AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧಾರವಾಡ ಕೃಷಿ ವಿವಿ ಸಂಶೋಧನೆಗೆ ಜಾಗತಿಕ ಮನ್ನಣೆ: ಇಂಡೋನೇಷ್ಯಾಗೆ ಗೋಧಿ ಬೀಜ ರಫ್ತು

ಧಾರವಾಡ ಕೃಷಿ ವಿಶ್ವವಿದ್ಯಾಲಯದ DWR 162 ಗೋಧಿ ತಳಿಯು ಇದೀಗ ಇಂಡೋನೇಷ್ಯಾಕ್ಕೆ ರಫ್ತಾಗುತ್ತಿದೆ. ಭಾರತ ಮತ್ತು ಇಂಡೋನೇಷ್ಯಾ ನಡುವಿನ ಒಪ್ಪಂದದ ಭಾಗವಾಗಿ, ಪ್ರಾದೇಶಿಕ ಆಹಾರ ಭದ್ರತೆಯನ್ನು ಬಲಪಡಿಸಲು ಈ ತಳಿಯನ್ನು ಆಯ್ಕೆ ಮಾಡಲಾಗಿದೆ. ರೋಗ ನಿರೋಧಕ ಮತ್ತು ಅಧಿಕ ಇಳುವರಿ ಸಾಮರ್ಥ್ಯದ ಈ ತಳಿ, ಉಷ್ಣ ಹವಾಮಾನಕ್ಕೂ ಹೊಂದಿಕೊಳ್ಳುತ್ತದೆ. ಇದು ಧಾರವಾಡ ಕೃಷಿ ವಿವಿಗೆ ಹೆಮ್ಮೆಯಾಗಿದ್ದು, ಕೃಷಿ ಸಹಕಾರದಲ್ಲಿ ಮಹತ್ವದ ಮೈಲಿಗಲ್ಲು.

ಧಾರವಾಡ ಕೃಷಿ ವಿವಿ ಸಂಶೋಧನೆಗೆ ಜಾಗತಿಕ ಮನ್ನಣೆ: ಇಂಡೋನೇಷ್ಯಾಗೆ ಗೋಧಿ ಬೀಜ ರಫ್ತು
ಗೋಧಿ ಬೆಳೆImage Credit source: tv9 kannada
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Edited By: |

Updated on: Jul 10, 2026 | 9:43 PM

Share

ಧಾರವಾಡ, ಜುಲೈ 10: ಧಾರವಾಡ ಕೃಷಿ ವಿಶ್ವವಿದ್ಯಾಲಯ (University of Agricultural Sciences) ದೇಶದಲ್ಲಷ್ಟೇ ಅಲ್ಲ ವಿದೇಶಗಳಲ್ಲಿ ಭಾರೀ ಹೆಸರು ಮಾಡಿದೆ. ತನ್ನ ಕೃಷಿ ಸಂಶೋಧನೆಗಳಿಂದಾಗಿ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದೆ. ಇಂತಹ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸಂಶೋಧಿಸಿದ ಗೋಧಿ (wheat) ತಳಿಯೊಂದು ಇದೀಗ ವಿದೇಶಕ್ಕೆ ರಫ್ತಾಗುತ್ತಿದೆ. ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ಇಂಡೋನೇಷ್ಯಾಕ್ಕೆ ಭೇಟಿ ನೀಡಿದಾಗ ಧಾರವಾಡ (dharwad) ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸಂಶೋಧಿಸಿದ ಈ ತಳಿಯನ್ನು ಆ ದೇಶಕ್ಕೆ ನೀಡುವ ಒಡಂಬಡಿಕೆಗೆ ಸಹಿ ಹಾಕಿದ್ದಾರೆ. ಇದು ಕೃಷಿ ವಿಶ್ವವಿದ್ಯಾಲಯದ ಪಾಲಿಗೆ ಹೆಮ್ಮೆಯ ಸಂಗತಿಯಾಗಿದೆ.

