ಅಭಿಮಾನಿಗಳು ಒದ್ದೆ ಆಗ್ತಿರೋದನ್ನು ನೋಡಿ ತಾವೂ ಮಳೆಯಲ್ಲಿ ನೆನೆದ ಕಿಚ್ಚ ಸುದೀಪ್
ರಾಮನಗರ ಕರಗ ಉತ್ಸವದಲ್ಲಿ ನಟ ಕಿಚ್ಚ ಸುದೀಪ್ ತಮ್ಮ ಅಭಿಮಾನಿಗಳಿಗಾಗಿ ಮಳೆಯಲ್ಲಿ ನೆನೆದು ಮಾತನಾಡುವ ಮೂಲಕ ಸರಳತೆ ಮೆರೆದಿದ್ದಾರೆ. ತಮಗಾಗಿ ಹಿಡಿದ ಛತ್ರಿಯನ್ನು ಬದಿಗೊತ್ತಿ ಮಾತನಾಡಿದ ಅವರು, ಅಭಿಮಾನಿಗಳ ಪ್ರೀತಿಗೆ ಧನ್ಯವಾದ ಅರ್ಪಿಸಿದ್ದಾರೆ. ಬಿಗ್ ಬಾಸ್ ಕುರಿತಾಗಿಯೂ ಖುಷಿಯ ವಿಷಯ ಹಂಚಿಕೊಂಡಿದ್ದಾರೆ.

ಮುಖ್ಯಾಂಶಗಳು
- ಅಭಿಮಾನಿಗಳಿಗಾಗಿ ಛತ್ರಿ ಬದಿಗೊತ್ತಿದ ಕಿಚ್ಚ
- ಮಳೆಯಲ್ಲೇ ನೆನೆದು ಭಾಷಣ ಮಾಡಿದ ಸುದೀಪ್
- 'ರಾಮನಗರದ ಜನರ ಪ್ರೀತಿ ಅಪಾರ' ಎಂದ ಸುದೀಪ್
ಕಿಚ್ಚ ಸುದೀಪ್ ಅವರಿಗೆ (Kichcha Sudeep) ಅಭಿಮಾನಿಗಳ ಮೇಲೆ ವಿಶೇಷ ಪ್ರೀತಿ ಇದೆ. ಅವರನ್ನು ಅತ್ಯಂತ ಗೌರವದಿಂದ ಕಾಣುತ್ತಾರೆ. ಇದು ಮತ್ತೊಮ್ಮೆ ಸಾಬೀತಾಗಿದೆ. ರಾಮನಗರ ಕರಗ ಉತ್ಸವಕ್ಕೆ ಸುದೀಪ್ ಅತಿಥಿಯಾಗಿ ತೆರಳಿದ್ದರು. ಈ ವೇಳೆ ವೇದಿಕೆ ಮೇಲೆ ಮಾತನಾಡುವಾಗ ಮಳೆ ಬಂದಿದೆ. ಅಭಿಮಾನಿಗಳ ಜೊತೆ ಅವರೂ ಮಳೆಯಲ್ಲಿ ನೆನೆದಿದ್ದಾರೆ. ಸುದೀಪ್ ಅವರು ಕರಗ ಉತ್ಸವದಲ್ಲಿ ಮಾತನಾಡಲು ವೇದಿಕೆ ಏರಿದರು. ಆಗ ಮಳೆ ಬರುತ್ತಾ ಇತ್ತು. ಅವರ ಸಹಾಯಕರು ಇವರಿಗೆ ಛತ್ರಿ ಹಿಡಿದಿದ್ದರು. ‘ಪರವಾಗಿಲ್ಲ ನಾವೂ ಸ್ವಲ್ಪ ಒದ್ದೆ ಆಗೋಣ’ ಎಂದು ಸಹಾಯಕರನ್ನು ಸುದೀಪ್ ದೂರ ತಳ್ಳಿದರು. ಈ ಮೂಲಕ ಮಳೆಯಲ್ಲಿಯೇ ಅವರು ಮಾತನಾಡಿದರು. ಅವರ ಈ ನಡೆಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.
‘ಮಳೆ ಬರ್ತಾ ಇದೆ ಜನ ಬರ್ತಾರಾ ಎಂದು ನಾನು ಮೊಹಮ್ಮದ್ ನಲಪಾಡ್ ಬಳಿ ಕೇಳಿದೆ. ರಾಮನಗರದ ಜನರ ಬಗ್ಗೆ ನಿಮಗೆ ಇನ್ನೂ ಗೊತ್ತಿಲ್ಲ ಬನ್ನಿ ಎಂದು ಕರೆದುಕೊಂಡುಬಂದರು’ ಎಂದು ಸುದೀಪ್ ಹೇಳಿದ್ದಾರೆ. ಮಳೆಯ ನಡುವೆಯೂ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದ್ದರ ಬಗ್ಗೆ ಅವರು ಖುಷಿ ಹೊರಹಾಕಿದರು.
View this post on Instagram
ಬಿಗ್ ಬಾಸ್ನಲ್ಲಿ ಈ ಬಾರಿ ಏನೆಲ್ಲ ವಿಶೇಷತೆ ಇರಲಿದೆ ಎಂದು ಪ್ರಶ್ನೆ ಮಾಡಲಾಯಿತು. ಇದಕ್ಕೆ ಅವರು ಉತ್ತರ ನೀಡಿದ್ದಾರೆ. ‘ಇದು ಗೆಳೆಯರ ವೇದಿಕೆ. ಗೆಳೆಯರು ಕರೆದ ವೇದಿಕೆ. ಇಲ್ಲಿ ಬಿಗ್ ಬಾಸ್ ಬೇಡ. ಬಿಗ್ ಬಾಸ್ ಎಲ್ಲಿ ನಡೆಯಬೇಕೋ, ಹೇಗೆ ನಡೆಯಬೇಕೋ ನಡೆಯುತ್ತಲೇ ಇರುತ್ತದೆ. ಜನರು ನೋಡುತ್ತಲೇ ಇರುತ್ತಾರೆ’ ಎಂದು ಖುಷಿಯಿಂದ ಹಂಚಿಕೊಂಡರು.
ಇದನ್ನೂ ಓದಿ: ದರ್ಶನ್, ಸುದೀಪ್ ನಟನೆಯ ಸಿನಿಮಾಗಳಲ್ಲಿ ವಿಲನ್ ಆಗಿ ಮಿಂಚಿದ್ದ ಪ್ರದೀಪ್ ರಾವತ್
ಕಿಚ್ಚ ಸುದೀಪ್ ಅವರು ‘ಬಿಗ್ ಬಾಸ್’ ನಡೆಸಿಕೊಡಲಿದ್ದಾರೆ. ಆಗಸ್ಟ್ 16ರಿಂದ ‘ಅಗ್ನಿಪರೀಕ್ಷೆ ಆರಂಭ ಆಗಲಿದೆ. ಸೆಪ್ಟೆಂಬರ್ 6ರಿಂದ ಅಸಲಿ ಆಟ ಶುರುವಾಗಲಿದೆ ಎನ್ನಲಾಗಿದೆ. ಸುದೀಪ್ ಅವರು ‘ಬಿಲ್ಲ ರಂಗ ಭಾಷ’ ಚಿತ್ರದಲ್ಲಿಯೂ ಬ್ಯುಸಿ ಆಗಿದ್ದಾರೆ. ಮುಂದಿನ ವರ್ಷ ಈ ಚಿತ್ರ ತೆರೆಗೆ ಬರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




