AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಕ್ತಾಯ ಪ್ರಮಾಣ ಪತ್ರ ಕೊಡಿಸಲು ಧಾರವಾಡ ಗ್ರಾಹಕರ ಆಯೋಗದಿಂದ ಬಿಲ್ಡರ್‌ಗೆ ಆದೇಶ

Dharwad News: ಅಪಾರ್ಟ್ಮೆಂಟ್​ ಮುಕ್ತಾಯ ಪ್ರಮಾಣ ಪತ್ರ ನೀಡುವಂತೆ ಇನ್‌ಫ್ರಾಟೆಕ್ ಕಂಪನಿಗೆ ಮತ್ತು ಫ್ಲ್ಯಾಟ್ ಖರೀದಿ ಪತ್ರ ಮಾಡಿಕೊಡದ ಬಿಲ್ಡರ್‌ಗೆ ಧಾರವಾಡದ ಜಿಲ್ಲಾ ಗ್ರಾಹಕರ ನ್ಯಾಯಾಲಯ ದಂಡ ಮತ್ತು ಪರಿಹಾರ ಒದಗಿಸುವಂತೆ ಆದೇಶಿಸಿದೆ.

ಮುಕ್ತಾಯ ಪ್ರಮಾಣ ಪತ್ರ ಕೊಡಿಸಲು ಧಾರವಾಡ ಗ್ರಾಹಕರ ಆಯೋಗದಿಂದ ಬಿಲ್ಡರ್‌ಗೆ ಆದೇಶ
ಪ್ರಾತಿನಿಧಿಕ ಚಿತ್ರ
Follow us
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Updated By: ಗಂಗಾಧರ​ ಬ. ಸಾಬೋಜಿ

Updated on: Aug 02, 2023 | 7:06 PM

ಧಾರವಾಡ, ಆಗಸ್ಟ್ 02: ಅಪಾರ್ಟ್ಮೆಂಟ್ (Apartment) ಮುಕ್ತಾಯ ಪ್ರಮಾಣ ಪತ್ರ ಕೊಡಿಸಲು ಶ್ರೀದತ್ತ್ ಇನ್‌ಫ್ರಾಟೆಕ್‌ಗೆ ಧಾರವಾಡದ ಜಿಲ್ಲಾ ಗ್ರಾಹಕರ ನ್ಯಾಯಾಲಯ ಆದೇಶ ನೀಡಿದೆ. ಇಲ್ಲಿಯ ಸಪ್ತಾಪುರ ದೇವದತ್ತ ಅಪಾರ್ಟ್ಮೆಂಟ್ ನಿವಾಸಿ ಪ್ರಾಣೇಶ ಸಂಬಾಪೂರ ಹುಬ್ಬಳ್ಳಿಯ ಗೋಕುಲ ರೋಡ್‌ನ ಶ್ರೀದತ್ತ್ ಇನ್‌ಫ್ರಾಟೆಕ್ ಕಂಪನಿಯವರ ಹತ್ತಿರ ಫ್ಲ್ಯಾಟ್ ಖರೀದಿಸಿದ್ದರು. ಆದರೆ ಬಿಲ್ಡರ್‌ ಈ ಅಪಾರ್ಟ್ಮೆಂಟ್ ಕಟ್ಟಲು ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಉಪಯೋಗಿಸಿದ್ದಾರೆ. ಅದರಿಂದ ಗೋಡೆಯಲ್ಲಿ ಬಿರುಕು ಬಿಟ್ಟಿದೆ. ಇದಲ್ಲದೇ ಸೋಲಾರ್ ಸಿಸ್ಟಮ್ ಕೂಡಾ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ.

