದರೂ ಮತ್ತು ಬೆಳೆ ಬರದಿದ್ದರೂ ರೈತರಿಗೆ ಸಂಕಷ್ಟ ತಪ್ಪದೇ ಇರೋದು ವಿಪರ್ಯಾಸವೇ ಸರಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:16 pm, Sat, 8 August 26

Loading...
Unable to load recommendations.
Follow Us