ಮತ್ತೊಂದು ಮೈಲಿಗಲ್ಲು ಮುಟ್ಟಿದ ಧಾರವಾಡದ ಕೃಷಿ ವಿಶ್ವವಿದ್ಯಾಲಯ

ಧಾರವಾಡದ ಕೃಷಿ ವಿಶ್ವವಿದ್ಯಾಲಯ ಇದೀಗ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಮುಟ್ಟಿದೆ. ಈ ಕೃಷಿ ವಿಶ್ವವಿದ್ಯಾಲಯ ಸಂಶೋಧಿಸಿದ ಗೋಧಿ ತಳಿಯೊಂದು ಇದೀಗ ವಿದೇಶಕ್ಕೆ ರಫ್ತಾಗುತ್ತಿದೆ. ಪ್ರಾದೇಶಿಕ ಆಹಾರ ಭದ್ರತೆ ಮತ್ತು ಕೃಷಿ ಸಹಕಾರ ಬಲಪಡಿಸುವ ನಿಟ್ಟಿನಲ್ಲಿ ಭಾರತ ಮತ್ತು ಇಂಡೋನೇಷ್ಯಾ ಮಹತ್ವದ ಹೆಜ್ಜೆ ಇಟ್ಟಿವೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಇಂಡೋನೇಷ್ಯಾಗೆ ಭೇಟಿ ಸಂದರ್ಭದಲ್ಲಿ ಉಭಯ ದೇಶಗಳ ನಡುವೆ ಸಹಿ ಮಾಡಲಾದ ಒಪ್ಪಂದ ಪತ್ರದ ಭಾಗವಾಗಿ ಧಾರವಾಡದ ಕೃಷಿ ವಿಶ್ವವಿದ್ಯಾಲಯದಿಂದ ಅಭಿವೃದ್ಧಿಪಡಿಸಲಾದ ಉನ್ನತ ಗುಣಮಟ್ಟದ ಡಿಡಬ್ಲ್ಯೂಆರ್ 162 ಗೋಧಿ ಬೀಜಗಳನ್ನು ಇಂಡೋನೇಷ್ಯಾ ದೇಶಕ್ಕೆ ಪೂರೈಸಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: ಹುಬ್ಬಳ್ಳಿಯ ಕೆಎಂಸಿಆರ್‌ಐನಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ: ಎರಡು ವರ್ಷಗಳಲ್ಲಿ 70ಕ್ಕೂ ಹೆಚ್ಚು ‘ಸ್ಕಲ್ ಬೇಸ್ ಆಸ್ಟಿಯೋಮೈಲೈಟಿಸ್’ ರೋಗಿಗಳಿಗೆ ಯಶಸ್ವಿ ಟ್ರೀಟ್​​ಮೆಂಟ್​

ಗೋಧಿಯನ್ನು ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ವ್ಯಾಪಕವಾಗಿ ಬೆಳೆಯುತ್ತಿದ್ದು, ಈ ಪ್ರದೇಶಗಳಲ್ಲಿ ಗೋಧಿ ಬೆಳೆಯುವ ಅವಧಿಯುದ್ದಕ್ಕೂ ಉಷ್ಣಾಂಶ ಹೆಚ್ಚಾಗಿರುವುದು, ಬೆಳೆ ಅವಧಿ ಕಡಿಮೆ ಹಾಗೂ ಹವಾಮಾನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಗೋಧಿ ತಳಿಗಳ ಅಭಿವೃದ್ಧಿ ಆಗಬೇಕು ಎಂಬುದು 1980ರ ದಶಕದ ಸಮಯದಲ್ಲಿ ಪ್ರಮುಖ ಸಂಶೋಧನಾ ಗುರಿಯಾಗಿತ್ತು. ಆಗ ಧಾರವಾಡದ ಕೃಷಿ ವಿವಿ ಅಂದಿನ ಗೋಧಿ ತಳಿ ಶಾಸ್ತ್ರಜ್ಞರು, ಕೃಷಿ ವಿವಿ ವಿಶ್ರಾಂತ ಕುಲಪತಿ ಆದ ಡಾ.ಆರ್.ಆರ್. ಹಂಚಿನಾಳ ನೇತೃತ್ವದಲ್ಲಿ ಗೋಧಿ ಸುಧಾರಣಾ ಕಾರ್ಯಕ್ರಮವನ್ನು ಆರಂಭಿಸಿತ್ತು.

ಡಿಡಬ್ಲ್ಯೂಆರ್ 162 ಚಪಾತಿ ಗೋಧಿ ತಳಿಯ ವಿಶೇಷತೆ ಏನು?