ಇನ್ನು ಕಟ್ಟಡದ ಮುಕ್ತಾಯ ಪ್ರಮಾಣ ಪತ್ರವನ್ನು ಸಹ ನಮಗೆ ನೀಡಿಲ್ಲ. ಕಾರಣ ಬಿಲ್ಡರ್‌‌ನ ಈ ವರ್ತನೆ ಗ್ರಾಹಕರ ಸಂರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಎಂದು ಬಿಲ್ಡರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರಾಣೇಶ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಇದನ್ನೂ ಓದಿ: ದೋಷಯುಕ್ತ ವಾಷಿಂಗ್ ಮಷಿನ್​: ಅಮೆಜಾನ್‌ಗೆ ದಂಡ ವಿಧಿಸಿದ ಧಾರವಾಡ ಜಿಲ್ಲಾ ಗ್ರಾಹಕ ಆಯೋಗ

ಈ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ ಹಾಗೂ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ, ಶ್ರೀದತ್ತ್ ಇನ್‌ಫ್ರಾಟೆಕ್ ಕಂಪನಿಯವರು ಫ್ಲ್ಯಾಟ್ ನಿರ್ಮಿಸಿ ಸ್ವಾಧೀನತೆ ಕೊಟ್ಟಿದ್ದರು.

ದೂರು ದಾಖಲಾದ ಮೇಲೆ ಸೋಲಾರ್ ರಿಪೇರಿ ಮತ್ತು ಫ್ಲ್ಯಾಟ್‌ನ ಇತರೆ ಕೆಲಸಗಳನ್ನು ಬಿಲ್ಡರ್ ಮಾಡಿಸಿಕೊಟ್ಟಿದ್ದರು. ಆದರೆ ಮುಕ್ತಾಯ ಪ್ರಮಾಣ ಪತ್ರ ಕೊಡಿಸದಿರುವುದು ಸೇವಾ ನ್ಯೂನ್ಯತೆ ಆಗುತ್ತದೆ ಎಂದು ಆಯೋಗ ತೀರ್ಪು ನೀಡಿದೆ. ತೀರ್ಪು ನೀಡಿದ 3-4 ತಿಂಗಳ ಒಳಗಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅವರಿಂದ ಮುಕ್ತಾಯ ಪ್ರಮಾಣಪತ್ರ ಪಡೆದು ದೂರುದಾರರಿಗೆ ಕೊಡುವಂತೆ ಆಯೋಗ ಆದೇಶಿಸಿದೆ.

ಫ್ಲ್ಯಾಟ್ ಖರೀದಿ ಪತ್ರ ಮಾಡಿಕೊಡದ ಬಿಲ್ಡರ್‌ಗೆ ದಂಡ ಮತ್ತು ಪರಿಹಾರ

ಹುಬ್ಬಳ್ಳಿ ನಗರದ ಹಳೆ ಹುಬ್ಬಳ್ಳಿ ಬಡಾವಣೆಯ ನೂರಾನಿ ಪ್ಲ್ಯಾಟ್‍ ನಿವಾಸಿ ಅಬೀದ್ ನವಾಜ್ ಹನಸಿ ಎಂಬುವವರು ಹುಬ್ಬಳ್ಳಿಯ ಆರ್. ಎಮ್. ಬಿಲ್ಡರ್ ನೂತನವಾಗಿ ಬೊಮ್ಮಾಪುರದಲ್ಲಿ ನಿರ್ಮಿಸುತ್ತಿದ್ದ ರಾಯಲ್ ಅಪಾರ್ಟ್ಮೆಂಟ್‌ನಲ್ಲಿ ಫ್ಲ್ಯಾಟ್ ನಂ. 504 ನ್ನು ರೂ. 30 ಲಕ್ಷಗಳಿಗೆ ಆಗಸ್ಟ್-2020 ರಲ್ಲಿ ಖರೀದಿಸಿದ್ದರು. ಆ ಪೈಕಿ ಬೇರೆ ಬೇರೆ ದಿನಾಂಕಗಳಂದು ದೂರುದಾರ ವಿನಯ ಒಟ್ಟು ರೂ. 20 ಲಕ್ಷ ಮುಂಗಡ ಹಣವನ್ನು ಬಿಲ್ಡರ್‌ಗೆ ಕೊಟ್ಟಿದ್ದರು. ಆ ಬಗ್ಗೆ ಬಿಲ್ಡರ್ ದೂರುದಾರರಿಗೆ ಖರೀದಿ ಕರಾರು ಪತ್ರ ಮಾಡಿಕೊಟ್ಟಿದ್ದರು.