ಶಟಲ್ ಬ್ರೀಡಿಂಗ್ ವಿಧಾನ ಬಳಸಿಕೊಂಡು ಅಭಿವೃದ್ಧಿಪಡಿಸಲಾದ ಡಿಡಬ್ಲ್ಯೂಆರ್ 162 ಚಪಾತಿ ಗೋಧಿ ತಳಿಯನ್ನು 1993ರಲ್ಲಿ ಭಾರತ ಅಧಿಕೃತವಾಗಿ ಬಿಡುಗಡೆ ಮಾಡಿತ್ತು. ಈ ತಳಿಯು ಎಲೆ ತುಕ್ಕು ಹಾಗೂ ಕಾಂಡ ತುಕ್ಕು ರೋಗಗಳಿಗೆ ಪ್ರತಿರೋಧಕವಾಗಿದ್ದು, ಹೆಚ್ಚಿನ ಇಳುವರಿ ಸಾಮರ್ಥ್ಯ, ಉತ್ತಮ ಧಾನ್ಯದ ಗುಣಮಟ್ಟ ಹಾಗೂ ಬೆಳೆ ಬೆಳವಣಿಗೆಯ ಅವಧಿಯಲ್ಲಿ ಉಷ್ಣ ಒತ್ತಡವನ್ನು ಸಹಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಈ ವಿಶೇಷ ಗುಣಲಕ್ಷಣಗಳಿಂದಾಗಿ ಈ ತಳಿಯು ಭಾರತದ ಉಷ್ಣ ಹವಾಮಾನದಲ್ಲಿಯೂ ಉತ್ತಮವಾಗಿ ಬೆಳೆಯುವ ಸಾಮರ್ಥ್ಯ ಹೊಂದಿದೆ. ಮೂರು ದಶಕಗಳ ಹಿಂದೆ ಬಿಡುಗಡೆಯಾದರೂ, ಡಿಡಬ್ಲ್ಯೂಆರ್ 162 ಇಂದಿಗೂ ರೈತರ ಅತ್ಯಂತ ಮೆಚ್ಚಿನ ಗೋಧಿ ತಳಿಗಳಲ್ಲಿ ಒಂದಾಗಿದ್ದು, ಬ್ರೀಡರ್ ಬೀಜಗಳ ಬೇಡಿಕೆಯಲ್ಲಿಯೂ ಮುಂಚೂಣಿಯಲ್ಲಿದೆ.

ರಾಷ್ಟ್ರೀಯ ಆಹಾರ ಭದ್ರತೆ ಬಲಪಡಿಸುವ ಉದ್ದೇಶದಿಂದ ಇಂಡೋನೇಷ್ಯಾ ಸರ್ಕಾರ ಭಾರತೀಯ ಸಂಶೋಧನಾ ಸಂಸ್ಥೆಗಳು ಹಾಗೂ ಅಂತಾರಾಷ್ಟ್ರೀಯ ಮೆಕ್ಕೆಜೋಳ ಮತ್ತು ಗೋಧಿ ಸುಧಾರಣಾ ಕೇಂದ್ರ ಅಭಿವೃದ್ಧಿಪಡಿಸಿದ ವಿವಿಧ ಗೋಧಿ ತಳಿಗಳನ್ನು ತನ್ನ ಉಷ್ಣವಲಯದ ಹವಾಮಾನಕ್ಕೆ ಹೊಂದಾಣಿಕೆ ಪರೀಕ್ಷಿಸಲು ಆಮದು ಮಾಡಿಕೊಂಡಿತ್ತು. ಈ ಪರೀಕ್ಷೆಗಳಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ ಡಿಡಬ್ಲ್ಯೂಆರ್ 162 ತಳಿಯು ಇತರೆ ಎಲ್ಲಾ ತಳಿಗಳಿಗಿಂತ ಉತ್ತಮ ಇಳುವರಿ ಹಾಗೂ ಗುಣಮಟ್ಟವನ್ನು ಪ್ರದರ್ಶಿಸಿದೆ. ಈ ಅತ್ಯುತ್ತಮ ಫಲಿತಾಂಶ ಗುರುತಿಸಿದ ಇಂಡೋನೇಷ್ಯಾ ಸರ್ಕಾರ 2000 ಇಸವಿಯಲ್ಲೇ ದೊಡ್ಡ ಪ್ರಮಾಣದ ಕ್ಷೇತ್ರ ಪರೀಕ್ಷೆಗಳಿಗಾಗಿ ಈ ತಳಿಯ ಬೀಜಗಳನ್ನು ಆಮದು ಮಾಡಿಕೊಂಡಿತ್ತು. ಜೊತೆಗೆ ಈ ತಳಿಯ ಕೃಷಿ ತಂತ್ರಜ್ಞಾನ ಮತ್ತು ನಿರ್ವಹಣೆಯ ಕುರಿತು ತಾಂತ್ರಿಕ ಮಾರ್ಗದರ್ಶನ ನೀಡಲು ಡಾ. ಆರ್. ಆರ್. ಹಂಚಿನಾಳ ಅವರನ್ನು ಸಲಹೆಗಾರರಾಗಿ ಆಹ್ವಾನಿಸಿತ್ತು.