ಇದನ್ನೂ ಓದಿ: Dharwad News: ಫ್ಲ್ಯಾಟ್ ಮತ್ತು ಶಾಪ್ ಕೊಡದ ಡೆವಲಪರ್‌ಗೆ 65 ಲಕ್ಷ ರೂ ಹಿಂದಿರುಗಿಸಲು ಗ್ರಾಹಕರ ಆಯೋಗ ಆದೇಶ

ಬಾಕಿ ಮೊತ್ತವನ್ನು ತೆಗೆದುಕೊಂಡು ಖರೀದಿ ಪತ್ರ ನೋಂದಣಿ ಮಾಡಿಕೊಡುವಂತೆ ದೂರುದಾರ ಹಲವಾರು ಬಾರಿ ಬಿಲ್ಡರ್‌ಗೆ ಕೇಳಿಕೊಂಡರೂ ಸಹ ಖರೀದಿ ಪತ್ರ ನೋಂದಣಿ ಮಾಡಿಕೊಟ್ಟಿರಲಿಲ್ಲ. ಬಿಲ್ಡರ್‌ನ ಇಂಥ ವರ್ತನೆಯಿಂದ ತನಗೆ ಮೋಸವಾಗಿದೆ ಮತ್ತು ಬಿಲ್ಡರ್ ಸೇವಾನ್ಯೂನ್ಯತೆ ಎಸಗಿದ್ದಾರೆ ಅಂತಾ ಹೇಳಿ ಅಬೀದ್ ಬಿಲ್ಡರ್ ವಿರುದ್ಧ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಈ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರುಗಳಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ ಅವರು ದೂರುದಾರನಿಂದ ರೂ. 20 ಲಕ್ಷ ಹಣ ಪಡೆದುಕೊಂಡು ಬಿಲ್ಡರ್ ಫ್ಲ್ಯಾಟ್ ಖರೀದಿ ಪತ್ರ ನೋಂದಣಿ ಮಾಡಿಕೊಡಲು ವಿಫಲರಾಗಿದ್ದಾರೆ.

ದೂರುದಾರನಿಗೆ ಬಿಲ್ಡರ್ ಹಣವನ್ನು ಹಿಂತಿರುಗಿಸದೆ ಇರುವುದು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಅಭಿಪ್ರಾಯಪಟ್ಟ ಆಯೋಗ, ಅಬೀದ್ ಸಂದಾಯ ಮಾಡಿದ ರೂ. 20 ಲಕ್ಷ ಮತ್ತು ಅದರ ಮೇಲೆ ಪೂರ್ತಿ ಹಣ ಸಂದಾಯವಾಗುವವರೆಗೆ ಶೇ. 8 ರಂತೆ ವಾರ್ಷಿಕ ಬಡ್ಡಿ ಲೆಕ್ಕ ಹಾಕಿ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಕೊಡುವಂತೆ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲತೆ ಮತ್ತು ಮಾನಸಿಕ ಹಿಂಸೆಗಾಗಿ ರೂ. 50,000/- ಪರಿಹಾರ ಹಾಗೂ ಈ ಪ್ರಕರಣದ ಖರ್ಚು ವೆಚ್ಚ ಅಂತಾ ರೂ.10,000/- ನೀಡುವಂತೆ ಆರ್.ಎಮ್.ಬಿಲ್ಡರ್ಸ್‌ಗೆ ಆದೇಶಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.