100 ಟನ್ ಡಿಡಬ್ಲ್ಯೂಆರ್ 162 ಗೋಧಿ ಬೀಜಗಳ ಪೂರೈಕೆಗೆ ನಿರ್ಧಾರ

ಭಾರತದಲ್ಲಿ ಸಸ್ಯ ತಳಿಗಳು ಮತ್ತು ರೈತರ ಹಕ್ಕುಗಳ ಸಂರಕ್ಷಣಾ ಕಾಯ್ದೆ ಹಾಗೂ ಜೈವಿಕ ವೈವಿದ್ಯ ಕಾಯ್ದೆ ಜಾರಿಗೆ ಬಂದ ಪರಿಣಾಮ, ಇಂಡೋನೇಷ್ಯಾಗೆ ಉತ್ತಮ ಗುಣಮಟ್ಟದ ಡಿಡಬ್ಲ್ಯೂಆರ್ 162 ಬೀಜಗಳನ್ನು ಪೂರೈಸುವಲ್ಲಿ ಕೆಲವು ಅಡೆತಡೆಗಳು ಎದುರಾದವು. ಇದರಿಂದ ಇಂಡೋನೇಷ್ಯಾ ಸರ್ಕಾರ ಭಾರತ ಸರ್ಕಾರದೊಂದಿಗೆ ನಿರಂತರವಾಗಿ ಸಮಾಲೋಚನೆ ನಡೆಸಿ, ಕಾನೂನುಬದ್ಧ ಹಾಗೂ ಸಾಂಸ್ಥಿಕ ವ್ಯವಸ್ಥೆಗಳ ಮೂಲಕ ಬೀಜಗಳ ಪೂರೈಕೆಗೆ ಅವಕಾಶ ಕಲ್ಪಿಸಲು ಪ್ರಯತ್ನಿಸಿತ್ತು. ಇದರ ಭಾಗವಾಗಿ ಭಾರತವು ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ಉತ್ಪಾದಿಸಲಾದ 100 ಟನ್ ಉನ್ನತ ಗುಣಮಟ್ಟದ ಡಿಡಬ್ಲ್ಯೂಆರ್ 162 ಗೋಧಿ ಬೀಜಗಳನ್ನು ಇಂಡೋನೇಷ್ಯಾಗೆ ಪೂರೈಸಲು ನಿರ್ಧರಿಸಿದೆ.

ಇದನ್ನೂ ಓದಿ: ನಮ್ಮ ಬೆಂಗಳೂರಿನಿಂದ ಹೊರಡೋ ಈ 5 ವಂದೇ ಭಾರತ್ ರೈಲುಗಳಲ್ಲಿದೆ ಸೂಪರ್ ವೀಕೆಂಡ್ ಟ್ರಿಪ್ ಪ್ಲಾನ್

ಇನ್ನು ಭಾರತದ ಈ ಗೋಧಿಯನ್ನು ಖರೀದಿಸುವ ಇಂಡೋನೇಷ್ಯಾದ ಈ ಕ್ರಮವು ಆಹಾರ ಭದ್ರತಾ ಕಾರ್ಯಕ್ರಮಗಳಿಗೆ ಮಹತ್ವದ ಬೆಂಬಲ ಒದಗಿಸಲಿದೆ. ಭಾರತ ಮತ್ತು ಇಂಡೋನೇಷ್ಯಾ ನಡುವಿನ ದೀರ್ಘಕಾಲೀನ ಕೃಷಿ ಸಹಭಾಗಿತ್ವದಲ್ಲಿ ಇದೊಂದು ಮಹತ್ವದ ಮೈಲಿಗಲ್ಲಾಗಲಿದೆ. ಇಂಥದ್ದೊಂದು ಸಾಧನೆಗೆ ಕಾರಣವಾದ ಕೃಷಿ ವಿವಿಗೆ ಇದೊಂದು ಹೆಮ್ಮೆಯ ಸಂಗತಿಯೇ ಸರಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us